ಬೆಂಗಳೂರು; ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ.ಆದರೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಅಂತಾ ಬಿಜೆಪಿ ಆಗ್ರಹಿಸಿದೆ. ಈ ಬಗ್ಗೆ ಪ್ರತಿಕ್ರಿಸಿರುವ ಗೃಹ ಸಚಿವ ಡಾ. ಜಿ ಪರಮೇಶ್ವರ್ ಎಲ್ಲ ಕೇಸ್ ತೆಗೆದುಕೊಂಡು ಸಿಬಿಐಗೆ ಕೊಡಲು ಆಗಲ್ಲ. ನಮ್ಮ ಸಿಐಡಿ ಸಮರ್ಥವಾಗಿದೆ. ಎಲ್ಲವನ್ನೂ ಸಮರ್ಥವಾಗಿ ತನಿಖೆ ಮಾಡುತ್ತೇವೆ. ಅನಗತ್ಯವಾಗಿ ಗೊಂದಲ ಮಾಡಲು ಬಿಜೆಪಿ ಸೃಷ್ಟಿಸುವ ಕೆಲಸ ಮಾಡ್ತಿದ್ದಾರೆ. ಪ್ರಿಯಾಂಕ ಖರ್ಗೆ ರಾಜೀನಾಮೆ ಕೊಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ.
ಪ್ರಿಯಾಂಕ್ ಖರ್ಗೆ ಮೇಲೆ ಬಿಜೆಪಿ ಆರೋಪ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಪ್ರಿಯಾಂಕ್ ಮೇಲೆ ಬಿಜೆಪಿ ಆರೋಪ ಮಾಡಿದ್ದಾರೆ. ಅದನ್ನು ಸಿಒಡಿ ತನಿಖೆಗೆ ಕೊಡಲಾಗಿದೆ. ಕಚೇರಿ ತೆರೆದ ಮೇಲೆ ಆದೇಶ ಬರುತ್ತದೆ. ಅನವಶ್ಯಕವಾಗಿ ಸಚಿವರ ಹೆಸರು ತರಲಾಗಿದೆ. ಡೆತ್ ನೋಡಿನಲ್ಲಿ ಖರ್ಗೆ ಹೆಸರು ಕೂಡ ಇಲ್ಲ ಎಂದು ಇಲಾಖೆಯವರು ಹೇಳಿದ್ದಾರೆ. ಅವರ ಹೆಸರಿಗೆ, ಸರ್ಕಾರಕ್ಕೆ ಮಸಿ ಬಳಿಯುವ ಕೆಲಸ ಆಗ್ತಿದೆ. ಇದರ ಸತ್ಯಾಸತ್ಯತೆ ಹೊರಬರಬೇಕಾಗುತ್ತದೆ. ನಾವು ಸಿಎಂ ಎಲ್ಲ ಚರ್ಚೆ ಮಾಡಿ ಸಿಒಡಿಗೆ ಕೊಟ್ಟಿದ್ದೇವೆ. ಎಲ್ಲ ಕೇಸ್ ಸಿಬಿಐ ಗೆ ಕೊಡೋಕೆ ಆಗಲ್ಲ. ಅನೇಕ ಕೇಸಿನಲ್ಲಿ ಸಿಒಡಿ ವರದಿ ನೀಡಿದೆ. ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೊಡುವ ಅಗತ್ಯವಿಲ್ಲ ಎಂದಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಸರ್ಕಾರಿ ಪ್ರಾಯೋಜಿತ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿವೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿಕೆ
ಬೆಂಗಳೂರು; ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಸರ್ಕಾರಿ ಪ್ರಾಯೋಜಿತ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಸರ್ಕಾರಿ ಪ್ರಾಯೋಜಿತ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿವೆ. ಸರಣಿ ಆತ್ಮಹತ್ಯೆ ಪ್ರಕರಣಗಳನ್ನು ಹಿಂದೆ ಎಂದೂ ನೋಡಿರಲಿಲ್ಲ. ರಾಜ್ಯ ಸರ್ಕಾರ ಆತ್ಮಹತ್ಯೆ ಭಾಗ್ಯವನ್ನು ಕರ್ನಾಟಕ ರಾಜ್ಯಕ್ಕೆ ದಯಪಾಲಿಸಿದೆ. ಬೀದರ್ ನಲ್ಲಿ ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣ ದೇಶಾದ್ಯಂತ ಸುದ್ದಿಯಾಗಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ನಾನು, ವಿಪಕ್ಷ ನಾಯಕರು, ಪಕ್ಷದ ಮುಖಂಡರು ಸಚಿನ್ ಪಾಂಚಾಳ್ ಕುಟುಂಬವನ್ನು ಭೇಟಿ ಮಾಡಿದ್ದೇವೆ. ಸಚಿನ್ ಸಹೋದರಿಯರು ವಿವರವಾಗಿ ಘಟನೆ ಬಗ್ಗೆ ಮಾಹಿತಿ ತಿಳಿಸಿದ್ದಾರೆ ಎಂದಿದ್ದಾರೆ.
ಬಿಜೆಪಿಯವರಿಗೆ ರಾಜಕೀಯ ತೆವಲು, ಚಟಕ್ಕೊಸ್ಕರ ಆರೋಪ ಮಾಡುತ್ತಾರೆ ಎಂದು ಕಾಂಗ್ರೆಸ್ ನವರು ಮಾತಾಡುತ್ತಾರೆ. ಸಚಿನ್ ಸಾಮಾಜಿಕ ಜಾಲತಾಣದಲ್ಲಿ ಸ್ಟೇಟಸ್ ಹಾಕಿದ ಕೂಡಲೇ ಸಹೋದರಿಯರು ಪೊಲೀಸ್ ಠಾಣೆಗೆ ಧಾವಿಸುತ್ತಾರೆ. ಪಿಎಸ್ ಐ ಜೊತೆ ಗೋಗರೆದರೂ ತಮ್ಮನ ಪ್ರಾಣ ಉಳಿಸುವಂತೆ ಮನವಿ ಮಾಡಿದರೂ ಪಿಎಸ್ ಐ ಮತ್ತು ಇತರ ಪೊಲೀಸ್ ಅಧಿಕಾರಿಗಳು ಕೆಟ್ಟದಾಗಿ ನಡೆದುಕೊಂಡಿದ್ದಾರೆ.ದೂರು ಸ್ವೀಕರಿಸದೇ ಠಾಣೆಗಳಿಗೆ ಅಲೆದಾಡಿಸುತ್ತಾರೆ, ದೂರು ಸ್ವೀಕರಿಸುವುದಿಲ್ಲ
ರಾಜು ಕಪನೂರು ಖರ್ಗೆ ಕುಟುಂಬಕ್ಕೆ ಹತ್ತಿರ ಇರುವಂತಹವರು ಎಂದು ಡೆತ್ ನೋಟ್ ನಲ್ಲಿ ಉಲ್ಲೇಖ ಮಾಡಿದ್ದಾನೆ. ಪ್ರಿಯಾಂಕ್ ಖರ್ಗೆ ಕೇವಲ ಆರ್ ಡಿಪಿಆರ್ ಸಚಿವ ಅಲ್ಲ. ಪ್ರಿಯಾಂಕ್ ಖರ್ಗೆ ಸರ್ವ ಇಲಾಖೆ ಸಚಿವ, ಎಲ್ಲಾ ಇಲಾಖೆಗಳಿಗೂ ಇವರೇ ಮೇಟಿ. ಸದನದಲ್ಲಿ ಸಿಎಂ, ಗೃಹ ಸಚಿವರಿದ್ದರೂ ಇವರೇ ಮಾತಾಡುತ್ತಾರೆ. ಪ್ರಿಯಾಂಕ್ ಖರ್ಗೆ ಮೇಧಾವಿ, ಬುದ್ದಿವಂತ. ಯಡಿಯೂರಪ್ಪನವರ ಫೋಕ್ಸೋ ಕೇಸ್ ಬಗ್ಗೆ ಖರ್ಗೆ ಮಾತಾಡುತ್ತಾರೆ. ಸ್ವಾಮಿ ಪ್ರಿಯಾಂಕ್ ಖರ್ಗೆಯವರೇ, ನೀವೇನು ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್?. ನೀವೇನು ಯಡಿಯೂರಪ್ಪನವರ ಕೇಸ್ ಬಗ್ಗೆ ಮಾತನಾಡುವುದು? ಎಂದು ಪ್ರಶ್ನಿಸಿದ್ದಾರೆ.
ಸಚಿವರ ಬೆಂಬಲ ಸಂಪೂರ್ಣವಾಗಿ ಇದೆ ಎಂದು ಸಚಿನ್ ಡೆತ್ ನೋಟ್ ನಲ್ಲಿ ಉಲ್ಲೇಖ ಮಾಡಿದ್ದಾನೆ. ಸಹೋದರಿಯರು ದೂರು ಕೊಡಲು ಹೋದಾಗ ೧೨ ತಾಸು ಪೊಲೀಸರು ಏನೂ ತಲೆಕೆಡಿಸಿಕೊಂಡಿಲ್ಲ. ಹೆಣ್ಣುಮಕ್ಕಳಿಗೆ ಹೀಯಾಳಿಸಿ ಅಪಮಾನ ಮಾಡಿ ಪೊಲೀಸರು ನಿಂದಿಸಿರುವುದು ಅಕ್ಷಮ್ಯ. ಕಲ್ಬುರ್ಗಿ ಜಿಲ್ಲೆಯಲ್ಲಿ ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಗಳಾಗಿವೆ. ಕಲ್ಬುರ್ಗಿ ಜಿಲ್ಲೆ ಯಾರ ಕಪಿಮುಷ್ಠಿಯಲ್ಲಿದೆ ಎಂದು ಬಸ್ ಸ್ಟಾಂಡ್ ನಲ್ಲಿ ನಿಂತು ಕೇಳಿದರೂ ಹೇಳುತ್ತಾರೆ. ಕಾಂಗ್ರೆಸ್ ನವರು ಬೆಳಗ್ಗಿನ ಜಾವ 2-3 ಗಂಟೆಗೆ ಕುಟುಂಬಕ್ಕೆ ಭೇಟಿ ಮಾಡುತ್ತಾರೆ. ಕಾಂಗ್ರೆಸ್ ನವರು ಹಗಲು ಕಾರ್ಯಾಚರಣೆ ಮಾಡುವುದಿಲ್ಲ. ಕುಟುಂಬಕ್ಕೆ ಸಮಾಧಾನ ಮಾಡಿ ಆಗದಿದ್ದರೆ ಬೆದರಿಕೆ ಹಾಕುತ್ತಾರೆ. ಇಡೀ ಕಲ್ಬುರ್ಗಿ ಜಿಲ್ಲೆಯ ಪೊಲೀಸ್ ಖರ್ಗೆ ಕುಟುಂಬದ ಹಿಡಿತದಲ್ಲಿದೆ. ಸಚಿನ್ ಆತ್ಮಹತ್ಯೆ ಪ್ರಕರಣ ಸಿಬಿಐ ತನಿಖೆ ಆಗಬೇಕು. ಇದು ಸಚಿನ್ ಕುಟುಂಬದ ಒತ್ತಾಯ ಕೂಡ. ಪ್ರಿಯಾಂಕ್ ಖರ್ಗೆ ಎಷ್ಟೇ ಮೇಧಾವಿಯೋ ಅಷ್ಟೇ ಮರೆವು ಜಾಸ್ತಿ ಎಂದಿದ್ದಾರೆ.
ಹಿಂದೆ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಕೆ.ಎಸ್. ಈಶ್ವರಪ್ಪ, ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಕೆ.ಜೆ. ಜಾರ್ಜ್ ರಾಜೀನಾಮೆ ನೀಡಿದ್ದರು. ಕ್ಲೀನ್ ಚಿಟ್ ಸಿಕ್ಕಿದ ಮೇಲೆ ಜಾರ್ಜ್ ಮತ್ತೆ ಸಚಿವರಾದರು. ವಾಲ್ಮೀಕಿ ನಿಗಮದಲ್ಲಿ ನಾಗೇಂದ್ರ ರಾಜೀನಾಮೆ ನೀಡಿದರು. ಇದನ್ನು ಪ್ರಿಯಾಂಕ್ ಖರ್ಗೆ ಮರೆಯಬಾರದು. ಸಿಎಂ ಕೂಡಲೇ ಪ್ರಿಯಾಂಕ್ ಖರ್ಗೆ ರಾಜೀನಾಮೆ ಪಡೆಯಬೇಕು.ಸಚಿನ್ ಕುಟುಂಬಕ್ಕೆ ಸರ್ಕಾರ ಭದ್ರತೆ ನೀಡಬೇಕು. ಪ್ರಕರಣದ ಸಿಬಿಐ ತನಿಖೆಗೆ ವಹಿಸಬೇಕು. ಸಚಿನ್ ಕುಟುಂಬಕ್ಕೆ ಒಂದು ಕೋಟಿ ರೂ. ಪರಿಹಾರ ಕೊಡಬೇಕು. ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ನೌಕರಿ ಕೊಡಬೇಕು.ಡೆತ್ ನೋಟ್ ನಲ್ಲಿ ಆಂದೋಲಾ ಸ್ವಾಮೀಜಿ ಸೇರಿದಂತೆ ಬಿಜೆಪಿ ಮುಖಂಡರನ್ನು ಹತ್ಯೆ ಮಾಡಲು ಸೊಲ್ಲಾಪುರದ ಸುಪಾರಿ ಕಿಲ್ಲರ್ ಗಳನ್ನು ಬಾಡಿಗೆಗೆ ಪಡೆದಿದ್ದಾರೆ ಎಂಬ ಅಂಶವೂ ಉಲ್ಲೇಖವಾಗಿದೆ ಎಂದಿದ್ದಾರೆ.