ಉತ್ತರಕನ್ನಡ: ಯತ್ನಾಳ್ ಪಕ್ಷಕ್ಕೆ ವಾಪಸ್ ಬರೋದ್ರ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಶಿರಸಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ.
ರಾಜ್ಯಾಧ್ಯಕ್ಷರ ವಿರುದ್ಧ ಯತ್ನಾಳ್ ಸಭೆ ವಿಚಾರದ ಬಗ್ಗೆ ಮಾತನಾಡಿದ ಯತ್ನಾಳ್ ಸಭೆ ಮಾಡೋದಕ್ಕೆ ಸ್ವತಂತ್ರರಿದ್ದಾರೆ. ಅವರು ಸಭೆ ಮಾಡುವ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ಏನು ತೀರ್ಮಾನ ಮಾಡಬೇಕೋ ಅದನ್ನ ರಾಷ್ಟ್ರೀಯ ನಾಯಕರು ಮಾಡುತ್ತಾರೆ. ಯತ್ನಾಳ್ ಪಕ್ಷಕ್ಕೆ ವಾಪಸ್ ಬರೋದ್ರ ಬಗ್ಗೆ ನನಗೆ ಮಾಹಿತಿ ಇಲ್ಲ. ರಾಜ್ಯಮಟ್ಟದಲ್ಲಿ ನನ್ನ ಜೊತೆ ಆ ಕುರಿತ ಚರ್ಚೆಗಳು ನಡೆದಿಲ್ಲ ಎಂದಿದ್ದಾರೆ.
ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ವಿಚಾರದ ಬಗ್ಗೆ ಮಾತನಾಡಿದ ಅವರು ದಿನೇ ದಿನೇ ಮುಖ್ಯಮಂತ್ರಿ ಕುರ್ಚಿಗೆ ಪೈಪೋಟಿ ನಡೆಯುತ್ತಿದೆ. ನನಗಿರೋ ಮಾಹಿತಿ ಪ್ರಕಾರ ಆಡಳಿತ ಪಕ್ಷದಲ್ಲಿ ಏಳೆಂಟು ಜನ ಆಕಾಂಕ್ಷಿಗಳಿದ್ದಾರೆ. ಹಿರಿಯ ಶಾಸಕರು ಹಾಗೂ ಮಂತ್ರಿಗಳು ಹೇಗಾದ್ರೂ ಮಾಡಿ ಮುಖ್ಯಮಂತ್ರಿ ಆಗ್ಬೇಕು ಅಂತ ಪೈಪೋಟಿಗೆ ಇಳಿದಿದ್ದಾರೆ. ಇದರ ಪರಿಣಾಮ ಆಡಳಿತ ಯಂತ್ರ ಸಂಪೂರ್ಣ ಕುಸಿದುಬಿದ್ದಿದೆ. ಈ ಸರ್ಕಾರ ಬಂದಾಗಿನಿಂದ ರೈತರ ಬಗ್ಗೆ ಅಸಡ್ಡೆ ತೋರುತ್ತಿದೆ. ಹಿಂದಿನ ಸರ್ಕಾರದ ಯೋಜನೆಗಳಿಗೆ ಕಲ್ಲು ಹಾಕುತ್ತಿದ್ದಾರೆ. ರೈತರ ಪರವಾಗಿ ಚಿಂತನೆ ಮಾಡುತ್ತಿಲ್ಲ. ಸಂಕಷ್ಟದಲ್ಲಿರುವ ರೈತರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಬರುವ ಅಧಿವೇಶನದಲ್ಲಿ ಪ್ರತಿಪಕ್ಷವಾಗಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ, ರೈತರ ಬಗ್ಗೆ ಚರ್ಚೆ ಮಾಡುತ್ತೇವೆ ದೊಡ್ಡ ಷಡ್ಯಂತ್ರ, ಕುತಂತ್ರ ರಾಜ್ಯ ಸರ್ಕಾರದಿಂದ ನಡೆಯುತ್ತಿದೆ ಎಂದಿದ್ದಾರೆ
ಕೇಂದ್ರದ ಯೋಜನೆಗಳ ಅನುಷ್ಠಾನ ಮಾಡುತ್ತಿಲ್ಲ. ಪ್ರೋಗ್ರೆಸ್ ರಿಪೋರ್ಟ್ ನೀಡದೆ ಕೇಂದ್ರದ ಅನುದಾನ ಬರುತ್ತಿಲ್ಲ ಎನ್ನುತ್ತಿದ್ದಾರೆ. ಇವೆಲ್ಲವುಗಳ ಬಗ್ಗೆ ಅಧಿವೇಶನದಲ್ಲಿ ಚರ್ಚಿಸುತ್ತೇವೆ ಎಂದ ಅವರು ಮಲೆನಾಡಿನಲ್ಲಿ ಯೋಜನೆಗಳ ಅನುಷ್ಠಾನ ವಿಚಾರದ ಬಗ್ಗೆ ಮಾತನಾಡಿ ನಮ್ಮ ರಾಜ್ಯದ ಜಲ ಸಂಪತ್ತಿನ ಸಂಪೂರ್ಣ ಉಪಯೋಗ ಆಗಬೇಕು. ಸರಿಯಾದ ಯೋಚನೆ ಮಾಡದೇ ಯಾವುದೇ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದಕ್ಕೆ ನಮ್ಮ ವಿರೋಧವಿದೆ ಅಂದಿದ್ದಾರೆ.ಬಿಜೆಪಿ ಸರ್ಕಾರ ರಚನೆ ವಿಚಾರದ ಬಗ್ಗೆ ಮಾತನಾಡಿ ರಾಜ್ಯದ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿದ್ದಾರೆ. ಬಿಜೆಪಿಗೆ ವಿರೋಧ ಪಕ್ಷದಲ್ಲಿ ಕೂರಿಸಿದ್ದಾರೆ. ನಾವು ಸರ್ಕಾರವನ್ನು ಕಿವಿ ಹಿಂಡುವ ಕೆಲಸ ಮಾಡುತ್ತಿದ್ದೇವೆ. ಸರ್ಕಾರ ರಚಿಸುವ ಬಗ್ಗೆ ನಮಗೆ ಆಸಕ್ತಿಯಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ.











