ಬೆಂಗಳೂರು; ನನ್ನನ್ನೇ ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿ ಎಂದು ನಾನು ಹೇಳಿಲ್ಲ ಎಂದು ಬೆಂಗಳೂರಿನಲ್ಲಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ರಾತ್ರಿ ಸುರ್ಜೆವಾಲಾರನ್ನು ಭೇಟಿ ಮಾಡಿದೆ. ಅವರ ಬಳಿ ಪಕ್ಷದ ಆಗು ಹೋಗುಗಳು ಸಂಘಟನೆ ಬಗ್ಗೆ ಚರ್ಚೆ ಮಾಡಿದೆ. ಆದಷ್ಟು ಬೇಗ ಹೊಸ ಅಧ್ಯಕ್ಷರ ನೇಮಕ ಆಗಬೇಕು ಎಂದು ಹೇಳಿದ್ದೇನೆ. ಇವರನ್ನೇ ಮುಂದುವರಿಸುವುದಾದರೆ ಅದನ್ನು ಸ್ಪಷ್ಟಪಡಿಸಿ ಅಂತ ಹೇಳಿದ್ದೇನೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ನಮಗೆ ಪೂರ್ಣಪ್ರಮಾಣದ ಅಧ್ಯಕ್ಷರು ಬೇಕು. ವೋಟು ತರುವವರನ್ನು ಪಾಪ್ಯುಲರ್ ಇರುವವರನ್ನು ಅಧ್ಯಕ್ಷ ಮಾಡಿ ಅಂತಾ ರಣದೀಪ್ ಸಿಂಗ್ ಸುರ್ಜೇವಾಲಾ ಅವರಿಗೆ ಹೇಳಿದ್ದೇನೆ. ನನ್ನನ್ನೇ ಅಧ್ಯಕ್ಷ ಮಾಡಿ ಅಂತಾ ನಾನು ಕೇಳಿಲ್ಲ. ಆದರೆ ಪೂರ್ಣ ಪ್ರಮಾಣದ ಅಧ್ಯಕ್ಷರನ್ನು ಮಾಡಿ ಎಂದು ಹೇಳಿದ್ದೇನೆ. ಇವರು ಇರಬೇಕು ಬೇಡ ಎಂಬ ಬಗ್ಗೆ ಗೊಂದಲಗಳಿವೆ. ಹೀಗಾಗಿ ಎಲ್ಲಾ ಗೊಂದಲಗಳಿಗೆ ಇತಿಶ್ರಿ ಹಾಡಿ ಎಂದು ರಣ್ ದೀಪ್ ಸುರ್ಜೆವಾಲಾ ಅವರಿಗೆ ಹೇಳಿದ್ದೇನೆ. ಇವರೇ ಮುಂದುವರಿಬೇಕಾ ಬೇಡ್ವಾ ಅನ್ನೋದನ್ನು ಹೈಕಮಾಂಡ್ ಹೇಳಲಿ ಎಂದು ಅವರು ಹೇಳಿದ್ದಾರೆ.
ಡಿ ಕೆ ಶಿವಕುಮಾರ್ ಇರಬೇಕಾ ಬೇಡವಾ ಎಂಬುದು ಪಕ್ಷದ ಮೇಲ್ಮಟ್ಟದಲ್ಲಿ ಚರ್ಚೆ ಆಗಬೇಕು. ಬೇರೆಯವರು ಅಧ್ಯಕ್ಷ ಆಗಬೇಕಾ ಬೇಡ್ವಾ ಎಂಬುದನ್ನು ಹೈಕಮಾಂಡ್ ನಿರ್ಧಾರ ಮಾಡಲಿ ಎಂದ ಅವರು ನಾವೆಲ್ಲ ಇಲಾಖೆಗಳ ಮಂತ್ರಿಗಳಾದ ಮೇಲೆ ಪಕ್ಷಕ್ಕೆ ಟೈಮ್ ಕೊಡುವವರ ಸಂಖ್ಯೆ ಕಡಿಮೆ ಆಗಿದೆ. 2023 ರಲ್ಲಿ ಇದ್ದ ಸ್ಪೀಡ್ ಕಡಿಮೆಯಾಗಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಶಾಸಕರ ಅಭಿಪ್ರಾಯ ಆಲಿಸಬೇಕೆಂದು ಸತೀಶ್ ಜಾರಕಿಹೊಳಿ ಒತ್ತಾಯಿಸಿದ್ದಾರೆ. ನಮಗೆ ಪೂರ್ಣ ಪ್ರಮಾಣದ ಕೆಪಿಸಿಸಿ ಅಧ್ಯಕ್ಷರು ಬೇಕು ಎಂಬುದು ಎಲ್ಲರ ಅಭಿಪ್ರಾಯ. ಕೆ ಸಿ ವೇಣುಗೋಪಾಲ ಅವರೇ ಬರೆದ ನೋಟ್ ಇದೆ. ಲೋಕಸಭೆ ಚುನಾವಣೆ ಮುಗಿದು ಆರು ತಿಂಗಳ ಮೇಲಾಯಿತು. ಅದನ್ನು ಜಾರಿಗೆ ಅನುಷ್ಟಾನಕ್ಕೆ ತರಬೇಕಲ್ವಾ?. ಇಲ್ಲದಿದ್ದರೆ ಇವರೇ ಅಧ್ಯಕ್ಷರಾಗಿ ಮುಂದುವರಿಬೇಕಾ ಬೇಡವಾ ಎಂಬ ಬಗ್ಗೆಯೂ ಹೈಕಮಾಂಡ್ ಸ್ಪಷ್ಟವಾಗಿ ಹೇಳಲಿ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.