ಬೆಂಗಳೂರು; ಸ್ಯಾಂಡಲ್ ವುಡ್ ನಲ್ಲಿ ಕ್ಯೂಟ್ ಜೋಡಿ ಎಂದು ಗುರುತಿಸಿಕೊಂಡಿದ್ದ ರ್ಯಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ವೈವಾಹಿಕ ಬದುಕಿನಲ್ಲಿ ಪರಸ್ಪರ ದೂರವಾಗಿದ್ದಾರೆ. ಚಂದನ್ ಹಾಗೂ ನಿವೇದಿತಾ ಗೌಡ ಪರಸ್ಪರ ದೂರವಾಗಿದ್ದನ್ನು ಇನ್ನು ಕೂಡ ಅವರ ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅನೇಕರು ಇದೆಲ್ಲಾ ಯಾವುದೋ ಸಿನಿಮಾ ಪ್ರಮೋಷನ್ ಗಾಗಿ ಮಾಡುತ್ತಿರುವ ಗಿಮಿಕ್ ಅಂತಾ ಭಾವಿಸಿದ್ದರು. ನಿಜ ವಿಚಾರ ಗೊತ್ತಾದ ಮೇಲೆ ಈ ಜೋಡಿ ಮತ್ತೆ ಒಂದಾದ್ರೆ ಎಷ್ಟು ಚೆನ್ನಾಗಿರುತ್ತೆ ಎಂದು ಅನೇಕರು ಹರಸುತ್ತಿದ್ದಾರೆ. ಇದೆಲ್ಲದರ ಮಧ್ಯೆ ಚಂದನ್ ಹಾಗೂ ನಿವೇದಿತಾ ಗೌಡ ವಿಚ್ಛೇದನಕ್ಕೆ ಸಂಬಂಧಪಟ್ಟಂತೆ ಅಭಿಮಾನಿಗಳಲ್ಲಿ ಹಲವು ಪ್ರಶ್ನೆಗಳು ಮೂಡಿವೆ. ಅದರಲ್ಲೂ ಒಂದೇ ದಿನದಲ್ಲಿ ಚಂದನ್ ಹಾಗೂ ನಿವೇದಿತಾಗೆ ಡಿವೋರ್ಸ್ ಸಿಕ್ಕಿದ್ದು ಹೇಗೆ ಎಂದು ಹಲವರು ತಲೆ ಕೆಡಿಸಿಕೊಂಡಿದ್ದಾರೆ. ಈ ಬಗ್ಗೆ ನಿವೇದಿತಾ-ಚಂದನ್ ಅವರ ಲಾಯರ್ ಆಗಿರುವ ಅನಿತಾ ಆರ್ ಅವರು ಮಾಧ್ಯಮಗಳಿಗೆ ಉತ್ತರಿಸಿದ್ದಾರೆ.
ಅಂದ್ಹಾಗೆ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ವಿಚ್ಛೇದನದ ಬಗ್ಗೆ ಇನ್ನೂ ಹಲವರಲ್ಲಿ ಗೊಂದಲಗಳಿವೆ. ಸಾಮಾನ್ಯವಾಗಿ ಡಿವೋರ್ಸ್ ಪ್ರಕರಣಗಳಲ್ಲಿ ವಿಚ್ಛೇದನ ಪಡೆಯಲು 6 ತಿಂಗಳು ಕಾಲ ಸಮಯಾವಕಾಶವಿರುತ್ತೆ. ಆದರೆ ಇವರ ಕೇಸ್ ನಲ್ಲಿ ಅಂದ್ಹೇಗೆ ಒಂದೇ ದಿನಕ್ಕೆ ಡಿವೋರ್ಸ್ ಸಿಕ್ತು ಅಂತಾ ಜನ ಮಾತನಾಡಿಕೊಳ್ಳುತ್ತಿದ್ದಾರೆ.ಅದಕ್ಕೆ ಇಬ್ಬರ ಲಾಯರ್ ಆಗಿರುವ ಅನಿತಾ ಅವರೇ ಕ್ಲ್ಯಾರಿಫಿಕೇಶನ್ ನೀಡಿದ್ದಾರೆ. ನಿವೇದಿತಾ ಹಾಗೂ ಚಂದನ್ ಪರಸ್ಪರ ಒಪ್ಪಿಗೆಯ ಮೇಲೆಯೇ ಡಿವೋರ್ಸ್ ಪಡೆದುಕೊಂಡಿದ್ದಾರೆ. ಇಬ್ಬರೂ ಪರಸ್ಪರ ಮ್ಯೂಚ್ವಲ್ ಅಂಟರ್ ಸ್ಟ್ಯಾಂಡಿಂಗ್ ಮೇಲೆ ಡಿವೋರ್ಸ್ ಪಡೆಯೋದಕ್ಕೆ ಮುಂದಾಗಿದ್ದರು.ಹಾಗೇ ಅವರಿಬ್ಬರ ನಡುವೆ ಯಾವುದೇ ತಕರಾರಿಲ್ಲದೇ ಕಾರಣ ಅವರು ಹಿಂದೂ ವಿವಾಹ ಕಾಯ್ದೆ 1955 ರ ಸೆಕ್ಷನ್ 13B ಪ್ರಕಾರ ಡಿವೋರ್ಸ್ ಗೆ ಅರ್ಜಿ ಸಲ್ಲಿಸಿದ್ದರು. ಈ 13 ಬಿ ಸೆಕ್ಷನ್ ನಡಿ ಅರ್ಜಿ ಸಲ್ಲಿಸಿದರೆ ಬೇರೆ ಸೆಕ್ಷನ್ ರೀತಿ ಕಾಯುವ ಅವಶ್ಯಕತೆ ಇರಲ್ಲ. ಆಗಿಂದ ಆಗ್ಲೇ ಡಿವೋರ್ಸ್ ಸಿಗುತ್ತದೆ. ತಮ್ಮ ವೈವಾಹಿಕ ಬದುಕನ್ನು ದಂಪತಿ ಸೌಹಾರ್ದಯುತವಾಗಿ ಕೊನೆಗೊಳಿಸಲು ನಿರ್ಧರಿಸಿದಾಗ ಈ ಸೆಕ್ಷನ್ ನಡಿ ಅರ್ಜಿ ಸಲ್ಲಿಸಬಹುದು. ಇವರ ಕೇಸ್ ನಲ್ಲೂ ಅದೇ ಆಗಿದೆ ಎಂದು ಅವರು ಹೇಳಿದ್ದಾರೆ.
ಜೂನ್ 6 ರಂದು ಅವರು ವಿವಾಹ ಕಾಯ್ದೆ 1955 ರ ಸೆಕ್ಷನ್ 13B ಪ್ರಕಾರ ಡಿವೋರ್ಸ್ ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಸಲ್ಲಿಸಲು ಅವರು ಬರುವ ಅವಶ್ಯಕತೆ ಇಲ್ಲದ ಕಾರಣ ನಾನೇ ಅರ್ಜಿ ಸಲ್ಲಿಸಿದೆ. ಜೂನ್ 7 ರಂದು ಹಿಯರಿಂಗ್ ಇತ್ತು. ಇಬ್ಬರೂ ಬಂದಿದ್ದರು. ನ್ಯಾಯಾಧೀಶರ ಮುಂದೆಯೂ ಅವರು ಮ್ಯೂಚುವಲ್ ಆಗಿ ಡಿವೋರ್ಸ್ ಪಡೆದುಕೊಳ್ಳೋದಾಗಿ ತಿಳಿಸಿದ್ದರು. ಒಬ್ಬರ ಮೇಲೆ ಒಬ್ಬರು ಆರೋಪ ಮಾಡದ ಹಿನ್ನೆಲೆ ಜೂನ್ 7 ರಂದೇ ಅವರು ಡಿವೋರ್ಸ್ ದೊರೆತಿದೆ ಎಂದು ಲಾಯರ್ ಹೇಳಿದ್ದಾರೆ. ಅಲ್ಲದೇ ಪರಸ್ಪರ ಹೊಂದಾಣಿಕೆ ಇಲ್ಲದ ಕಾರಣ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ. ಸುಮಾರು ಒಂದು ವರ್ಷದ ಹಿಂದೆಯೇ ಅವರು ಪರಸ್ಪರ ಬೇರೆಯೇ ಆಗೋದಕ್ಕೆ ನಿರ್ಧರಿಸಿದ್ದರು. ಮನೆಯವರು ಸಂಬಂಧ ಸರಿ ಮಾಡಲು ಯತ್ನಿಸಿದ್ದರು. ಆದರೆ ಅದು ಸಾಧ್ಯವಾಗದ ಕಾರಣ ಡಿವೋರ್ಸ್ ನಿರ್ಧಾರಕ್ಕೆ ಬಂದಿದ್ದರು. ಅಲ್ಲದೇ ನನ್ನನ್ನು 6 ತಿಂಗಳ ಹಿಂದೆ ಅವರು ಸಂಪರ್ಕಿಸಿದ್ದರು ಎಂದು ಲಾಯರ್ ಅನಿತಾ ಹೇಳಿದ್ದಾರೆ.