ಮನೆ ಪ್ರಸ್ತುತ ವಿದ್ಯಮಾನ ಮೃತ ಪಿಎಸ್‌ಐ ಪರಶುರಾಮ್ ನಿವಾಸಕ್ಕೆ ನಾಳೆ ಗೃಹ ಸಚಿವ ಪರಮೇಶ್ವರ್ ಭೇಟಿ

ಮೃತ ಪಿಎಸ್‌ಐ ಪರಶುರಾಮ್ ನಿವಾಸಕ್ಕೆ ನಾಳೆ ಗೃಹ ಸಚಿವ ಪರಮೇಶ್ವರ್ ಭೇಟಿ

0

 

ಕೊಪ್ಪಳ; ಯಾದಗಿರಿಯಲ್ಲಿ ಮೃತಪಟ್ಟ ಪಿಎಸ್ಐ ಪರಶುರಾಮ್ ಅವರ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸೋಮನಾಳ ಗ್ರಾಮದಲ್ಲಿರುವ ನಿವಾಸಕ್ಕೆ ನಾಳೆ ಸಚಿವ ಡಾ ಜಿ ಪರಮೇಶ್ವರ್ ಭೇಟಿ ನೀಡಲಿದ್ದಾರೆ. ಕೊಪ್ಪಳದ ಕಾರಟಗಿಯ ಸೋಮನಾಳ ಗ್ರಾಮಕ್ಕೆ ಪರಮೇಶ್ವರ್ ಭೇಟಿ ನೀಡಲಿದ್ದಾರೆ. ಅಲ್ಲದೇ

ಪರಶುರಾಮ್ ಕುಟುಂಬದ ಸದಸ್ಯರ ಭೇಟಿಯಾಗಿ ಸಾಂತ್ವನ ಹೇಳಲಿದ್ದಾರೆ.

 

ಇಂದು ಪಿಎಸ್‌ಐ ಪರಶುರಾಮ್ ನಿವಾಸಕ್ಕೆ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಭೇಟಿ

 

ಇನ್ನು ಇಂದು ದಕ್ಷ, ನಿಷ್ಠಾವಂತ ದಲಿತ ಪೊಲೀಸ್ ಅಧಿಕಾರಿ ದಿ. ಪರಶುರಾಮ್ ಪಿಎಸ್ಐ ಅವರ ಕುಟುಂಬವನ್ನು ಇಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಭೇಟಿ ಮಾಡಿ ಸಾಂತ್ವನ ಹೇಳಿದರು. ಈ ವೇಳೆ ಅವರ ಕುಟುಂಬ ನಿರ್ವಹಣೆಗೆ ಅವರ ಒಂದು ತಿಂಗಳ ಸಂಬಳವನ್ನು ನೀಡಿದ್ದಾರೆ..

 

ಪ್ರಕರಣವನ್ನು ತಿರುಚದೆ ಹಾಗೂ ಆರೋಪಿಗಳ ರಕ್ಷಣೆಯನ್ನು ಮಾಡದೆ ರಾಜ್ಯ ಸರ್ಕಾರವು ಪರಶುರಾಮ್ ಅವರ ಸಾವಿಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕು. ಇಲ್ಲದಿದ್ದರೆ ನ್ಯಾಯ ಸಿಗುವವರೆಗೂ, ತಪ್ಪಿತಸ್ಥರಿಗೆ ಶಿಕ್ಷೆಗೆ ಗುರಿಪಡಿಸುವರೆಗೂ ಹೋರಾಟ ನಡೆಸಲಾಗುವುದು ಎಂದು ಇದೇ ವೇಳೆ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.

 

ದಿವಂಗತ ಪರಶುರಾಮ್ ನಿವಾಸಕ್ಕೆ ವಿಧಾನಸಭೆ ವಿಪಕ್ಷ ನಾಯಕ ಆರ್ ಅಶೋಕ್ ಭೇಟಿ

ಯಾದಗಿರಿಯಲ್ಲಿ ಮೃತಪಟ್ಟ ಪಿಎಸ್ಐ ಪರಶುರಾಮ್ ಅವರ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸೋಮನಾಳ ಗ್ರಾಮದಲ್ಲಿರುವ ನಿವಾಸಕ್ಕೆ ವಿಧಾನಸಭೆ ವಿಪಕ್ಷ ನಾಯಕ ಆರ್ ಅಶೋಕ್ ಭೇಟಿ ನೀಡಿದರು.

ಈ ವೇಳೆ  ಮೃತ ಪರಶುರಾಮ್ ಅವರ ಕುಟುಂಬ ಸದಸ್ಯರೊಂದಿಗೆ ಮಾತನಾಡಿದ ಅವರು ಕುಟುಂಬದವರಿಗೆ ಸಾಂತ್ವನ ಹೇಳಿದರು.  ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಹಾಲಪ್ಪ ಆಚಾರ್, ರಾಜ್ಯ ಉಪಾಧ್ಯಕ್ಷರಾದ  ರಾಜು ಗೌಡ, ವಿಧಾನ ಸಭಾ ವಿರೋಧ ಪಕ್ಷ ಮುಖ್ಯ ಸಚೇತಕರಾದ ದೊಡ್ಡನಗೌಡ ಹೆಚ್ ಪಾಟೀಲ್ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಇನ್ನು ಯಾದಗಿರಿ ನಗರ ಠಾಣೆಯಿಂದ ಯಾದಗಿರಿ ಸೈಬರ್ ಠಾಣೆಗೆ ಪರಶುರಾಮ್ ವರ್ಗಾವಣೆಗೊಂಡಿದ್ದರು. ಇವರ ಸಾವಿನ ಬಗ್ಗೆ ಅವರ ಪತ್ನಿ ಶ್ವೇತಾ ಅನುಮಾನ ವ್ಯಕ್ತಪಡಿಸಿ ದೂರು ದಾಖಲಿಸಿದ್ದರು. ಯಾದಗಿರಿ ನಗರ  ಠಾಣೆಯಲ್ಲಿ ಪರಶುರಾಮ ಪತ್ನಿ ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್ ಹಾಗೂ ಅವರ ಮಗ ಪಂಪಣ್ಣಗೌಡ ವಿರುದ್ಧ ದೂರು ದಾಖಲಿಸಿದ್ದರು. ನನ್ನ ಪತಿ ಇವರಿಬ್ಬರು ಪ್ರಚೋದನೆ ನೀಡಿದ್ದರು. ಅವರಿಬ್ಬರು ಪತಿಗೆ ಕಿರುಕುಳ ನೀಡಿ, ಜಾತಿ ನಿಂದನೆ ಮಾಡಿದ್ದರು ಎಂದು ದೂರು ದಾಖಲಿಸಿದ್ದರು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಿತ್ತು.

ಈ ಹಿನ್ನೆಲೆ  ಇವತ್ತು ಡಿವೈಎಸ್ಪಿ ನೇತೃತ್ವದ ಸಿಐಡಿ ತಂಡ ಯಾದಗಿರಿ ನಗರಕ್ಕೆ ಆಗಮಿಸಿದೆ. ಯಾದಗಿರಿ ಬಂದ ಸಿಐಡಿ ತಂಡ ಡಿವೈಎಸ್ಪಿ ಕಚೇರಿಯಲ್ಲಿ ಅಗತ್ಯ ದಾಖಲೆಗಳನ್ನ ಪರಿಶೀಲನೆ ನಡೆಸಿದೆ.ಸತತ ಮೂರು ಗಂಟೆಗಳ ಕಾಲ ಡಿವೈಎಸ್ಪಿ ಕಚೇರಿಯಲ್ಲಿ ದಾಖಲೆಗಳನ್ನ ಪರಿಶೀಲನೆ ನಡೆಸಲಾಗಿದ್ದು, ಜೊತೆಗೆ ಯಾದಗಿರಿ ಸಿಪಿಐ, ಸುರಪುರ ಡಿವೈಎಸ್ಪಿ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳನ್ನ ಕಚೇರಿಗೆ ಕರೆಸಿಕೊಂಡು ಮಾಹಿತಿಯನ್ನ ಕಲೆ ಹಾಕಿದೆ. ಇನ್ನು ಕೇಸ್ ಸಂಬಂಧಿಸಿದಂತೆ ಎಫ್ಐಆರ್ ಪ್ರತಿ‌ ಹಾಗೂ ಕೇಸ್ ಫೈಲ್‌ಗಳನ್ನ ಪಡೆದುಕೊಂಡಿದೆ. ಇನ್ನು ಶಾಸಕರ ಮೇಲೆಯೇ ಕೇಸ್ ದಾಖಲಾಗಿದ್ದಕ್ಕೆ ಶಾಸಕರ ಮಾಹಿತಿ ಸಹ ಸ್ಥಳೀಯ ಪೊಲೀಸರಿಂದ ಪಡೆದುಕೊಂಡಿದೆ. ಇನ್ನೊಂದು ಲಂಚಕ್ಕೆ ಡಿಮ್ಯಾಂಡ್ ಮಾಡಿರುವ ಆರೋಪ‌ ಹಾಗೂ ಕಿರುಕುಳ‌ ಕೇಸ್ ಮೈಮೇಲೆ‌ ಹೊತ್ತಿರುವ ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಹಾಗೂ ಪುತ್ರ ಮಾತ್ರ ಯಾರ ಸಂಪರ್ಕಕ್ಕೆ ಸಿಗುತ್ತಿಲ್ಲ ಎನ್ನಲಾಗಿದೆ.

ಸಿಐಡಿಗೆ ವಹಿಸಿದ್ದರಿಂದ ಬಂಧನ ಭೀತಿ ಶಾಸಕರಿಗೆ ಕಾಡ್ತಾಯಿದೆ. ಇದೆ ಕಾರಣಕ್ಕೆ ಕೇಸ್ ದಾಖಲಾದ ದಿನದಿಂದ ನಾಪತ್ತೆ ಆಗಿದ್ದಾರೆ ಎನ್ನಲಾಗುತ್ತಿದೆ. ಇನ್ನು ಶಾಸಕರ ಕಚೇರಿಯನ್ನು ಸಹ ಲಾಕ್ ಮಾಡಲಾಗಿದೆ. ನಿತ್ಯ ನೂರಾರು ಜನ ಇರುವ ಕಚೇರಿ ಶಾಸಕರ ಗೈರಿನಿಂದ ಬಣ ಬಣ ಆಂತಿದೆ. ಮನೆಯಲ್ಲೂ ಸಹ ಶಾಸಕರಿಲ್ಲ. ಬಂಧನ ಭೀತಿ‌ ಹಿನ್ನಲೆ ಜಿಲ್ಲೆ ಬಿಟ್ಟು ಬೇರೆ ಕಡೆ ಓಡಿ‌ ಹೋಗಿದ್ದಾರೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ನಿನ್ನೆ ಮಾತಾಡಿರುವ ಶಾಸಕ ಚೆನ್ನಾರೆಡ್ಡಿ ಬಳಿಕ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿದ್ದಾರೆ.ಒಟ್ಟಿನಲ್ಲಿ ಪಿಎಸ್ಐ ಪರಶುರಾಮ ಸಾವಿಗೆ ಕಾರಣ ಎಂಬ ಆರೋಪ ಹೊತ್ತಿರುವ ಶಾಸಕರು ಮಾತ್ರ ಯಾರ ಸಂಪರ್ಕಕ್ಕೆ ಸಿಗುತ್ತಿಲ್ಲ ಎನ್ನಲಾಗಿದೆ..