ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ವಿರುದ್ಧ ಮರ್ಡರ್ ಕೇಸ್ ಆಗಿರುವುದರಿಂದ ಗಂಭೀರವಾಗಿ ತನಿಖೆ ಮಾಡಬೇಕಾಗುತ್ತದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಇಂದು ರೇಣುಕಾಸ್ವಾಮಿ ಕೊಲೆ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿರುವ ಡಾ. ಪರಮೇಶ್ವರ್,
ಕೊಲೆ ಪ್ರಕರಣದಲ್ಲಿ ಚಲನಚಿತ್ರ ನಟ ದರ್ಶನ್ ಅವರನ್ನು ಅರೆಸ್ಟ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಕೊಲೆ ಪ್ರಕರಣದಲ್ಲಿ ಮೊದಲು ಬಂಧನ ಮಾಡಿರುವ ಆರೋಪಿಗಳು ನಟ ದರ್ಶನ್ ಅವರ ಹೆಸರು ಹೇಳಿದ್ದಾರೆ, ಹಾಗಾಗಿ ದರ್ಶನ್ ಅವರನ್ನು ಅರೆಸ್ಟ್ ಮಾಡಿಕೊಂಡು ಬರಲಾಗಿದೆ ಎಂದು ಗೃಹ ಸಚಿವರು ಸ್ಪಷ್ಟಪಡಿಸಿದ್ದಾರೆ.
ಪ್ರಕರಣದ ತನಿಖೆ ಆಗುವವರೆಗೂ ಕೂಡಾ ಏನೂ ಹೇಳಲು ಆಗುವುದಿಲ್ಲ, ದರ್ಶನ್ ನೇರವಾಗಿ ಭಾಗಿಯಾಗಿದ್ದಾರಾ ಅಥವಾ ಇಲ್ಲವೇ, ಯಾವ ಕಾರಣಕ್ಕಾಗಿ ಕೊಲೆ ಆಗಿದೆ ಮತ್ತು ಪ್ರಕರಣದಲ್ಲಿ ದರ್ಶನ್ ಹೆಸರು ಯಾಕೆ ಬಂದಿದೆ ಎನ್ನುವುದು ತನಿಖೆಯ ಬಳಿಕ ತಿಳಿಯಲಿದೆ ಎಂದು ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಇದೇ ವೇಳೆ ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್, ಜೂನ್ 9 ರಂದು ಬೆಳಗ್ಗೆ ಅಪರಿಚಿತ ಶವ ಪತ್ತೆಯಾಗಿದ್ದು, ಶವದ ಮೇಲಿನ ಗಾಯದ ಗುರುತುಗಳನ್ನು ಪರಿಶೀಲಿಸಿ ತನಿಖೆ ಮುಂದುವರಿಸಿದಾಗ ರೇಣುಕಾಸ್ವಾಮಿ ಕೊಲೆ ವಿಚಾರ ಬೆಳಕಿಗೆ ಬಂದಿದೆ ಎಂದು ತಿಳಿಸಿದ್ದಾರೆ.
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಸೇರಿದಂತೆ ಇದುವರೆಗೆ ಒಟ್ಟು ಹನ್ನೆರಡು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಎಲ್ಲಾ ಆರೋಪಿಗಳನ್ನು ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ.