ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ಮೇಲೆ ಗುಡ್ಡ ಕುಸಿತ ಪ್ರಕರಣದಲ್ಲಿ ಮಣ್ಣು ಪಾಲಾಗಿದ್ದವರಲ್ಲಿ 6 ಜನರ ಮೃತದೇಹಗಳನ್ನು ಹೊರ ತೆಗೆಯಲಾಗಿದೆ., ಈ ಘಟನೆಯಲ್ಲಿ ಹೆದ್ದಾರಿ ಪಕ್ಕದಲ್ಲಿ ಹೋಟೆಲ್ ನಡೆಸುತ್ತಿದ್ದ ಒಂದೇ ಕುಟುಂಬದ ಲಕ್ಷ್ಮಣ್ ನಾಯ್ಕ್, ಅವರ ಪತ್ನಿ ಶಾಂತಿ, ಪುತ್ರಿ ಆವಾತಿಕಾ ಹಾಗೂ ಪುತ್ರ ರೋಷನ್ ಸೇರಿ ಟ್ರಕ್ ಚಾಲಕನ ಮೃತದೇಹವನ್ನು ರಕ್ಷಣಾ ಸಿಬ್ಬಂದಿ ಪತ್ತೆ ಮಾಡಿದ್ದಾರೆ. ಒಂದೇ ಕುಟುಂಬದ ನಾಲ್ವರ ಮೃತದೇಹ ಗೋಕರ್ಣ ಬಳಿ ಪತ್ತೆಯಾಗಿದೆ.
ಈ ಘಟನೆಯಲ್ಲಿ ಒಟ್ಟು 11 ಮಂದಿ ಮಣ್ಣು ಪಾಲಾಗಿದ್ದಾರೆ ಎಂದು ಹೇಳಲಾಗುತ್ತಿದ್ದು ಉಳಿದವರಿಗಾಗಿ ಶೋಧ ಕಾರ್ಯ ನಡೆಯುತ್ತಲೇ ಇದೆ.ಸ್ಥಳದಲ್ಲಿ ಜಿಲ್ಲಾಡಳಿತ, ಕಂದಾಯ ಇಲಾಖೆ ಅಧಿಕಾರಿಗಳು,ಪೊಲೀಸ್ ಅಧಿಕಾರಿಗಳು ಬೀಡು ಬಿಟ್ಟಿದ್ದು ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ. ಘಟನೆಯಲ್ಲಿ ಟ್ಯಾಂಕರ್ ಒಂದು ನೀರು ಪಾಲಾಗಿರೋದರಿಂದ ನದಿ ಪಾತ್ರದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಅದರಂತೆ ಅವರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ.
ಘಟನೆಯಲ್ಲಿ ಒಟ್ಟು 11 ಜನ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಅಂಗಡಿಯಲ್ಲಿದ್ದ ಐವರು, ಟ್ಯಾಂಕರ್ ಚಾಲಕ, ಕಾರಿನಲ್ಲಿದ್ದ ನಾಲ್ವರು ಹಾಗೂ ಓರ್ವ ಮಹಿಳೆ ಸೇರಿ 11 ಜನ ಸಾವನ್ನಪ್ಪಿದ್ದಾರೆ ಅಂತಾ ಹೇಳಲಾಗುತ್ತಿದೆ. ಅದರಲ್ಲಿ 6 ಜನರ ಮೃತದೇಹ ಈಗಾಗಲೇ ಪತ್ತೆಯಾಗಿದೆ.ಇದರ ನಡುವೆ ಘಟನೆಯಲ್ಲಿ ಸಾವನ್ನಪ್ಪಿದವರಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರವನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದೆ.
ಇನ್ನು ಈ ರೀತಿ ಗುಡ್ಡ ಕುಸಿಯೋದಕ್ಕೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಡೆಸಿರುವ ಅವೈಜ್ಞಾನಿಕ ಕಾಮಗಾರಿಯೇ ಕಾರಣ ಅಂತಾ ರಾಜ್ಯ ಸರ್ಕಾರ ಆರೋಪ ಮಾಡಿದೆ. ವಿಧಾನಮಂಡಲ ಅಧಿವೇಶನದಲ್ಲಿ ಅಂಕೋಲ ಅಪಘಾತದ ಬಗ್ಗೆ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ ಅವರು, ನದಿ ಹಾಗೂ ಗುಡ್ಡದ ನಡುವೆ ರಾಷ್ಟ್ರೀಯ ಹೆದ್ದಾರಿ ಇದೆ. ರಸ್ತೆ ಬದಿಯಲ್ಲಿ ಅನಧಿಕೃತವಾಗಿ ಕೆಲವರು ಸಣ್ಣ ಮಟ್ಟದ ಕ್ಯಾಂಟೀನ್ಗಳನ್ನು ನಿರ್ಮಿಸಿಕೊಂಡಿದ್ದಾರೆ. ಇಲ್ಲಿ ಅಡುಗೆ ಅನಿಲ ಹೊತ್ತೊಯ್ಯುವ ಟ್ಯಾಂಕರ್ ಚಾಲಕರು ಟೀ ಕುಡಿಯಲು ವಾಹನ ನಿಲ್ಲಿಸಿದ್ದಾಗ ಅವಘಡ ಸಂಭವಿಸಿದೆ ಎಂದು ಹೇಳಿದ್ದಾರೆ.
ತನ್ನವರಿಗಾಗಿ ರೋಧಿಸುತ್ತಿರುವ ಶ್ವಾನ
ಇನ್ನು ಘಟನೆಯಲ್ಲಿ ರಸ್ತೆ ಬದಿಯಲ್ಲಿ ಕ್ಯಾಂಟೀನ್ ನಡೆಸುತ್ತಿದ್ದ ಲಕ್ಷಣ್ ನಾಯ್ಕ್ ಅವರ ಇಡೀ ಕುಟುಂಬವೇ ಮಣ್ಣುಪಾಲಾಗಿದೆ.ಅವರ ಜೊತೆ ವಾಸಿಸುತ್ತಿದ್ದ ನಾಯಿ ಬದುಕುಳಿದಿದ್ದು, ತನ್ನ ಯಜಮಾನನ ಇಡೀ ಕುಟುಂಬ ಮಣ್ಣು ಪಾಲಾಗೋದನ್ನು ಅಂದು ಕಣ್ಣಾರೆ ಕಂಡಿದೆ. ಹಾಗಾಗಿ ತನ್ನವರಿಗಾಗಿ ಆ ಶ್ವಾನ ರೋಧಿಸುತ್ತಿರುವ ದೃಶ್ಯ ಕರುಳು ಹಿಂಡುವಂತಿದೆ. ಘಟನೆ ನಡೆದಾಗಿನಿಂದಲೂ ಆ ಶ್ವಾನ ಅಲ್ಲಿಯೇ ಸುತ್ತಾಡುತ್ತಾ ತನಗೆ ಅನ್ನ ಹಾಕಿದವರಿಗಾಗಿ ಹುಡುಕಾಟ ನಡೆಸುತ್ತಿರುವ ದೃಶ್ಯ ನಾಯಿಯ ನಿಯತ್ತು ಎಂಥಹದ್ದು ಅನ್ನೋದನ್ನು ತೋರಿಸುವಂತಿದೆ.











