ಮನೆ Latest News ದರ್ಶನ್ ನನ್ನ ಮಗುವಿದ್ದಂತೆ, ಮಗು ತಪ್ಪು ಮಾಡಿದಾಗ ಅಪ್ಪನಿಗೆ ನೋವಾಗುವಂತೆ ನನಗೂ ಆಗಿದೆ; ಮಂಡ್ಯದಲ್ಲಿ ಹಿರಿಯ...

ದರ್ಶನ್ ನನ್ನ ಮಗುವಿದ್ದಂತೆ, ಮಗು ತಪ್ಪು ಮಾಡಿದಾಗ ಅಪ್ಪನಿಗೆ ನೋವಾಗುವಂತೆ ನನಗೂ ಆಗಿದೆ; ಮಂಡ್ಯದಲ್ಲಿ ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಹೇಳಿಕೆ

0

ಮಂಡ್ಯ : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟಿ ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಎಲ್ಲರೂ ಜೈಲು ಸೇರಿದ್ದಾರೆ.

ಇನ್ನು ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರಂಭದಲ್ಲಿ ಮಾತನಾಡಲು ಹಿಂದೇಟು ಹಾಕುತ್ತಿದ್ದ ಸ್ಯಾಂಡಲ್ ವುಡ್ ತಾರೆಯರು ಇದೀಗ ಒಬ್ಬೊಬ್ಬರೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಿಯ್ಯಾಕ್ಟ್ ಮಾಡುತ್ತಿದ್ದಾರೆ. ಇಂದು ಪ್ರಕರಣದ ಬಗ್ಗೆ ನಟ ಶಿವರಾಜ್ ಕುಮಾರ್ ಮಾತನಾಡಿದ್ದರು. ಇದೀಗ ಹಿರಿಯ ಸಂಗೀತ ನಿರ್ದೇಶಕ ನಾದಬ್ರಹ್ಮ ಹಂಸಲೇಖ ಅವರು ಕೂಡ ಘಟನೆ ಬಗ್ಗೆ ಮಾತನಾಡಿದ್ದಾರೆ.

ಸಂಗೀತ ನಿರ್ದೇಶಕ ಹಂಸಲೇಖ ಅವರು ಮಂಡ್ಯದಲ್ಲಿ ಮಾತನಾಡಿದ್ದು, ನಟ ದರ್ಶನ್ ನನ್ನು ನನ್ನ ಮಗುವಂತ ತಿಳಿದುಕೊಳ್ಳಿ ಎಂದಿದ್ದಾರೆ.ದರ್ಶನ್ ಅತ್ಯುನ್ನತ ಸ್ಥಾನಕ್ಕೆ ಏರಿದವನು . ಆತ ಮತ್ತೆ ಕೆಳಗೆ ಬೀಳುವುದು ಬೇಡ. ನಮ್ಮದು ಚಂದನವನ. ಒಂದು ಮಳೆಗೆ ಮರ ಒಣಗಿದರೆ ಇನ್ನೊಂದು ಮಳೆಗೆ ಕಾಡು ಬೆಳೆದೇ ಬೆಳೆಯುತ್ತದೆ. ಸಿನಿಮಾ ಕಲಾವಿದರಾದವರು ಸಣ್ಣದಾಗಿ ಯೋಚನೆ ಮಾಡಬೇಕು. ಸಿಟ್ಟನ್ನು ಸ್ಕ್ರಿಪ್ಟ್ ಮಾಡಬೇಕು.ದ್ವೇಷವನ್ನ ಕ್ಯಾರೆಕ್ಟರ್ ಮಾಡಬೇಕು. ನಾವು ಆ ರೀತಿ ಸಿನಿಮಾದಲ್ಲಿ ತೋರಿಸಬೇಕು ಅಷ್ಟೇ.  ನಿಜ ಜೀವನದಲ್ಲಿ ಸ್ಕ್ರಿಪ್ಟನ್ನು ತರಬಾರದು.  ನಿಜ ಜೀವನದಲ್ಲಿ ಕ್ಯಾರೆಕ್ಟರ್ ಆಗಬಾರದು ಇದು ಕಲಾವಿದರ ಕರ್ತವ್ಯ ಎಂದು ಹಂಸಲೇಖ ಹೇಳಿದ್ದಾರೆ.

ನಟ ದರ್ಶನ್ ನನ್ನ ಮಗು ಇದ್ದಂತೆ. ಮಗು ತಪ್ಪು ಮಾಡಿದ್ದಾಗ ಅಪ್ಪನಾದವನಿಗೆ ಹೇಗೆ ನೋವಾಗುತ್ತದೆಯೋ ಅದೇ ರೀತಿ ನನಗೂ ನೋವಾಗಿದೆ. ಅವನು ಎಷ್ಟು ನೋವು ಅನುಭವಿಸಿದ್ದಾನೋ ನಾನು ಕೂಡ ಅಷ್ಟೇ ನೋವು ಅನುಭವಿಸಿದ್ದೇನೆ. ದರ್ಶನ್ ಸಿನಿಮಾರಂಗಕ್ಕೆ ಕೊಟ್ಟಿರುವ ಕೊಡುಗೆ ಇದೆಯಲ್ಲ ಆ ಬಗ್ಗೆ ಗಮನ ಕೊಡೋಣ ಎಂದು ಸಕ್ಕರೆ ನಾಡಿನಲ್ಲಿ ನಾದಬ್ರಹ್ಮ ಹಂಸಲೇಖ ಹೇಳಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಣ್ಣ ಹೇಳಿದ್ದೇನು?

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ  ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ರಿಯ್ಯಾಕ್ಟ್ ಮಾಡಿದ್ದಾರೆ.ಈ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ನಾವು ಮಾಡುತ್ತಿರೋದು ಸರೀನಾ ಅನ್ನೋದನ್ನು ನಾವು ಮೊದಲು ಯೋಚಿಸಬೇಕು ಎಂದಿದ್ದಾರೆ.  ಈ ಬಗ್ಗೆ ಈಗ ಮಾತನಾಡಿ ಯಾವುದೇ ಪ್ರಯೋಜನ ಇಲ್ಲ. ಈ ಘಟನೆಯಿಂದಾಗಿ ಎರಡೂ ಕುಟುಂಬಗಳಿಗೂ ಸಾಕಷ್ಟು ನೋವಾಗಿದೆ ಎಂದಿದ್ದಾರೆ.

ಈಗ ಯಾರೂ ಏನೂ ಮಾಡೋದಕ್ಕೂ ಆಗಲ್ಲ. ಪ್ರಕರಣದ ಬಗ್ಗೆ ಈಗಾಗಲೇ ತನಿಖೆ ನಡೆಯುತ್ತಿದೆ. ಕಾನೂನಿನ ಅಡಿಯಲ್ಲಿ ಏನೇನಾಗ್ಬೇಕೋ ಅದು ಆಗುತ್ತೆ.  ಈ ಘಟನೆಯಿಂದ ನನಗೂ ಸಾಕಷ್ಟು ನೋವಾಗಿದೆ ಎಂದರು. ಮುಂದೆ ಏನಾಗುತ್ತೆ ಕಾದು ನೋಡೋಣ ಎಂದು ಅವರು ಹೇಳಿದ್ದಾರೆ.