ಮನೆ Latest News ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರ ಪುತ್ರಿ ಹಂಸ ಮೊಯ್ಲಿ ನಿಧನ

ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರ ಪುತ್ರಿ ಹಂಸ ಮೊಯ್ಲಿ ನಿಧನ

0

ಬೆಂಗಳೂರು; ಮಾಜಿ ಮುಖ್ಯಮಂತ್ರಿ, ಹಿರಿಯ ಕಾಂಗ್ರೆಸ್ ಮುಖಂಡ ವೀರಪ್ಪ ಮೊಯ್ಲಿ ಅವರ ಪುತ್ರಿ ಹಂಸ ಮೊಯ್ಲಿ (46) ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಹಂಸ ಮೊಯ್ಲಿ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಹಂಸ ಅವರು ನಿನ್ನೆ ರಾತ್ರಿ ನಿಧನರಾಗಿದ್ದಾರೆ.

ಇನ್ನು ರಾಜಕೀಯ ಕೆಲಸದ ನಿಮಿತ್ತ  ಛತ್ತೀಸ್​ಗಢ್​ ಪ್ರವಾಸದಲ್ಲಿದ್ದ  ಹಂಸ ಅವರ ತಂದೆ ವೀರಪ್ಪ ಮೊಯ್ಲಿ ಅವರು ಮಗಳ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ರಾತ್ರಿಯೇ ಬೆಂಗಳೂರಿಗೆ ವೀರಪ್ಪ ಮೊಯ್ಲಿ ಆಗಮಿಸಿದ್ದರು. ನಾಳೆ ಬೆಳಗ್ಗೆ ಹಂಸ ಮೊಯ್ಲಿ ಅವರ ಅಂತ್ಯಸಂಸ್ಕಾರ ನಡೆಸಲು ನಿರ್ಧರಿಸಲಾಗಿದೆ.

ಇನ್ನು ಹಂಸ ಮೊಯ್ಲಿ ಅವರು ಭರತನಾಟ್ಯ ಕಲಾವಿದೆ ಆಗಿದ್ದು, ಹಲವು ಕಾರ್ಯಕ್ರಮಗಳಲ್ಲಿ ತಮ್ಮ ನೃತ್ಯ ಪ್ರದರ್ಶನ ನೀಡಿದ್ದರು. ಜೊತೆಗೆ ನೃತ್ಯ ಸಂಯೋಜಕಿಯೂ ಆಗಿಯೂ ಅವರು ಕೆಲಸ ಮಾಡಿದ್ದರು. ಕೇವಲ ಭರತನಾಟ್ಯ ಕಲಾವಿದೆ ಅಲ್ಲದೆ ಸಿನಿಮಾದಲ್ಲೂ ಅಭಿನಯಿಸಿ ಅವರು ಗಮನಸೆಳೆದಿದ್ದರು. ದೇವದಾಸಿಯರ ಜೀವನಾಧಾರಿತ ತಮಿಳು ಚಿತ್ರ ‘ಶೃಂಗಾರಂ’ನಲ್ಲಿ ಹಂಸ ಅವರು ಅಭಿನಯಿಸಿದ್ದಾರೆ.ಇನ್ನು ಸಮಾಜ ಸೇವೆಯಲ್ಲೂ ಹಂಸ ತೊಡಗಿಸಿಕೊಂಡಿದ್ದರು.

 

ಅನಾರೋಗ್ಯದಿಂದ ಬಳಲುತ್ತಿದ್ದ ಹಂಸ ಅವರು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು, ಆದರೆ ಬದಲಾದ ಹವಾಮಾನದಿಂದ ಏಕಾಏಕಿ ಅವರ ಆರೋಗ್ಯದಲ್ಲಿ ಏರುಪೇರಾಗಿದೆ ಎನ್ನಲಾಗಿದೆ. ಇನ್ನು  ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಅಷ್ಟರಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.

ಹಂಸ ಅವರ ನಿಧನಕ್ಕೆ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ.ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು ಹಿರಿಯ ಕಾಂಗ್ರೆಸ್ ಧುರೀಣ, ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಶ್ರೀ ಎಂ.ವೀರಪ್ಪ ಮೊಯ್ಲಿ ಅವರ ಪುತ್ರಿ ಹಂಸಾ ಮೊಯ್ಲಿ ಅವರು ಅಕಾಲಿಕವಾಗಿ ವಿಧಿವಶರಾದ ಸುದ್ದಿ ಅತೀವ ದುಃಖವನ್ನು ಉಂಟುಮಾಡಿದೆ. ಸಮಾಜ ಸೇವಕಿ, ಭರತನಾಟ್ಯ ಕಲಾವಿದೆಯಾಗಿದ್ದ ಆಕೆಯ ಅಗಲಿಕೆ, ಹೆತ್ತವರಿಗೆ, ಕುಟುಂಬ ಸದಸ್ಯರಿಗೆ ಅದೆಷ್ಟು ನೋವನ್ನು ತಂದಿದೆ ಎನ್ನುವುದನ್ನು ಊಹಿಸಲು ಸಾಧ್ಯವಿಲ್ಲ. ದೇವರು ಅಗಲಿದ ಚೇತನಕ್ಕೆ ಸದ್ಗತಿ ನೀಡಲಿ, ಕುಟುಂಬ ಸದಸ್ಯರಿಗೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ ಎಂದಿದ್ದಾರೆ.