ಬೆಂಗಳೂರು; ಅಶ್ಲೀಲ ವೀಡಿಯೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪ್ರಜವ್ಲ್ ರೇವಣ್ಣ ಅವರನ್ನು ಜುಲೈ 1 ಸೋಮವಾರದಂದು ಅವರ ತಾಯಿ ಭವಾನಿ ರೇವಣ್ಣ ಭೇಟಿಯಾಗಿ ಮಾತುಕತೆ ನಡೆಸಿದ್ದರು. ತಾಯಿ ಮುಂದೆ ಪ್ರಜ್ವಲ್ ಭಾವುಕರಾಗಿದ್ದರು. ಅಲ್ಲದೇ ಇಬ್ಬರೂ ಮುಂದಿನ ಕಾನೂನು ಹೋರಾಟದ ಬಗ್ಗೆಯೂ ಚರ್ಚೆಯನ್ನು ನಡೆಸಿದ್ದರು ಎನ್ನಲಾಗಿದೆ.
ಇದಾದ ಬೆನ್ನಲ್ಲೇ ಇಂದು ಮೊದಲ ಬಾರಿಗೆ ಪುತ್ರನನ್ನು ಭೇಟಿಯಾಗಲು ಶಾಸಕ ರೇವಣ್ಣ ಪರಪ್ಪನ ಅಗ್ರಹಾರ ಜೈಲಿಗೆ ತೆರಳಿದ್ದರು. ರೇವಣ್ಣ ಅವರ ಎರಡೂ ಮಕ್ಕಳು ಸದ್ಯ ಜೈಲಿನಲ್ಲಿದ್ದಾರೆ. ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪರಪ್ಪನ ಅಗ್ರಹಾರದ ಕ್ವಾರಂಟೈನ್ ಜೈಲಿನಲ್ಲಿದ್ದಾರೆ. ಇಂದು ಅವರನ್ನು ಭೇಟಿಯಾದ ರೇವಣ್ಣ ಸುಮಾರು ಅರ್ಧಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ತಂದೆಯೂ ಕೂಡ ಮಗನ ಜೊತೆ ಜಾಮೀನು ಪಡೆಯುವ ಬಗ್ಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಇತ್ತ ಇನ್ನು 3 ಪ್ರಕರಣಗಳಿಗೆ ಸಂಬಂಧಪಟ್ಟಂತೆ ಪ್ರಜ್ವಲ್ ರೇವಣ್ಣ ಜಾಮೀನು ಕೋರಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ. ಸಷೆನ್ಸ್ ಕೋರ್ಟ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಹಿನ್ನೆಲೆ ಅವರು ಇದೀಗ ಹೈಕೋರ್ಟ್ ಮೊರೆ ಹೋಗಿದ್ದಾರೆ. ಇನ್ನೊಂದು ಕಡೆ ಮತ್ತೋರ್ವ ಪುತ್ರ ಸೂರಜ್ ವಿರುದ್ಧದ ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಕೇಸ್ಗೆ ಸಂಬಂಧಿಸಿದ ಸೂರಜ್ ಜಾಮೀನು ಅರ್ಜಿ ವಿಚಾರಣೆಯನ್ನು ಕೋರ್ಟ್ ನಾಳೆಗೆ ಮುಂದೂಡಿದೆ. ಅಲ್ಲದೇ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಜುಲೈ 18 ರವರೆಗೆ ವಿಸ್ತರಿಸಿದೆ. ಮತ್ತೊಂದು ಕಡೆ ಇಬ್ಬರೂ ಮಕ್ಕಳು ಜೈಲು ಪಾಲಾಗಿರೋದು ರೇವಣ್ಣ ದಂಪತಿಯನ್ನು ಸಂಕಷ್ಟಕ್ಕೆ ಸಿಲುಕಿಸಿದ್ದು ಹೇಗಾದರೂ ಮಾಡಿ ಇಬ್ಬರು ಮಕ್ಕಳು ಹೊರಗೆ ತರಲು ರೇವಣ್ಣ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.
ಇನ್ನು ನಿನ್ನೆ ರೇವಣ್ಣ ಹೊಳೆನರಸೀಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ ನಾನು ಪ್ರಜ್ವಲ್ ಭೇಟಿಗೆ ಜೈಲಿಗೆ ಹೋಗಲ್ಲ ಎಂದಿದ್ದರು.ಭವಾನಿ ರೇವಣ್ಣ ಪ್ರಜ್ವರ್ ರೇವಣ್ಣ ಅವರ ತಾಯಿಯಾಗಿ ಮಗನನ್ನು ನೋಡಲು ಹೋಗಿದ್ದಾರೆ. ತಾಯಿ ಆಗಿ ಅದು ಅವರ ಕರ್ತವ್ಯ. ಆದರೆ ನಾನು ಜೈಲಿಗೆ ಹೋಗೋದಿಲ್ಲ ಎಂದು ರೇವಣ್ಣ ಹೇಳಿದ್ದಾರೆ. ಅಲ್ಲದೇ ಭವಾನಿ ರೇವಣ್ಣ ಪ್ರಜ್ವಲ್ ರೇವಣ್ಣ ಅವರ ಬಳಿ ಏನು ಮಾತನಾಡಿದ್ದಾರೆ ಅನ್ನೋದು ಗೊತ್ತಿಲ್ಲ. ನಾನು ಮಾತ್ರ ಹೋಗಲ್ಲ. ಹೋದರೆ ನಾನು ಪ್ರಜ್ವಲ್ ಗೆ ಏನೋ ಹೇಳಿ ಕೊಡಲು ಹೋಗಿದ್ದೇನೆ ಅನ್ನೋ ಅರ್ಥ ಹುಟ್ಟಿಕೊಳ್ಳುತ್ತೆ. ಹಾಗಾಗಿ ನಾನು ಹೋಗಲ್ಲ ಎಂದಿದ್ದರು.
ಇನ್ನು ನಮ್ಮ ಕುಟುಂಬದ ಮೇಲಿರುವ ಕೇಸ್ಗಳ ವಿಚಾರಣೆ ಕೋರ್ಟ್ನಲ್ಲಿದೆ. ಪ್ರಕರಣಗಳು ಕೋರ್ಟ್ನಲ್ಲಿ ಇರುವಾಗ ನಾನು ಮಾತನಾಡುವುದು ಸರಿಯಲ್ಲ. ಹಾಗಾಗಿ ನಾನು ಈಗ ಏನೂ ಮಾತನಾಡಲ್ಲ. ನನಗೆ ದೇವರು, ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಇದೆ. ನಮಗೆ ನ್ಯಾಯ ಸಿಗುವ ವಿಶ್ವಾಸ ಇದೆ ಎಂದು ರೇವಣ್ಣ ಹೇಳಿದ್ದಾರೆ.ನಮಗೆ ಸದ್ಯದ ಮಟ್ಟಿಗೆ ದೇವರೇ ಗತಿ. ಬಿಟ್ಟರೆ ನ್ಯಾಯಾಂಗವೇ ಕಾಪಾಡಬೇಕು. ನನ್ನ ಮೇಲಿನ ಆರೋಪಗಳಿಂದ ಮುಕ್ತನಾಗಿ ಹೊರ ಬರುತ್ತೇವೆ ಎಂದು ರೇವಣ್ಣ ಹೇಳಿದ್ದರು. ಆದರೆ ಅದರ ಬೆನ್ನಲ್ಲೇ ಇಂದು ರೇವಣ್ಣ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ಮಗನನ್ನು ಮಾತನಾಡಿಸಿಕೊಂಡು ಬಂದಿರೋದು ಕುತೂಹಲ ಮೂಡಿಸಿದೆ.