ಬೆಂಗಳೂರು: ತಮ್ಮ ಮನೆಯಲ್ಲಿ ಕೆಲಸಕ್ಕಿದ್ದ ಕೆ ಆರ್ ನಗರದ 48 ವರ್ಷದ ಮಹಿಳೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಆರೋಪಿ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ವಿಧಿಸಿ ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ ಆದೇಶ ಹೊರಡಿಸಿದೆ.
ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಜ್ವಲ್ ರೇವಣ್ಣ ಅವರು ದೋಷಿ ಎಂದು ಕೋರ್ಟ್ ಆದೇಶ ನೀಡಿತ್ತು. ಪ್ರಕರಣದ ಶಿಕ್ಷೆ ಪ್ರಮಾಣ ಇಂದು ಪ್ರಕಟಿಸೋದಾಗಿ ಹೇಳಿತ್ತು. ಅದರಂತೆ ಇಂದು ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ ನ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಶಿಕ್ಷೆ ಪ್ರಮಾಣ ಪ್ರಕಟಿಸಿದ್ದಾರೆ. ಅದರಂತೆ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ಹಾಗೂ 5 ಲಕ್ಷ ದಂಡ ವಿಧಿಸಿ ಮಹತ್ವದ ಆದೇಶ ನೀಡಿದ್ದಾರೆ.
ಪ್ರಜ್ವಲ್ ರೇವಣ್ಣ ಅವರ ಶಿಕ್ಷೆಯ ವಿವರ ಇಂತಿದೆ:
ಐಪಿಸಿ ಸೆಕ್ಷನ್ 376 (2)(k)ರಡಿ ಜೀವಾವಧಿ ಶಿಕ್ಷೆ ಹಾಗೂ 5 ಲಕ್ಷ ರೂ. ದಂಡ, 376(2)(n) ಅಡಿ ಪದೇಪದೆ ಅತ್ಯಾಚಾರಕ್ಕೆ ಜೀವನಪರ್ಯಂತ ಜೈಲು, 5 ಲಕ್ಷ ರೂ. ದಂಡ, ಐಪಿಸಿ ಸೆಕ್ಷನ್ 354(A) ಅಡಿ 3 ವರ್ಷ ಸೆರೆವಾಸ, 25,000 ರೂಪಾಯಿ ದಂಡ, ಐಪಿಸಿ ಸೆಕ್ಷನ್ 354 (B) ಅಡಿ 7 ವರ್ಷ ಸೆರೆವಾಸ, 50,000 ರೂಪಾಯಿ ದಂಡ, ಐಪಿಸಿ ಸೆಕ್ಷನ್ 354 (c) ಅಡಿ 3 ವರ್ಷ ಸೆರೆವಾಸ, 25,000 ರೂಪಾಯಿ ದಂಡ, ಸೆಕ್ಷನ್ 506 ಅಡಿ 2 ವರ್ಷ ಸೆರೆವಾಸ 10,000 ರೂ. ದಂಡ, ಸೆಕ್ಷನ್ 201 ಅಡಿ 3 ವರ್ಷ ಸೆರೆವಾಸ 25,000 ರೂ. ದಂಡ, ಐಟಿ ಕಾಯ್ದೆ ಸೆ.66(E) ಅಡಿ 3 ವರ್ಷ 25,000 ರೂ. ದಂಡ ವಿಧಿಸಿದೆ. ಇನ್ನು ಸಂತ್ರಸ್ತೆ ಮಹಿಳೆಗೆ 7 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಹೇಳಿದೆ.
ಅಂದ್ಹಾಗೆ ಪ್ರಜ್ವಲ್ ರೇವಣ್ಣಗೆ ಇಂದಿನಿಂದಲೇ ಶಿಕ್ಷೆ ಆರಂಭವಾಗಿದ್ದು ಕಳೆದ 14 ತಿಂಗಳುಗಳಿಂದ ಅವರು ಜೈಲಿನಲ್ಲಿ ಇರೋದನ್ನು ಪರಿಗಣಿಸಲು ಆಗುವುದಿಲ್ಲ. ಯಾಕಂದ್ರೆ ಈ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಿಲ್ಲ. ಕೇವಲ ಬಾಡಿ ವಾರಂಟ್ ಮೇಲೆ ಪ್ರಜ್ವಲ್‌ನನ್ನು ವಶಕ್ಕೆ ಪಡೆಯಲಾಗಿತ್ತು ಹಾಗಾಗಿ ಇಂದು ಗಣನೆಗೆ ಬರುವುದಿಲ್ಲ.
ಏನಿದು ಪ್ರಕರಣ?
ಪ್ರಜ್ವಲ್ ರೇವಣ್ಣ ತಮ್ಮ ಮನೆಯಲ್ಲಿ ಕೆಲಸಕ್ಕಿದ್ದ ಮೈಸೂರಿನ ಕೆ ಆರ್ ನಗರದ 48 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಮಾಡಿದ್ದಲ್ಲದೇ ವೀಡಿಯೋ ಮಾಡಿಕೊಂಡಿದ್ದರು. ಹಾಸನ ಪೆನ್ ಡ್ರೈವ್ ಪ್ರಕರಣ ಬಯಲಾಗುತ್ತಿದ್ದಂತೆ ಆ ಮಹಿಳೆ ಕಾಣೆಯಾಗಿದ್ದರು. ಆಕೆಯ ಪುತ್ರ ಮೇ 4 2024 ರಂದು ಮೈಸೂರಿನ ಕೆ ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ.ರೇವಣ್ಣ ಅವರ ಮನೆಯಲ್ಲಿ ನನ್ನ ತಾಯಿ ಕೆಲಸ ಮಾಡುತ್ತಿದ್ದರು. ಆಕೆಯನ್ನು ಏ.29 ರಂದು ರೇವಣ್ಣ ಅವರ ಸೂಚನೆಯಂತೆ ಸತೀಶ್ ಬಾಬು ಎಂಬವರು ರೇವಣ್ಣ ಅವರು ಬರಲು ಹೇಳಿದ್ದಾರೆ ಎಂದು ಹೇಳಿ ಕರೆದುಕೊಂಡು ಹೋಗಿದ್ದಾರೆ.ಆ ಬಳಿಕ ಆಕೆ ನಾಪತ್ತೆಯಾಗಿದ್ದಾರೆ ಎಂದು ಮಗ ದೂರು ನೀಡಿದ್ದ.ಇದಾದ ಒಂದು ವಾರದ ಬಳಿಕ ಮಹಿಳೆಯನ್ನು ಹುಣಸೂರಿನಿಂದ 14 ಕಿ.ಮೀ ದೂರದಲ್ಲಿರುವ ಕಾಳೇನಹಳ್ಳಿರುವ ರೇವಣ್ಣ ಆಪ್ತ ರಾಜ್ ಗೋಪಾಲ್ ಎಂಬವರ ತೋಟದ ಮನೆಯಲ್ಲಿ ಆಕೆಯನ್ನು ಎಸ್ ಐಟಿ ತಂಡ ಪತ್ತೆ ಮಾಡಿತ್ತು.
ಇನ್ನು ಮಹಿಳೆ ಅಪಹರಣ ಪ್ರಕರಣದಲ್ಲಿ ಜಾಮೀನು ಕೋರಿ ರೇವಣ್ಣ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಮೇ 4 ರಂದು ರೇವಣ್ಣ ಅವರ ಜಾಮೀನು ಅರ್ಜಿ ವಜಾಗೊಂಡಿದ್ದರಿಂದ ಅವರು ಬೆಂಗಳೂರಿನ ಪದ್ಮನಾಭ ನಗರದಲ್ಲಿರುವ ಹೆಚ್ ಡಿ ದೇವೇಗೌಡ ನಿವಾಸದಿಂದಲೇ ಎಸ್ ಐಟಿ ಅಧಿಕಾರಿಗಳು ಅರೆಸ್ಟ್ ಮಾಡಿದ್ದರು. ಬಳಿಕ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿಲಾಗಿತ್ತು. ಅದರಂತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗಿತ್ತು. ಬಳಿಕ ಮೇ 14 ರಂದು ರೇವಣ್ಣ ಅವರಿಗ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯವರು ಷರತ್ತುಬದ್ಧ ಜಾಮೀನು ಮಂಜೂರು ಮಾಡಿತು.ಅದರಂತೆ 11 ದಿನಗಳ ಸೆರೆಮನೆ ವಾಸದ ಬಳಿಕ ಹೆಚ್ ಡಿ ರೇವಣ್ಣ ಅವರು ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್ ಆಗಿದ್ದರು.