ಬೆಂಗಳೂರು: ಬಸ್ ಟಿಕೆಟ್ ದರ ಏರಿಕೆಗೆ ಮಾಜಿ ಸಿಎಂ ಯಡಿಯೂರಪ್ಪ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು ಮನಸೋ ಇಚ್ಛೆ ಬಸ್ ಟಿಕೆಟ್ ದರ ಏರಿಸಲಾಗಿದೆ. ಸಾಮಾನ್ಯ ಜನರ ಮೇಲೆ ಸರ್ಕಾರ ಬರೆ ಹಾಕಿದೆ. ತಕ್ಷಣ ಟಿಕೆಟ್ ದರಗಳನ್ನು ವಾಪಸ್ ಪಡೆಯಬೇಕು ಅಂತ ಒತ್ತಾಯಿಸ್ತೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಇದೇ ವೇಳೆ ಮಾತನಾಡಿದ ಮಾಜಿ ಸಚಿವ ರೇಣುಕಾಚಾರ್ಯ ಯತ್ನಾಳ್ ತಂಡದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದ ಅಧ್ಯಕ್ಷರು, ಇಬ್ಬರು ವಿಪಕ್ಷ ನಾಯಕರ ನೇತೃತ್ವದಲ್ಲಿ ರಾಜ್ಯಾದ್ಯಂತ ಪ್ರವಾಸ ಹೋರಾಟ ನಡೀತಿದೆ. ಕೆಲವರು ಈ ಕ್ರೆಡಿಟ್ ನಮಗೇ ಸೇರಬೇಕು ಅಂತ ಹೊಡೆದಾಟ ಮಾಡ್ತಿದ್ದಾರೆ. ಅವರದ್ದು ಬಣ ಅಲ್ಲ, ಕೇವಲ ಐದಾರು ಜನರ ಗುಂಪು. ಭಿನ್ನಮತ ಸೃಷ್ಟಿ ಮಾಡ್ತಿರೋರು ಅವರು. ಪಕ್ಷ ದ ಹಿತ ಬೇಕಿಲ್ಲ ಅವರಿಗೆ. ರಾಜ್ಯಾಧ್ಯಕ್ಷರನ್ನ ಹೈಕೋರ್ಟ್ ನೇಮಿಸಿದೆ, ಇವರು ಒಪ್ಪುತ್ತಿಲ್ಲ ಅಂದರೆ ಭಿನ್ನಮತೀಯರು ತಾವೇ. ನಮ್ಮನ್ನ ದೆಹಲಿಯಲ್ಲಿ ಕೆಲವು ಲೋಕಸಭೆ ಸದಸ್ಯರು ರಕ್ಷಣೆ ಮಾಡ್ತಿದ್ದಾರೆ ಅಂತಾರಲ್ಲ, ಯಾರು ಆ ಲೋಕಸಭೆ ಸದಸ್ಯರು, ಅವರ ಹೆಸರು ಬಹಿರಂಗ ಪಡಿಸಿ. ತೊಟ್ಟಿಲೂ ತೂಗಿ ಮಗುವನ್ನು ಚಿವುಟೋರು. ಇವರ ಅಜೆಂಡಾ ಯಡಿಯೂರಪ್ಪ, ವಿಜಯೇಂದ್ರರನ್ನ ಬೈಯೋದಷ್ಟೇ. ನಿಮ್ಮ ಪ್ರತಿಷ್ಠೆ ಬದಿಗಿಟ್ಟು ಪಕ್ಷದ ಜತೆ ಕೈಜೋಡಿಸಿ ಎಂದಿದ್ದಾರೆ.
ಬಿಜೆಪಿ ಸಭೆ ಕರೀತೇವೆ, ಇವರ ವಿರುದ್ಧ ಸರಿಯಾದ ಪಾಠ ಕಲಿಸ್ತೇವೆ. ಮಗು ಚಿವುಟಿ, ತೊಟ್ಟಿಲು ತೂಗೋರು ನೇರ ಅಖಾಡಕ್ಕೆ ಬರಲಿ ತಾಕತ್ ಇದ್ರೆ ಎಂದು ಯತ್ನಾಳ್ ಪರ ನಿಂತ ಕೆಲ ನಾಯಕರಿಗೆ ರೇಣುಕಾಚಾರ್ಯ ಸವಾಲ್ ಹಾಕಿದ್ದಾರೆ. ಇದೇ ವೇಳೆ ರಾಜ್ಯಾಧ್ಯಕ್ಷರ ಬದಲಾವಣೆ ಸಾಧ್ಯವಿಲ್ಲ.ಸೂರ್ಯ ಚಂದ್ರ ಇರೋದು ಎಷ್ಟು ಸತ್ಯವೋ?.ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಮುಂದುವರೆಯೋದೂ ಅಷ್ಟೇ ಸತ್ಯ ಎಂದಿದ್ದಾರೆ.
ಭಿನ್ನಮತೀಯರಿಗೆ ಯಾರೆಲ್ಲ ಬೆಂಬಲಿಸ್ತಿದ್ದಾರೋ ಅವರೇ ಈ ಭಿನ್ನಮತಕ್ಕೆ ನೇರ ಕಾರಣ. ಯಾರೆಲ್ಲ ಭಿನ್ನಮತೀಯರ ಬೆಂಬಲ ಮಾಡ್ತಿದ್ದಾರೋ ಅವರು ನೇರವಾಗಿ ಬರಲಿ. ಹಿಂದೆ ನಿಂತು ಅವರ ರಕ್ಷಣೆ ಮಾಡೋದು ಸರಿಯಲ್ಲ. ನಿಮಗೆ ಪಕ್ಷದ ಹಿತ ಬೇಡವಾ?. ಸಧ್ಯದಲ್ಲೇ ಬಿಜೆಪಿ ಪಕ್ಷದ ಸಭೆ ಕರೆಯುತ್ತೇವೆ. ಎಲ್ಲರಿಗೂ ಪಾಠ ಕಲಿಸ್ತೇವೆ. ಯತ್ನಾಳ್ ತಂಡ ಹಾಗೂ ಅವರನ್ನು ಬೆಂಬಲಿಸುವ ನಾಯಕರ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.