ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರಿನಲ್ಲಿ ನಡೆದ ಭೂಕುಸಿತ ಪ್ರಕರಣದಲ್ಲಿ ನಾಪತ್ತೆಯಾಗಿದ್ದ ಕೇರಳ ಮೂಲದ ಲಾರಿ ಚಾಲಕ ಅರ್ಜುನ್ ಅವರ ಮೃತದೇಹ ಹಾಗೂ ಅವರ ಲಾರಿ ಬರೋಬ್ಬರಿ 71 ದಿನಗಳ ಬಳಿಕ ಇಂದು ಪತ್ತೆಯಾಗಿದೆ.
ಗಂಗಾವಳಿ ನದಿಯಲ್ಲಿ ಭೂಕುಸಿತದ ವೇಳೆ ನಾಪತ್ತೆಯಾಗಿದ್ದ ಕೇರಳ ಮೂಲದ ಲಾರಿ ಚಾಲಕ ಅರ್ಜುನ್ ಅವರ ಮೃತದೇಹ ಹಾಗೂ ಲಾರಿ 71 ದಿನಗಳ ಬಳಿಕ ಪತ್ತೆಯಾಗಿದೆ. ನಾಪತ್ತೆಯಾಗಿದ್ದ ಲಾರಿ ಚಾಲಕ ಅರ್ಜುನ್ ಅವರ ಮೃತದೇಹ ಲಾರಿಯ ಕ್ಯಾಬಿನ್ ಒಳಗೆ ಸಿಲುಕಿ ಹಾಕಿಕೊಂಡ ರೀತಿಯಲ್ಲಿ ಪತ್ತೆಯಾಗಿದೆ.
ಅಂಕೋಲಾದಲ್ಲಿ ಶಿರೂರು ಭೂಕುಸಿತ ಪ್ರಕರಣದಲ್ಲಿ ಒಟ್ಟು 11 ಮಂದಿ ನಾಪತ್ತೆಯಾಗಿದ್ದರು. ಅವರಲ್ಲಿ 8 ಮಂದಿಯ ಮೃತದೇಹ ಪತ್ತೆಯಾಗಿತ್ತು. ಉಳಿದವರಿಗಾಗಿ ಮೂರು ಬಾರಿ ಕಾರ್ಯಾಚರಣೆ ನಡೆಸಲಾಗಿತ್ತು. ಅದರಲ್ಲಿ ಉಡುಪಿಯ ಮುಳುಗು ತಜ್ಞ ಈಶ್ವರ್ ಮಲ್ಪೆ ಸತತ ಮೂರು ಬಾರಿಯೂ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಮೊದಲ ಬಾರಿ ಕಾರ್ಯಾಚರಣೆ ನಡೆಸಿದಾಗ ಅವರಿಗೆ ಲಾರಿಯ ಜಾಕ್ ಪತ್ತೆಯಾಗಿತ್ತು. ಮೂರನೇ ಬಾರಿ ಕಾರ್ಯಾಚರಣೆಯಲ್ಲಿ ಭಾಗಿಯಾದಾಗ ಲಾರಿ ಪತ್ತೆ ಹಚ್ಚಿದ್ದರು.ಆದರೆ ಕಳೆದ ಎರಡು ದಿನಗಳ ಹಿಂದೆ ಕಾರ್ಯಾಚರಣೆ ಬಗ್ಗೆ ಬೇಸರಗೊಂಡು ಹೊರಟು ಹೋಗಿದ್ದರು. ತಮ್ಮ ಕಾರ್ಯಾಚರಣೆಗೆ ಸರಿಯಾದ ಸಹಕಾರ ಸಿಗುತ್ತಿಲ್ಲ ಎಂದು ವೀಡಿಯೋ ಮೂಲಕ ಬೇಸರ ಹೊರ ಹಾಕಿದ್ದರು.
ಇನ್ನು ವಲಾರಿ ಚಾಲಕ ಅರ್ಜುನ್ ಅವರ ಮೃತದೇಹ ಎರಡು ತುಂಡುಗಳಾಗಿ ಬಿದ್ದಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇನ್ನು ಅರ್ಜುನ್ ಮೃತದೇಹ ಪತ್ತೆಯಾಗುವ ಮೂಲಕ ದುರಂತದಲ್ಲಿ ಕಣ್ಮರೆಯಾದ 9 ಮಂದಿಯ ಮೃತದೇಹ ಪತ್ತೆಯಾದಂತಾಗಿದೆ. ಇನ್ನು ಇಬ್ಬರ ಮೃತದೇಹ ಸಿಗಬೇಕಿದೆ.
ಅಂದ್ಹಾಗೆ ಅರ್ಜುನ್ ಅವರ ಭಾರತ್ ಬೆಂಜ್ ಲಾರಿ ಪಲ್ಟಿಯಾಗಿ ಗಂಗಾವಳಿ ನದಿಗೆ ಬಿದ್ದಿತ್ತು. ಈಗ ಅದರ ಬಾನೆಟ್ ಮತ್ತು ಮುಂಭಾಗ ಮಾತ್ರ ಸಿಕ್ಕಿದೆ. ಆದರೆ ಲಾರಿಯ ಹಿಂದಿನ ಭಾಗ ಇನ್ನು ಸಿಗಬೇಕಿದೆ. ಇನ್ನು ಈ ಕಾರ್ಯಾಚರಣೆ ಬಗ್ಗೆ ಮಾತನಾಡಿರುವ ಉತ್ತರ ಕನ್ನಡ ಡಿಸಿ ಲಕ್ಷ್ಮೀಪ್ರಿಯಾ ಭಾರೀ ಮಳೆಯಿಂದಾಗಿ ಲಾರಿಯನ್ನು ಪತ್ತೆ ಹಚ್ಚಲು ತಡವಾಗಿದೆ ಎಂದಿದ್ದಾರೆ. ಅರ್ಜುನ್ ಮೃತದೇಹವನ್ನು ಡಿಎನ್ಎ ಟೆಸ್ಟ್ ಮಾಡಿ ರಿಪೋರ್ಟ್ ಬಂದ ಮೇಲೆ ಕುಟುಂಬದವರಿಗೆ ನೀಡಲಾಗುವುದು ಎಂದಿದ್ದಾರೆ, ಅಲ್ಲದೇ ಉಳಿದ ಇಬ್ಬರ ಮೃತದೇಹಕ್ಕಾಗಿ ಕಾರ್ಯಾಚರಣೆ ಮುಂದುವರಿಯುತ್ತೆ ಎಂದಿದ್ದಾರೆ.