ಮನೆ Latest News ಕ್ರಾಂತಿ ವೀರ ಬ್ರಿಗೇಡ್ ಉದ್ಘಾಟನೆ ಕುರಿತಾಗಿ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಸುದ್ದಿಗೋಷ್ಠಿ

ಕ್ರಾಂತಿ ವೀರ ಬ್ರಿಗೇಡ್ ಉದ್ಘಾಟನೆ ಕುರಿತಾಗಿ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಸುದ್ದಿಗೋಷ್ಠಿ

0

 

ಬೆಂಗಳೂರು; ಕ್ರಾಂತಿ ವೀರ ಬ್ರಿಗೇಡ್ ಉದ್ಘಾಟನೆ ಕುರಿತಾಗಿ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಸುದ್ದಿಗೋಷ್ಠಿ ನಡೆಸಿದ್ರು. ಸುದ್ದಿಗೋಷ್ಟಿಯಲ್ಲಿ ವಿವಿಧ ಸ್ವಾಮೀಜಿಗಳು ಭಾಗಿಯಾಗಿದ್ರು. ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸೋಮೇಶ್ವರ ಸ್ವಾಮೀಜಿ ಫೆಬ್ರವರಿ 4 ರಂದು ಬಸವನ ಬಾಗೇವಾಡಿಯಲ್ಲಿ ಕ್ರಾಂತಿ ವೀರ ಬ್ರಿಗೇಡ್ ಉದ್ಘಾಟನೆ ಆಗಲಿದೆ. ಇದು ಜಾತ್ಯಾತೀತವಾಗಿ ಮತ್ತು ಪಕ್ಷಾತೀತವಾಗಿ ನಡೆಯುವ ಕಾರ್ಯಕ್ರಮ. ಹಿಂದೂ ಧರ್ಮ ರಕ್ಷಣೆ ಮಾಡಲು ಹಿಂದೂಗಳು ಒಂದಾಗಬೇಕು .ಹಿಂದೂಗಳು ಒಂದಾಗದಿದ್ದರೆ ಬಹಳ ಕಷ್ಟ. 1008 ಮಠಾಧೀಶರ ಪಾದಪೂಜೆಯೊಂದಿಗೆ ಉದ್ಘಾಟನೆ ಆಗಲಿದೆ. ಹಿಂದೂ ಧರ್ಮದ ಒಳಿತಿಗಾಗಿ ಕ್ರಾಂತಿ ವೀರ ಬ್ರಿಗೇಡ್ ಕೆಲಸ ಮಾಡಲಿದೆ ಎಂದರು.

ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಮಾತನಾಡಿ ಹಿಂದುಳಿದವರು ಮತ್ತು ದಲಿತರಿಗೆ ಬೆಂಬಲ ಸಮಾಜದಿಂದಲೂ, ಸರ್ಕಾರದಿಂದಲೂ ಸಿಗುತ್ತಿಲ್ಲ. ಯಾರಿಗೆ ಅನ್ಯಾಯ ಆಗಿದೆಯೋ ಅಲ್ಲಿ ಕ್ರಾಂತಿ ವೀರ ಬ್ರಿಗೇಡ್  ನಿಲ್ಲಲಿದೆ. ಸ್ವಾಮೀಜಿಗಳು ತೀರ್ಮಾನ ತೆಗೆದುಕೊಂಡಾಗ ನಾವು ಪೂರ್ಣ ಬೆಂಬಲ ನೀಡಿದ್ದೇವೆ. ಬಸವರಾಜ ಬಾಳೇಕಾಯಿ ಬ್ರಿಗೇಡ್ ಅಧ್ಯಕ್ಷರಾಗಿ, ಕೆ.ಇ. ಕಾಂತೇಶ್ ಕಾರ್ಯಾಧ್ಯಕ್ಷರಾಗಿ ಇರುತ್ತಾರೆ. ನಾನು ಮತ್ತು ಗೂಳಿ ಹಟ್ಟಿ ಶೇಖರ್ ಬ್ರಿಗೇಡ್ ನ ಸಂಚಾಲಕರಾಗಿರುತ್ತೇವೆ. ಸಕಲ ಹಿಂದೂ ಸಮಾಜದ ರಕ್ಷಣೆಗೆ ಈ ಬ್ರಿಗೇಡ್ ಕೆಲಸ ಮಾಡಲಿದೆ. ಹಿಂದೆ ಬಿಜೆಪಿ ಸರ್ಕಾರದಲ್ಲಿ ಗೋ ಶಾಲೆ ಘೋಷಣೆ ಅಗಿತ್ತು. ಸಿದ್ದರಾಮಯ್ಯ ಸರ್ಕಾರ ಈ ಆದೇಶವನ್ನು ರದ್ದು ಮಾಡಿತು. ಸರ್ಕಾರದಲ್ಲಿ ಹಿಂದೂ ವಿರೋಧಿ ಕೆಲಸಗಳು ಆಗುತ್ತಿವೆ. ಧರ್ಮಸ್ಥಳದಲ್ಲಿ ನೇತ್ರಾವತಿ ನದಿಗೆ ತಲೆ ಕಡಿದ ಹಸು, ಹಸುವಿನ ರಕ್ತ ಬಂದು ಬೀಳುತ್ತಿದೆ. ವಕ್ಪ್ ಆಸ್ತಿ ಅಂತಾ ಪಹಣಿಯಲ್ಲಿ‌ ಸೇರಿದ್ದನ್ನು ಒಂದಾದರೂ ವಾಪಸ್ ಪಡೆದಿದ್ದಾರಾ? ಎಂದು ಪ್ರಶ್ನಿಸಿದ್ರು.

ಹಿಂದೆ ರಾಯಣ್ಣ ಬ್ರಿಗೇಡ್ ಕಟ್ಟಿದ್ದಾಗ ಯಾವುದೇ ಸ್ವಾಮೀಜಿಗಳು ನೇತೃತ್ವ ತೆಗೆದುಕೊಂಡಿರಲಿಲ್ಲ. ಹಿಂದೆ ದೊಡ್ಡವರ ಮಾತು ಕೇಳುವ ಅಭ್ಯಾಸ ನನಗೆ ಅವತ್ತು ಇತ್ತು, ಇವತ್ತು ಇಲ್ಲ. ಅಂದು ದೊಡ್ಡವರ ಮಾತು ಕೇಳಿ ಅಂದು ನಿಲ್ಲಿಸಿದೆ. ಇಂದು ಯಾವುದೇ ಕಾರಣಕ್ಕೂ ಈ ಬ್ರಿಗೇಡ್ ನಿಲ್ಲುವುದಿಲ್ಲ. ಇದು ಯಾವುದೇ ಪಕ್ಷದ ಬ್ರಿಗೇಡ್ ಆಗಿಲ್ಲ. ಬಿಜೆಪಿಯಲ್ಲಿನ ಅಸಮಾಧಾನಿತರು, ಸಮಾಧಾನಿತರು ನಮ್ಮ ಜೊತೆ ಅಂತಾ ಇಲ್ಲಿ ಪ್ರಶ್ನೆ ಇಲ್ಲ. ಫೆಬ್ರವರಿ 4 ಎಲ್ಲವೂ ವೇದಿಕೆ ಮೇಲೆ ಗೊತ್ತಾಗುತ್ತದೆ. ನಾನು ಲೋಕಸಭಾ ಚುನಾವಣೆಗೆ ನಿಲ್ಲುವ ವೇಳೆ ಯಾವ ಕಾರಣಕ್ಕೆ ನಿಲ್ಲುತ್ತಿದ್ದೇನೆ ಎಂದು ಹೇಳಿದ್ದೆ. ನಾನು ಯಾವ ವಿಚಾರ ಹೇಳಿದ್ದೇನೋ ಅದೇ ವಿಚಾರ ದೇವರ ದಯದಿಂದ ಇಂದು ಬಿಜೆಪಿಯಲ್ಲಿ ಚರ್ಚೆ ಆಗುತ್ತದೆ. ಇದು ತಾತ್ಕಾಲಿಕ ಗೊಂದಲ ಬಗೆ ಹರಿಯುತ್ತದೆ. ನನ್ನ ಬಿಜೆಪಿ ಹೈಕಮಾಂಡ್ ಸೇರಿಸಲು ಯೋಚನೆ ಮಾಡಿದರೆ ಹೋಗಬೇಕಾ ಅಂತಾ ನಾನೂ ಯೋಚನೆ ಮಾಡಬೇಕು. ನಾನು ಬಿಜೆಪಿ ಬಿಟ್ಟು ಬೇರೆ ಪಕ್ಷ ಸೇರಲ್ಲ, ಬಿಜೆಪಿ ನನ್ನ ತಾಯಿ. ಬ್ರಿಗೇಡ್ ಬಿಡಿ ಎಂದು ಮೋದಿ ಯಾವುದೇ ಕಾರಣಕ್ಕೂ ಹೇಳಲ್ಲ. ಬಿಜೆಪಿಯಲ್ಲಿ ಹಿಂದುತ್ವ ಸಿದ್ದಾಂತ ದೂರ ಹೋಗಿದೆ, ಹೊಂದಾಣಿಕೆ ರಾಜಕೀಯ ಹೆಚ್ಚಾಗಿದೆ. ಹೊಂದಾಣಿಕೆ ರಾಜಕೀಯ ಶುದ್ದೀಕರಣ ಆಗಲಿ ಎಂಬ ಆಸೆ ನನ್ನದು ಇದೆ, ಅನೇಕ ಮುಖಂಡರು ಆಗಿದೆ. ಬಿಜೆಪಿ ಶುದ್ದೀಕರಣ ಆಗುತ್ತದೆ, ಯಡಿಯೂರಪ್ಪ, ವಿಜಯೇಂದ್ರ‌ ಬಗ್ಗೆ ವೈಯಕ್ತಿಕ ದ್ವೇಷ ಇಲ್ಲ. ಶಿಕಾರಿಪುರದಲ್ಲಿ ನಮ್ಮ ಭಿಕ್ಷೆ ಅಂತಾ ಡಿ.ಕೆ. ಶಿವಕುಮಾರ್ ಹೇಳಿದ್ದರು. ನಾನು ವರುಣಾದಲ್ಲಿ ನಿಂತಿದ್ದರೆ ಸಿದ್ದರಾಮಯ್ಯ ಕಥೆ ಏನಾಗುತ್ತಿತ್ತು ಅಂತಾ ವಿಜಯೇಂದ್ರ‌ ಹೇಳಿದ್ದಾರೆ. ಅಂದರೆ ನಾನೇ ಗೆಲ್ಲಿಸಿದೆ ಅಂತಾ ತಾನೇ ಅರ್ಥ?. ಇದು ಹೋಂದಾಣಿಕೆ ರಾಜಕೀಯ ಅಲ್ಲದೇ ಇನ್ನೇನು?. ರಾಜಕೀಯ ಬೆತ್ತಲೆ ಇದು ಎಂದರು.

ಪ್ರಿಯಾಂಕ್ ಖರ್ಗೆ ವಿಚಾರ ಬಹಳ ಚರ್ಚೆ ಆಗುತ್ತಿದೆ. ನಾನು ಪ್ರಿಯಾಂಕ್ ಖರ್ಗೆ, ಸಿದ್ದರಾಮಯ್ಯ ಅವರಿಗೆ ಪ್ರಶ್ನೆ ಮಾಡುತ್ತೇನೆ. ನಿಮಗೆ ಏನಾದರೂ ಮಾನ, ಮಾರ್ಯಾದೆ ಇದ್ಯಾ?.ಯಾವನೋ ಸಂತೋಷ್ ಕುಮಾರ್ ಎನ್ನುವವನು ಆತ್ಮಹತ್ಯೆ ಮಾಡಿಕೊಂಡ. ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ, ಪ್ರಿಯಾಂಕ್ ಖರ್ಗೆ ಅಂದು ಈಶ್ವರಪ್ಪ ರಾಜೀನಾಮೆ ಕೊಡಬೇಕು ಅಂತಾ ಗಲಾಟೆ ಮಾಡಿ ರಾಜ್ಯದಲ್ಲಿ ದೊಂಬಿ ಎಬ್ಬಿಸುವುದೊಂದು ಬಾಕಿ. ಇಂದು ಇವರದ್ದು ಭಂಡತನದ ಉತ್ತರ. ಅಂದು ನಾನು ನೈತಿಕತೆಯಿಂದ ರಾಜೀನಾಮೆ ಕೊಟ್ಟೆ. ಇಂದು ಇವರಿಗೆ ನೈತಿಕತೆ ಇದ್ಯಾ?. ನಾವು ಬೀದಿಗೆ ಇಳಿದರೆ ನೀವು ಮನೆ ಬಿಟ್ಟು ಓಡಿ ಹೋಗಬೇಕಾಗುತ್ತದೆ ಅಂತಾ ಸರ್ಕಾರದ ಮಂತ್ರಿಯೊಬ್ಬನ ಸೊಕ್ಕಿನ ಮಾತು. ನನ್ನ ಹಾಗೆ ನೀವೂ ಕೂಡಾ ರಾಜೀನಾಮೆ ಕೊಟ್ಟು ನಿರ್ದೋಷಿಯಾಗಿ ಹೊರಗೆ ಬನ್ನಿ. ಕುರ್ಚಿಯ ಮೇಲೆ ಮೋಹ ಇರುವುದರಿಂದ ಸಿಎಂಗೆ ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೇಳುವ ಧೈರ್ಯವೂ ಇಲ್ಲ. ನನಗೊಂದು ಕಾನೂನು ಪ್ರಿಯಾಂಕ್ ಖರ್ಗೆಗೆ ಒಂದು ಕಾನೂನು ಇದ್ಯಾ?.ಹಾಗಾದರೆ ಅಂದು ನನ್ನ ವಿರುದ್ದ ಹೋರಾಟ ಮಾಡಿದ್ದಕ್ಕೆ ರಾಜ್ಯದ ಜನರ ಕ್ಷಮೆ ಕೇಳಲಿ ಎಂದು ಸವಾಲು ಹಾಕಿದ್ರು.

ಪ್ರಿಯಾಂಕ್ ಖರ್ಗೆ ವಿಚಾರದಲ್ಲಿ ರಾಜಕೀಯ ಪಕ್ಷವಾಗಿ ಬಿಜೆಪಿ ಏನು ಮಾಡಬೇಕೋ ಅದನ್ನು ಮಾಡಿದೆ. ಅವರು ಏನು ಮಾಡಬೇಕೋ ಅದನ್ನು ಮಾಡುತ್ತಿದ್ದಾರೆ. ವಿಜಯೇಂದ್ರ‌ ಕಲ್ಬುರ್ಗಿಗೆ ಹೋರಾಟಕ್ಕೆ ಯಾಕೆ ಹೋಗಿಲ್ಲ ಅಂತಾ ವೈಯಕ್ತಿಕವಾಗಿ ನನಗೆ ಗೊತ್ತಿಲ್ಲ. ನಾನು ಯಾರನ್ನೂ ಸಮರ್ಥನೆ ಮಾಡಿಕೊಳ್ಳುತ್ತಿಲ್ಲ. ಯಾವುದೇ ವ್ಯಕ್ತಿ ತಪ್ಪು ಮಾಡಿದರೂ ಅವರ ಪರವಾಗಿ ಸಮುದಾಯ ನಿಲ್ಲುವ ಕೆಟ್ಟ ಸಂಪ್ರದಾಯ ನಮ್ಮ ರಾಜ್ಯದಲ್ಲಿ ಶುರುವಾಗಿದೆ. ಇಂದಲ್ಲ, ನಾಳೆ ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೊಡಲೇಬೇಕು. ವಿಧಾನ ಪರಿಷತ್ ನಲ್ಲಿ ಎಂಎಲ್ಸಿ ಸಿ.ಟಿ. ರವಿ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಜಟಾಪಟಿ ವಿಚಾರದ ಬಗ್ಗೆ ಮಾತನಾಡಿ ಘಟನೆ ನಡೆದಿಲ್ಲ ಅಂತಾ ಸಭಾಪತಿಗಳು ಹೇಳಿಕೆ ಕೊಟ್ಟಿದ್ದಾರೆ. ಆಡಳಿತ ಪಕ್ಷ ಸ್ವಲ್ಪ ವಿಪಕ್ಷದ ಮಾತುಗಳನ್ನು ತಡೆದುಕೊಳ್ಳಬೇಕು.ಸಿ.ಟಿ. ರವಿ, ನಾನು ಅನೇಕ ವರ್ಷ ಆರ್ ಎಸ್ ಎಸ್ ಗೆ ಹೋದವರು. ರವಿ ಆ ಪದ ಬಳಕೆ ಮಾಡಲು ಸಾಧ್ಯವೇ ಇಲ್ಲ, ಅಲ್ಲಿ ಸಂಸ್ಕಾರ ಹೇಳಿ ಕೊಡುತ್ತಾರೆ ಎಂದರು.

ಸಿದ್ದರಾಮಯ್ಯ ಹಿಂದುಳಿದವರು, ದಲಿತರಿಗೆ ಸ್ವಲ್ಪ ಕೊಟ್ಟಿದ್ದಾರೆ. ಆದರೆ ನಮ್ಮಷ್ಟು ಅವರು ಕೊಟ್ಟಿಲ್ಲ. ನಾನು ಸಿದ್ದರಾಮಯ್ಯ ಅವರನ್ನು ಹೊಗಳಿಲ್ಲ. ಸಿಎಂ ಕುರ್ಚಿ ಬಗ್ಗೆ ನಾನು ಮಾತಾಡಲ್ಲ.ಅದು ಅವರ ಪಕ್ಷದ ಆಂತರಿಕ ವಿಚಾರ. ನಾನು ಹೇಳಿದರೆ ಸಿದ್ದರಾಮಯ್ಯ ಅವರನ್ನೇ ಮುಂದುವರಿಸುತ್ತಾರಾ? . ನಾನು ಅವರಿಗೆ ಏನೂ ಸಲಹೆ ಕೊಡಲ್ಲ.ನಾನು ಯಾಕೆ ಅವರಿಗೆ ಸಲಹೆ ಕೊಡಲಿ? ಎಂದು ಪ್ರಶ್ನೆ ಮಾಡಿದ್ದಾರೆ.