ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಇಡಿ ಅಧಿಕಾರಿಗಳು ಮಾಜಿ ಸಚಿವ ಬಿ ನಾಗೇಂದ್ರ ಅವರನ್ನು ಅರೆಸ್ಟ್ ಮಾಡಿ, ಅವರನ್ನು ಕಸ್ಟಡಿಗೆ ಪಡೆದು ವಿಚಾರಣೆಗೆ ಒಳಪಡಿಸುತ್ತಿದ್ದಾರೆ.ಆರು ದಿನಗಳ ಇಡಿ ಅಧಿಕಾರಿಗಳು ತಮ್ಮ ಕಸ್ಟಡಿಗೆ ಪಡೆದಿದ್ದಾರೆ.
ಇದೀಗ ಅದರ ಬೆನ್ನಲ್ಲೇ ಅವರ ಪತ್ನಿ ಮಂಜುಳಾ ಅವರಿಗೂ ಇಡಿ ಸಂಕಷ್ಟ ಎದುರಾಗಿದೆ. ಬಿ ನಾಗೇಂದ್ರ ಅವರ ಪತ್ನಿ ಮಂಜುಳಾ ಅವರನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ನಾಗೇಂದ್ರ ಅವರ ನಿವಾಸದಿಂದ ಅವರ ಪತ್ನಿ ಮಂಜುಳಾ ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಕರೆದೊಯ್ದಿದ್ದಾರೆ.
ಇಂದು ಬೆಳಗ್ಗೆ ಮಂಜುಳಾ ಅವರನ್ನು ಡಾಲರ್ಸ್ ಕಾಲೋನಿಯ ಅವರ ನಿವಾಸದಿಂದ ವಶಕ್ಕೆ ಪಡೆಯಲಾಗಿದ್ದು ಅವರನ್ನು ಹೆಚ್ಚಿನ ವಿಚಾರಣೆಗಾಗಿ ಬೆಂಗಳೂರಿನ ಶಾಂತಿನಗರದಲ್ಲಿರುವ ಇಡಿ ಕಚೇರಿಗೆ ಅಧಿಕಾರಿಗಳು ಕರೆದೊಯ್ದಿದ್ದಾರೆ ಅಂತಾ ಹೇಳಲಾಗಿದೆ. ಪತಿ ಇಡಿ ಕಸ್ಟಡಿಯಲ್ಲಿರುವ ಬೆನ್ನಲ್ಲೇ ಮಂಜುಳಾ ಅವರನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದಿರೋದು ಅವರನ್ನು ಮತ್ತಷ್ಟು ಸಂಕಷ್ಟಕ್ಕೆ ಈಡು ಮಾಡಿದೆ.
ಮಾಜಿ ಸಚಿವ ಬಿ. ನಾಗೇಂದ್ರ ಆಪ್ತನ ಖಾತೆಯಿಂದಲೇ ಅನೇಕ ಖಾತೆಗಳಿಗೆ ಹಣ ವರ್ಗಾವಣೆ
ವಾಲ್ಮೀಕಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಮಾಜಿ ಸಚಿವ ನಾಗೇಂದ್ರ ಅವರನ್ನು ಅರೆಸ್ಟ್ ಮಾಡಿ ಇಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ವಿಚಾರಣೆ ವೇಳೆ ಇಡಿ ಅಧಿಕಾರಿಗಳಿಗೆ ಹಲವು ಮಾಹಿತಿಗಳು ಲಭ್ಯವಾಗಿವೆ ಎನ್ನಲಾಗಿದೆ.
ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಮಾಜಿ ಸಚಿವ ನಾಗೇಂದ್ರ ಅವರ ಆಪ್ತನ ಅಕೌಂಟ್ ನಿಂದಲೇ ಹಣ ವರ್ಗಾವಣೆಯಾಗಿರುವುದು ತನಿಖೆಯಿಂದ ಗೊತ್ತಾಗಿದೆ. ಮಾಜಿ ಸಚಿವ ನಾಗೇಂದ್ರನ ಆಪ್ತ ಸಹಾಯಕ ನೆಕ್ಕಂಟಿ ನಾಗರಾಜ್ ಅಕೌಂಟ್ ಮೂಲಕ ಇತರರ ಖಾತೆಗಳಿಗೆ ಹಣ ಜಮಾ ಆಗಿದೆ ಎನ್ನಲಾಗಿದೆ.
ಸಿಂಧನೂರನ ಬೂದಿಹಾಳ ಕ್ಯಾಂಪ್ ನಿವಾಸಿ ಕೋನಾ ವೆಂಕಟರಾವ್ ರೆಡ್ಡಿ ಹಾಗೂ ಆತನ ಇಬ್ಬರು ಪುತ್ರಿಯರಾದ ಲಕ್ಕಂಸಾನಿ ಲಕ್ಷ್ಮಿ, ರತ್ನಕುಮಾರಿ, ಹಾಗೂ ಮೊಮ್ಮಗ ಎಲ್. ಸುನೀಲನ ಅಕೌಂಟಿಗೆ ಹಣ ವರ್ಗಾವಣೆ ಮಾಡಲಾಗಿದೆ ಎನ್ನಲಾಗಿದೆ. ಇನ್ನು ಕೋನಾ ವೆಂಕಟರಾವ್ ರೆಡ್ಡಿ ಅಕೌಂಟಿಗೆ 12 ಲಕ್ಷ, ಪುತ್ರಿ ಲಕ್ಕಂಸಾನಿ ಲಕ್ಷ್ಮಿ ಅಕೌಂಟಿಗೆ 25 ಲಕ್ಷ, ಮತ್ತೋರ್ವ ಪುತ್ರಿ ರತ್ನಕುಮಾರಿ ಅಕೌಂಟಿಗೆ 25 ಲಕ್ಷ, ಮೊಮ್ಮಗ ಸುನೀಲ್ ಅಕೌಂಟಿಗೆ 36 ಲಕ್ಷ ವರ್ಗಾವಣೆ ಮಾಡಲಾಗಿದೆ.
ಇನ್ನು ನೆಕ್ಕಂಟಿ ನಾಗರಾಜ್ ಸಂಬಂಧಿ ಎನ್ನಲಾದ ವೆಂಕಟರಾವ್ ರೆಡ್ಡಿ ಇವರ ಇಡೀ ಕುಟುಂಬಕ್ಕೆ ಒಟ್ಟು 98 ಲಕ್ಷ ರೂ. ವರ್ಗಾವಣೆ ಮಾಡಲಾಗಿದೆ. ಬೂದಿಹಾಳ ಕ್ಯಾಂಪ್ ನಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿವೆ ವೆಂಕಟರಾವ್ ರೆಡ್ಡಿ ಕುಟುಂಬದವರ ಅಕೌಂಟ್ ಗಳಿವೆ.
ಇದೇ ವಿಚಾರವಾಗಿ ಈ ನಾಲ್ವರ ಅಕೌಂಟ್ ಗಳು ಸದ್ಯಕ್ಕೆ ಸೀಜ್ ಮಾಡಲಾಗಿದೆ. ಬೆಂಗಳೂರಿನಿಂದಲೇ ಇಡಿ ಅಧಿಕಾರಿಗಳಿಂದ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಬ್ಯಾಂಕ್ ಸಿಬ್ಬಂದಿ ನಾಲ್ವರ ಅಕೌಂಟ್ ಸೀಜ್ ಮಾಡಲಾಗಿದೆ. ಕಮಿಷನ್ ಆಸೆ ತೋರಿಸಿ ಕಳೆದ ಮಾ.8ರಂದು ಈ ನಾಲ್ವರ ಅಕೌಂಟ್ ಗೆ ಹಣ ವರ್ಗಾವಣೆ ಮಾಡಲಾಗಿದೆ. ಹಣವನ್ನು ಬ್ಯಾಂಕ್ ನಿಂದ ಡ್ರಾ ಮಾಡದಂತೆ ಇಡಿ ಅಧಿಕಾರಿಗಳು ತಡೆ ಹಿಡಿದಿದ್ದಾರೆ.