ಮನೆ Latest News ಮೆಡಿಕಲ್ ಮಾಫಿಯಾ ಮತ್ತು ಬಾಣಂತಿಯರ ಸಾವು ಪ್ರಕರಣಗಳ ಕುರಿತು ನಡೆದ ಚರ್ಚೆಗೆ ಆರೋಗ್ಯ ಸಚಿವ ದಿನೇಶ್...

ಮೆಡಿಕಲ್ ಮಾಫಿಯಾ ಮತ್ತು ಬಾಣಂತಿಯರ ಸಾವು ಪ್ರಕರಣಗಳ ಕುರಿತು ನಡೆದ ಚರ್ಚೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಉತ್ತರ

0

ಬೆಳಗಾವಿ;  ನಿಯಮ 69 ರಡಿ ಮೆಡಿಕಲ್ ಮಾಫಿಯಾ ಮತ್ತು ಬಾಣಂತಿಯರ ಸಾವು ಪ್ರಕರಣಗಳ ಕುರಿತು ನಡೆದ ಚರ್ಚೆಗೆ ಉತ್ತರ ನೀಡಿದ ಆರೋಗ್ಯ ಸಚಿವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಉತ್ತರ ನೀಡಿದ್ರು.

ನಿನ್ನೆ ಚರ್ಚೆ ವೇಳೆ ಶಾಸಕ ಡಾ. ಅಶ್ವಥ್ ನಾರಾಯಣ ತಪ್ಪು ಮಾಹಿತಿ ಕೊಟ್ಟಿದ್ದಾರೆ. ಅವರ ಧ್ವನಿ ದೊಡ್ಡದು ಇದೆ, ಆದರೆ ಮಾಹಿತಿ ನಿಜ ಇರಬೇಕಲ್ವಾ?. ಅಶ್ವಥ್ ನಾರಾಯಣ ಅವರಿಗೆ ಏನೂ ಮಾಹಿತಿಯೇ ಇಲ್ಲ ಎಂದು ಉತ್ತರದ ವೇಳೆ ಶಾಸಕ ಅಶ್ವಥ್ ನಾರಾಯಣ ವಿರುದ್ಧ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಸಮಾಧಾನ ತೋರ್ಪಡಿಸಿದ್ದಾರೆ.

ವರ್ಗಾವಣೆ ದಂಧೆ ಆರೋಗ್ಯ ಇಲಾಖೆಯಲ್ಲಿ ಇದೆ ಅಂದಿದ್ದಾರೆ. ನಾವು ಈ ವರ್ಷ ಯಾವುದೇ ವರ್ಗಾವಣೆ ಮಾಡಿಲ್ಲ.ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಮಾಡುತ್ತಿದ್ದೇವೆ. ಅದು ಕೂಡ ಕೋರ್ಟ್ ನಲ್ಲಿದೆ. ಯಾವುದೇ ಬೇಕಾಬಿಟ್ಟಿ ವರ್ಗಾವಣೆ ಮಾಡಿಲ್ಲ. ಸೀನಿಯಾರಿಟಿ‌ ಲಿಸ್ಟ್ ಮಾಡಿ ವರ್ಗಾವಣೆ ಮಾಡುತ್ತೇವೆ. 12ವರ್ಷಗಳ ಸೀನಿಯಾರಿಟಿ ಆಧಾರದಲ್ಲಿ ವರ್ಗಾವಣೆ ಆಗಲಿದೆ. ಚರ್ಚೆ ವೇಳೆ ವಿರೋಧ ಪಕ್ಷಗಳು ಸರಿಯಾಗಿ ಮಾತನಾಡಬೇಕು. ತಪ್ಪು ತಪ್ಪಾಗಿ ‌ಮಾತನಾಡಿದ್ರೆ ಹೇಗೆ ಎಂದು ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ವೇಳೆ ಸಚಿವ ದಿನೇಶ್ ಗುಂಡೂರಾವ್ ಮಾತಿಗೆ ಶಾಸಕ ಯತ್ನಾಳ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಸಚಿವರು ಕೂಡಾ ಡಿಸಿಎಂ ತರಹ ಮಾತನಾಡುತ್ತಿದ್ದಾರೆ ಎಂದಿದ್ದಾರೆ ಯತ್ನಾಳ್

ಇನ್ನು ಬಾಣಂತಿಯರ ಸಾವಿನ ಬಗ್ಗೆ ಮಾತನಾಡಿದ ಸಚಿವರು  ಪಶ್ಚಿಮ ಬಂಗಾಳದ ಕಂಪೆನಿ ಬೇರೆ ರಾಜ್ಯಗಳಲ್ಲಿ ಬ್ಲ್ಯಾಕ್ ಲಿಸ್ಟ್ ಆಗಿಲ್ಲ.ನಮ್ಮ ರಾಜ್ಯದಲ್ಲಿ ನಾವು ಬ್ಲ್ಯಾಕ್‌ ಲಿಸ್ಟ್ ಮಾಡಿದ್ದೇವೆ. 108 ಆಂಬ್ಯುಲೆನ್ಸ್ ಗೆ ಜಿಪಿಎಸ್ ಅಳವಡಿಸಿದ್ದೇವೆ. ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಮಾತ್ರ ಸೇವಾ ಶುಲ್ಕ ಪ್ರಾಯೋಗಿಕವಾಗಿ ಮಾಡಿದ್ದೇವೆ. ಬೇರೆ ಯಾವ ಆಸ್ಪತ್ರೆಗಳಲ್ಲೂ ಸೇವಾ ಶುಲ್ಕ ಇಲ್ಲ. ಬೆಂಗಳೂರಿನ ಜಯನಗರ ಆಸ್ಪತ್ರೆಯಲ್ಲೂ ಸೇವಾ ಶುಲ್ಕ ಜಾಸ್ತಿ ಮಾಡಿಲ್ಲ, ಅದು ಹಿಂದಿನ ಪಟ್ಟಿ. ಆರೋಗ್ಯ ಇಲಾಖೆಯಿಂದ ರಾಜ್ಯಾದ್ಯಂತ ಎಲ್ಲಾ ಯೂಸರ್ ಚಾರ್ಜ್ ಫಿಕ್ಸ್ ಮಾಡಿಲ್ಲ. ಕೇವಲ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಪ್ರಾಯೋಗಿಕ ಮಾಡಿದ್ದೇವೆ ಎಂದರು.

ನಮ್ಮ ಇಲಾಖೆಯಲ್ಲಿ ಏನೂ ಇಲ್ಲ ಅಂತ ಬಿಜೆಪಿ ಆರೋಪಿಸಿದೆ. ಅವೆಲ್ಲವೂ ಸುಳ್ಳು ಆರೋಪ. ಮೆಡಿಸಿನ್ ಕೊರತೆ ಇದೆ ಅಂತ ಇನ್ನೊಂದು ಆರೋಪ ಮಾಡಿದ್ದಾರೆ.ನಾನು ಸಚಿವನಾಗಿ ಬಂದ ಮೇಲೆ ಆಸ್ಪತ್ರೆಗಳಿಗೆ 75%-80% ಔಷಧ ಪೂರೈಕೆ ಮಾಡಿದ್ದೇವೆ. ಎಲ್ಲಾ ಔಷಧಗಳೂ ನಮ್ಮ ಬಳಿ ಇವೆ, ಕೆಲವು ಇಲ್ಲ ಒಪ್ಪಿಕೊಳ್ಳುತ್ತೇನೆ. ಆಸ್ಪತ್ರೆಗಳ ಫಾರ್ಮಸಿಗಳಲ್ಲಿ ಪೂರ್ತಿ ಔಷಧಗಳಿವೆ ಎಂದರು.

ಪಶ್ಚಿಮ ಬಂಗಾಳ ಕಂಪೆನಿಯ ಉತ್ಪಾದಕ ವ್ಯವಸ್ಥೆಯಲ್ಲೇ ಲೋಪ ಇದೆ. ಈ ಕಂಪೆನಿ ವಿರುದ್ಧ ಕೇಂದ್ರದ ಡ್ರಗ್ ಇಲಾಖೆಗೆ ಪತ್ರ ಬರೆದು ತನಿಖೆಗೆ ಕೇಳಿದ್ದೇವೆ. ಈಗ ಆ ಕಂಪೆನಿ ಮೇಲೆ ಯಾವ ಔಷಧವನ್ನೂ ಉತ್ಪಾದಿಸಬಾರದು ಅಂತ ಆದೇಶ ಆಗಿದೆ.ಈ ಬಾಣಂತಿಯರ ಕುಟುಂಬಗಳಿಗೆ ಆ ಕಂಪೆನಿಯೂ ಪರಿಹಾರ ಕೊಡಬೇಕು. ನಾವು ಈ‌ ಕಂಪೆನಿಯನ್ನು ಸುಮ್ಮನೆ ಬಿಡಲ್ಲ

 

ನಮ್ಮಿಂದ ವೈಫಲ್ಯ ಆಗಿದ್ದರೂ ಕ್ರಮ ತೆಗೆದುಕೊಳ್ಳುತ್ತೇವೆ, ರಾಜಿ ಇಲ್ಲವೇ ಇಲ್ಲ. ಆ ಕಂಪೆನಿ ವಿರುದ್ಧ ಪ್ರಾಸಿಕ್ಯೂಷನ್‌ ಮಾಡುತ್ತಿದ್ದೇವೆ. ನಾವೂ ಕೂಡಾ ಕುಟುಂಬಸ್ಥರಿಗೆ ಪರಿಹಾರ ಕೊಟ್ಟಿದ್ದೇವೆ, ಇನ್ನೇನು ಸೌಲಭ್ಯ ಬೇಕು ಮಾಡುತ್ತೇವೆ. ಈ ಪ್ರಕರಣ ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತೇವೆ. ಎಷ್ಟೋ ಕಂಪೆನಿಗಳ ಮೇಲೆ ಈ ತರಹದ ಆರೋಪ ಬಂದಾಗ ಶಿಕ್ಷೆಗಳೂ ಗಂಭೀರ ಇರಲ್ಲ. ಮೆಡಿಕಲ್ ಕಂಪೆನಿಗಳ ಲಾಬಿ ಜೋರಾಗಿದೆ.ಅವರಿಗೆ ಕೆಟ್ಟ ಹೆಸರು ಬರದಂತೆ ರಕ್ಷಣೆ ಸಿಗುತ್ತದೆ ತಪ್ಪಾದರೆ ಮುಚ್ಚಿ ಹಾಕುತ್ತಾರೆ.ಏಳು ಕೇಸ್ ಗಳಲ್ಲಿ ಐವರು ಬಾಣಂತಿಯರು ತೀರಿಕೊಂಡರು. ವೈದ್ಯರ ತಂಡ ಬಳ್ಳಾರಿಗೆ ಕಳಿಸಿಕೊಟ್ಟೆವು, ಅವರು ವರದಿ ಕೊಟ್ಟರು. ವೈದ್ಯರು ಸರಿಯಾದ ಕೆಲಸ ಮಾಡಿದ್ದಾರೆ. ಆದರೆ ಐವಿ ದ್ರಾವಣ ಬಗ್ಗೆಯೂ ಮಾಹಿತಿ ಕೊಟ್ಟರು. ಹೈದರಾಬಾದ್ ಲ್ಯಾಬ್ ನಿಂದ ಇದು ಕಳಪೆ ಅಂತ ಪರೀಕ್ಷೆ ಬಂದಿದೆ ಎಂದರು.

ಅಷ್ಟರಲ್ಲಿ ವಿಪಕ್ಷ ಸದಸ್ಯರು ಬಾಣಂತಿಯರ ಸಾವುಗಳನ್ನು ಪೋಸ್ಟ್ ಮಾರ್ಟಂ ಯಾಕೆ ಮಾಡಲಿಲ್ಲ ಅಂತಾ ಪ್ರಶ್ನೆ ಮಾಡಿದ್ರು. ಅದಕ್ಕೆ  ದಿನೇಶ್ ಗುಂಡೂರಾವ್ ಸ್ಪಷ್ಟನೆ ನೀಡಿದ್ರು. ಯಾವುದೋ ತಪ್ಪಿನಿಂದ ತೀರಿಕೊಂಡಿದ್ದಾರೆ. ಈ ತರಹದ ಕೇಸ್ ಗಳಲ್ಲಿ ನಾವು ಮುಚ್ಚು ಮರೆ ಮಾಡಿಲ್ಲ. ಎಲ್ಲರಿಗೂ, ನನಗೂ ನೋವು, ವ್ಯಥೆ ಆಗಿದೆ.ಬೇರೆ ಕಡೆ ಐವಿ ದ್ರಾವಣ ಎಲ್ಲೆಲ್ಲಿ ಬಳಸಲಾಗಿದೆ ಅಂತ ಮಾಹಿತಿ ಕೇಳಿದ್ದೆವು. ಈ ತರಹದ ಕಂಪೆನಿಗಳ ಲಾಬಿ ದೊಡ್ಡದಾಗಿದೆ. ಈಗ ಐವರು ತೀರಿಕೊಂಡಿದ್ದಾರೆ, ಇನ್ನೆಷ್ಟು ಜನಕ್ಕೆ ಸಮಸ್ಯೆ ಆಗಿದೆ ತಿಳಿದುಕೊಳ್ಳಬೇಕು. ನಮ್ಮ ಲ್ಯಾಬ್ ಗಳ ಪರೀಕ್ಷಾ ಪ್ರಕ್ರಿಯೆ, ವ್ಯವಸ್ಥೆ ಸರಿಯಾಗಬೇಕು. ಐವಿ ದ್ರಾವಣ ಐದು ಸಲದ ಪರೀಕ್ಷೆಯಲ್ಲಿ ಚೆನ್ನಾಗಿದೆ ಅಂತ ಬಂತು, ಆರನೇ ಪರೀಕ್ಷೆಯಲ್ಲಿ ಸತ್ಯ ಗೊತ್ತಾಯಿತು. ಹೀಗಾದರೆ ಹೇಗೆ ನಮ್ಮ ಲ್ಯಾಬ್ ಗಳ ಕತೆ? ಎಂದರು.