ಬೆಂಗಳೂರು; ದಿನೇಶ್ ಗುಂಡೂರಾವ್ ಇಲಾಖೆ ನಡೆಸಲು ಸಾಧ್ಯವಾಗದಿದ್ದರೆ ರಾಜೀನಾಮೆ ಕೊಡಿ ಎಂದು ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್ ಆಕ್ರೋಶ ಹೊರ ಹಾಕಿದ್ದಾರೆ.
ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳು ನರಕ ಸದೃಶವಾಗಿವೆ. ಹಲವು ಜಿಲ್ಲೆಗಳಲ್ಲಿ ಸ್ಕ್ಯಾನಿಂಗ್ ನಡೆಯುತ್ತಿಲ್ಲ. 140 ಕೋಟಿ ರೂ. ಸರ್ಕಾರಿ ಆಸ್ಪತ್ರೆಗಳಲ್ಲಿ ಎಂಆರ್ ಐ ಸ್ಕ್ಯಾನ್ ಮಾಡುವ ಕಂಪನಿಗೆ ಬಾಕಿ ಇದೆ. ಸರ್ಕಾರ ಏನಾದರೂ ಖಾಸಗಿ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ಯಾ?. ಸರ್ಕಾರ ಕೂಡಲೇ 140 ಕೋಟಿ ರೂ. ಗಳನ್ನು ಬಿಡುಗಡೆ ಮಾಡಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಕೂಡಾ ಜನೌಷಧಿ ಕೇಂದ್ರಗಳನ್ನು ಬಂದ್ ಮಾಡಿದ್ದಾರೆ. ಬಂದ್ ಮಾಡಿದರೆ 800 ಔಷಧಿಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಗುವಂತೆ ಮಾಡಿ. ಬಡವರನ್ನು ಸಾಯಿಸುವ ಸರ್ಕಾರ ಇದು. ಸರ್ಕಾರದಲ್ಲಿ ಅಂಧಾ ದರ್ಬಾರ್ ನಡೆಯುತ್ತಿದೆ. ವಿಧಾನಸೌಧದಲ್ಲಿ ಮಾಧ್ಯಮಕ್ಕೆ ಸ್ವಾತಂತ್ರ್ಯ ಇಲ್ಲದೇ ಇದ್ದರೆ ಸಾಮಾನ್ಯ ಜನರ ಪಾಡೇನು ಎಂದಿದ್ದಾರೆ.
ಬಡವರನ್ನು ಕೊಲ್ಲಲು ಸರ್ಕಾರಿ ಆಸ್ಪತ್ರೆಗಳನ್ನು ನಡೆಸುತ್ತಿದ್ದೀರಾ?. ದಿನೇಶ್ ಗುಂಡೂರಾವ್ ಇಲಾಖೆ ನಡೆಸಲು ಸಾಧ್ಯವಾಗದಿದ್ದರೆ ರಾಜೀನಾಮೆ ಕೊಡಿ. ಬೇರೆಯವರಿಗೆ ಇಲಾಖೆ ನಡೆಸಲು ಅವಕಾಶ ಮಾಡಿ ಕೊಡಿ. ರಾಜ್ಯದಲ್ಲಿರೋ ಆಸ್ಪತ್ರೆಗಳಿಗೆ ಹೋದರೆ ಕೇವಲ ಡೆಡ್ ಬಾಡಿ ತರಲು ಮಾತ್ರ ಹೋಗಬೇಕಿದೆ. ಯಾದಗಿರಿಯಲ್ಲಿ ಸಾಲ ಮಾಡಿ ಔಷಧಿ ಖರೀದಿ ಮಾಡಲಾಗುತ್ತಿದೆ.ಖಾಸಗಿ ಔಷಧಾಲಯದಲ್ಲಿ ಔಷಧಿ ಖರೀದಿಸಲು ಚೀಟಿ ಕೊಡುತ್ತಿದ್ದಾರೆ. ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇದೇ ಪರಿಸ್ಥಿತಿ ಇದೆ ಎಂದು ತಿಳಿಸಿದ್ದಾರೆ.
ಬಾಗಲಕೋಟೆಯಲ್ಲಿ ಶಿವಾಜಿ ಜಯಂತಿ ಮೆರವಣಿಗೆ ಮೇಲೆ ಕಲ್ಲು ತೂರಾಟ ವಿಚಾರದ ಬಗ್ಗೆ ಮಾತನಾಡಿದ ಅವರು ರಾಜ್ಯ ಸರ್ಕಾರ ವಿಪರೀತ ತುಷ್ಟೀಕರಣದ ಕಾರಣದಿಂದ ಯಾರ ಮೇಲೂ ಕ್ರಮ ತೆಗೆದುಕೊಳ್ಳುತ್ತಿಲ್ಲ. ಬಾಗಲಕೋಟೆಯಲ್ಲಿ ಮಸೀದಿ ಭಾಗದಿಂದ ಹಿಂದೂ ಕಾರ್ಯಕರ್ತರ ಮೇಲೆ ಕಲ್ಲು ಬಿದ್ದಿದೆ. ಎಸ್ಪಿ, ಪೊಲೀಸ್ ಕಾನ್ ಸ್ಟೇಬಲ್ ಗಳಿಗೆ ಗಾಯ ಆಗಿದ್ದರೂ ಬಂಧಿಸಿರಲಿಲ್ಲ. ಒತ್ತಡ ಹಾಕಿದ ಮೇಲೆ 8 ಜನರ ಬಂಧನ ಆಗಿದೆ. ಯಾಕೆ ಕರ್ನಾಟಕದಲ್ಲಿ ಶಿವಾಜಿ ಜಯಂತಿ ಮಾಡಬಾರದಾ?. ಇದೇನು ಪಾಕಿಸ್ತಾನವೇ?. ಹಿಂದೂ ದೇವರ, ಹಿಂದೂ ರಾಷ್ಟ್ರೀಯ ನಾಯಕರ ಮೆರವಣಿಗೆ ಮಾಡಬಾರದು ಅಂತಾ ಘೋಷಿಸಿಬಿಡಿ. ಗಣಪತಿ ಮೆರವಣಿಗೆ ಸಮಯದಲ್ಲೂ ಹಾಗೆಯೇ ಆಗುತ್ತದೆ. ಯಾಕೆ ಕರ್ನಾಟಕದಲ್ಲಿ ಈ ರೀತಿ ತುಷ್ಟೀಕರಣ?.ಸರ್ಕಾರಿ ನೌಕರರಿಗೂ, ಹಿಂದೂ ಕಾರ್ಯಕರ್ತರಿಗೂ ರಕ್ಷಣೆ ಇಲ್ಲ. ಅಲ್ಪಸಂಖ್ಯಾತರಿಗೆ ರಕ್ಷಣೆ ಕೊಡುವುದು ನಮ್ಮ ವನ್ ಪಾಯಿಂಟ್ ಅಜೆಂಡಾ ಅಂತಾ ಹೇಳಿಬಿಡಿ. ಯಾಕೆ ಪುನರಾವರ್ತಿತವಾಗಿ ಈ ರೀತಿ ಮಾಡುತ್ತಿದ್ದಾರೆ?.ಮೈ ಬ್ರದರ್ ಪಾಲಿಸಿ ಈ ರೀತಿ ಮಾಡುತ್ತಿದೆ. ಬ್ರದರ್ಸ್ ಅಂತಾ ಡಿ.ಕೆ. ಶಿವಕುಮಾರ್ ಅವರೇ ಹೇಳಿಬಿಟ್ಟಿದ್ದಾರಲ್ವಾ. ತಪ್ಪು ಮಾಡಿದವರಿಗೆ ಕೂಡಲೇ ಶಿಕ್ಷೆ ಆಗಬೇಕು.ಸರ್ಕಾರ ತುಷ್ಟೀಕರಣ ನೀತಿಯನ್ನು ಬಿಡಬೇಕು ಎಂದಿದ್ದಾರೆ,











