ಮನೆ Latest News ವಯನಾಡು ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 408ಕ್ಕೆ ಏರಿಕೆ: 29 ಅಪರಿಚಿತರು ಹಾಗೂ 154 ದೇಹದ...

ವಯನಾಡು ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 408ಕ್ಕೆ ಏರಿಕೆ: 29 ಅಪರಿಚಿತರು ಹಾಗೂ 154 ದೇಹದ ಭಾಗಗಳ ಸಾಮೂಹಿಕವಾಗಿ ಅಂತ್ಯಕ್ರಿಯೆ

0

 

ಯನಾಡ್  ಭೂಕುಸಿತ ದುರಂತ ಸಂಭವಿಸಿ ವಾರ ಕಳೆದರೂ ಇನ್ನು ಕೂಡ ಅಲ್ಲಲ್ಲಿ ಮೃತದೇಹಗಳು ಪತ್ತೆಯಾಗುತ್ತಲೇ ಇವೆ. ಹುಡುಕಿದಲ್ಲೆಲ್ಲಾ ಮೃತದೇಹಗಳು ಸಿಗುತ್ತಿವೆ ಎಂಬಂತಾಗಿದೆ. ಇನ್ನು ದುರಂತಕ್ಕೆ ಇದುವರೆಗೂ 408 ಜನ ಬಲಿಯಾಗಿದ್ದಾರೆ ಎನ್ನಲಾಗಿದೆ. ಇದರಲ್ಲಿ 226 ಮೃತದೇಹಗಳು ಪತ್ತೆಯಾಗಿದ್ರೆ, 182 ಜನರ ದೇಹದ ಭಾಗಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇನ್ನು ಕೂಡ ಸ್ಥಳದಲ್ಲಿ ಭಾರತೀಯ ಸೇನೆ, NDRF, SDRF ಸ್ವಯಂಸೇವಕರು ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ. ಸದ್ಯ ಸೂಜಿಪಾರಾದ ಸನ್ರೈಸ್ ವ್ಯಾಲಿ ಎಂಬ ಜಾಗದಲ್ಲಿ  ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇಲ್ಲಿಗೆ ಸಾಗೋದು ಸವಾಲಿನ ಕೆಲಸವಾಗಿದೆ. ಅತ್ಯಂತ ದುರ್ಗಮ ಹಾದಿಯಲ್ಲಿ ಸಾಗಬೇಕಿದೆ.  ಈ ಜಾಗದಲ್ಲಿ ಸುಮಾರು 20 ಮನೆಗಳಿದ್ದವು ಎನ್ನಲಾಗಿದೆ. ಭಾರತೀಯ ಸೇನೆ ಹೆಲಿಕಾಫ್ಟರ್ ಮೂಲಕ ಈ ಜಾಗವನ್ನು ತುಪಲಿದೆ.  ಸದ್ಯ ಮಳೆ ನಿಂತಿರೋದರಿಂದ ಕಾರ್ಯಾಚರಣೆ ವೇಗ ಪಡೆದುಕೊಂಡಿದೆ.

ಇದರ ಮಧ್ಯೆ ನಿನ್ನೆ ಮಧ್ಯರಾತ್ರಿ ಅನಾಹುತದಲ್ಲಿ ಮೃತಪಟ್ಟ 29 ಜನ ಅಪರಿಚಿತರು ಹಾಗೂ ಶೋಧ ಕಾರ್ಯಾಚರಣೆ ವೇಳೆ ಪತ್ತೆಯಾದ 154 ದೇಹಗಳ ವಿವಿಧ ಭಾಗಗಳನ್ನು ಸಾಮೂಹಿಕವಾಗಿ ಪುತ್ತುಮಾಲಾ ಎಂಬಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.

ವಯನಾಡು ದುರಂತದ ಬಗ್ಗೆ ಮೊತ್ತ ಮೊದಲ ಸಂದೇಶ ರವಾನಿಸಿದ ಮಹಿಳೆಯೇ ಭೀಕರ ದುರಂತದಲ್ಲಿ ಸಾವು

ವಯನಾಡು ದುರಂತದ ಬಗ್ಗೆ ಮೊತ್ತ ಮೊದಲ ಸಂದೇಶ ರವಾನಿಸಿದ ಮಹಿಳೆಯೇ ಭೀಕರ ದುರಂತದಲ್ಲಿ ಸಾವನ್ನಪ್ಪಿರೋದು ಇದೀಗ ಗೊತ್ತಾಗಿದೆ.ಇನ್ನು ಇದುವರೆಗೂ ಭೀಕರ ದುರಂತಕ್ಕೆ 400ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಇನನೂ ಕೂಡ 200 ಕ್ಕೂ ಹೆಚ್ಚು ಮಂದಿಯ ಸುಳಿವು ಲಭ್ಯವಾಗಿಲ್ಲ. ಹೀಗಿರುವಾಗಲೇ ಇದೀಗ ಅತ್ಯಂತ ದುಃಖದ ವಿಚಾರವೊಂದು ಬಯಲಾಗಿದೆ. ವಯನಾಡು ದುರಂತದ ಬಗ್ಗೆ ಮೊತ್ತ ಮೊದಲ ಸಂದೇಶ ರವಾನಿಸಿದ ಮಹಿಳೆಯೇ ಭೀಕರ ದುರಂತದಲ್ಲಿ ಕೊನೆಯುಸಿರೆಳೆದಿರೋದು ಗೊತ್ತಾಗಿದೆ.

ನೀತು ಜೊಜೊ ಎಂಬ ಮಹಿಳೆ ವಯನಾಡ್ ನಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನರ್ಸ್‌ ಆಗಿ ಸೇವೆ ಸಲ್ಲಿಸುತ್ತಿದ್ದರು. ದುರಂತ ನಡೆದ ದಿನ ಅಂದರೆ ಜುಲೈ 30ರಂದು ಚೂರಲ್ ಮಲ ಗ್ರಾಮದಲ್ಲಿ ಭೂಕುಸಿತ ಆರಂಭವಾಗುತ್ತಿದ್ದಂತೆ ಆಕೆ ಕೆಲಸ ಮಾಡುತ್ತಿದ್ದ ಡಾ. ಮೂಪೆನ್ ವೈದ್ಯಕೀಯ ಕಾಲೇಜಿನ ಸಿಬ್ಬಂದಿಯೊಬ್ಬರಿಗೆ ಕರೆ ಮಾಡಿ ತಮ್ಮನ್ನು ರಕ್ಷಿಸಿ ಎಂದು ರಾತ್ರಿ 1-15ರ ಸುಮಾರಿಗೆ ಆಕೆ ಕೇಳಿಕೊಂಡಿದ್ದಾರೆ.

ಕೂಡಲೇ ಅವರು ರಕ್ಷಣಾ ತಂಡಗಳಿಗೆ ಅವರು ಮಾಹಿತಿ ನೀಡಿ ನೆರವಿಗಾಗಿ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿವೆ. ದುರಂತ ಅಂದರೆ ಅಷ್ಟರಲ್ಲಿ ಒಂದಷ್ಟು ಜೀವ ಉಳಿಸಲು ಸಹಕರಿಸಿದ ನೀತು ಜೊಜೊ ಅವರು ಉಸಿರು ಚೆಲ್ಲಿದ್ದರು. ತಾವು ಅಪಾಯದಲ್ಲಿದ್ದರು ನೀತು ಜೊಜೊ ಮನೆಯಲ್ಲಿದ್ದ ತನ್ನ ಪತಿ, ಅತ್ತೆ ಹಾಗೂ ಮಗುವನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಿದ್ದಾರೆ.ಅಷ್ಟರಲ್ಲಿ ಮನೆ ಕುಸಿದು ಬಿದ್ದಿದೆ. ಚೂರಲ್ಮಾಲಗೆ ಸಂಪರ್ಕ ಕಲ್ಪಿಸುವ ಸೇತುವೆ ಕುಸಿದು ಹೋಗಿದ್ದರಿಂದ ರಕ್ಷಣಾ ಸಿಬ್ಬಂದಿಗೆ ನೀತು ಅವರ ಮನೆಯನ್ನು ಸಕಾಲದಲ್ಲಿ ತಲುಪಲು ಸಾಧ್ಯವಾಗಿಲ್ಲ. ಅಷ್ಟರಲ್ಲಿ ನೀತು ಸಾವನ್ನಪ್ಪಿದ್ದರು. ನೀತು ಅವರ ಸಮಯಪ್ರಜ್ಞೆಯಿಂದ  ಪತಿ ಜೊಜೊ, ಹಸುಗೂಸು ಹಾಗೂ ಅತ್ತೆ ಪಾರಾಗಿದ್ದಾರೆ. ಮೊನ್ನೆ ನೀತು ಮೃತದೇಹ ಪತ್ತೆಯಾಗಿದೆ. ಇನ್ನು ನೀತು ಅವರು ಕೆಲಸ ಮಾಡುತ್ತಿದ್ದ ಆಸ್ಪತ್ರೆಯ ಒಟ್ಟು ನಾಲ್ಕು ಮಂದಿ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಇನ್ನು ಸಹಾಯಕ್ಕಾಗಿ ನೀತು ತಮ್ಮ ಸಹೋದ್ಯೋಗಿ ಬಳಿ ಮನವಿ ಮಾಡುತ್ತಿರುವ ಆಡಿಯೋ ಇದೀಗ ವೈರಲ್ ಆಗಿದೆ.