ಬೆಂಗಳೂರು; ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ನಾಲ್ವರು ಆರೋಪಿಗಳ ಪೊಲೀಸ್ ಕಸ್ಟಡಿ ಇಂದಿಗೆ ಅಂತ್ಯವಾದ ಹಿನ್ನೆಲೆ ಅವರನ್ನು ಇಂದು ಪ್ರಕರಣದ ತನಿಖಾಧಿಕಾರಿ ಎಸಿಪಿ ಚಂದನ್ ನೇತೃತ್ವದ ತಂಡ 24ನೇ ಎಸಿಎಂಎಂ ಕೋರ್ಟ್ ನ ನ್ಯಾಯಾಧೀಶರಾದ ವಿಜಯ್ ಕುಮಾರ್ ಚಟ್ಲಾ ಅವರ ಮುಂದೆ ಹಾಜರುಪಡಿಸಿತು. ಈ ವೇಳೆ ವಾದ ಆರಂಭಿಸಿದ ಸರ್ಕಾರದ ಪರ ವಕೀಲರಾದ ಪ್ರಸನ್ನಕುಮಾರ್ ಅವರು ಈಗಾಗಲೇ ಆರೋಪಿಗಳನ್ನು 12 ದಿನಗಳ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಆರೋಪಿಗಳ ವಿಚಾರಣೆ ಮುಕ್ತಾಯವಾಗಿದೆ. ಎಲ್ಲಾ ಸಾಕ್ಷ್ಯಗಳನ್ನು ಕಲೆ ಹಾಕಲಾಗಿದೆ. ಅಲ್ಲದೇ ಪೊಲೀಸರು ಕೂಡ ಇನ್ನು ಆರೋಪಿಗಳಿಗೆ ಕಸ್ಟಡಿಗೆ ಅಗತ್ಯವಿಲ್ಲ ಎಂದು ವರದಿ ನೀಡಿದ್ದಾರೆ ಎಂದು ವಾದ ಮಂಡಿಸಿದರು. ಅಲ್ಲದೇ ಆರೋಪಿಗಳು ಪ್ರಮುಖ ಆರೋಪಿ ಪವಿತ್ರ ಗೌಡ ಸೂಚನೆಯಂತೆ ಒಳಸಂಚು ರೂಪಿಸಿ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕರೆ ತಂದು ಕೊಲೆ ಮಾಡಿದ್ದಾರೆ. ಕಾನೂನನ್ನು ಮೀರಿ ವರ್ತಿಸಿದ್ದಾರೆ. ಹಾಗಾಗಿ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿಬೇಕು ಎಂದು ಮನವಿ ಮಾಡಿದರು.
ಎರಡೂ ಕಡೆ ವಾವ ಪ್ರತಿವಾದ ಆಲಿಸಿದ ನ್ಯಾಯಾಧೀಶರು ಆರೋಪಿಗಳಾದ ದರ್ಶನ್, ವಿನಯ್, ಪ್ರದೂಶ್ ಹಾಗೂ ಧನ್ ರಾಜ್ ನನ್ನು ಜುಲೈ 4 ರವರೆಗೆ ಅಂದ್ರೆ 13 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದರು. ಬಳಿಕ ಬಿಗ ಭದ್ರತೆಯಲ್ಲಿ ನಾಲ್ವರು ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಯಿತು. ಇನ್ನು ದರ್ಶನ್ ಅವರನ್ನು ಜೈಲಿಗೆ ಶಿಫ್ಟ್ ಮಾಡುವ ಹಿನ್ನೆಲೆ ಜೈಲು ಸುತ್ತಮುತ್ತ ಭಾರೀ ಭದ್ರತೆಯನ್ನು ಕೈಗೊಳ್ಳಲಾಗಿತ್ತು.
ಇನ್ನು ಜೈಲಿನೊಳಗೆ ಆರೋಪಿಗಳನ್ನು ಕಳುಹಿಸುವ ಸಂಪೂರ್ಣವಾಗಿ ಪರೀಕ್ಷೆಗೆ ಒಳಪಡಿಸಲಾಯಿತು. ದರ್ಶನ್ ಸೇರಿ ಎಲ್ಲಾ ಆರೋಪಿಗಳು ಬಟ್ಟೆ ಬಿಚ್ಚಿ ಪೊಲೀಸರ ಎದುರು ಪರೀಕ್ಷೆಗೆ ಒಳಪಟ್ರು. ಬಳಿಕ ಆರೋಪಿಗಳಿಗೆ ಕೈದಿ ಸಂಖ್ಯೆ ನೀಡಿ ಜೈಲಿನ ಒಳಗೆ ಕಳುಹಿಸಲಾಯಿತು.
ದರ್ಶನ್ ಈಗ ಕೈದಿ ಸಂಖ್ಯೆ 6106
ಎಲ್ಲಾ ಪರೀಕ್ಷೆಗಳ ಬಳಿಕ ಆರೋಪಿಗಳಿಗೆ ಕೈದಿ ಸಂಖ್ಯೆ ನೀಡಲಾಯಿತು. ಅದರಂತೆ ದರ್ಶನ್ ಗೆ ವಿಚಾರಣಾಧೀರ ಕೈದಿ ಸಂಖ್ಯೆ 6106 ನ್ನು ನೀಡಲಾಗಿದೆ. ಧನರಾಜ್ಗೆ 6107, ವಿನಯ್ಗೆ 6108, ಪ್ರದೂಶ್ಗೆ 6109 ನ್ನು ನೀಡಲಾಗಿದೆ. ಇನ್ನು ದರ್ಶನ್ ಅವರನ್ನು ವಿಶೇಷ ಬ್ಯಾರಕ್ ನಲ್ಲಿ ಇರಿಸಲಾಗಿದೆ. ಸಾಮಾನ್ಯವಾಗಿ ಬೇರೆ ಕೈದಿಗಳಿಂದ ಅಪಾಯ ಎದುರಾಗುವ ಕೈದಿಗಳಿದ್ದಾಗೆ ಅವರನ್ನು ವಿಶೇಷ ಬ್ಯಾರಕ್ ನಲ್ಲಿ ಇರಿಸಲಾಗುತ್ತದೆ. ಪರಪ್ಪನ ಅಗ್ರಹಾರದಲ್ಲಿ ಅಂತಹ 3 ಬ್ಯಾರಕ್ ಗಳಿದ್ದು ಮೂರನೇ ಬ್ಯಾರಕ್ ನಲ್ಲಿ ದರ್ಶನ್ ರನ್ನು ಇರಿಸಲಾಗಿದೆ.
ಅಂದ್ಹಾಗೆ ಈಗಾಗಲೇ ಪರಪ್ಪನ ಅಗ್ರಹಾರದಲ್ಲಿರುವ ಪ್ರಕರಣದ ಎ1 ಆರೋಪಿ ಪವಿತ್ರ ಗೌಡಳನ್ನು ಮಹಿಳಾ ಬ್ಯಾರಕ್ ನ ಡಿ ಬ್ಯಾರಕ್ ನಲ್ಲಿ ಇರಿಸಲಾಗಿದ್ದು ಆಕೆ ವಿಚಾರಣಾಧೀನ ಕೈದಿ ಸಂಖ್ಯೆ 6024 ನ್ನು ನೀಡಲಾಗಿದೆ. ಈ ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಜುಲೈ 4 ರಂದು ಅಂತ್ಯವಾಗಲಿದೆ. ಅಂದು ಪ್ರಕರಣ 13 ಆರೋಪಿಗಳನ್ನು ಪೊಲೀಸರು ಮತ್ತೆ ಕೋರ್ಟ್ ಮುಂದೆ ಹಾಜರುಪಡಿಸಲಿದ್ದಾರೆ.
13 ವರ್ಷಗಳ ಬಳಿಕ ಮತ್ತೆ ಪರಪ್ಪನ ಅಗ್ರಹಾರ ಸೇರಿದ ದಾಸ
ಇನ್ನು 2011 ರಲ್ಲಿ ಡಿ ಬಾಸ್ ದರ್ಶನ್ ತನ್ನ ಪತ್ನಿ ವಿಜಯಲಕ್ಷ್ಮೀ ಅವರ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಇದಾದ 13 ವರ್ಷಗಳ ಬಳಿಕ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತೆ ಜೈಲು ಸೇರಿದ್ದಾರೆ.