ಬೆಂಗಳೂರು; ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿ 21 ದಿನಗಳು ಕಳೆದಿವೆ. ಜೈಲು ಸೇರುತ್ತಿದ್ದಂತೆ ನಟ ದರ್ಶನ್ ಅವರು ಮೌನ ಶರಣಾಗಿದ್ದಾರೆ ಅಂತಾ ಹೇಳಲಾಗುತ್ತಿತ್ತು. ಅಲ್ಲದೇ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ ಎನ್ನಲಾಗುತ್ತಿದೆ.
ಇದರ ನಡುವೆ ದರ್ಶನ್ ಅವರ ಅನೇಕ ಆಪ್ತರು ದರ್ಶನ್ ಅವರನ್ನು ಭೇಟಿಯಾಗಿದ್ದು ಯಾರ ಜೊತೆಯೂ ನಟ ದರ್ಶನ್ ಅವರು ಅಷ್ಟೊಂದಾಗಿ ಮಾತನಾಡಿರಲಿಲ್ಲ. ಆದರೆ ಮೊನ್ನೆ ದರ್ಶನ್ ಅವರನ್ನು ನಟ ಧನ್ವೀರ್ ಭೇಟಿಯಾದ ಬಳಿಕ ಮಾತನಾಡುತ್ತಾ ದರ್ಶನ್ ಅದೇ ಜೋಶ್ ನಲ್ಲಿದ್ದಾರೆ. ಅಭಿಮಾನಿಗಳು ಆತಂಕಪಡುವ ಅಗತ್ಯ ಇಲ್ಲ ಎಂದಿದ್ದರು. ಆದರೆ ಜೈಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ದರ್ಶನ್ ಕಷ್ಟಪಡುತ್ತಿದ್ದಾರೆ ಎನ್ನಲಾಗಿದೆ.
ಹೌದು.. ಜೈಲಿನಲ್ಲಿ ನಟ ದರ್ಶನ್ ಅವರಿಗೆ ಸಮಯ ಕಳೆಯೋದೇ ಬಹುದೊಡ್ಡ ಸಮಸ್ಯೆಯಾಗಿದ್ದು ಪುಸ್ತಕಗಳನ್ನು ಓದೋದಕ್ಕೆ ಆರಂಭಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಇದೀಗ ಮಾನಸಿಕ ಒತ್ತಡವನ್ನು ಕಮ್ಮಿ ಮಾಡಲು ದರ್ಶನ್ ಯೋಗದ ಮೊರೆ ಹೋಗಿದ್ದಾರೆ ಎನ್ನಲಾಗಿದೆ. ಯೋಗ ಮಾಡಿ ದರ್ಶನ್ ರಿಲ್ಯಾಕ್ಸ್ ಆಗುತ್ತಿದ್ದಾರೆ ಎನ್ನಲಾಗುತ್ತಿದೆ.
ಜುಲೈ 18 ರಂದು ದರ್ಶನ್ ಅವರ ರಿಟ್ ಅರ್ಜಿಯ ವಿಚಾರಣೆ
ಜೈಲು ಸೇರಿದಾಗಿನಿಂದ ನಟ ದರ್ಶನ್ ಮೌನಕ್ಕೆ ಶರಣಾಗಿದ್ದಾರೆ.ಯಾರ ಜೊತೆಯೂ ಮಾತನಾಡದೇ ತಮ್ಮ ಪಾಡಿಗೆ ಸಮಯ ಕಳೆಯುತ್ತಿದ್ದಾರೆ.ಬೇಜಾರಾದರೆ ಹಿಂದಿ ಸಿನಿಮಾ, ಸ್ಫೋರ್ಟ್ಸ್ ಚಾನೆಲ್ ಗಳನ್ನು ನೋಡುತ್ತಾ ಸಮಯ ಕಳೆಯುತ್ತಿದ್ದಾರೆ. ಇದರ ನಡುವೆ ದರ್ಶನ್ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಜೈಲಿನ ಊಟ ದರ್ಶನ್ ಅವರಿಗೆ ಸೇರುತ್ತಿಲ್ಲ. ಭೇದಿಯಿಂದ ಬಳಲುತ್ತಿದ್ದಾರೆ. ಅಲ್ಲದೇ ಮಲಗಲು ಹಾಸಿಗೆ ಇಲ್ಲದ ಕಾರಣ ನೆಲದಲ್ಲೇ ಮಲಗುತ್ತಿದ್ದು ನಿದ್ದೆಯಿಲ್ಲದೇ ಬಳಲಿದ್ದಾರೆ ಎನ್ನಲಾಗಿದೆ. ಹೀಗಾಗಿ ನಟ ದರ್ಶನ್ ಪರವಾಗಿ ಅವರ ವಕೀಲರು ದರ್ಶನ್ ಗೆ ಮನೆಯೂಟ, ಮಲಗಲು ಹಾಸಿಗೆ ಹಾಗೂ ಸಮಯ ಕಳೆಯಲು ಓದಲು ಪುಸ್ತಕ ಒದಗಿಸುವಂತೆ ಜೈಲಾಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೋರಿ ಹೈಕೋರ್ಟ್ ಗೆ ರಿಟ್ ಅರ್ಜಿಯನ್ನು ಸಲ್ಲಿಸಿದ್ದರು.
ಇಂದು ಈ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಆರ್ ಕೃಷ್ಣಕಮಾರ್ ಪೀಠ ವಿಚಾರಣೆ ನಡೆಸಿತು.ಈ ಸಂದರ್ಭದಲ್ಲಿ ಇದೇ ವಾದ ಮಂಡಿಸಿದ ದರ್ಶನ್ ಪರ ವಕೀಲರು ಜೈಲು ನಿಯಮಾವಳಿಗಳಲ್ಲಿ ಮನೆ ಊಟಕ್ಕೆ ಅವಕಾಶವಿದೆ. ಆದರೆ ದರ್ಶನ್‌ಗೆ ಮನೆ ಊಟದ ಅವಕಾಶ ನೀಡಿಲ್ಲ ಎಂದರು. ಆಗ ನ್ಯಾಯಾಧೀಶರು ಈ ಪ್ರಕರಣವನ್ನು ಕೂಡ ಇತರ ಪ್ರಕರಣಗಳಂತೆ ಪರಿಗಣಿಸಲಾಗುವುದು ಎಂದು ಹೇಳಿ ನಟ ದರ್ಶನ್ ಅವರ ರಿಟ್ ಅರ್ಜಿಯನ್ನು ಜುಲೈ 18 ಕ್ಕೆ ಮುಂದೂಡಿದರು. ಜುಲೈ 18 ಕ್ಕೆ ಈ ಅರ್ಜಿಯ ವಿಚಾರಣೆ ನಡೆಯಲಿದ್ದು ಅಂದು ಏನಾಗುತ್ತೆ ಕಾದು ನೋಡ್ಬೇಕು. ಇನ್ನೊಂದು ಕಡೆ ನಟ ದರ್ಶನ್ ಅವರ ನ್ಯಾಯಾಂಗ ಬಂಧನದ ಅವಧಿ ಕೂಡ ಜುಲೈ 18ಕ್ಕೆ ಮುಕ್ತಾಯವಾಗಲಿದ್ದು ಅಂದೇ ಅವರನ್ನು ನ್ಯಾಯಾಧೀಶರ ಮುಂದೆ ಜೈಲಾಧಿಕಾರಿಗಳು ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲಿದ್ದಾರೆ.
ಇದರ ಮಧ್ಯೆ ದರ್ಶನ್ ಸೇರಿದಂತೆ ಎಲ್ಲಾ 17 ಆರೋಪಿಗಳು ಜಾಮೀನು ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಪೊಲೀಸರು ಇದುವರೆಗೂ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಾರ್ಜ್ ಶೀಟನ್ನು ಸಲ್ಲಿಸಿಲ್ಲ. ಹಾಗಾಗಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸುವುದನ್ನೇ ಕಾದು ಕೂತಿದ್ದಾರೆ ಆರೋಪಿಗಳ ಪರವಾದ ವಕೀಲರು. ಚಾರ್ಜ್ ಶೀಟ್ ಸಲ್ಲಿಕೆಯಾದ ಬಳಿಕ ಅದರಲ್ಲಿರುವ ಅಂಶಗಳ ಆಧಾರದ ಮೇಲೆ ಜಾಮೀನಿಗೆ ಅರ್ಜಿಯನ್ನು ಸಲ್ಲಿಸಲು ಆರೋಪಿಗಳ ಪರವಾದ ವಕೀಲರು ಪ್ಲ್ಯಾನ್ ಮಾಡಿದ್ದು, ಅದರಂತೆ ಸದ್ಯಕ್ಕೆ ವಕೀಲರು ಕಾದ ನೋಡುವ ತಂತ್ರದ ಮೊರೆ ಹೋಗಿದ್ದಾರೆ. ಚಾರ್ಜ್ ಶೀಟ್ ಪೊಲೀಸರು ಸಲ್ಲಿಸುತ್ತಿದ್ದಂತೆ ಆರೋಪಿಗಳ ಪರವಾದ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸಲಿದ್ದಾರೆ.