ಬೆಂಗಳೂರು; ದೆಹಲಿಯಲ್ಲಿ ರಾಜ್ಯ ಬಿಜೆಪಿ ಬೆಳವಣಿಗೆ ಬಗ್ಗೆ ಮಾಜಿ ಸಿಎಂ ಡಿ ವಿ ಸದಾನಂದ ಗೌಡ ಪ್ರತಿಕ್ರಿಯಿಸಿದ್ದಾರೆ. ಒಂದು ಕಾಲ ಕೂಡಿ ಬಂದಿದೆ.ದೊಡ್ಡ ದೊಡ್ಡ ಹೋಮ ಮಾಡಿ ಪೂರ್ಣಾಹುತಿ ಮಾಡಿ ನಂತರ ಪ್ರಸಾದ ಕೊಡುತ್ತಾರೆ.ಆ ಪ್ರಸಾದ ಕೊಡುವ ಸಮಯಕ್ಕೆ ಬಂದಿದ್ದೇವೆ ಎಂದಿದ್ದಾರೆ.
ಎಲ್ಲಾ ಸಂಸದರು, ಯತ್ನಾಳ್ ಟೀಮ್ ದೆಹಲಿಯಲ್ಲಿ ಇದ್ದಾರೆ. ದೆಹಲಿಯಲ್ಲಿ ಜೋಶಿ ನೇತೃತ್ವದಲ್ಲಿ ಸಂಸದರ ಸಭೆ ಮಾಡಿದ್ದಾರೆ. ಯತ್ನಾಳ್ ರಾಜನಾಥ್ ಸಿಂಗ್ ರನ್ನು ಭೇಟಿ ಮಾಡಿದ್ದಾರೆ.ಇಂದು ಶಿಸ್ತು ಸಮಿತಿ ಅಧ್ಯಕ್ಷರ ಮುಂದೆ ಯತ್ನಾಳ್ ಉತ್ತರ ಕೊಡುತ್ತಾರೆ. ನಮ್ಮಲ್ಲಿನ ಜಗಳ ವಿರೋಧಿಗಳಿಗೆ ಅಸ್ತ್ರ ಆಗುತ್ತಿದೆ. ತರುಣ್ ಚುಗ್ ನಿನ್ನೆ ಚರ್ಚೆ ಮಾಡಲು ಅವಕಾಶ ಕೊಡಲಿಲ್ಲ. ನನಗೆ ಯಾವುದೇ ಸಂಬಂಧ ಇಲ್ಲ, ನಾನು ಅದಕ್ಕಾಗಿ ಬಂದಿಲ್ಲ ಅಂದರು ಎಂದಿದ್ದಾರೆ.
ಡಿಸೆಂಬರ್ 7 ರಂದು ತೀರ್ಮಾನ ಆಗಲು ಉಸ್ತುವಾರಿಗಳ ಕೈಯಲ್ಲಿ ಏನೂ ಇಲ್ಲ. ಏನೇ ಆದರೂ ಜೆ.ಪಿ. ನಡ್ಡಾ ತೀರ್ಮಾನ ಮಾಡಬೇಕು. ಉಸ್ತುವಾರಿಗಳು ವರದಿ ಪಡೆದು ಹೈಕಮಾಂಡ್ ಕೊಡಬೇಕು ಅಷ್ಟೇ. ಅಶೋಕ್ ಅವರ ಜೊತೆ ಮಾತನಾಡಿದ್ದೆ. ದೆಹಲಿಗೆ ಹೋಗುತ್ತಾರೆ ಅಂತ ನನಗೆ ಗೊತ್ತಿರಲಿಲ್ಲ. ನಾವೆಲ್ಲರೂ ಮಾತನಾಡುವುದು ಸರಿ ಇದೆ ಅಂತ ಅಶೋಕ್ ಹೇಳಿದ್ದಾರೆ. ಪರಿಹಾರ ಇದ್ದೇ ಇದೆ, ಎಲ್ಲರೂ ತಾಳ್ಮೆಯಿಂದ ಇರಬೇಕು ಎಂದರು.
ದೆಹಲಿಗೆ ಈಗಾಗಲೇ ಅಧ್ಯಕ್ಷರು ಹೋಗಿ ಬಂದಿದ್ದಾರೆ. ಅಶೋಕ್ ಕೂಡಾ ದೆಹಲಿಗೆ ಹೋಗಿದ್ದಾರೆ. ಯತ್ನಾಳ್ ಟೀಮ್ ಕೂಡಾ ದೆಹಲಿಯಲ್ಲೇ ಇದೆ. ಇದಕ್ಕಿಂತ ಇನ್ನು ಏನು ರಿಪೋರ್ಟ್ ಬೇಕು?. ಎಲ್ಲರ ಕಡೆಯಿಂದಲೂ ವರದಿ ಹೈಕಮಾಂಡ್ ಸ್ವೀಕರಿಸಿದೆ. ಇನ್ನು ಎರಡು ಮೂರು ದಿನಗಳಲ್ಲಿ ಒಂದು ನಿರ್ಧಾರಕ್ಕೆ ಬನ್ನಿ. ಯಾರೇ ತಪ್ಪು ಮಾಡಿದರೂ ಕ್ರಮ ಆಗಲಿ. ಇಲ್ಲಿ ಪಕ್ಷಕ್ಕಿಂತ ದೊಡ್ಡವರು ಯಾರು ಇಲ್ಲ. ಚಮಚಾಗಿರಿ ಮಾಡುವವರಿಂದ ಪಕ್ಷ ಸಂಘಟನೆ ಆಗಲ್ಲ. ದುಡ್ಡಿನ ಮೂಟೆ ಇಟ್ಟುಕೊಂಡು ಬಂದವರಿಂದ ಪಕ್ಷ ಸಂಘಟನೆ ಆಗಲ್ಲ ಎಂದಿದ್ದಾರೆ.
ಅತ್ಯಂತ ದೊಡ್ಡ ಶಿಸ್ತು ಉಲ್ಲಂಘನೆ ಸೋಮಶೇಖರ್ ಮತ್ತು ಹೆಬ್ಬಾರ್ ಅವರಿಂದ ಆಗಿದೆ. ತೇಪ ಹಾಕುವ ಕೆಲಸ ಈ ಬಾರಿ ಆಗಬಾರದು ಅಂತ ಹೈಕಮಾಂಡ್ ನಾಯಕರಿಗೆ ಹೇಳುತ್ತೇನೆ. ಅದು ಯಾರೇ ಆದರೂ ಕ್ರಮ ಆಗಬೇಕು. ಸ್ಥಳೀಯ ಚುನಾವಣೆ ಮೇಲೂ ಇದು ಪರಿಣಾಮ ಬೀರುತ್ತದೆ. ಯತ್ನಾಳ್ ಮಾಡಿರುವುದು ಇಡೀ ಲೋಕಕ್ಕೆ ಗೊತ್ತಿದೆ. ಫೈಟ್ ಮಾಡಲು ಒಂದು ತಂಡ ರಚನೆ ಆಗುವುದು ಸರಿಯಲ್ಲ. ಅವರೆಲ್ಲಾ ದೆಹಲಿಗೆ ಹೋಗಿದ್ದರೆ ಮತ್ತಷ್ಟು ಗೌರವ ಬರುತ್ತಿತ್ತು. ತೊಡೆ ತಟ್ಟಿ ಯತ್ನಾಳ್ ಟೀಮ್ ವಿರುದ್ಧ ಹೋಗುವುದು ಸರಿಯಲ್ಲ. ಬಲ ಪ್ರದರ್ಶನ ಮಾಡುವುದಾದರೆ ಹೈಕಮಾಂಡ್ ಬೇಕಾಗಿಲ್ಲ ಅಲ್ವಾ?. ನಾವು ಹೈಕಮಾಂಡ್‌ಗೆ ಹೋಗಿ ವರದಿ ಕೊಡುವ ಮೂಲಕ ನಮ್ಮ ಗೌರವ ಹೆಚ್ಚಿಸಿಕೊಳ್ಳಬೇಕು.ಇದು ಬಯಲಾಟ ಇದ್ದಂತೆ. ಇವತ್ತು ಒಂದು ತಂಡದ ಆಟ. ನಾಳೆ ಮತ್ತೊಂದು ತಂಡದ ಆಟ. ರಾಷ್ಟ್ರೀಯ ಪ್ರಮುಖರು ತೀರ್ಮಾನ ಮಾಡಬೇಕು. ತಪ್ಪು ಇದ್ದವರನ್ನು ಹೊರ ಹಾಕಬೇಕು, ಅಶಿಸ್ತನ್ನು ಸರಿ ಮಾಡಬೇಕು. ಪ್ರತ್ಯೇಕ ಹೋರಾಟ ಮಾಡುವುದನ್ನು ನಿಲ್ಲಿಸಬೇಕು. ಬದಲಾವಣೆ ಇಂದ ಎಲ್ಲಾ ಸರಿ ಮಾಡಬಹುದು ಎಂದು ಅನ್ನಿಸಿದರೆ ಅದು ಆದರೂ ಮಾಡಿ. ಸದಸ್ಯತ್ವದಲ್ಲಿ ನಾವು ಎಷ್ಟರಮಟ್ಟಿಗೆ ಸ್ಥಾನದಲ್ಲಿ ಇದ್ದರೆ ಏನು?. ಪಕ್ಷದ ಜಗಳ ಬೀದಿಗೆ ಬಂದಿದೆ. ಒಂದು ಟೀಮ್ ವಕ್ಪ್ ವಿರುದ್ಧ ಹೋರಾಟ ಮಾಡಿ ಜನರ ಬಳಿ ಹೋದ ಮೇಲೆ ಮತ್ತೊಂದು ತಂಡ ಹೋದರೆ ಪ್ರಯೋಜನ ಆಗುವುದಿಲ್ಲ ಎಂದಿದ್ದಾರೆ.