ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜ್ಯ ಬೇರೆ ಬೇರೆ ಜೈಲುಗಳಲ್ಲಿ ಇರುವ ಎಲ್ಲಾ 17 ಆರೋಪಿಗಳ ನ್ಯಾಯಾಂಗ ಬಂಧನ ಸೆಪ್ಟಂಬರ್ 17ರವರೆಗೆ ವಿಸ್ತರಣೆಯಾಗಿದೆ. ಈ ಬಗ್ಗೆ ಇಂದು ಅಂದರೆ ಶುಕ್ರವಾರ 24ನೆ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ.
ನ್ಯಾಯಾಂಗ ಬಂಧನದ ಅವಧಿ ನಿನ್ನೆಗೆ ಮುಕ್ತಾಯವಾದ ಹಿನ್ನೆಲೆ ಬಳ್ಳಾರಿ ಜೈಲಿನಿಂದ ದರ್ಶನ್, ಪರಪ್ಪನ ಅಗ್ರಹಾರ ಜೈಲಿನಿಂದ ಪವಿತ್ರಾಗೌಡ, ದೀಪಕ್, ತುಮಕೂರು ಜೈಲಿನಿಂದ ಅನುಕುಮಾರ್, ಜಗದೀಶ್ ಹಾಗೂ ರವಿ ಸೇರಿದಂತೆ ರಾಜ್ಯದ ವಿವಿಧ ಕಾರಾಗೃಹದಲ್ಲಿರುವ 17 ಮಂದಿ ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಎದುರು ಹಾಜರುಪಡಿಸಲಾಯಿತು. ಈ ವೇಳೆ ವಿಚಾರಣೆ ಆರಂಭಿಸಿದ ನ್ಯಾಯಾಧೀಶರು, ಸರದಿಯಂತೆ ಎಲ್ಲ ಆರೋಪಿಗಳ ಹೆಸರು ಕೂಗಿ ಅವರ ಇರುವಿಕೆಯನ್ನು ಖಚಿತಪಡಿಸಿಕೊಂಡರು.
ಈ ವೇಳೆ ಆರೋಪಿಗಳ ಪರ ವಾದ ಮಂಡಿಸಿದ ವಕೀಲರು, ಪ್ರಕರಣದ ಸಂಪೂರ್ಣ ಚಾರ್ಜ್‍ಶೀಟ್ ಅನ್ನು ನಮಗೆ ಒದಗಿಸಿಲ್ಲ. ಡಿಜಿಟಲ್ ಎವಿಡೆನ್ಸ್ ಸಹ ಪೊಲೀಸರು ಕೊಟ್ಟಿಲ್ಲ. ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿಂತೆ ಸಿಆರ್‍ಪಿಸಿ 164 ಅಡಿ ಹೇಳಿಕೆ ನೀಡಿದ ಪ್ರಮಾಣೀಕೃತ ದಾಖಲಾತಿ ನೀಡಿಲ್ಲ ಎಂದು ಜಡ್ಜ್ ಮುಂದೆ ಹೇಳಿದರು.
ಇದಕ್ಕೆ ಎಸ್‍ಪಿಪಿ ಪರ ವಕೀಲ ಪ್ರಸನ್ನ ಕುಮಾರ್ ಉತ್ತರಿಸಿ, ಮುಂದಿನ ವಾರ ಡಿಜಿಟಲ್ ಎವಿಡೆನ್ಸ್ ಗಳನ್ನು ಸಲ್ಲಿಸಲಾಗುವುದು ಎಂದರು. ಇದೇ ವೇಳೆ, ಟೆಕಿಕ್ನಲ್ ಎವಿಡೆನ್ಸ್ ನೀಡಿದ ಬಳಿಕ ಸೆಷನ್ಸ್ ಕೋರ್ಟ್‍ಗೆ ವರ್ಗಾಯಿಸುವಂತೆ ಆರೋಪಿಗಳ ಪರ ವಕೀಲರು ಮನವಿ ಮಾಡಿದರು. ಆಗ, ಸಾಕ್ಷ್ಯ ಸಲ್ಲಿಸಿದ ಬಳಿಕವೇ ಸೆಷನ್ಸ್ ನ್ಯಾಯಾಲಯಕ್ಕೆ ವರ್ಗಾಯಿಸಲಾಗುವುದು ಎಂದು ಹೇಳಿದ ನ್ಯಾಯಾಧೀಶರು, ಸೆಪ್ಟೆಂಬರ್ 17ರವರೆಗೆ ನ್ಯಾಯಾಂಗ ಬಂಧನ ಅವಧಿಯನ್ನು ವಿಸ್ತರಿಸಿದರು.
ಇಬ್ಬರು ವಕೀಲರ ಜೊತೆ ನಟ ದರ್ಶನ್ ಅವರನ್ನು ಭೇಟಿಯಾದ ವಿಜಯಲಕ್ಷ್ಮೀ ದರ್ಶನ್
ಬಳ್ಳಾರಿ; ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ಅವರ ಪತ್ನಿ ವಿಜಯಲಕ್ಷ್ಮೀ ದರ್ಶನ್ ಹಾಗೂ ಸಹೋದರ ದಿನಕರ್ ತೂಗುದೀಪ್ ಇಬ್ಬರು ವಕೀಲರೊಂದಿಗೆ ಭೇಟಿಯಾದರು. ಎಂದಿನಂತೆ ವಿಜಯಲಕ್ಷ್ಮೀ ದರ್ಶನ್ ಪತಿಗಾಗಿ ಡ್ರೈಪ್ರೂಟ್ಸ್, ಬಿಸ್ಕೀಟ್ಸ್ ಹಾಗೂ ದೇವರ ಪ್ರಸಾದ ತಂದಿದ್ದರು. ಅಲ್ಲದೇ ಅಣ್ಣನಿಗಾಗಿ ದಿನಕರ್ ಚಾರ್ಜ್‌ಶೀಟ್ ಸಮೇತ ಆಗಮಿಸಿದ್ದರು.
ಮಧ್ಯಾಹ್ನ 12-15ಕ್ಕೆ ದರ್ಶನ್ ಭೇಟಿಗಾಗಿ ಜೈಲಿನ ಒಳಗೆ ಹೋದ ವಿಜಯಲಕ್ಷ್ಮೀ ದರ್ಶನ್ , ದಿನಕರ್ ತೂಗುದೀಪ್ ಹಾಗೂ ಇಬ್ಬರು ವಕೀಲರು ಸುಮಾರು 1.05 ಗಂಟೆಗಳ ಕಾಲ ದರ್ಶನ್ ಜೊತೆಗೆ ಮಾತನಾಡಿದರು. ಇನ್ನು ದರ್ಶನ್ ವಿಜಯಲಕ್ಷ್ಮೀ ಭೇಟಿಯಾಗುವ ವೇಳೆ ತೀರಾ ಟೆನ್ಶನ್ ನಲ್ಲಿದ್ದಂತೆ ಕಂಡು ಬಂದ್ರು. ಅಲ್ಲದೇ ಮಾಧ್ಯಮದವರನ್ನು ನೋಡಿ ದರ್ಶನ್ ಮಿಡಲ್ ಫಿಂಗರ್ ತೋರಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ವೀಡಿಯೋ ಕ್ಯಾಮೆರಾ ಕಣ್ಣಲ್ಲೂ ಸೆರೆಯಾಗಿದೆ. ದರ್ಶನ್ ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ವಕೀಲರನ್ನು ಭೇಟಿಯಾಗುತ್ತಿದ್ದಂತೆ ದರ್ಶನ್ ಅವರ ವರ್ತನೆಯಲ್ಲಿ ಬದಲಾವಣೆಯಾಗಿದೆ ಎನ್ನಲಾಗಿದೆ.
ಇನ್ನು ದರ್ಶನ್ ಭೇಟಿ ಬಳಿಕ ಮಾತನಾಡಿದ ದರ್ಶನ್ ಪರ ವಕೀಲ ಸುನೀಲ್ ಚಾರ್ಜ್ ಶೀಟ್ ವಿಚಾರದ ಬಗ್ಗೆ ಮಾತನಾಡಿದ್ದೇವೆ.ಜಾಮೀನಿಗೆ ಅರ್ಜಿ ಸಲ್ಲಿಸುವ ಬಗ್ಗೆ ಮಾತನಾಡಿಲ್ಲ.ಜೈಲು ಚೇಂಜ್ ಮಾಡೋ ಬಗ್ಗೆಯೂ ಚರ್ಚೆ ನಡೆಸಿಲ್ಲ.ಚಾರ್ಜ್ ಶೀಟ್ ನಲ್ಲಿ ಏನಿದೆಯೋ ಅದರ ಬಗ್ಗೆ ಚರ್ಚೆ ಮಾಡಿದ್ದೇವೆ.ಕೆಲವೊಂದಿಷ್ಟು ಡೌಟ್ಸ್ ಇತ್ತು ಅದರ ಕ್ಲಾರಿಪಿಕೇಷನ್ ತಗೊಂಡಿದ್ದೇವೆ.ಕೇಸ್ ಬಗ್ಗೆ ಮಾತ್ರ ಚರ್ಚೆ ನಡೆಸಿದ್ದೇವೆ ಎಂದ್ರು.











