ಬೆಂಗಳೂರು; ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರಿಂದ ಇಂದು ರಾಜಭವನ ಚಲೋ ನಡೆಯಿತು. ಬಿ ಕೆ ಹರಿಪ್ರಸಾದ್, ಸಲೀಂ ಅಹ್ಮದ್, ಪ್ರದೀಪ್ ಈಶ್ವರ್, ಅಶೋಕ್ ಪಟ್ಟಣ್ ಸೇರಿದಂತೆ ಹಲವರು ಇದರಲ್ಲಿ ಭಾಗಿಯಾಗಿದ್ದರು. ಈ ವೇಳೆ ಕೈಯಲ್ಲಿ ಭಿತ್ತಿ ಪತ್ರ ಹಿಡಿದು ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ನಾಯಕರು ಆಕ್ರೋಶ ಹೊರ ಹಾಕಿದ್ರು.
ಕಣ್ಮುಚ್ಚಿದ ಪಕ್ಷಪಾತಿ ರಾಜ್ಯಪಾಲ.ಗೆಹ್ಲೋಡ್ ಹಠಾವೋ, ಪ್ರಜಾಪ್ರಭುತ್ವ ಬಚಾವೋ, ಬಿಜೆಪಿ ಜೆಡಿಎಸ್ ಮೂಡರಿಗೆ ರಾಜ್ಯಪಾಲರೇ ಕೈಗೊಂಬೆ,ತೊಲಗಲಿ ರಾಜ್ಯಪಾಲರು ತೊಲಗಲಿ,ಪಕ್ಷಪಾತಿ ರಾಜ್ಯಪಾಲ ಇವರೇ ಬಿಜೆಪಿ ಚೇಲಾ, ಗಣಿ ಹಗರಣದ ತನಿಖೆಗೆ ಅನುಮತಿ ಇಲ್ಲ ಯಾಕೆ?,ಅಂತಾ ಭಿತ್ತಿ ಪತ್ರ ಹಿಡಿದು ರಾಜ್ಯಪಾಲರು ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು ಆಕ್ರೋಶ ಹೊರ ಹಾಕಿದ್ರು.
ಸಿಎಂ ಸಿದ್ದರಾಮಯ್ಯ ವಿರುದ್ದ ಪ್ರಾಸಿಕ್ಯೂಷನ್ ಕೊಟ್ಟಂತೆ ಇನ್ನುಳಿದವರದ್ದೂ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಬೇಕೆಂದು ಕಾಂಗ್ರೆಸ್ ನಾಯಕರು ಪಟ್ಟು ಹಿಡಿದ್ರು.ಹೆಚ್ ಡಿ ಕುಮಾರಸ್ವಾಮಿ, ಮುರುಗೇಶ್ ನಿರಾಣಿ, ಜನಾರ್ದನ್ ರೆಡ್ಡಿ, ಶಶಿಕಲಾ ಜೊಲ್ಲೆ ವಿರುದ್ದ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಡ್ಬೇಕೆಂದು ಆಗ್ರಹಿಸಿದ್ರು. ಇವ್ರೆಲ್ಲಾ ಸಂವಿಧಾನಕ್ಕಿಂತ ದೊಡ್ಡವರಾ ಎಂದು ಭಿತ್ತಿ ಪತ್ರ ಪ್ರದರ್ಶನ ಮಾಡಿ ಕೈ ನಾಯಕರು ಆಕ್ರೋಶ ಹೊರ ಹಾಕಿದ್ರು. ಪ್ರತಿಭಟನೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಎಲ್ಲಾ ಸಚಿವರು, ಶಾಸಕರ, ಪರಿಷತ್ ಸದಸ್ಯರು ಭಾಗಿಯಾಗಿದ್ದರು.ಇನ್ನು ಕಾಂಗ್ರೆಸ್ ಪ್ರತಿಭಟನೆಗೆ ಹಾಸ್ಯ ನಟ ಟೆನ್ನಿಸ್ ಕೃಷ್ಣ ಸಾಥ್ ನೀಡಿದ್ರು. ಪ್ರತಿಭಟನೆಯಲ್ಲಿ ಮಾಜಿ ಸಿಎ ವೀರಪ್ಪ ಮೊಯ್ಲಿ ಕೂಡ ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ಡಿಸಿಎಂ ಡಿ ಕೆ ಶಿವಕುಮಾರ್ ನಮ್ಮ ಎಲ್ಲಾ ನಾಯಕರು ಈ ಧರಣಿಯಲ್ಲಿ ಭಾಗಿಯಾಗಿದ್ದಾರೆ.ಇವತ್ತು ರಾಜ್ಯಪಾಲರನ್ನ ಭೇಟಿಯಾಗೋದಕ್ಕೆ ಹೋಗುತ್ತಿದ್ದೇವೆ.ಸಿಎಂ ಸಿದ್ದರಾಮಯ್ಯ ವಿಚಾರದಲ್ಲಿ ರಾಜಭವನ ಚಲೋ ಹಮ್ಮಿಕೊಂಡಿಲ್ಲ.ಈಗಾಗಲೇ ನ್ಯಾಯಾಲಯದಲ್ಲಿ ವಿಚಾರಣೆ ನಡೀತಿದೆ, ಹೋರಾಟ ಮಾಡುತ್ತಿದ್ದೇವೆ.ರಾಜಭವನ ಚಲೋ ಮಾಡೋದಕ್ಕೆ ಕಾರಣವೇ ಬೇರೆ.ಯಾಕಂದ್ರೆ ರಾಜಭವನ ಬಿಜೆಪಿ ಕಚೇರಿ ಆಗಬಾರದು.ಒಂದೇ ದಿನದಲ್ಲಿ ಸಿಎಂ ಗೆ ನೋಟಿಸ್ ಕೊಟ್ಟಿದ್ದಾರೆ ಎಂದರು.
ಭಿತ್ತಿ ಪತ್ರ ಹಿಡಿದೇ ರಾಜಭವನದತ್ತ ಸಾಗಿದ ಕಾಂಗ್ರೆಸ್ ನಾಯಕರು ರಾಜ್ಯಪಾಲರ ವಿರುದ್ದ ಧಿಕ್ಕಾರ ಕೂಗುತ್ತಲೇ ರಾಜಭವನದ ಒಳಗೆ ತೆರಳಿದರು. ಬಳಿಕ ಡಿಸಿಎಂ ಡಿಕೆ ಶಿವಕುಮಾರ್, ವೀರಪ್ಪ ಮೊಯ್ಲಿ, ಸೇರಿದಂತೆ ಎಲ್ಲಾ ಸಚಿವರು, ಶಾಸಕರು ರಾಜ್ಯಪಾಲರ ಭೇಟಿಗೆ ತೆರಳಿದ್ರೆ, ಸಿಎಂ ಸಿದ್ದರಾಮಯ್ಯ ಪ್ರತಿಭಟನೆಯಲ್ಲಿ ಮಾತ್ರ ಭಾಗಿಯಾಗಿ ತೆರಳಿದ್ರು.
ರಾಜ್ಯಪಾಲರ ಭೇಟಿ ಬಳಿಕ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ ಇವತ್ತು ಕಾಂಗ್ರೆಸ್ ಪಕ್ಷದ ವತಿಯಿಂದ ರಾಜ್ಯಪಾಲರಿಗೆ ಮನವಿ ಮಾಡಿಕೊಂಡಿದ್ದೇವೆ.ಭೇಟಿ ಮಾಡಿ ಟೀ ಕಾಫಿ ಕುಡಿದಿದ್ದೇವೆ.ನ್ಯಾಯ ದೊರಕಿಸಿ ಕೊಡುವ ಭರವಸೆ ನೀಡಿದ್ದಾರೆ.ಸಿದ್ದರಾಮಯ್ಯ ವಿಚಾರ ಮಾತಾಡಿಲ್ಲ, ಯಾಕಂದ್ರೆ ಕೋರ್ಟ್ ನಲ್ಲಿ ವಿಚಾರಣೆ ನಡೀತಿದೆ.ಆದ್ರೆ ಉಳಿದ ನಾಲ್ವರ ಮೇಲೆ ಅರೋಪ ಇದೆ.ತನಿಖೆ ಆಗಿದೆ. ಅವರ ವಿರುದ್ಧ ಪ್ರಾಸಿಕ್ಯೂಷನ್ ನೀಡಿ ಎಂದು ತನಿಖಾ ಸಂಸ್ಥೆಗಳು ಕೋರಿದ್ವು ಎಂದರು.
ಇನ್ನು ಇದೇ ವೇಳೆ ಕಾಂಗ್ರೆಸ್ ನಾಯಕರು ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.ಮನವಿ ಪತ್ರದಲ್ಲಿ ಕಟುವಾದ ಶಬ್ದಗಳಿಂದ ರಾಜ್ಯಪಾಲರ ನಡೆಗೆ ಕೈ ನಾಯಕರು ಆಕ್ರೋಶ ಹೊರ ಹಾಕಿದ್ರು.ಮನವಿ ಯಲ್ಲಿ ನಾಲ್ಕು ಪ್ರಕರಣಗಳನ್ನು ಉಲ್ಲೇಖಿಸಲಾಗಿದೆ.ಎಚ್ ಡಿ ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ ಹಾಗೂ ಜನಾರ್ಧನ ರೆಡ್ಡಿ ಪ್ರಕರಣ ಪ್ರಸ್ತಾಪ ಮಾಡಲಾಗಿದೆ.ಲೋಕಾಯುಕ್ತ ತನಿಖಾ ಸಂಸ್ಥೆಯಿಂದ ಪ್ರಾಸಿಕ್ಯುಷನ್ ಗೆ ಮನವಿ ಮಾಡಲಾಗಿದೆ.ಪ್ರಿವೆನ್ಶನ್ ಆಫ್ ಕರಪ್ಶನ್ ಆ್ಯಕ್ಟ್ ಸೆಕ್ಷನ್ ೧೯ರ ಅಡಿಯಲ್ಲಿ ಪ್ರಾಸಿಕ್ಯುಷನ್ ಗೆ ಅನುಮತಿ ನೀಡಬೇಕು.ರಾಜ್ಯಪಾಲರ ಕಚೇರಿಯ ರಾಜಕೀಯ ದುರ್ಬಳಕೆ ನಿಲ್ಲಬೇಕು.ರಾಜಕೀಯ ಪ್ರೇರಿತ ದೂರುಗಳಿಗೆ ರಾಜಭವನ ಬಳಕೆ ಆಗಬಾರದು.ನಿಮ್ಮ ನಡೆ ಜನರ ವಿಶ್ವಾಸ ಕಳೆದುಕೊಳ್ಳುವಂತಿದೆ.ರಾಜಭವನದ ಬಗ್ಗೆ ಜನರು ಅನುಮಾನ ಪಡುವಂತಾಗಿದೆ.ಸೆಲೆಕ್ಟಿವ್ ಆಗಿ ನೀವು ಸಾಂವಿಧಾನಿಕ ಅಧಿಕಾರ ಬಳಸುತ್ತಿದ್ದೀರಿ.ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಪ್ರಕರಣಗಳ ಪ್ರಾಸಿಕ್ಯುಷನ್ ಅನುಮತಿ ವಿಚಾರ ಕೋಲ್ಡ್ ಸ್ಟೋರೇಜ್ ಸೇರಿದೆ.ರಾಜ್ಯಪಾಲರ ಕಚೇರಿಯು ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ.ಇದು ಅತ್ಯಂತ ಡೇಂಜರ್ ಮತ್ತು ನಮಗೆ ತೀವ್ರ ಆತಂಕ ಮೂಡಿಸುತ್ತಿದೆ.ಎಚ್ಡಿಕೆ, ಜನಾರ್ಧನ ರೆಡ್ಡಿ, ಶಶಿಕಲಾ ಜೊಲ್ಲೆ ಹಾಗೂ ಮುರುಗೇಶ್ ನಿರಾಣಿ ವಿರುದ್ದ ಪ್ರಾಸಿಕ್ಯುಷನ್ ಗೆ ಅನುಮತಿ ನೀಡಿ.ಈ ಮೂಲಕ ರಾಜಕೀಯ ಷಡ್ಯಂತ್ರ ಗಳಿಗೆ ರಾಜಭವನ ಬಲಿಯಾಗಿಲ್ಲ ಎಂದು ಜನರಿಗೆ ಮನದಟ್ಟು ಮಾಡಿ ಎಂದು ಮನವಿ ಪತ್ರದಲ್ಲಿ ಕಾಂಗ್ರೆಸ್ ನಾಯಕರು ಉಲ್ಲೇಖ ಮಾಡಿದ್ದಾರೆ.