ಬೆಂಗಳೂರು:ಮೆಡಿಕಲ್ ಮಾಫಿಯಾಗೆ ಸರ್ಕಾರ ಬಗ್ಗಿರುವುದು ಸ್ಪಷ್ಟವಾಗಿದೆ ಎಂದು ವಿಧಾನಸೌಧದಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿಕೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ಹೆರಿಗೆಗಾಗಿ ಆಸ್ಪತ್ರೆಗೆ ಹೋಗುತ್ತಿರುವ ತಾಯಂದಿರು ಶವವಾಗಿ ಬರುತ್ತಿದ್ದಾರೆ. ಇನ್ನೂ ಕೂಡಾ ರಾಜ್ಯದಲ್ಲಿ ಬಾಣಂತಿಯರ ಸಾವು ನಿಂತಿಲ್ಲ. ಅಧಿವೇಶನದಲ್ಲಿ ನಾವು ಸರ್ಕಾರದ ಕಿವಿ ಹಿಂಡಿದ್ದೆವು. ಮೆಡಿಕಲ್ ಮಾಫಿಯಾಗೆ ಸರ್ಕಾರ ಬಗ್ಗಿರುವುದು ಸ್ಪಷ್ಟವಾಗಿದೆ. ಸರ್ಕಾರದ ಯೋಗ್ಯತೆಗೆ ಕೋರ್ಟ್ ನಲ್ಲಿ ವಾದ ಮಾಡಲು ಆಗುತ್ತಿಲ್ಲ. ಹೊಸ ವರ್ಷದಲ್ಲಿ ಎಲ್ಲರೂ ಶುಭಾಶಯ ಕೋರಿದ್ದೇ ಕೋರಿದ್ದು. ಸಚಿವರೂ ರಜೆ ಹಾಕಿಯೂ ಹೊಸ ವರ್ಷ ಆಚರಿಸಿದ್ದಾರೆ. ಆದರೆ ಬಾಣಂತಿಯರ ಕುಟುಂಬದಲ್ಲಿ ಇನ್ನೂ ಹರ್ಷ ಮೂಡಿಲ್ಲ. ರಾಯಚೂರಿನಲ್ಲೇ 11 ಬಾಣಂತಿಯರು ಮೃತರಾಗಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಬಳಿಕ 736 ಸಾವು ಆಗಿದೆ ಎಂದಿದ್ದಾರೆ.
ಬೆಳಗಾವಿಯಲ್ಲಿ ಕಾಂಗ್ರೆಸ್ ಸಮಾವೇಶಕ್ಕೆ ಗಾಂಧೀಜಿಗಿಂತ ಜಾಸ್ತಿ ಕಟೌಟ್ ಕಾಂಗ್ರೆಸ್ ನಾಯಕರದ್ದೇ ಇದ್ದವು. ಚಾಮರಾಜನಗರದಲ್ಲಿ ಆಕ್ಸಿಜನ್ ದುರಂತ ಆದಾಗ ರಾಹುಲ್ ಗಾಂಧಿ ಹೋಗಿ ಕಣ್ಣೀರು ಹಾಕಿದ್ದೇ ಹಾಕಿದ್ದು, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಕರ್ಚೀಫ್ ಕೊಟ್ಟಿದ್ದೇ ಕೊಟ್ಟಿದ್ದು. ಬೆಳಗಾವಿಗೆ ಕಾಂಗ್ರೆಸ್ ಸಮಾವೇಶಕ್ಕೆ ಬಂದ ನಾಯಕರು ಯಾಕೆ ಮೃತ ಬಾಣಂತಿಯರ ಮನೆಗೆ ಹೋಗಲಿಲ್ಲ?. ವಿಧಾನಸಭೆಯಲ್ಲಿ ನ್ಯಾಯಾಂಗ ಹೋರಾಟ ಸರಿಯಾಗಿ ಮಾಡಿದ್ದೇವೆ, ಕಳಪೆ ದ್ರಾವಣ ಎಲ್ಲಾ ಇಲ್ಲ ಎಂದು ಸರ್ಕಾರ ಉತ್ತರ ಕೊಟ್ಟಿತ್ತು. ಆದರೆ ಔಷಧ ನಿಯಂತ್ರಕರಿಗೆ ಕೊಟ್ಟಿರುವ ನೋಟೀಸ್ ನಲ್ಲಿ ನ್ಯಾಯಾಂಗ ಹೋರಾಟಕ್ಕೆ ಕ್ರಮ ಕೈಗೊಳ್ಳದಿರುವ ಬಗ್ಗೆ, ಐವಿ ದ್ರಾವಣ ಕುರಿತ ವರದಿಯನ್ನು ಸರಿಯಾಗಿ ಪರಿಶೀಲನೆ ಮಾಡಿಲ್ಲ ಎಂದು ಸರ್ಕಾರವೇ ಹೇಳಿದೆ. ಪಶ್ಚಿಮ್ ಬಂಗಾ ಕಂಪನಿ ಬಗ್ಗೆ ಕ್ರಿಮಿನಲ್ ಮೊಕದ್ದಮೆ ದಾಖಲಿಸದಿರುವ ಬಗ್ಗೆ ಕೂಡಾ ನೋಟೀಸ್ ನಲ್ಲಿ ಹೇಳಿದ್ದಾರೆ. ಇದನ್ನು ಸದನದಲ್ಲಿ ನಾವು ಕೇಳಿದಾಗ ಸಿಎಂ ಆದಿಯಾಗಿ ಎಲ್ಲಾ ಸಚಿವರೂ ಬೇರೆಯೇ ಉತ್ತರ ಕೊಟ್ಟಿದ್ದಾರೆ ಎಂದರು.
ಬಾಣಂತಿಯರ ಸಾವಿಗೆ ಸರ್ಕಾರ ನೇರ ಹೊಣೆ ಎಂದ ಅವರು ಇದು ಸರ್ಕಾರಿ ಪ್ರಾಯೋಜಿತ ಕೊಲೆಗೆ ಸಮ. ಇನ್ನೂ ಈ ಸರ್ಕಾರಕ್ಕೆ ಆತ್ಮಹತ್ಯೆ ಮಾಡಿಕೊಳ್ಳಬೇಕು ಅಂತಾ ಅನ್ನಿಸಿಲ್ವಲ್ಲಾ?. ನ್ಯಾಯಾಂಗ ತನಿಖೆ ಬಗ್ಗೆ, ಡೆತ್ ಆಡಿಟ್ ಬಗ್ಗೆ ಇನ್ನೂ ಯಾವುದೇ ಮಾಹಿತಿ ಬಂದಿಲ್ಲ. ಕಳಪೆ ದ್ರಾವಣ ಪೂರೈಸಿದ ಕಂಪನಿ ವಿರುದ್ಧ ದೆಹಲಿಗೆ ಹೋಗಿ ದೂರು ಕೊಡುವುದಾಗಿ ಸಚಿವರೇ ಹೇಳಿದ್ದರು. ಯಾಕೆ ಇನ್ನೂ ಹೋಗಿ ದೂರು ಕೊಟ್ಟಿಲ್ಲ. ಆಸ್ಪತ್ರೆಗಳು ಬಾಣಂತಿಯರ ಪಾಲಿಗೆ ಮರಣ ಮೃದಂಗ ಬಾರಿಸುವಂತಾಗಿದೆ. ಅಪ್ಪಾ ಸಿದ್ದರಾಮಯ್ಯ ನಿನ್ನ 2000 ರೂ. ಬದಲು ಬಾಣಂತಿಯರ ಸಾವು ನಿಲ್ಲಿಸು. ಔಷಧ ನಿಯಂತ್ರಣದಲ್ಲಿ ಗೋಲ್ ಮಾಲ್ ಆಗುತ್ತಿದೆ. ರಾಜ್ಯದಲ್ಲಿ ಬಾಣಂತಿಯರಿಗೆ ಬದುಕುವ ಗ್ಯಾರಂಟಿಯನ್ನು ಸರ್ಕಾರ ಕೊಡಬೇಕು. ಎಲ್ಲದಕ್ಕೂ ಕಾರಣ ಆಗಿರುವ ಸಚಿವರು ರಾಜೀನಾಮೆ ಕೊಡಬೇಕು. ಸಿಎಂ ಇದನ್ನು ನ್ಯಾಯಾಂಗ ತನಿಖೆಗೆ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಹಾಲಿ ಆರೋಗ್ಯ ಸಚಿವ ರಾಜೀನಾಮೆ ಕೊಟ್ಟು ಹೊಸ ಮಂತ್ರಿ ಬಂದ ಮೇಲೆ ಆ್ಯಕ್ಟೀವ್ ಆಗಿ ಕೆಲಸ ಮಾಡಿದರೆ ಬಾಣಂತಿಯರ ಸಾವಿನ ಸಮಸ್ಯೆ ಪರಿಹಾರ ಆಗಲು ಸಾಧ್ಯವಾಗಬಹುದು. ನಾವು ಕಳೆದ ಒಂದು ವರ್ಷದಲ್ಲಿ ವಿಪಕ್ಷವಾಗಿ ಹೋರಾಟ ಮಾಡಿದಷ್ಟೂ ಹಿಂದೆ ಯಾವತ್ತೂ ಮಾಡಿಲ್ಲ. ನಾವು ಹಳೆಯ ವಿಚಾರ ಎಲ್ಲವನ್ನೂ ತಾರ್ಕಿಕ ಅಂತ್ಯಕ್ಕೆ ಬಿಟ್ಟಿದ್ದೇವೆ. ಬಿಜೆಪಿಯಿಂದ ಸತ್ಯ ಶೋಧನಾ ಸಮಿತಿ ಮಾಡಿದ್ದೇವೆ. ವರದಿ ಬಂದ ಬಳಿಕ ಹೋರಾಟ ಮಾಡುತ್ತೇವೆ, ರಾಜ್ಯಪಾಲರನ್ನೂ ಭೇಟಿ ಮಾಡಿದ್ದೇವೆ. ನಾವು ಸಾಧ್ಯವಾದಷ್ಟೂ ಮೃತ ಬಾಣಂತಿಯರ ಕುಟುಂಬವನ್ನು ಭೇಟಿ ಮಾಡುತ್ತೇವೆ ಎಂದರು.