ಉಡುಪಿ; ಇವತ್ತು ನಿಜಕ್ಕೂ ಕನ್ನಡ ಕಿರುತೆರೆ ಹಾಗೂ ಹಿರಿತೆರೆ ಅತ್ಯಂತ ದುಃಖದ ದಿನ. ಕನ್ನಡ ಸಿನಿಮಾ ರಂಗದ ಉದಯೋನ್ಮಖ ನಟರಾಗಿ ಗುರುತಿಸಿಕೊಂಡಿದ್ದ ರಾಕೇಶ್ ಪೂಜಾರಿ (33) ಇದ್ದಕ್ಕಿದ್ದಂತೆ ಎಲ್ಲರನ್ನು ಅಗಲಿದ್ದಾರೆ. ಉಡುಪಿಯ ಮಿಯ್ಯಾರು ಎಂಬಲ್ಲಿ ತಮ್ಮ ಗೆಳೆಯ ಮೆಹಂದಿ ಕಾರ್ಯಕ್ರಮದಲ್ಲಿ ಸಂಭ್ರಮದಿಂದ ಭಾಗಿಯಾಗಿ ಡ್ಯಾನ್ಸ್ ಮಾಡುತ್ತಿರುವಾಗಲೇ ರಾಕೇಶ್ ಪೂಜಾರಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ಮೇ.11 ರ ತಡರಾತ್ರಿ ರಾಕೇಶ್ ಪೂಜಾರಿ ಗೆಳೆಯನ ಮೆಹಂದಿ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡುತ್ತಿದ್ದರು. ಈ ವೇಳೆ ಅವರಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದಾರೆ. ತಕ್ಷಣವನ್ನು ಕಾರ್ಕಳದ ಗ್ರಾಜಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.ಅಷ್ಟರಲ್ಲಿ ರಾಕೇಶ್ ಪೂಜಾರಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ರಿಷಭ್ ಶೆಟ್ಟಿ ನಟಿಸಿ ನಿರ್ದೇಶಿಸುತ್ತಿರುವ ಕಾಂತಾರ ಚಾಪ್ಟರ್ -1 ರಲ್ಲಿ ರಾಕೇಶ್ ಪೂಜಾರಿ ಅಭಿನಯಿಸುತ್ತಿದ್ದರು. ಹಾಗಾಗಿ ನಿನ್ನೆ ಶೂಟಿಂಗ್ ಇದ್ದರಿಂದ ರಾಕೇಶ್ ಊರಿನಲ್ಲೇ ಇದ್ದರು. ಹಗಲು ಶೂಟಿಂಗ್ ನಲ್ಲಿ ಭಾಗಿಯಾಗಿ ಸಂಜೆ ಮೆಹಂದಿ ಕಾರ್ಯಕ್ರಮಕ್ಕೆ ತೆರಳಿದ್ದರು. ಸಂಜೆ ಶೂಟಿಂಗ್ ಮುಗಿಸಿ ಬರುತ್ತಿದ್ದಂತೆ ರಾಕೇಶ್ ಸುಸ್ತಾಗಿದೆ ಎನ್ನುತ್ತಿದ್ದರಂತೆ. ಸರಿಯಾಗಿ ನಿದ್ದೆ, ಊಟ ಮಾಡದೇ ರಾಕೇಶ್ ಆರೋಗ್ಯದ ಬಗ್ಗೆ ಕೊಂಚ ನಿರ್ಲಕ್ಷ್ಯ ಮಾಡಿದ್ದೇ ಅವರಿಗೆ ಮುಳುವಾಯಿತೇ ಎಂದು ಆಪ್ತರು ಮಾತನಾಡಿಕೊಳ್ಳುತ್ತಿದ್ದಾರೆ.
ರಾಕೇಶ್ ನಿಧನದ ಸುದ್ದಿ ಗೊತ್ತಾಗುತ್ತಿದ್ದಂತೆ ನಟಿ ರಕ್ಷಿತಾ ಪ್ರೇಮ್, ನಿರೂಪಕಿ ಅನುಶ್ರೀ, ಕಾಮಿಡಿ ಕಿಲಾಡಿ ಖ್ಯಾತಿಯ ಶಿವರಾಜ್ ಕೆ ಆರ್ ಪೇಟೆ, ನಯನಾ, ಸೂರಜ್ ಸೇರಿದಂತೆ ಅನೇಕರು ರಾಕೇಶ್ ನಿವಾಸಕ್ಕೆ ಬಂದು ಅಂತಿಮ ದರ್ಶನ ಪಡೆದು ರಾಕೇಶ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇನ್ನು ರಾಕೇಶ್ ಅವರ ಸಹೋದರಿಯ ವಿವಾಹವನ್ನು ತುಂಬಾ ಚೆನ್ನಾಗಿ ಮಾಡಬೇಕು ಅನ್ನೋ ಕನಸು ಕಂಡಿದ್ದರಂತೆ.ಆದರೆ ಅದಕ್ಕಿಂತ ಮೊದಲೇ ವಿಧಿ ಅವರ ಬದುಕಿನಲ್ಲಿ ಆಟವಾಡಿದ್ದಾನೆ. ಇನ್ನು ರಾಕೇಶ್ ಕಾಲನ್ನು ಹಿಡಿದು ಅವರ ತಂಗಿ ಅಳುತ್ತಿರುವ ದೃಶ್ಯ ನೋಡಿದ್ರೆ ಎಂಥವರಿಗಾದರೂ ಕಣ್ಣುಗಳು ತೇವಗೊಳ್ಳುತ್ತದೆ.
ರಾಕೇಶ್ ಅಂತಿಮ ಯಾತ್ರೆಯಲ್ಲಿ ಸಾವಿರಾರು ಜನ ಭಾಗಿಯಾಗಿದ್ದರು. ರಾಕೇಶ್ ತಮ್ಮ ವ್ಯಕ್ತಿತ್ವದ ಮೂಲಕವೇ ಎಲ್ಲರಿಗೂ ಹತ್ತಿರವಾಗಿದ್ದರು. ಯಾರಿಗೂ ನೋಯಿಸದ ಜೀವ ಅವರದ್ದು. ಸದಾ ಎಲ್ಲರನ್ನು ನಗಿಸುತ್ತಲೇ ಬದುಕಿ ರಾಕೇಶ್ ಕೊನೆಗೂ ಗೆಳಯ ಮೆಹಂದಿ ಸಂಭ್ರಮದಲ್ಲಿ ನಗುತ್ತಾ ಡ್ಯಾನ್ಸ್ ಮಾಡುತ್ತಿರುವಾಗಲೇ ಸಾವನ್ನಪ್ಪಿದ್ದು ನಿಜಕ್ಕೂ ದುರಂತ.