ಮನೆ Latest News ಮಂಡ್ಯದಲ್ಲಿ ಕೃಷಿ ಮೇಳಕ್ಕೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ; ಬಿಎಸ್ಸಿ ಓದುವವರೆಗೂ ನಾನು ಕೃಷಿ ಮಾಡ್ತಿದ್ದೆ...

ಮಂಡ್ಯದಲ್ಲಿ ಕೃಷಿ ಮೇಳಕ್ಕೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ; ಬಿಎಸ್ಸಿ ಓದುವವರೆಗೂ ನಾನು ಕೃಷಿ ಮಾಡ್ತಿದ್ದೆ ಸಿದ್ದರಾಮಯ್ಯ

0

ಮಂಡ್ಯ ತಾಲೂಕಿನ ವಿಸಿ ಫಾರಂನಲ್ಲಿ ಕೃಷಿ ಮೇಳ ನಡೆಯುತ್ತಿದ್ದು, ಕೃಷಿ ಮೇಳಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ಇದೇ ವೇಳೆ  ವಿವಿಧ ಬೆಳೆಗಳ ಹೊಸ ತಳಿಗಳನ್ನು ಸಿಎಂ ಬಿಡುಗಡೆ ಮಾಡಿದರು.ಜೋಳ, ಸೂರ್ಯಕಾಂತಿ, ಅರಿಸಿಣ ಸೇರಿದಂತೆ 5 ಬೆಳೆಗಳ ಹೊಸ ತಳಿ ಬಿಡುಗಡೆ ಮಾಡಿದರು. ಈ ವೇಳೆ ಸಚಿವ ಚಲುವರಾಯಸ್ವಾಮಿ, ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ, ಗಣಿಗ ರವಿಕುಮಾರ್, ನರೇಂದ್ರ ಸ್ವಾಮಿ, ದರ್ಶನ್ ಪುಟ್ಟಣ್ಣಯ್ಯ, ದಿನೇಶ್ ಗೂಳಿಗೌಡ, ಮಧು ಜಿ‌ ಮಾದೇಗೌಡ ಸೇರಿದಂತೆ ಹಲವರು ಭಾಗಿಯಾಗಿದ್ರು.

ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ವಿ.ಸಿ.ಫಾರಂನಲ್ಲಿ ಕೃಷಿ ವಿವಿ ಮಾಡಲು ಕೃಷಿ ಸಚಿವರು ಹೇಳಿದರು.ನನಗೂ ಇದು ಸೂಕ್ತ ಅನ್ನಿಸಿತು. ಕ್ಯಾಬಿನೆಟ್ ನಲ್ಲಿ ಕೆಲವರು ಅಸಮಾಧಾನ ವ್ಯಕ್ತಪಡಿಸಿದರು. ಆದ್ರೂ ನಾನು ಮಂಡ್ಯದಲ್ಲೇ ಆಗಲೇಬೇಕು ಅಂದಾಗ ಸುಮ್ಮನಾದ್ರು. ಐದು ಜಿಲ್ಲೆಗಳನ್ನ ಪ್ರತಿನಿಧಿಸುವ ವಿವಿ ಇದು.ಐದು ಜಿಲ್ಲೆಗಳಲ್ಲಿ ಬೆಳೆಯುವ ಬೆಳೆಗಳ ಪ್ರದರ್ಶನ ಆಗುತ್ತಿದೆ.ಅದು ಎಲ್ಲ ರೈತರಿಗೂ ಗೊತ್ತಾಗಬೇಕು. ಹೊಸ ತಂತ್ರಜ್ಞಾನ, ತಳಿಗಳ ಮಾಹಿತಿ ರೈತರಿಗೆ ತಲುಪಬೇಕು. ಲ್ಯಾಬ್ ಟು ಲ್ಯಾಂಡ್ ಆಗಬೇಕು. ಕೇವಲ ವಿವಿಗಳಲ್ಲಿ ಇದ್ದರೆ ಸಾಲದು.ನಮ್ಮದು ಕೃಷಿ ಪ್ರಧಾನ ದೇಶ. ಸದ್ಯ ಕೃಷಿಯಿಂದ ಯುವಕರು ಹೆಚ್ಚು ವಿಮುಖರಾಗ್ತಿದ್ದಾರೆ. ಮಂಡ್ಯ ಕೂಡ ಕೃಷಿ ಪ್ರಧಾನ ಜಿಲ್ಲೆ ಎಂದರು.

ನಾನು ಮಂತ್ರಿಯಾಗಿ 41 ವರ್ಷ. ಅಂದ್ರೆ 45 ವರ್ಷಗಳಿಂದ ರಾಜಕಾರಣದಲ್ಲಿ ಇದ್ದೇನೆ. ಬಿಎಸ್ಸಿ ಓದುವವರೆಗೂ ನಾನು ಕೃಷಿ ಮಾಡ್ತಿದ್ದೆ. ಈಗ ಕೃಷಿ ಲಾಭದಾಯಕವಾ? ಇಲ್ಲವಾ? ಎನ್ನುವ ಪ್ರಶ್ನೆ ಎದ್ದಿದೆ. ಕೃಷಿಯನ್ನ ಲಾಭದಾಯಕ ಮಾಡಲು ಏನು ಮಾಡಬೇಕು.ಆ ಬಗ್ಗೆ ರೈತರಿಗೆ ಅರ್ಥ ಆಗಬೇಕು.ಕೃಷಿ ಕ್ಷೇತ್ರದಲ್ಲಿ ಮೌಲ್ಯವರ್ಧನೆ ಆಗಬೇಕು. ಮೌಲ್ಯವರ್ಧನೆಯಿಂದ ಕೃಷಿ ಲಾಭದಾಯಕ ಆಗಲು ಸಾಧ್ಯ.ಕೂಲಿಕಾರರ ಸಮಸ್ಯೆ ಹೋಗಲಾಡಿಸಲು ಯಂತ್ರೋಪಕರಣ ಬಳಸಬೇಕು.ಸರ್ಕಾರ ಅದಕ್ಕೆ ಎಲ್ಲಾ ರೀತಿಯ, ಸಹಕಾರ, ಬೆಂಬಲ, ಉತ್ತೇಜನ ನೀಡ್ತಿದೆ. ವಿಶೇಷವಾಗಿ ಯುವಕರು ಕೃಷಿಯಿಂದ ವಿಮುಖರಾಗ್ತಿದ್ದಾರೆ.ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಫಿಲಿಫೈನ್ಸ್ ನಲ್ಲಿ ಒಂದೇ ಗಿಡದಲ್ಲಿ ಮೂರು ಬೆಳೆ ಬೆಳೆಯುತ್ತಿದ್ದಾರೆ.ಅದೇ ಮಾದರಿಯಲ್ಲಿ ನಾವು ಒಂದೇ ಗಿಡದಲ್ಲಿ ಎರಡು ಬೆಳೆ ಬೆಳೆಯುತ್ತಿದ್ದೇವೆ. ಟೊಮೇಟೊ, ಬದನೇಕಾಯಿ ಬೆಳೆಯುವಲ್ಲಿ ವಿ.ಸಿ.ಫಾರಂ ಕೃಷಿ ವಿವಿ ಯಶಸ್ವಿ. ಮುಂದಿನ ವರ್ಷದಿಂದ ಅಂತರರಾಷ್ಟ್ರೀಯ ಸ್ಯಾಂಡ್ ವಿಚ್ ಸ್ನಾತಕೋತ್ತರ ಪದವಿ ಆರಂಭಿಸಲು ಕ್ರಮ. ಮೈಸೂರು ಜಿಲ್ಲಾ ರೈತ ಸಂಘದ ಮೊದಲ ಪ್ರಧಾನ ಕಾರ್ಯದರ್ಶಿ ನಾನಾಗಿದ್ದೆ. ನಮಗೆ ಕೃಷಿ ಬಗ್ಗೆ ಅಪಾರ ಕಾಳಜಿ ಇದೆ.ನಮ್ಮ ಜಿಡಿಪಿಗೆ ವಂತಿಗೆ ಕೊಡುವುದರಲ್ಲಿ ಕೃಷಿ ಕೂಡ ಪ್ರಮುಖ ವಿಭಾಗ.ಕೃಷಿ ಮೇಲೆ ಅವಲಂಬಿತರಾಗಿರುವ ಕಾರ್ಮಿಕರೇ ಹೆಚ್ಚಿದ್ದಾರೆ.ಸಮಾಜದಲ್ಲಿ ಅಸಮಾನತೆ ಹೋಗಬೇಕು. ಕೆ.ಎಸ್.ಪುಟ್ಟಣ್ಣಯ್ಯ ಹೆಸರಲ್ಲಿ ಒಂದು ಅಧ್ಯಯನ ಕೇಂದ್ರ ಸ್ಥಾಪಿಸಲು ಇದೇ ವೇಳೆ ವಿ.ಸಿ.ಫಾರಂ ಕೃಷಿ ವಿವಿಯ ವಿಶೇಷಾಧಿಕಾರಿಗೆ ಸಿಎಂ ಸೂಚನೆ ನೀಡಿದರು.

ಕೃಷಿ ಕ್ಷೇತ್ರದ ಅಸಮಾನತೆ ಹೋಗಲಾಡಿಸಲು ಅನೇಕ ಕಾರ್ಯಕ್ರಮ ಮಾಡಿದ್ದೇವೆ. ಸ್ವಾತಂತ್ರ್ಯ ಬಂದಿರೋದು ಕೆಲವರಿಗೆ ಅಲ್ಲ. ನಾವು ಯಶಸ್ವಿಯಾಗಲು ಎಲ್ಲಾ ವರ್ಗದವರಿಗೂ ಆರ್ಥಿಕ, ಸಾಮಾಜಿಕವಾಗಿ ಶಕ್ತಿ ಬರಬೇಕು.ಇದನ್ನ ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ್ರು.ಅಸಮಾನತೆ ತೊಲಗದಿದ್ದರೇ ಸ್ವಾತಂತ್ರ್ಯದ ಸೌಧ ಧ್ವಂಸ ಮಾಡ್ತಾರೆ ಅಂದಿದ್ರು. ಹೀಗಾಗಿ ಎಲ್ಲಾ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಶಕ್ತಿ ತುಂಬುತ್ತಿದ್ದೇವೆ ಎಂದು ಗ್ಯಾರಂಟಿ ಯೋಜನೆಗಳನ್ನ ಸಿಎಂ ಪುನರುಚ್ಚರಿಸಿದರು.ಕೇಂದ್ರ ಸರ್ಕಾರ ನಮ್ಮದು ಏನು ಸಂಬಂಧ ಇಲ್ಲ ಅಂತಾ ಕೈತೊಳೆದು ಕೊಳ್ತಿದ್ದಾರೆ. ಜೋಳ, ಕಬ್ಬು ದರ ಏರಿಕೆ ಮಾಡ್ತಿಲ್ಲ.ಕಬ್ಬಿಗೆ FRP ದರ ನಿಗದಿ ಮಾಡ್ತಿಲ್ಲ.ನಾವು ಟನ್ ಗೆ 100 ರೂ. ಹೆಚ್ಚಿಗೆ ದರ ನಿಗದಿ ಮಾಡಿದ್ದೇವೆ. ಮೆಕ್ಕೆಜೋಳ ಹೆಚ್ಚಳಕ್ಕೆ ನಾವು ಈಗಾಗಲೇ ತೀರ್ಮಾನ ಮಾಡಿದ್ದೇವೆ.ನನ್ನ ನೇತೃತ್ವದ ಕಾಂಗ್ರೆಸ್‌ ಸರ್ಕಾರ ರೈತರ ಪರ ಇದೆ.ಅಪ್ಪ ಹಾಕಿದ ಆಲದಮರ ಅಂತಾ ನೇತು ಹಾಕೊಬಾರದು. ನೂತನ ತಂತ್ರಜ್ಞಾನವನ್ನ ರೈತರು ಅಳವಡಿಸಿಕೊಳ್ಳಬೇಕು. ಮಂಡ್ಯ ಶುಗರ್ ಫ್ಯಾಕ್ಟರಿ ಉಳಿಯಲಿ ಅಂತ ನೂರಾರು ಕೋಟಿ ಅನುದಾನ ಕೊಟ್ಟಿದ್ದೇವೆ ಎಂದು ಸಿಎಂ ಬಾಯ್ಲಿಂಗ್ ಹೌಸ್ ಮಾಡಿಕೊಡುವ ಭರವಸೆ ನೀಡಿದರು.

ಇಳುವರಿ ಆಧಾರದ ಮೇಲೆ ದರ ನಿಗದಿ ಮಾಡಲಾಗ್ತಿದೆ. ಹೀಗಾಗಿ ಹೆಚ್ಚಿನ ಇಳುವರಿಗೆ ಕ್ರಮಕೈಗೊಳ್ಳಿ.ಮಹಾರಾಷ್ಟ್ರದಲ್ಲಿ ಇಳುವರಿ 13-14 ಇದೆ. ಇಲ್ಲಿ ಒಂಭತ್ತೂವರೆ ಮಾತ್ರ ಇದೆ.ಅದಕ್ಕೆ ಕಾರಣ ಏನು ಎಂಬುದನ್ನ ಪತ್ತೆಹಚ್ಚಬೇಕು. ಅದಕ್ಕೆ ಪರಿಹಾರ ಕಂಡುಕೊಂಡು, ಹೆಚ್ಚು ಇಳುವರಿ ಬರುವ ತಳಿ ಕಂಡು ಹಿಡಿಯಿರಿ ಎಂದು ಮಂಡ್ಯ ಕೃಷಿ ವಿವಿ ವಿಶೇಷಾಧಿಕಾರಿಗೆ ಸೂಚನೆ ನೀಡಿದರು.