ಬೆಂಗಳೂರು; 2025ರ ಮುಂಗಾರು ಅವಧಿಯಲ್ಲಿ ರಾಜ್ಯದಲ್ಲಿ ಅತಿವೃಷ್ಟಿಯಿಂದ ಉಂಟಾದ ಹಾನಿ ಬಗ್ಗೆ ಸಿಎಂ ಸಿದ್ದರಾಮಯ್ಯ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿದರು.ತೆಗೆದುಕೊಂಡ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಿದರು.ಸಭೆಯಲ್ಲಿ ಸಚಿವರಾದ ಚಲುವರಾಯಸ್ವಾಮಿ, ಕೃಷ್ಣಬೈರೇಗೌಡ, ಎಚ್. ಕೆ ಪಾಟೀಲ್, ಪ್ರಿಯಾಂಕ ಖರ್ಗೆ, ಸಂತೋಷ್ ಲಾಡ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಹಾಗೂ ಸಂಬಂಧಿಸಿದ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ತುಂಗಾಭದ್ರಾ ಅಣೆಕಟ್ಟಿನ 32 ಕ್ರೆಸ್ಟ್ ಗೇಟ್ ಬದಲಾವಣೆಗೆ ಟೆಂಡರ್ ಆಗಿದ್ದು 8 ಕ್ರೆಸ್ಟ್ ಗೇಟ್ ಗಳು ಅಳವಡಿಕೆಗೆ ಸಿದ್ಧವಿದೆ ಎಂದು ಸಭೆಯಲ್ಲಿ ಸಿಎಂ ಸಿದ್ದರಾಮಯ್ಯರಿಗೆ ಅಧಿಕಾರಿಗಳು ವಿವರಿಸಿದರು. ಕ್ರೆಸ್ಟ್ ಗೇಟ್ ಗಳ ಬದಲಾವಣೆ, ನಿರ್ವಹಣೆ ಸೇರಿದಂತೆ ಅಣೆಕಟ್ಟಿನ ಮೂಲಸೌಕರ್ಯಗಳ ಅಭಿವೃದ್ಧಿಪಡಿಸುವ ಕಾರ್ಯ ಕೇಂದ್ರ ಸರ್ಕಾರದ ಅದೀನದ ತುಂಗಾಭದ್ರಾ ಮಂಡಳಿಯ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ ಮಂಡಳಿಯ ಜವಾಬ್ದಾರಿ ಹೆಚ್ಚು. ಮೊದಲ ಬೆಳೆಗೆ ನೀರು ಹರಿಸುವ ಮುನ್ನ ಅಗತ್ಯ ದುರಸ್ತಿ ಕಾರ್ಯಗಳನ್ನು ಪೂರ್ಣಗೊಳಿಸಿ ಎಂದು ಸಭೆಯಲ್ಲಿದ್ದ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದರು.
ರಾಜ್ಯದಲ್ಲಿ ಮುಂಗಾರು ಹಂಗಾಮಿನಲ್ಲಿ ಜೂ.1ರಿಂದ ಸೆಪ್ಟಂಬರ್ ಮೊದಲ ವಾರದವರೆಗೆ ವಾಡಿಕೆಗಿಂತ ಶೇ.4ರಷ್ಟು ಹೆಚ್ಚು ಮಳೆಯಾಗಿದೆ. ಈ ಅವಧಿಯಲ್ಲಿ ವಾಡಿಕೆ ಮಳೆ 721ಮಿ.ಮೀ ಇದ್ದು, 753 ಮಿ.ಮೀ ಮಳೆ ದಾಖಲಾಗಿದೆ. ಕಳೆದ ವರ್ಷ ಶೇ.23ರಷ್ಟು ಹೆಚ್ಚುವರಿ ಮಳೆ ದಾಖಲಾಗಿತ್ತು. ಈ ಅವಧಿಯಲ್ಲಿ ಚಾಮರಾಜನಗರದಲ್ಲಿ ಶೇ.24ರಷ್ಟು ಕಡಿಮೆ ಮಳೆಯಾಗಿದೆ. ವಿಜಯಪುರ, ಗದಗ, ಬಾಗಲಕೋಟೆ, ದಾವಣಗೆರೆ, ತುಮಕೂರು ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಶೇ.20ಕ್ಕಿಂತ ಹೆಚ್ಚು ಮಳೆ ದಾಖಲಾಗಿದೆ. ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಕಳೆದ ವರ್ಷಕ್ಕೆ ಹೋಲಿಸಿದರೆ ಈಗ ಸ್ವಲ್ಪ ಕಡಿಮೆಯಿದೆ. ಪ್ರಮುಖ ಜಲಾಶಯಗಳ ಗರಿಷ್ಟ ಸಾಮರ್ಥ್ಯ 895.62 ಟಿಎಂಸಿ ಇದ್ದು, ಪ್ರಸ್ತುತ 840.52 ಟಿಎಂಸಿ ಸಂಗ್ರಹವಿದೆ. ಕಳೆದ ವರ್ಷ ಈ ಅವಧಿಯಲ್ಲಿ 856.17 ಟಿಎಂಸಿ ಸಂಗ್ರಹ ಇತ್ತು. ತುಂಗಾಭದ್ರಾ ಅಣೆಕಟ್ಟಿನ 32 ಕ್ರೆಸ್ಟ್ ಗೇಟ್ ಬದಲಾವಣೆಗೆ ಟೆಂಡರ್ ಆಗಿದ್ದು, 8ಕ್ರೆಸ್ಟ್ ಗೇಟ್ಗಳು ಅಳವಡಿಕೆಗೆ ಸಿದ್ಧವಿದೆ. ಕ್ರೆಸ್ಟ್ ಗೇಟ್ ಬದಲಾವಣೆ ಸೇರಿದಂತೆ ಅಣೆಕಟ್ಟಿನ ಮೂಲಸೌಕರ್ಯಗಳ ಅಭಿವೃದ್ಧಿಪಡಿಸುವ ಕಾರ್ಯ ತುಂಗಾಭದ್ರಾ ಮಂಡಳಿಯ ವ್ಯಾಪ್ತಿಗೆ ಬರುತ್ತದೆ ಎಂದರು.
ತುಂಗಾ ಭದ್ರಾ ಅಣೆಕಟ್ಟಿನಲ್ಲಿ ಪ್ರಥಮ ಬೆಳೆಗೆ ಮಾತ್ರ ನೀರು ಲಭ್ಯವಿದ್ದು, ಎರಡನೇ ಬೆಳೆಗೆ ನೀರು ಹರಿಸಲು ಪ್ರಸ್ತುತ ಸನ್ನಿವೇಶದಲ್ಲಿ ಸಾಧ್ಯವಿಲ್ಲ. ನೀರು ಹರಿಸುವ ಪೂರ್ವದಲ್ಲೇ ಎಲ್ಲಾ ಸಣ್ಣಪುಟ್ಟ ದುರಸ್ತಿ ಕಾರ್ಯಗಳನ್ನು ಪೂರ್ಣಗೊಳಿಸಬೇಕೆಂದು ಸಿಎಂ ಸೂಚನೆ ನೀಡಿದರು.ಮಳೆ ಹಾನಿಯಿಂದ ಹಾನಿಗೀಡಾಗಿರುವ ಬೆಳೆ, ಮನೆಗಳಿಗೆ ಸೂಕ್ತ ಪರಿಹಾರವನ್ನು ತಕ್ಷಣ ಒದಗಿಸಲು ಕ್ರಮ ಕೈಗೊಳ್ಳಬೇಕು. ಮುಂಗಾರು ಹಂಗಾಮಿನಲ್ಲಿ ಶೇ.98 ಬಿತ್ತನೆ ಪೂರ್ಣಗೊಂಡಿದೆ. ಬಿತ್ತನೆ ಗುರಿ 82.50 ಲಕ್ಷ ಹೆಕ್ಟೇರ್ ಇದ್ದು, 80.76 ಲಕ್ಷ ಹೆಕ್ಟೇರ್ ವಾಸ್ತವಿಕ ಬಿತ್ತನೆಯಾಗಿದೆ. ಬೆಳೆ ಹಾನಿ ಬಗ್ಗೆ ಜಂಟಿ ಸಮೀಕ್ಷೆ ಕಾರ್ಯ ನಡೆಯುತ್ತಿದ್ದು, ಆದಷ್ಟು ಬೇಗನೆ ಪೂರ್ಣಗೊಳಿಸಬೇಕು. ಹಾನಿ ಬಗ್ಗೆ ಪ್ರಾಥಮಿಕ ಸಮೀಕ್ಷೆ ನಡೆಸಲಾಗಿದ್ದು, 480256 ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿದೆ. 40407 ಹೆಕ್ಟೇರ್ ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿದ್ದು, ಒಟ್ಟು 520663 ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂದರು.
ಬಳಿಕ ಸುದ್ದಿಗೋಷ್ಟಿ ಉದ್ದೇಶಿಸಿ ಮತನಾಡಿದ ಅವರು ಇವತ್ತು ಡಿಸಿ, ಸಿಇಒ, ಉಸ್ತುವಾರಿ ಸಚಿವರ ಸಭೆ ನಡೆಸಿದೆ. ಕೆಲವರು ಮಾತ್ರ ಹಾಜರಿದ್ದರು, ಮಾಹಿತಿಗಳನ್ನ ಪಡೆದಿದ್ದೇವೆ. ಈ ವರ್ಷ ವಾಡಿಕೆ ಮಳೆಗಿಂತ 4% ಜಾಸ್ತಿ ಆಗಿದೆ. ವಾಡಿಕೆ ಮಳೆ 720 ಮಿಮೀಟರ್ ಆಗ್ಬೇಕು. ಜೂನ್ ನಿಂದ ಸೆಪ್ಟೆಂಬರ್ ವರೆಗೆ ಇಷ್ಟು ಮಳೆ ಆಗಬೇಕಿತ್ತು. ಆದರೆ 753 ಮಿ.ಮೀ ಮಳೆ ಆಗಿದೆ. ಕಳೆದ ವರ್ಷ ಇನ್ನೂ ಜಾಸ್ತಿ ಆಗಿತ್ತು. 885 ಮಿ.ಮೀ ಮಳೆ ಕಳೆದ ವರ್ಷ ಆಗಿತ್ತು. ಬೀದರ್ ನಲ್ಲಿ 1% ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಕೆಲವು ಪ್ರದೇಶಗಳಲ್ಲಿ 22 ಸೆಂ.ಮೀಟರ್ ಮಳೆಯಾಗಿದೆ. ಬೆಳೆ ಹಾನಿ ಜಾಸ್ತಿ ಆಗಿದೆ. ಸಾರ್ವಜನಿಕ ಆಸ್ತಿ ಹಾನಿಯಾಗಿದೆ. ಒಂದು ವಾರ ಅಥವಾ 10 ದಿನದೊಳಗೆ ಬೆಳೆ ಹಾನಿ, ಇತರೆ ಹಾನಿ ಬಗ್ಗೆ ಜಂಟಿ ಸಮಿಕ್ಷೆ ನಡೆಸಿ ಸರ್ಕಾರಕ್ಕೆ ವರದಿ ನೀಡಲು ಡಿಸಿಗಳಿಗೆ ಹೇಳಿದ್ದೇನೆ. ಈವರೆಗೆ 80 ಲಕ್ಷ 76 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ ಎಂದರು.
ಕಳೆದ ವರ್ಷ 78 ಲಕ್ಷದ 73 ಸಾವಿರ ಹೆಕ್ಟೇರ್ ಬಿತ್ತನೆ ಆಗಿತ್ತು. ಮಳೆಯಿಂದ ಒಟ್ಟಾರೆ 520663 ಹೆಕ್ಟೇರ್ ನಷ್ಟು ಬೆಳೆ ಹಾನಿ ಆಗಿದೆ. ಬೀದರ್, ಬೆಳಗಾಂ, ಧಾರವಾಡ, ಕಲ್ಬುರ್ಗಿ, ಬಾಗಲಕೋಟೆ, ಹಾವೇರಿ, ಗದಗ, ವಿಜಯಪುರದಲ್ಲಿ 5,19,500 ಹೆಕ್ಟೇರ್ ಬೆಳೆ ಹಾನಿಯಾಗಿದೆ. ಈ ವರ್ಷ ಏ.1 ರಿಂದ ಸೆ.7ರವರೆಗೆ 111 ಮಾನವ ಜೀವಿಗಳಿಗೆ ಹಾನಿಯಾಗಿದೆ. ಎಲ್ಲರಿಗೂ ತಲಾ 5 ಲಕ್ಷದಂತೆ 5.5 ಕೋಟಿ ರೂ. ಪರಿಹಾರ ನೀಡಲಾಗಿದೆ. 1110 ಜಾನವಾರುಗಳಿಗೆ ಹಾನಿಯಾಗಿದೆ, 1.2 ಕೋಟಿ ಪರಿಹಾರ ಕೊಡಲಾಗಿದೆ ಎಂದರು.
651 ಮನೆಗಳು ಸಂಪೂರ್ಣ ಹಾನಿಯಾಗಿದ್ದು, ಪರಿಹಾರ ನೀಡಲಾಗಿದೆ. 9087 ಮನೆಗಳಿಗೆ ಭಾಗಶಃ ಹಾನಿಯಾಗಿದೆ. 24 ಕೋಟಿ 30 ಲಕ್ಷ ರೂ. ಪರಿಹಾರ ಮನೆ ಹಾನಿಗೆ ನೀಡಲಾಗಿದೆ. 683 ಕಿ.ಲೋ ಮೀ. ಮೂಲಭೂತ ಸೌಕರ್ಯ ಹಾನಿ, 1383 ಜಿಲ್ಲಾ ಹೆದ್ದಾರಿ, 656 ಸೇತುವೆ, ಕಟ್ಟಡಗಳು, 1877 ಶಾಲಾ ಕಟ್ಟಡ, 160 ಪ್ರಾಥಮಿಕ ಕೇಂದ್ರಗಳು, 1018 ಅಂಗನವಾಡಿ ಕೇಂದ್ರ, 819 ವಿದ್ಯುತ್ ಕಂಬಗಳು ಹಾನಿಯಾಗಿದೆ. ಎಲ್ಲಾ ಜಲಾಯಶ ತುಂಬಿರೋದು ಸಮಾಧಾನದ ವಿಚಾರ. ತುಂಗಭದ್ರ 80 TMCಗೆ ಮಾತ್ರ ನಿಲ್ಲಿಸಿದ್ದೇವೆ. ಅಲ್ಲಿನ ಗೇಟ್ ಡ್ಯಾಮೇಜ್ ಆಗುವ ದೃಷ್ಟಿಯಿಂದ ಇಲ್ಲಿಗೆ ನಿಲ್ಲಿಸಿದ್ದೇವೆ. ಟಿಬಿ ಡ್ಯಾಂಗೆ 130 TMC ಇದರ ಸಾಮರ್ಥ್ಯ ಇದೆ ಎಂದು ತಿಳಿಸಿದರು.











