ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಅಧಿಕಾರ ಹಸ್ತಾಂತರದ ಚರ್ಚೆ ಜೋರಾಗಿ ನಡೆಯುತ್ತಿರುವಾಗಲೇ ಈ ವಿಚಾರಕ್ಕೆ ಬ್ರೇಕ್ ಹಾಕುವ ಕೆಲಸವನ್ನು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಮಾಡಿದ್ದಾರೆ. ಈ ಬಗ್ಗೆ ಇಂದು ಸುದ್ದಿಗೋಷ್ಟಿ ನಡೆಸಿ ಸ್ಪಷ್ಟನೆಯನ್ನು ನೀಡಿದರು. ಅದಕ್ಕೂ ಮುನ್ನ ಇಬ್ಬರು ಒಂದು ತಾಸಿಗೂ ಹೆಚ್ಚು ಸಮಯ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸಿದರು.
ಇನ್ನು ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಬ್ರೇಕ್ ಫಾಸ್ಟ್ ಚೆನ್ನಾಗಿತ್ತು. ನಾನು, ಡಿಸಿಎಂ, ಪೊನ್ನಣ್ಣ ಬ್ರೇಕ್ ಫಾಸ್ಟ್ ನಲ್ಲಿದ್ವಿ. ಅಲ್ಲಿ ಏನೂ ಮಾತಾಡಿಲ್ಲ. ಅಲ್ಲಿ ಬ್ರೇಕ್ ಫಾಸ್ಟ್ ಬಗ್ಗೆ ಮಾತ್ರ ಚರ್ಚೆ ಆಯ್ತು. ಡಿಕೆಶಿಯವರು ನಮ್ಮ ಮನೆಗೆ ಬಂದಿದ್ರು. ಬ್ರೇಕ್ ಫಾಸ್ಟ್ ನ ಒಟ್ಟಿಗೆ ಮಾಡಿದ್ವಿ. ವೇಣುಗೋಪಾಲ್ ಮೊನ್ನೆಯೇ ಪೊನ್ನಣ್ಣಗೆ ಫೋನ್ ಮಾಡಿದ್ರು. ಡಿ ಕೆ ಶಿವಕುಮಾರ್ ನ ಬ್ರೇಕ್ ಫಾಸ್ಟ್ ಗೆ ಕರೀರಿ ಅಂದ್ರು. ಡಿಕೆಗೂ ಅವರು ಫೋನ್ ಮಾಡಿದ್ರು. ಡಿ ಕೆ ನಮ್ಮ ಮನೆಗೇ ಬನ್ನಿ ಊಟಕ್ಕೆ ಅಂದ್ರು. ನನಗೆ ಮೊದಲೇ ಹೇಳಿದ್ದಾರೆ. ಇಲ್ಲೇ ಮಾಡೋಣ ಬನ್ನಿ, ಇನ್ನೊಮ್ಮೆ ನಿಮ್ಮ ಮನೆಗೆ ಊಟಕ್ಕೆ ಬರೋಣ ಅಂತ ಹೇಳ್ದೆ ಹಾಗಾಗಿ ಇಲ್ಲೇ ಬಂದ್ರು ಎಂದರು.
ಇದಾದ್ಮೇಲೆ ಮುಖ್ಯವಾಗಿ ಅನಗತ್ಯವಾಗಿ ಕೆಲವು ಗೊಂದಲ ನಿರ್ಮಾಣ ಆಗಿವೆ. ಒಂದು ತಿಂಗಳಿನಿಂದ ಗೊಂದಲ ನಿರ್ಮಾಣ ಆಗಿದೆ. ನಮ್ಮ ಉದ್ದೇಶ 2028ರ ಚುನಾವಣೆ ಬಹಳ ಮುಖ್ಯ. ಸ್ಥಳೀಯ ಚುನಾವಣೆ ಮುಖ್ಯ. ಗ್ರಾಮ, ಜಿಲ್ಲಾ ಪಂಚಾಯತ ಚುನಾವಣೆ ಮುಖ್ಯ. 2028ಕ್ಕೆ ಅಧಿಕಾರಕ್ಕೆ ಬರಬೇಕು. ಅಸೆಂಬ್ಲಿ ಚುನಾವಣೆ ರೀತಿಯೇ ಒಟ್ಟಿಗೆ ಹೋಗ್ತೀವಿ. ಯಾವುದೇ ವ್ಯತ್ಯಾಸ ಇಲ್ಲ ಇಬ್ಬರಿಗೂ. ಇಂದಿನವರೆಗೂ ವ್ಯತ್ಯಾಸ ಇಲ್ಲ . ಮುಂದೆಯೂ ಇಲ್ಲ, ಒಟ್ಟಿಗೆ ಹೋಗ್ತೀವಿ. ಅಧಿವೇಶನ ಡಿ. 8 ರಿಂದ ಆರಂಭ ಆಗ್ತಿದೆ. ವಿಪಕ್ಷವನ್ನ ಸಮರ್ಥವಾಗಿ ಎದುರಿಸುತ್ತೇವೆ. ಬಿಜೆಪಿ ಜೆಡಿಎಸ್ ಇರಲಿ ಎದುರಿಸುತ್ತೇವೆ. . ಸುಳ್ಳು, ಆರೋಪ ಅಪವಾದ ಬಿಜೆಪಿ ಜೆಡಿಎಸ್ ಚಾಳಿ ಎಂದು ಸಿಎಂ ತಿಳಿಸಿದರು.
ನಾನು, ಡಿಸಿಎಂ ಇಬ್ಬರೂ ಸಹ ಸಮರ್ಥವಾಗಿ ಎದುರಿಸುತ್ತೇವೆ.ಅದಕ್ಕೆ ಬೇಕಾದ ಸ್ಟಾಟರ್ಜಿ ಮಾಡಿದ್ದೇವೆ. ನಾವು 142 ಜನ ಇದ್ದೇವೆ. ಅವರು 64 ಜನ ಮಾತ್ರ. ಜೆಡಿಎಸ್ ನವರು 18. ಅವರಿಬ್ಬರೂ ಸೇರಿದ್ರೂ 82 ಆಗಬಹುದು, ಜಾಸ್ತಿ ಆಗಲು ಸಾಧ್ಯವಿಲ್ಲ. ಅವರು ಅಸೆಂಬ್ಲಿನಲ್ಲಿ ಏನೇ ಸುಳ್ಳು ಆರೋಪ ಮಾಡಿದ್ರು ಸಮರ್ಥವಾಗಿ ಎದುರಿಸುತ್ತೇವೆ. ಹೈಕಮಾಂಡ್ ಹೇಳಿದ ಹಾಗೇ ಇಬ್ಬರೂ ಕೇಳ್ತೀವಿ.ಹೈಕಮಾಂಡ್ ನವರು ಅಸೆಂಬ್ಲಿ ಇರುವುದರಿಂದ ನಮ್ಮಿಬ್ಬರಿಗೂ ಗೊಂದಲ ತಿಳಿ ಮಾಡಿ ಅಂತ ಹೇಳಿದ್ದಾರೆ. ನಾಳೆಯಿಂದ ಯಾವುದೇ ಗೊಂದಲ ಇರಲ್ಲ. ಈಗಲೂ ಇಲ್ಲ ಎಂದು ಹೇಳಿದರು. ಕೆಲ ಮಾಧ್ಯಗಳು ಗೊಂದಲ ಸೃಷ್ಟಿ ಮಾಡಿದ್ರು. ಎಂಎಲ್‌ಎಗಳು ಹೋಗಿದ್ದಾರೆ.ಸಂಪುಟ ಪುನರ್ ರಚನೆ ಆಗುತ್ತೆ ಅಂತ ನಾನು ಹೇಳಿದ್ದೆ. ಹೀಗಾಗಿ ಮಂತ್ರಿ ಮಾಡಿ ಅಂತ ಅವರು ದೆಹಲಿಗೆ ಹೋಗಿರಬಹುದು. ನಾಯಕತ್ವದ ವಿರುದ್ಧ ಅಲ್ಲ ಎಂದರು.ಕೆಲವರು ನನ್ನ ಜೊತೆ ಮಾತಾಡಿದ್ದಾರೆ. ಇದಕ್ಕೋಸ್ಕರ ಹೋಗಿದ್ದು ಅಂತ ಹೇಳಿದ್ದಾರೆ. ಹೈಕಮಾಂಡ್ ತೀರ್ಮಾನದಂತೆ ನಾವು ಮುಂದುವರಿಯುತ್ತೇವೆ. ಡಿಕೆ, ನಾನು ಇಬ್ಬರೂ ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದರು.
ಡಿಸಿಎಂ ಡಿ ಕೆ ಶಿವಕುಮಾರ್ ಮಾತನಾಡಿ ತಮ್ಮೆಲ್ಲರ ಸಹಕಾರದಿಂದ ಕಾಂಗ್ರೆಸ್ ಸರ್ಕಾರ ತಂದಿದ್ದೇವೆ. ಜನರ ಮಾತಿನಂತೆ ಸೇವೆ ಮಾಡಿಕೊಂಡು ಬಂದಿದ್ದೇವೆ. ಜನರ ಆಸೆ, ಆಕಾಂಕ್ಷೆ, ಆಶೋತ್ತರ ಈಡೇರಿಸುವುದು ನಮ್ಮ ಕರ್ತವ್ಯ. ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರ ರಚನೆ ಆಗಿದೆ. ಹೈಕಮಾಂಡ್ ತೀರ್ಮಾನದಂತೆ ಕೆಲಸ ಮಾಡ್ಕೊಂಡು ಹೋಗ್ತಿದ್ದೇವೆ. ಅಧಿವೇಶನದಲ್ಲಿ ವಿಪಕ್ಷಕ್ಕೆ ಪ್ರತಿತಂತ್ರ. ರಾಜಕೀಯವಾಗಿ ನಮ್ಮಿಬ್ಬರದ್ದೂ ಒಂದೇ ತೀರ್ಮಾನ. ಹೈಕಮಾಂಡ್ ಹೇಳಿದ ರೀತಿಯೇ ನಾವು ಕೆಲಸ ಮಾಡುತ್ತೇವೆ. ನಮಗೆ ಯಾವುದೇ ಗುಂಪುಗಳು ಇಲ್ಲ. ನಮ್ಮದು ಒಂದೇ ಗುಂಪು, ಅದು ಕಾಂಗ್ರೆಸ್. ಕಾಯಿರಿ ಅಂತ ಹೈಕಮಾಂಡ್ ಹೇಳಿದ್ರು. ನಾನು ಒಂದು ಶಬ್ದ ಎತ್ತಿಲ್ಲ. ಇವತ್ತೂ ಅಷ್ಟೆ, ಇವತ್ತೂ ಅಷ್ಟೆ ಎಂದು ಸಿಎಂ ಹೇಳಿದರು.
ಶಕ್ತಿಶಾಲಿಯಾಗಿ ಸರ್ಕಾರ ನಡೆಸಿಕೊಂಡು ಹೋಗ್ಬೇಕು. ಮುಖ್ಯಮಂತ್ರಿ ಮಾತಿಗೆ ನಮ್ಮ ಸಹಮತ ಇದೆ. ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ದರಿದ್ದೇವೆ ಎಂದ ಅವರು ದೆಹಲಿ ಭೇಟಿ ವಿಚಾರದ ಬಗ್ಗೆ ಮಾತನಾಡಿ ಪಕ್ಷ ಹೇಳಿದ್ರೆ ನಾನು ಹೋಗ್ತೀನಿ. ಮೆಕ್ಕಜೋಳ, ಕಬ್ಬು ವಿಚಾರವಾಗಿ ದೆಹಲಿಗೆ ಹೋಗ್ತೀನಿ. ಕೇಂದ್ರ ಸಚಿವರನ್ನ ಭೇಟಿ ಮಾಡ್ತೀನಿ. ಮೇಕೆದಾಟು ವಿಚಾರವಾಗಿಯೂ ಚರ್ಚೆ ಮಾಡುವೆ. ಸಂಪೂರ್ಣ ಮಾಹಿತಿಯನ್ನು ಅವರಿಗೆ ಕೊಡ್ತೀವಿ ಎಂದು ತಿಳಿಸಿದರು.











