ಕೊಪ್ಪಳ; ತುಂಗಭದ್ರಾ ಡ್ಯಾಂ ಮೈತುಂಬಿಕೊಂಡಿರುವ ಹಿನ್ನೆಲೆ ಇಂದು ಸಿಎಂ ಸಿದ್ದರಾಮಯ್ಯ ಅವರು ತುಂಗಭದ್ರಾ ಅಣೆಕಟ್ಟೆಗೆ ಬಾಗಿನ ಅರ್ಪಿಸಿದರು. ಆಗಸ್ಟ್ 13 ರಂದು ಬಂದಿದ್ದಾಗ ಸಿಎಂ ಸಿದ್ದರಾಮಯ್ಯ ಅವರು ತುಂಗಭದ್ರಾ ಅಣೆಕಟ್ಟು ಮತ್ತೆ ಮೈ ತುಂಬಿಕೊಳ್ಳುತ್ತದೆ. ಆಗ ನಾನೇ ಬಂದು ಬಾಗಿನ ಅರ್ಪಿಸುತ್ತೇನೆ ಅದರಂತೆ ಇಂದು ಬಂದು ಬಾಗಿನ ಅರ್ಪಿಸಿದ್ದಾರೆ.
ಈ ವೇಳೆ ಜಲ ಸಂಪನ್ಮೂಲ ಸಚಿವರಾದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಜಮೀರ್ ಅಹಮದ್, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿರಾಜ್ ತಂಗಡಗಿ, ಸಚಿವರುಗಳಾದ ಬೋಸ್ ರಾಜ್, ಶರಣಪ್ರಕಾಶ್ ಪಾಟೀಲ್, ಕೊಪ್ಪಳ ಸಂಸದರಾದ ರಾಜಶೇಖರ್ ಹಿಟ್ನಾಳ್, ಬಳ್ಳಾರಿ ಸಂಸದರಾದ ಈ.ತುಕಾರಾಮ್ ಹಾಗೂ ಎರಡೂ ಜಿಲ್ಲೆಗಳ ಶಾಸಕರುಗಳು, ಜಲ ಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಇನ್ನು ಇದೇ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ತುಂಗಭದ್ರಾ ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಇಂದು ಜಲಾಶಯಕ್ಕೆ ಬಾಗಿನ ಅರ್ಪಿಸಿ, ಕೊಚ್ಚಿ ಹೋಗಿದ್ದ ಕ್ರೆಸ್ಟ್ ಗೇಟನ್ನು ಅತ್ಯಂತ ತುರ್ತಾಗಿ ಅಳವಡಿಸಿದ ಎಂಜಿನಿಯರ್ ಮತ್ತು ಸಿಬ್ಬಂದಿಗೆ ಪ್ರಶಂಸನಾ ಪತ್ರ ನೀಡಿದ್ದೇನೆ. ಒಂದೇ ವಾರದಲ್ಲಿ ತುಂಗಭದ್ರಾ ಜಲಾಶಯಕ್ಕೆ ಗೇಟ್ ಅಳವಡಿಸಿ 20 ಟಿಎಂಸಿ ನೀರು ಉಳಿಸಿದ ತಜ್ಞರಿಗೆ ರೈತರ ಪರವಾಗಿ ಧನ್ಯವಾದಗಳು. ಎರಡನೇ ಬೆಳೆಗೂ ನೀರು ಸಿಗತ್ತದೆ, ಈ ಭಾಗದ ರೈತರು ಯಾವುದೇ ಆತಂಕ ಪಡುವ ಅಗತ್ಯ ಇಲ್ಲ. ಗೇಟ್ ಮುರಿದಾಗ ನಮ್ಮ ರೈತರು ಆತಂಕದಲ್ಲಿದ್ದರು. ಜಲ ಸಂಪನ್ಮೂಲ ಸಚಿವರು ಮತ್ತು ನಾನು ಚರ್ಚಿಸಿ ತುರ್ತಿನ ಕ್ರಮಕ್ಕೆ ಮುಂದಾದೆವು. ನಮ್ಮ ಸೂಚನೆಯಂತೆ ಒಂದೇ ವಾರದಲ್ಲಿ ಗೇಟ್ ಅಳವಡಿಸಿ 20 ಟಿಎಂಸಿ ನೀರನ್ನು ಉಳಿಸಿದ ತಜ್ಞ ಕನ್ನಯ್ಯ ನಾಯ್ಡು ಮತ್ತು ಎಂಜಿನಿಯರ್ ಸಿಬ್ಬಂದಿಯ ಕಾರ್ಯ ಶ್ಲಾಘನೀಯ ಎಂದರು.
ಇನ್ನು ನಮ್ಮ ಸರ್ಕಾರವಿದ್ದಾಗ ರಸ್ತೆಗಳ ನಿರ್ಮಾಣ ಮಾಡಿದ್ದೆವು. ಬಿಜೆಪಿ ಕಾಲದಲ್ಲಿ ರಸ್ತೆಗಳಾಗಿಲ್ಲ. ಈ ವರ್ಷ ಉತ್ತಮ ಮಳೆಯಾಗಿರುವುದರಿಂದ ರಸ್ತೆಗಳು ಹಾಳಾಗಿವೆ, ಅದರ ದುರಸ್ತಿ ಮಾಡಿಸಲಾಗುವುದು. ಅರ್ಕಾವತಿ ಬಡಾವಣೆ ಬಗ್ಗೆ ರಾಜ್ಯಪಾಲರು ಸರ್ಕಾರಕ್ಕೆ ಪತ್ರ ಬರೆದಿದ್ದರೆ ಸರ್ಕಾರ ಈ ಬಗ್ಗೆ ಗಮನಹರಿಸಲಿದೆ. ಪತ್ರ ಸೋರಿಕೆಯಾಗಿದೆ ಎಂಬ ಬಗ್ಗೆ ರಾಜ್ಯಪಾಲರು ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ, ರಾಜ್ಯಪಾಲರ ಕಛೇರಿಯಿಂದಲೇ ಈ ಮಾಹಿತಿ ಸೋರಿಕೆಯಾಗಿರಬಹುದು. ಈ ಬಗ್ಗೆ ತನಿಖೆಯಾಗಲಿ. ನಾನೂ ಪತ್ರಿಕೆಯಲ್ಲಿ ಓದಿ ತಿಳಿದಿದ್ದೇನೆ. ರೀ ಡೂ ಮಾಡಿ ಎಂದು ಬಿಡಿಎ ಗೆ ಸುಪ್ರೀಂ ಕೋರ್ಟ್ ಹೇಳಿದೆ. ಮಾಗಡಿಯಲ್ಲಿ ಬಹಳ ಮಂದಿ ಶಾಸಕರು, ರೈತರು ಹಸು ಸಾಕಣೆಯ ವೆಚ್ಚ ಹೆಚ್ಚಾಗಿದ್ದು ಹಾಲಿನ ದರ ಹೆಚ್ಚಳ ಮಾಡಲು ಒತ್ತಾಯ ಮಾಡಿದರು. ಒಂದು ವೇಳೆ ಹಾಲಿನ ದರ ಹೆಚ್ಚು ಮಾಡಿದರೆ ಅದನ್ನು ಸಂಪೂರ್ಣವಾಗಿ ರೈತರಿಗೆ ವರ್ಗಾಯಿಸಬೇಕೆಂದು ಸೂಚಿಸಲಾಗಿದೆ. ನಾವು ಯಾರ ಮೇಲೂ ದ್ವೇಷದ ರಾಜಕಾರಣ ಮಾಡುವುದಿಲ್ಲ. ಅಪರಾಧ ಮಾಡಿ ಎಂದು ನಾವು ಯಾರಿಗೂ ಹೇಳಿಲ್ಲ. ಮುನಿರತ್ನ ಅವರ ಮೇಲೆ ಮೂರು ಪ್ರಕರಣಗಳು ದಾಖಲಾಗಿದೆ. ನಮ್ಮ ಶಾಸಕರು ನನ್ನನ್ನು ಭೇಟಿ ಮಾಡಿ ಎಸ್.ಐ.ಟಿ ರಚಿಸಲು ಕೋರಿದರು. ಅವರ ಕೋರಿಕೆಗೆ ಸ್ಪಂದಿಸಿ ಎಸ್.ಐ.ಟಿ ರಚಿಸಿದ್ದೇವೆ. ತಪ್ಪು ಮಾಡಿದ್ದರೆ ತಾನೇ ಎಫ್ ಐ ಆರ್ ಆಗುವುದು. ನಾವು ಯಾರಿಗೂ ಕಿರುಕುಳ ನೀಡಿ ಕೇಸು ದಾಖಲಿಸಿಲ್ಲ, ಸ್ವ ಇಚ್ಛೆಯಿಂದ ಕೇಸು ದಾಖಲಿಸಿದ್ದಾರೆ ಎಂದರು.
ಕಲ್ಯಾಣ ಕರ್ನಾಟಕದ ಎಲ್ಲಾ ಲೋಕಸಭಾ ಸ್ಥಾನಗಳನ್ನು ಕಾಂಗ್ರೆಸ್ ಗೆ ಕೊಟ್ಟಿದ್ದೀರಿ. ನಾವು ಕಲ್ಯಾಣ ಕರ್ನಾಟಕದಲ್ಲಿ ವಿಶೇಷ ಕ್ಯಾಬಿನೆಟ್ ನಡೆಸಿ 46 ವಿಷಯಗಳನ್ನು, ಅನೇಕ ಕಾರ್ಯಕ್ರಮಗಳನ್ನು ಕಲ್ಯಾಣ ಕರ್ನಾಟಕದ ಅಭಿವಧ್ಧಿಗಾಗಿ ಘೋಷಿಸಿದ್ದೇವೆ. ಕಲ್ಯಾಣ ಕರ್ನಾಟಕಕ್ಕೆ 371ಜೆ ಜಾರಿ ಮಾಡಲು ಕೇಂದ್ರದಲ್ಲಿದ್ದ ಬಿಜೆಪಿ ಸರ್ಕಾರ ವಿರೋಧಿಸಿತ್ತು. ಆದರೆ ಮನಮೋಹನ್ ಸಿಂಗ್ ಅವರು ಪ್ರಧಾನಿ ಆಗಿದ್ದಾಗ ಸೋನಿಯಾಗಾಂಧಿ, ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಮಾರ್ಗದರ್ಶನದಲ್ಲಿ 371 ಜೆ ಜಾರಿ ಮಾಡಿದರು. ಪ್ರಾದೇಶಿಕ ಅಸಮಾನತೆ ಅಧ್ಯಯನಕ್ಕೆ ಗೋವಿಂದರಾವ್ ಅವರ ಸಮಿತಿ ರಚಿಸಿದ್ದೇವೆ. ಸಮಿತಿ ವರದಿ ನೀಡುತ್ತಿದ್ದಂತೆ ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಗೆ ಹೊಸ ನೀಲನಕ್ಷೆ ರಚಿಸುತ್ತೇವೆ. ಈಗಾಗಲೇ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ನಮ್ಮ ಸರ್ಕಾರ ₹5,000 ಕೋಟಿ ಘೋಷಿಸಿ ಆಗಿದೆ. ಕೇಂದ್ರ ಸರ್ಕಾರ ಕೂಡ ₹5,000 ಕೋಟಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದೇವೆ. ಕೇಂದ್ರ ಕೊಡುತ್ತದೋ ಇಲ್ಲವೋ ನೀವೇ ನೋಡುತ್ತೀರಿ.
ಎಡ ಮತ್ತು ಬಲ ದಂಡೆ ಕಾಲುವೆ ಸೇರಿ ರಾಜ್ಯದ 9,26,438 ಎಕರೆ ಕೃಷಿಭೂಮಿಗೆ, ಆಂದ್ರಪ್ರದೇಶದ 6,25,097 ಎಕರೆ, ತೆಲಂಗಾಣದ 87,000 ಎಕರೆಗೆ ನೀರಾವರಿ ಸೌಲಭ್ಯ ಕಲ್ಪಿಸುವ ತುಂಗಭದ್ರಾ ಅಣೆಕಟ್ಟು ಎರಡನೇ ಬಾರಿ ತುಂಬಿರುವುದ ಅತ್ಯಂತ ಸಂತಸದ ವಿಚಾರ. ವಿರೋಧ ಪಕ್ಷದ ಮಾತುಗಳಿಗೆ ಕಿವಿಕೊಡಬೇಡಿ. ಮೊದಲು ದಿನಕ್ಕೊಂದು ಸುಳ್ಳು ಹೇಳುತ್ತಿದ್ದ ಎಂದು ಸಿಎಂ ಹೇಳಿದ್ದಾರೆ.