ಬೆಂಗಳೂರು; ಕಬ್ಬಿನ ದರ ನಿಗದಿ ಪಡಿಸಲು ತಕ್ಷಣ ಸಿಎಂ ಮಧ್ಯ ಪ್ರವೇಶಿಸಲಿ ಎಂದು ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಕಬ್ಬಿನ ದರ ನಿಗದಿ ಪಡಿಸಲು ತಕ್ಷಣ ಸಿಎಂ ಮಧ್ಯ ಪ್ರವೇಶಿಸಲಿ.ಪ್ರತಿ ಟನ್ ಕಬ್ಬಿಗೆ ಕಾರ್ಖಾನೆಯವರು 3300 ರೂ, ರಾಜ್ಯ ಸರ್ಕಾರ 200 ರೂ. ದರ ನೀಡಲಿ. ನಾನು ಈಗಾಗಲೇ ಪ್ರತಿ ಟನ್ ಕಬ್ಬಿಗೆ 3500 ರೂ. ದರ ನಿಗದಿ ಮಾಡುವಂತೆ ಮುಖ್ಯಮಂತ್ರಿಗಳಿಗೆ ಆಗ್ರಹಿಸಿದ್ದೇನೆ. ಆದರೆ ಸಿಎಂ ರೈತರ ಬಗ್ಗೆ ಅಸಡ್ಡೆ ಭಾವನೆ ವ್ಯಕ್ತಪಡಿಸಿದ್ದಾರೆ . ತಮ್ಮ ರಾಜಕಾರಣವನ್ನು ಸಿಎಂ ಸ್ಥಾನ ಉಳಿಸಿಕೊಳ್ಳಲು ಅವರಿಗೆ ಸಮಯ ಸಿಗುತ್ತಿಲ್ಲ . ಹೀಗಾಗಿ ರೈತರ ಸಮಸ್ಯೆ ಪರಿಹರಿಸಲು ಅವರಿಗೆ ಆಗುತ್ತಿಲ್ಲ. ರೈತರ ಕಬ್ಬು ಬೆಳೆಗಾರರ ಸಮಸ್ಯೆ ಪ್ರತಿ ವರ್ಷ ಆಗುತ್ತಿರುವುದು ಗಮನಾರ್ಹ. ಕೇಂದ್ರ ಸರ್ಕಾರ ಎಫ್ ಆರ್ ಪಿ ನಿಗದಿ ಮಾಡಿದ ನಂತರ ಸಕ್ಕರೆ ಕಾರ್ಖಾನೆಗಳು ಎಥೆನಾಲ್, ವಿದ್ಯುತ್ ಸೇರಿದಂತೆ ಇತರೆ ಉಪ ಉತ್ಪನ್ನ ತಯಾರಿಸುತ್ತಾರೆ. ಹೀಗಾಗಿ ರೈತರು ಕೇಳುವ ದರವನ್ನು ನೀಡಲು ಸಾಧ್ಯವಿದೆ .ರಾಜ್ಯ ಸರ್ಕಾರ ಕಬ್ಬಿನ ದರವನ್ನು ನಿಗದಿ ಮಾಡಬೇಕು . ರಾಜ್ಯ ಸರ್ಕಾರಕ್ಕೆ ಕಾನೂನು ಪ್ರಕಾರ ದರ ನಿಗದಿ ಮಾಡಲು ಅಧಿಕಾರ ಇದೆ ಎಂದಿದ್ದಾರೆ.
ರೈತರ ಬೇಡಿಕೆ ತಕ್ಕಂತೆ ದರ ನಿಗದಿ ಮಾಡಿ ಸರ್ಕಾರ ಆದೇಶ ಮಾಡಬೇಕು. ಸರ್ಕಾರ ಎರಡು ರೀತಿಯಲ್ಲಿ ಪರಿಹಾರ ಕೊಡಬಹುದು . ಸುಮಾರು 27 ಸಾವಿರ ಕೊಟಿ ರೂ. ಸರ್ಕಾರಕ್ಕೆ ಸಕ್ಕರೆ ಹಾಗೂ ಇತರ ಉಪ ಉತ್ಪನ್ನಗಳ ಮೂಲಕ ಆದಾಯ ಬರುತ್ತದೆ . ಇದರಲ್ಲಿ ಸರ್ಕಾರ ಪ್ರತಿ ಟನ್ ಗೆ 200 ರೂಪಾಯಿ ಕೊಡಬೇಕು. ಸಕ್ಕರೆಯ ಜೊತೆಗೆ ವಿದ್ಯುತ್ ಉತ್ಪಾದನೆಯಾಗುತ್ತದೆ . ಮಹಾರಾಷ್ಟ್ರದಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಪಿಪಿಎ ಅಗ್ರಿಮೆಂಟ್ ಆಗಿದೆ
ಅಲ್ಲಿ ಕಾರ್ಖಾನೆ ಮಾಲೀಕರಿಗೆ ಪ್ರತಿ ಯುನಿಟ್ ಗೆ 5.5 ರೂ. ಸಿಗುತ್ತದೆ. ಅದೇ ರೀತಿ ರಾಜ್ಯದಲ್ಲಿ ಒಪ್ಪಂದ ಮಾಡಿಕೊಂಡರೆ ಈಗ ನೀಡುತ್ತಿರುವ ಪ್ರತಿ ಯುನಿಟ್ ಗೆ 3 ರೂ. ಬದಲು 5.5 ರೂ. ದೊರೆಯುತ್ತದೆ. ಇದರಿಂದ ಕಬ್ಬಿಗೆ ಹೆಚ್ಚಿಗೆ ದರ ಕೊಡಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತನಗಿರುವ ಅಧಿಕಾರ ಚಲಾವಣೆ ಮಾಡಬೇಕು. ಕಬ್ಬಿನ ಕಾರ್ಖಾನೆ ಮಾಲೀಕರ ಜೊತೆ ಸಭೆ ನಡೆಸಿ ರೈತರ ಬೇಡಿಕೆಯಂತೆ 3500 ರಿಂದ ದರ ಪಟ್ಟಿ ನಿಗದಿ ಮಾಡಬೇಕು. ಬಿಜೆಪಿ ಯಾವಾಗಲೂ ರೈತರ ಪರ ಹೋರಾಟದಲ್ಲಿ ನಿಲ್ಲುತ್ತದೆ . ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷರು ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವುದು ಸಾಕ್ಷಿ. ಇದರ ಜೊತೆಗೆ ಇನ್ನಿತರ ವಿಚಾರಗಳನ್ನು ಚರ್ಚೆ ಮಾಡಬೇಕು.
ಸಕ್ಕರೆ ನುರಿಸಲು ಕೂಡಲೇ ಆರಂಭಿಸಬೇಕು. ಈ ವಿಚಾರದಲ್ಲಿ ಸಿಎಂ ಕೂಡಲೇ ಮಧ್ಯ ಪ್ರವೇಶ ಮಾಡಬೇಕು.ಸರ್ಕಾರದ ಮಂತ್ರಿಗಳು ಒಂದಿಲ್ಲೊಂದು ರೀತಿಯಲ್ಲಿ ಸಕ್ಕರೆ ವ್ಯವಹಾರದ ಹಿತಾಸಕ್ತಿಯಲ್ಲಿ ಭಾಗಿಯಾಗಿರುವುದರಿಂದ ಸ್ವತಃ ಸಿಎಂ ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದ್ದಾರೆ.











