ಮನೆ Latest News ನಾಳೆಯಿಂದ ವಿಧಾನ ಮಂಡಲ ಅಧಿವೇಶನ ಆರಂಭ ಹಿನ್ನೆಲೆ; ಅಧಿಕಾರಿಗಳೊಂದಿಗೆ ಸಿಎಂ ಸಿದ್ದರಾಮಯ್ಯ ಸಭೆ

ನಾಳೆಯಿಂದ ವಿಧಾನ ಮಂಡಲ ಅಧಿವೇಶನ ಆರಂಭ ಹಿನ್ನೆಲೆ; ಅಧಿಕಾರಿಗಳೊಂದಿಗೆ ಸಿಎಂ ಸಿದ್ದರಾಮಯ್ಯ ಸಭೆ

0

ಬೆಂಗಳೂರು; ನಾಳೆಯಿಂದ ವಿಧಾನ ಮಂಡಲ ಅಧಿವೇಶನ ಆರಂಭವಾಗುತ್ತಿರುವ ಹಿನ್ನೆಲೆ  ಅಧಿಕಾರಿಗಳೊಂದಿಗೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸಿದ್ರು.

ಈ ವೇಳೆ ವಿಧಾನ ಮಂಡಲ ಅಧಿವೇಶನದಲ್ಲಿ ಚರ್ಚೆಯಾಗುವ ವಿಷಯಗಳಿಗೆ ಸಮರ್ಪಕ ಉತ್ತರ ನೀಡಲು ಸಿದ್ಧರಾಗಿರುವಂತೆ ಹಾಗೂ ಅಧಿವೇಶನದಲ್ಲಿ ಖುದ್ದು ಹಾಜರಿದ್ದು, ಸಚಿವರಿಗೆ ತಮ್ಮ ಇಲಾಖೆಗಳ ವಿಷಯಗಳ ಕುರಿತ ಮಾಹಿತಿ ಒದಗಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನ ಮಂಡಲ ಅಧಿವೇಶನಕ್ಕೆ ಪೂರ್ವಭಾವಿಯಾಗಿ ಎಲ್ಲ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು/ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳ ಸಭೆ ನಡೆಸಿ ವಿವಿಧ ವಿಷಯಗಳ ಕುರಿತು ಚರ್ಚಿಸಿದರು.

ಈ ಬಾರಿ ಸಂಪೂರ್ಣ ಬಜೆಟ್‌ಗೆ ಮಾರ್ಚ್‌ ನಲ್ಲಿಯೇ ಅನುಮೋದನೆ ದೊರೆತಿರುವ ಕಾರಣ ಇದು ಬಜೆಟ್‌ ಬಗ್ಗೆ ಚರ್ಚಿಸುವ ಅಧಿವೇಶನ ಅಲ್ಲ.ಯಾವಾಗಲೂ ಮಾರ್ಚ್‌ ನಲ್ಲಿ ಲೇಖಾನುದಾನ ಪಡೆದು, ಮಳೆಗಾಲದ ಅಧಿವೇಶನದಲ್ಲಿ ಪೂರ್ಣ ಬಜೆಟ್‌ ಗೆ ಅನುಮೋದನೆ ಪಡೆಯಲಾಗುತ್ತಿತ್ತು.ಈ ಬಾರಿ ಪೂರ್ಣ ಬಜೆಟ್‌ ಅನುಮೋದನೆ ಆಗಿರುವ ಹಿನ್ನೆಲೆ ವಿರೋಧ ಪಕ್ಷದವರು ಈ ಬಾರಿಯ ಸಂಪೂರ್ಣ ಅಧಿವೇಶನವನ್ನು ವಿವಿಧ ಆರೋಪ ಮಾಡುವ ಕುರಿತು ಬಳಸಿಕೊಳ್ಳುವ ಸಾಧ್ಯತೆ ಇದೆ.ಇದಕ್ಕೆ ಸೂಕ್ತ ಉತ್ತರ ನೀಡಲು ಅಧಿಕಾರಿಗಳು ಸಿದ್ಧರಾಗಿರಬೇಕು ಎಂದು ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಅವರು ಸೂಚನೆ ನೀಡಿದರು. ಅಲ್ಲದೇ ವಿವಿಧ ಇಲಾಖೆಗಳಲ್ಲಿ ಚರ್ಚೆಗೆ ಬರುವ ಸಾಧ್ಯತೆ ಇರುವ ವಿಷಯಗಳ ಕುರಿತು ಇಲಾಖಾ ಕಾರ್ಯದರ್ಶಿಗಳಿಂದ ಮುಖ್ಯಮಂತ್ರಿಗಳು ಸವಿಸ್ತಾರವಾಗಿ ಮಾಹಿತಿ ಪಡೆದರು

ಚರ್ಚೆಯ ಸಾಧ್ಯತೆ ಇರುವ ವಿಷಯಗಳ ಕುರಿತು ದತ್ತಾಂಶಗಳನ್ನು ಸಂಗ್ರಹಿಸಲು ಸಹ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ‌ರು.ಎಲ್ಲ ಕಾರ್ಯದರ್ಶಿಗಳೂ, ಇಲಾಖಾ ಮುಖ್ಯಸ್ಥರು ಅಧಿವೇಶನದಲ್ಲಿ ಹಾಜರಿರಬೇಕು.ಸಚಿವರಿಗೆ ಸಮರ್ಪಕವಾಗಿ ಮಾಹಿತಿ ನೀಡಬೇಕು.ಆಯಾ ಇಲಾಖಾ ಸಚಿವರು ಚರ್ಚೆಯ ವಿಷಯಗಳಿಗೆ ಉತ್ತರಿಸಬೇಕು.

ಅಗತ್ಯವಿದ್ದರೆ ನಾನು ಮಧ್ಯಪ್ರವೇಶಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ನಿಮ್ಮ ಇಲಾಖೆಯ ವಿಷಯ ಇದ್ದಾಗ ಕಾರ್ಯದರ್ಶಿಗಳು ಖುದ್ದು ಹಾಜರಿದ್ದು, ಸಚಿವರಿಗೆ ಸಹಕಾರ ನೀಡಬೇಕು. ಕೇವಲ ಅಧೀನ ಅಧಿಕಾರಿಗಳನ್ನು ಕಳುಹಿಸಿ ಗೈರು ಹಾಜರಾಗುವಂತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದರು.

ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್‌ ಗೋಯೆಲ್‌, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್‌ ಹಾಗೂ ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.