ಕೇರಳ; ವಯನಾಡು ದುರಂತ ಸಂಭವಿಸಿ ಸುಮಾರು 13 ದಿನಗಳಾಯ್ತು. ಇನ್ನೂ ಅದೆಷ್ಟೋ ಜನರ ಸುಳಿವು ಲಭ್ಯವಾಗಿಲ್ಲ. ತಮ್ಮವರನ್ನು ಕಳೆದುಕೊಂಡ ಅದೆಷ್ಟೋ ಮಂದಿ ನಮ್ಮವರ ದೇಹವಾದರು ಸಿಗುತ್ತಾ ಅಂತಾ ಕಾತುರದಿಂದ ಇನ್ನೂ ಕೂಡ ಕಾಯುತ್ತಲೇ ಇದ್ದಾರೆ.
ಹೀಗಿರುವಾಗಲೇ ಇದೀಗ ವಯನಾಡ್ ಜಿಲ್ಲಾಡಳಿತ ಪಟ್ಟಿಯೊಂದನ್ನು ರಿಲೀಸ್ ಮಾಡಿದೆ. ಅದರಲ್ಲಿ ಚೂರಲ್ಮಾಲಾ, ಮುಂಡಕ್ಕೈ ಮತ್ತು ಪುಂಚಿರಿವಟ್ಟಂ ಗ್ರಾಮಗಳಲ್ಲಿ ಭೂಕುಸಿತದಿಂದ ನಾಪತ್ತೆಯಾದ 130 ಮಂದಿಯ ಸುಳಿವು ಇನ್ನೂ ಕೂಡ ಪತ್ತೆಯಾಗಿಲ್ಲ ಎಂದು ತಿಳಿಸಿದೆ. ನಾಪತ್ತೆಯಾದ 130 ಜನರಲ್ಲಿ 24 ಜನ ಮಕ್ಕಳು, 57 ಜನ ಮಹಿಳೆಯರು ಮತ್ತು 49 ಜನ ಪುರುಷರಿದ್ದಾರೆ ಎಂದಿದ್ದಾರೆ.
ಇನ್ನು ನಾಪತ್ತೆಯಾದ 130 ಜನರಲ್ಲಿ ಬಿಹಾರದ ಮೂವರು ವಲಸೆ ಕಾರ್ಮಿಕರು ಸಹ ಇದ್ದಾರೆ ಎನ್ನಲಾಗಿದೆ. ಇನ್ನು ಒಂದಷ್ಟು ಜನರ ದೇಹದ ಬಿಡಿ ಭಾಗಗಳು ಅಷ್ಟೇ ಪತ್ತೆಯಾಗಿವೆ. ಒಂದಷ್ಟು ಮೃತದೇಹಗಲು ಯಾರದ್ದು ಎಂದು ಪತ್ತೆ ಮಾಡಲು ಸಾಧ್ಯವಾಗದ ಹಿನ್ನೆಲೆ ಅವುಗಳನ್ನು ಸಾಮೂಹಿಕವಾಗಿ ಅಂತ್ಯಸಂಸ್ಕಾರ ಮಾಡಲಾಗಿದೆ.
ವಯನಾಡು ದುರಂತದಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಸೇನಾ ಸಿಬ್ಬಂದಿಗೆ ಭಾವನಾತ್ಮಕ ವಿದಾಯ
ವಯನಾಡು ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 413ಕ್ಕೆ ಏರಿಕೆಯಾಗಿದೆ. ಇನ್ನು ಕೂಡ 150 ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾಗಿರುವ ಬಗ್ಗೆ ಇದುವರೆಗೂ ಯಾವುದೇ ಸುಳಿವು ಲಭ್ಯವಾಗಿಲ್ಲ. ಭಾರತೀಯ ಸೇನೆ, ಪೊಲೀಸರು, ಸ್ಥಳೀಯರು, ಸಂಘ ಸಂಸ್ಥೆಗಳ ನೆರವಿನಿಂದ ನಿರಂತರವಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ನಿನ್ನೆ 1 ಸಾವಿರಕ್ಕೂ ಹೆಚ್ಚು ಶೋಧ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ವಯನಾಡಿನ ಚಾಲಿಯಾರ್ ನದಿ ಹಾಗೂ ಮಲಪ್ಪುರಂ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ರು. ಇನ್ನು ಕಾರ್ಯಾಚರಣೆಯ ಸಮಯದಲ್ಲಿ ಒಟ್ಟು 78 ಮೃತದೇಹಗಳು ಮತ್ತು 150ಕ್ಕೂ ಹೆಚ್ಚು ದೇಹದ ಭಾಗಗಳು ಪತ್ತೆಯಾಗಿವೆ ಎನ್ನಲಾಗಿದೆ. ನದಿಗಳಲ್ಲಿಯೂ ದೇಹದ ಭಾಗಗಳು ಪತ್ತೆಯಾಗಿದ್ದು, ಶವಗಳ ಗುರುತು ಪತ್ತೆಗೆ ಡಿಎನ್ ಎ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ. ಕೆಲವರು ತಮ್ಮ ಕುಟುಂಬದ ಎಲ್ಲರನ್ನೂ ಕಳೆದುಕೊಂಡಿದ್ದು ಅಂತಹವರ ನೋವು ಹೇಳ ತೀರದಾಗಿದೆ. ಅದರಲ್ಲೂ ಕೆಲವರ ಕುಟುಂಬದ ಸದಸ್ಯರ ಮೃತದೇಹ ಕೂಡ ಪತ್ತೆಯಾಗಿಲ್ಲ. ಒಂದಷ್ಟು ಮಂದಿ ಶೋಧ ಕಾರ್ಯಾಚರಣೆ ನಡೆಯುವ ಜಾಗದಲ್ಲಿ ತಮ್ಮ ಮೃತಹೇದ ಸಿಗುತ್ತೋ ಏನೋ ಎಂದು ಕಾಯುತ್ತಿರುವ ದೃಶ್ಯ ಕರುಳು ಹಿಂಡುವಂತಿದೆ.
ಇದರ ಮಧ್ಯೆ 10 ದಿನಗಳ ಕಾಲ ಊಟ, ನಿದ್ರೆ ಬಿಟ್ಟು ನಿರಂತರವಾಗಿ ಭಾರತೀಯ ಸೇನೆ ಭೂಕುಸಿತದಲ್ಲಿ ಸಿಲುಕಿದವರ ರಕ್ಷಣೆಗೆ ನಿಂತಿತ್ತು. ನಿರಂತರವಾಗಿ ಹಗಲು ರಾತ್ರಿ ಎನ್ನದೇ ಒಂದು ಕ್ಷಣವೂ ತಮ್ಮ ಬಗ್ಗೆ ಯೋಚಿಸದೇ ನೊಂದವರಿಗೆ ಸ್ಪಂದಿಸುತ್ತಿದ್ದರು ನಮ್ಮ ಹೆಮ್ಮೆಯ ಯೋಧರು. ಅದರಲ್ಲೂ ಕೇವಲ 16 ಗಂಟೆಗಳಲ್ಲಿ ಬೈಲಿ ಸೇತುವೆ ನಿರ್ಮಾಣ ಮಾಡುವ ಅವರ ಶ್ರಮ ಪದಗಳಲ್ಲಿ ವರ್ಣಿಸಲಾಗದ್ದು. ನಿನ್ನೆ 10 ದಿನಗಳ ನಿರಂತರ ಕಾರ್ಯಾಚರಣೆಯ ಬಳಿಕ ಭಾರತೀಯ ಸೇನೆ ತೆರಳಿದ್ದು ಈ ವೇಳೆ ಸೇನಾ ಸಿಬ್ಬಂದಿಗೆ ವಯನಾಡಿ ಜನ ಧನ್ಯತಾ ಭಾವದಿಂದ ಭಾವಾನಾತ್ಮಕ ವಿದಾಯ ಹೇಳಿದ್ರು.
10 ದಿನಗಳ ತಮ್ಮರೇ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬಂತೆ ತಮ್ಮ ಜೀವವನ್ನೇ ಒತ್ತೆಯಿಟ್ಟು ಸ್ಥಳೀಯರಿಗೆ ಬೆಂಬಲವಾಗಿ ನಿಂತ ಸೇನಾ ಸಿಬ್ಬಂದಿಗೆ ಕೃತಜ್ಞತೆ ಮತ್ತು ಮೆಚ್ಚುಗೆಯ ಮಹಾ ಪ್ರವಾಹವೇ ಹರಿದು ಬಂತು. ಕೊಚ್ಚಿ ರಕ್ಷಣಾ ಸಾರ್ವಜನಿಕ ಸಂಪರ್ಕ ಅಧಿಕಾರಿ ಸೇನಾ ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿದರು. ಈ ವೇಳ ಮಾತನಾಡಿದ ಅವರು”ಈ ದುರಂತದ ರಕ್ಷಣಾ ಕಾರ್ಯಾಚರಣೆಯಲ್ಲಿ ನಮಗೆ ಸಹಾಯ ಮಾಡಿ, ನಮಗೆ ಬೆನ್ನೆಲುಬಾಗಿ ನಿಂತ ನಮ್ಮ ಕೆಚ್ಚೆದೆಯ ವೀರರಿಗೆ ನಾವು ಕೃತಜ್ಞತೆಯನ್ನು ಸಲ್ಲಿಸುತ್ತೇವೆ.ನಿಮ್ಮ ಧೈರ್ಯ ಮತ್ತು ತ್ಯಾಗವನ್ನು ಎಂದಿಗೂ ಮರೆಯಲಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಇನ್ನು ಯೋಧರು ತೆರಳುತ್ತಿದ್ದಂತೆ ಸೈನಿಕರು ಸ್ಥಳೀಯರು, ಅಧಿಕಾರಿಗಳು , ಇತರೆ ರಕ್ಷಣಾ ಕಾರ್ಯಕರ್ತರು ಬೀದಿಗಳಲ್ಲಿ ಸಾಲುಗಟ್ಟಿ ನಿಂತು ತಮ್ಮ ಹೃತ್ಪೂರ್ವಕ ಧನ್ಯವಾದಗಳು ಮತ್ತು ಶುಭ ಹಾರೈಕೆಗಳನ್ನು ಸಲ್ಲಿಸಿದರು. ಸದ್ಯ ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲ ವೈರಲ್ ಆಗಿದೆ.










