ಬೆಂಗಳೂರು; ಮಲ್ಲಿಕಾರ್ಜುನ ಖರ್ಗೆ ಕುಟುಂಬಕ್ಕೆ ಸಿಎ ಸೈಟ್ ಹಂಚಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸುದ್ದಿಗೋಷ್ಠಿ ನಡೆಸಿದ್ರು.
ಈ ವೇಳೆ ಮಾತನಾಡಿದ ಅವರು ಮಲ್ಲಿಕಾರ್ಜುನ ಖರ್ಗೆ ಕುಟುಂಬ ಕಾನೂನು ಬಾಹಿರವಾಗಿ ಸೈಟ್ ಪಡೆದಿದೆ.ಟ್ರಸ್ಟ್ ಅಂದರೆ ಅದಕ್ಕೆ ಪ್ರಭಾವ ಇರಬಾರದು, ಸರ್ಕಾರಿ ಹುದ್ದೆಯಲ್ಲಿ ಇರಬಾರದು.ಪ್ರಿಯಾಂಕ್ ಖರ್ಗೆ ಕ್ಯಾಬಿನೆಟ್ ಸಚಿವರಿದ್ದಾರೆ.ಇಲ್ಲಿ ಹಲವು ಲೋಪ ದೋಷಗಳಿವೆ.ಸಿಎ ಸೈಟ್‌ಗಳನ್ನು ಹರಾಜು ಹಾಕುವ ಪದ್ಧತಿ ಇದೆ.ಸಿಎ ಸೈಟ್ ಯಾವುದಕ್ಕೆ ಅಂತ ಉಲ್ಲೇಖ ಮಾಡಿರುತ್ತಾರೆ.ಯಾರಿಗೆ ಯಾವುದು ಬೇಕು ಅದಕ್ಕೆ ಅರ್ಜಿ ಹಾಕುತ್ತಾರೆ.ಇಲ್ಲಿ ಯಾವುದಕ್ಕೆ ಅಂತ ಉಲ್ಲೇಖವೇ ಮಾಡಿಲ್ಲ.ಯಾವ ಉದ್ದೇಶಕ್ಕೆ ಬೇಕು ಅಂತ ಪತ್ರ ಕೊಡಿ ಅಂತ ಹೇಳಿ ಜಾಗ ಕೊಡಲಾಗಿದೆ ಎಂದರು.
ಒಂದೇ ವಿಳಾಸಕ್ಕೆ ಎರಡು ಮೂರು ಸೈಟು ಕೊಟ್ಟಿರುವುದು ಸ್ವಜನ ಪಕ್ಷಪಾತಕ್ಕೆ ಸಾಕ್ಷಿ .ಎಐಸಿಸಿ ಅಧ್ಯಕ್ಷರು ಪ್ರಭಾವ ಬೀರಿ ಇದನ್ನು ಪಡೆದುಕೊಂಡಿದ್ದಾರೆ.ಸೈಟು ಹಂಚಿಕೆ ಪ್ರಕ್ರಿಯೆ ಒಂದೇ ತಿಂಗಳಲ್ಲಿ ಮುಗಿದಿದೆ.ಒಂದೇ ಕುಟುಂಬದ ಐವರಿಗೆ ಸೈಟು ಹಂಚಿಕೆ ಆಗಿದೆ.ಹಾಗೆಯೇ ಎಸ್ ಆರ್ ವ್ಯಾಲ್ಯೂ ಕಟ್ಟುವಿಕೆಯಲ್ಲೂ ಸರ್ಕಾರಕ್ಕೆ ವಂಚನೆ ಆಗಿದೆ.ಹೀಗಾಗಿ ಈ ಸೈಟು ಹಂಚಿಕೆ ಅಕ್ರಮದ ರೂಪ ಪಡೆದಿದೆ.ಈ ಕಾರಣದಿಂದ ಈ ಸೈಟು ಹಂಚಿಕೆ ನೋಟಿಫಿಕೇಷನ್ ವಾಪಾಸ್ ಪಡೆಯಬೇಕು.ಮರು ಹರಾಜು ಪ್ರಕ್ರಿಯೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನು ಪ್ರಿಯಾಂಕ್ ಖರ್ಗೆ ನನ್ನ ಬಗ್ಗೆ ಹಗುರವಾಗಿ ಮಾತಾಡಿದ್ದಾರೆ.ಅವರನ್ನು ಬೈಯುವುದಕ್ಕೆ ಬಿಜೆಪಿ ನನ್ನ ನೇಮಿಸಿದೆ ಎಂದಿದ್ದಾರೆ.ವಿರೋಧ ಪಕ್ಷದಲ್ಲಿ ಕುಳಿತು ನಾನು ಯಾರ ಬಗ್ಗೆ ಮಾತಾಡಬೇಕು?ನನಗೆ ಜಾಸ್ತಿ ಇಂಗ್ಲಿಷ್ ಬರಲ್ಲ,ಈಗೀಗ ಸ್ವಲ್ಪ ಕಲಿತಿದ್ದೇನೆ.ಕೂಲಿ ಮಾಡುತ್ತಿದ್ದವರ ಮಗ ನಾನು, ಕಾನ್ವೆಂಟ್ ಗೆ ಹೋಗಿಲ್ಲ.ನನ್ನ ಯೋಗ್ಯತೆ ಗುರುತಿಸಿ ಪಕ್ಷ ಅವಕಾಶ ನೀಡಿದೆ.ನಿಮ್ಮಂತೆ ಬಂಗಾರದ ಚಮಚ ಬಾಯಲ್ಲಿಟ್ಟು ಹುಟ್ಟಿದವನು ನಾನಲ್ಲ.ನೀವು ಇಂಗ್ಲೀಷ್ ಮೀಡಿಯಂ ಓದಿದ್ದು, ಎಲ್ಲೆಲ್ಲಿ ಫೇಲ್ ಆಗಿದ್ದೀರಿ ಗೊತ್ತು.ನನ್ನನ್ನು ಕೆಣಕಬೇಡಿ ಮಿಸ್ಟರ್ ಪ್ರಿಯಾಂಕ್ ಖರ್ಗೆ ಎಂದು ಸವಾಲು ಹಾಕಿದ್ದಾರೆ.ಕೆಣಕಿದರೆ ಚಲ್ಲಣ ಹರಿಯುತ್ತೇನೆ .ಕೆಣಕಿದರೆ ಕುಣುಕೋ ವ್ಯಕ್ತಿ ನಾನು.ಅಪ್ಪನ ಹೆಸರಿನ ಪ್ರಭಾವ ಬಳಸಿ ಬೆಳೆದಿಲ್ಲ ನಾನು.ತಂದೆಯ ಹೆಸರು ಇಲ್ಲದಿದ್ದರೆ ಪ್ರಿಯಾಂಕ್ ಖರ್ಗೆ ಪಂಚಾಯತ್ ಸದಸ್ಯ ಆಗಲು ಸಾಧ್ಯವಿಲ್ಲ. ವೈಯಕ್ತಿಕವಾಗಿ ಮಾತಾಡಿದರೆ ಸುಮ್ಮನಿರಲ್ಲ.ರಾಹುಲ್ ಖರ್ಗೆ, ಪ್ರಿಯಾಂಕ್ ಖರ್ಗೆ ತರಹ ಅಲ್ಲ.ರಾಹುಲ್ ಖರ್ಗೆ ಫೇಲ್ ಆಗಿಲ್ಲ, ಐಆರ್ ಎಸ್ ಮಾಡಿದವರು.ಅವರ ಬಗ್ಗೆ ನಾನು ಮಾತಾಡಲ್ಲ.ಟ್ರಸ್ಟ್ ನಲ್ಲಿ ನೀವು ಇದ್ದೀರಿ ಹಾಗಾಗಿ ನಿಮ್ಮ ಹೆಸರು ಬರುತ್ತದೆ.ಕೋರಮಂಗಲ, ಯಲಹಂಕ, ಕಲ್ಬುರ್ಗಿ ಎಲ್ಲೆಲ್ಲಿ ಆಸ್ತಿ ಇದೆ ಗೊತ್ತು.ನನ್ನ ಮೇಲೆ ಹೀಗೆ ವಾಗ್ದಾಳಿ ನಡೆಸುತ್ತಾ ಹೋಗಿ, ಒಂದೊಂದೇ ಎಲ್ಲಾ ಹೊರಗೆ ಬರುತ್ತದೆ ಎಂದು ಎಚ್ಚರಿಸಿದ್ದಾರೆ.
ದೆಹಲಿಯವರೆಗೂ ಇದನ್ನು ಒಯ್ಯುತ್ತೇನೆ .ಪ್ರಿಯಾಂಕ್ ಖರ್ಗೆ ಸಚಿವ ಸ್ಥಾನದಿಂದ ಇಳಿಯಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಏಕವಚನದಲ್ಲಿ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.ನೀವು ತಪ್ಪು ಮಾಡಿದ್ದೀರಿ, ಹಾಗಾಗಿ ನಾನು ಮಾತಾಡುತ್ತೇನೆ.ಮೈಂಡ್ ಯುವರ್ ಲಾಂಗ್ವೇಜ್ ಮಿಸ್ಟರ್ ಪ್ರಿಯಾಂಕ್ ಖರ್ಗೆ.ನನಗೂ ನಮ್ಮಪ್ಪನ ಹೆಸರೂ ನನ್ನ ಮುಂದಿದೆ ಅದನ್ನು ಬಳಸಿಕೊಂಡಿಲ್ಲ.ನೀನು ಯಾವ ಹೋರಾಟ ಮಾಡಿ ಬೆಳೆದಿದ್ದೀಯಪ್ಪಾ?ನಾನು ಗೋಣೀಚೀಲ ಹೊದ್ದು ಮಲಗಿದವನು.ನೀನು ಯಾವ ಗೋಣೀಚೀಲ ಹೊದ್ದು ಮಲಗಿದ್ದೀಯಾ?ನಿನ್ನ ಹಾಗೆ ಗೋಲ್ಡ್ ಸ್ಪೂನ್ ಇಟ್ಟುಕೊಂಡು ಹುಟ್ಟಿಲ್ಲ ಎಂದಿದ್ದಾರೆ.