ಬೆಂಗಳೂರು: ಇಂದಿನಿಂದ ರಾಜ್ಯದಲ್ಲಿ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಆರಂಭ ಹಿನ್ನೆಲೆ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸುದ್ದಿಗೋಷ್ಟಿ ನಡೆಸಿದ್ರು.
ಈ ವೇಳೆ ಮಾತನಾಡಿದ ಅವರು ಕುರುಬ ಕ್ರಿಶ್ಚಿಯನ್, ಲಿಂಗಾಯತ ಕ್ರಿಶ್ಚಿಯನ್ ಎಂದು ಇರಬಾರದು. ಒಂದು ವೇಳೆ ಅದನ್ನು ಮುಂದುವರಿಸಿದರೆ ಹೋರಾಟ ಮಾಡುತ್ತೇವೆ. ಈಗ ಸಮೀಕ್ಷೆಗೆ 425 ಕೋಟಿ ಖರ್ಚಾಗಿದೆ. ಇದು ಕಾಂಗ್ರೆಸ್ ಮನೆಯ ಹಣ ಏನು?. ಇಷ್ಟ ಬಂದಂತೆ ಖರ್ಚು ಮಾಡಲು ನಿಮಗೆ ಅಧಿಕಾರ ನೀಡಿದವರು ಯಾರು?. ಜಯಪ್ರಕಾಶ್ ಹೆಗಡೆ ನೀಡಿದ ವರದಿ ಒಪ್ಪಿಲ್ಲ, ಆ ಹಣ ವೇಸ್ಟ್ ಆಯ್ತು. ಕಾಂಗ್ರೆಸ್ ಮಾಡುತ್ತಿರುವುದು ಬೂಟಾಟಿಕೆಯ ಸಮೀಕ್ಷೆ. ಅಭಿವೃದ್ಧಿ ಶೂನ್ಯ, ರಸ್ತೆ ಗುಂಡಿ ಮುಚ್ಚಲು ಯೋಗ್ಯತೆ ಇಲ್ಲ. ಕೈಗಾರಿಕೋದ್ಯಮಿಗಳು ಪತ್ರ ಬರೆಯುತ್ತಿದ್ದಾರೆ. ನಾವು ಬೇರೆ ಕಡೆ ಹೋಗುತ್ತಿದ್ದೇವೆ ಎನ್ನುತ್ತಿದ್ದಾರೆ. ಗುಂಡಿ ಮುಚ್ಚಲು ಆಗದವರು ಸುರಂಗ ಮಾಡುತ್ತಾರಂತೆ. ಗುಡ್ಡೆ ಮಾಂಸದ ಸರ್ಕಾರ ಇದು ಎಂದು ವ್ಯಂಗ್ಯ ಮಾಡಿದ್ರು.
1.7 ಕೋಟಿ ಜನರ ಸಮೀಕ್ಷೆ ಮಾಡಲು ಆಗುತ್ತಾ?. ಬೊಗಳೆ ಅಂಕಿ ಅಂಶ ಹಿಂದೆ ಕೊಟ್ಟಿದ್ದೀರಿ. ಈಗ ಹದಿನೈದು ದಿನಗಳಲ್ಲಿ ಹೇಗೆ ಮಾಡುತ್ತೀರಿ?. ಸ್ಯಾಟಲೈಟ್ ಇಟ್ಟುಕೊಂಡು ಮಾಡುತ್ತೀರಾ?. ಎಸ್ ಸಿಗಳ ಜಾತಿಗಣತಿ ಈಗ ಯಾಕೆ?. ಈಗ ಅವರಿಗೆ ಹೊಸದಾಗಿ ಮೀಸಲಾತಿ ನೀವು ಕೊಡುತ್ತೀರಾ?. ೫೯ ಸಮುದಾಯವನ್ನು ಬೀದಿಯಲ್ಲಿ ನಿಲ್ಲಿಸಿದ್ರಿ. ಈ ಸರ್ಕಾರ ಎಸ್ ಸಿಗಳಿಗೆ ಗುಡ್ಡೆ ಮಾಂಸದ ತರಹ ಕೈಗೆ ಸಿಕ್ಕಷ್ಟು ಮೀಸಲಾತಿ ನೀಡಿದೆ. ಪರಿಶಿಷ್ಟ ಜಾತಿಯವರು ಯಾರೂ ಸಹ ಕ್ರಿಶ್ಚಿಯನ್ ಗೆ ಸೇರಿದ್ದೇನೆ ಎಂದು ಬರೆಸಬೇಡಿ. ಸರ್ಕಾರ ನಿಮಗೆ ಒತ್ತಾಯ ಹಾಕುತ್ತಿದೆ. ಒಂದು ವೇಳೆ ನೀವು ಬರೆಸಿದರೆ ನಾಳೆ ಎಸ್ ಸಿ ಮೀಸಲಾತಿ ನಿಮಗೆ ಸಿಗುವುದಿಲ್ಲ. ನೀವು ಪ್ರಬುದ್ಧರು, ಹಗ್ಗ ಹಾಕಿ ಕಟ್ಟಿಡಲು ನೀವು ದನ ಕರುಗಳಲ್ಲ. ಅಂಬೇಡ್ಕರ್ ನಮಗೆ ಎಲ್ಲಾ ಸ್ಥಾನಮಾನ ನೀಡಿದ್ದಾರೆ. ಇಷ್ಟಾಗಿಯೂ ನೀವು ಕ್ರಿಶ್ಚಿಯನ್ ಎಂದು ಬರೆಸಿಕೊಂಡರೆ ಮೀಸಲಾತಿಯಿಂದ ಔಟ್ ಆಗುತ್ತೀರಿ.ಕಾಂಗ್ರೆಸ್ ಸಬ್ ಕಾ ಸಾಥ್ ಎನ್ನುತ್ತಾರೆ, ಆದರೆ ಇದು .ಖುದ್ದ್ ಕಾ ವಿಕಾಸ್. ಎಂದು ತಿಳಿಸಿದ್ರು.
ಈಗ ಜಾತಿಗಳಿಗೆ ಆದಿ ಆಂದ್ರ ಕ್ರಿಶ್ಚಿಯನ್, ಆದಿ ಕರ್ನಾಟಕ ಕ್ರಿಶ್ಚಿಯನ್, ಬಂಜಾರ ಕ್ರಿಶ್ಚಿಯನ್ ಹೀಗೆ ಪರಿಶಿಷ್ಟ ಜಾತಿಗಳಿಗೆ ಕ್ರಿಶ್ಚಿಯನ್ ಸೇರಿಸಿದ್ದೀರಿ. ಅಂದರೆ ಇವರನ್ನೆಲ್ಲಾ ಮೂಲ ಕ್ರಿಶ್ಚಿಯನ್ ಮಾಡುವ ಉದ್ದೇಶವೇ ನಿಮ್ಮದು?. ಒಂದು ಧರ್ಮವನ್ನು ಬೆಳೆಸಲು ಈ ರೀತಿ ಮಾಡುತ್ತಿದ್ದೀರಾ?. ಈ ರೀತಿ ಮಾಡಲು ಸೋನಿಯಾ ಗಾಂಧಿ ಹೇಳಿದ್ರಾ?. ಸಿಎಂ ಸಿದ್ದರಾಮಯ್ಯ ಒಬ್ಬರನ್ನು ಬಿಟ್ಟರೆ ಇಡೀ ಮಂತ್ರಿ ಮಂಡಲ ಇದರ ವಿರುದ್ಧ ಇದೆ. ಜಾತಿ ಮುಂದೆ ಕ್ರಿಶ್ಚಿಯನ್ ಧರ್ಮ ಸೇರಿದಾಗ ಏನಾಗಲಿದೆ?. ಪರಿಶಿಷ್ಟರು ಈ ರಾಜ್ಯದ ಗುಲಾಮರಲ್ಲ. ನಿಮ್ಮ ಮನಸ್ಥಿತಿಗೆ ನಮ್ಮ ಧಿಕ್ಕಾರ ಇದೆ. ರಾಜ್ಯಪಾಲರನ್ನು ಪರಿಶಿಷ್ಟರ ಸಮುದಾಯ ಭೇಟಿ ಮಾಡಲಿದ್ದೇವೆ. ಮಂತ್ರಿ ಮಂಡಲದ ಒಬ್ಬ ಸಚಿವ ಕೂಡಾ ಇದು ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸಮೀಕ್ಷೆ ಅಂತ ಹೇಳಲೇ ಇಲ್ಲ. ನೀವು ಇನ್ನು ಎಷ್ಟು ಬಾರಿ ಸಿಎಂ ಆಗಬೇಕು?. ಎಸ್ಟಿ ನಿಗಮ ಅಷ್ಟೇ ಅಲ್ಲ, ಭೋವಿ ನಿಗಮದ ಹಣವನ್ನೂ ತಿಂದಿದ್ದೀರಿ. ಮತ್ತೊಮ್ಮೆ ಪರಿಶಿಷ್ಟರ ಸರ್ವೆ ಮಾಡುವ ಅವಶ್ಯಕತೆ ಇಲ್ಲ ಎಂದರು.











