ಮನೆ Latest News ಚರ್ಚೆಗೆ ಅವಕಾಶ ಕೊಡದೇ ಹೊರಗಡೆ ಜಾಹೀರಾತು ಕೊಡುವುದು ಸಿದ್ದರಾಮಯ್ಯ ಅವರಿಗೆ ಒಂದು ಕಪ್ಪು ಚುಕ್ಕೆ; ಬೆಂಗಳೂರಿನಲ್ಲಿ...

ಚರ್ಚೆಗೆ ಅವಕಾಶ ಕೊಡದೇ ಹೊರಗಡೆ ಜಾಹೀರಾತು ಕೊಡುವುದು ಸಿದ್ದರಾಮಯ್ಯ ಅವರಿಗೆ ಒಂದು ಕಪ್ಪು ಚುಕ್ಕೆ; ಬೆಂಗಳೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿಕೆ

0

ಬೆಂಗಳೂರು; ಮುಡಾ ವಿಚಾರವಾಗಿ ಚರ್ಚೆಗೆ ಅವಕಾಶ ನೀಡದೆ ಸಿಎಂ ಸಿದ್ದರಾಮಯ್ಯ ಅವರು ಹೊರಗಡೆ ಜಾಹೀರಾತು ಕೊಡುವುದು ಒಂದು ಕಪ್ಪು ಚುಕ್ಕೆ ಎಂದು ಬೆಂಗಳೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಸಿಎಂ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಸಿಎಂ ಉತ್ತರ ಕೊಡಬೇಕಾದ ವೇದಿಕೆ ವಿಧಾನ ಮಂಡಲ.ಸಿದ್ದರಾಮಯ್ಯ ಅವರ ಈವರೆಗಿನ ಅಪರಾಧ ದಾಖಲೆ ಸಮೇತ ಸಿಕ್ಕಿರಲಿಲ್ಲ, ಈಗ ಸಿಕ್ಕಿದೆ.ಮುಡಾದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಎರಡೂ ಸದನದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಚರ್ಚೆಗೆ ಅವಕಾಶ ಕೊಡಲಿಲ್ಲ.ವಿಧಾನಮಂಡಲದಲ್ಲಿ ಚರ್ಚೆ ಅವಕಾಶ ಕೊಡದ ಹಿನ್ನೆಲೆಯಲ್ಲಿ ಎನ್ ಡಿಎ ಮೈತ್ರಿಕೂಟ ಪಾದಯಾತ್ರೆ ಮಾಡುತ್ತೇವೆ.ಸಂವಿಧಾನದ ಎಲ್ಲಾ ಆಯಾಮಗಳಲ್ಲಿ ಮುಡಾ, ವಾಲ್ಮೀಕಿ ಹಗರಣ ಬಗ್ಗೆ ಹೋರಾಟ ಮಾಡುತ್ತೇವೆ ಎಂದಿದ್ದಾರೆ.

ಇನ್ನು ರಮೇಶ್ ಜಾರಕಿಹೊಳಿ ಮತ್ತು  ಯತ್ನಾಳ್ ಪ್ರತ್ಯೇಕ ಪಾದಯಾತ್ರೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರ ಅದರ ಬಗ್ಗೆ ನಾನು ಮಾತನಾಡುವುದಿಲ್ಲ.ಭ್ರಷ್ಟಾಚಾರ ಹಗರಣ ಬಯಲಿಗೆ ಎಳೆಯಲು ಪಾದಯಾತ್ರೆ ಮಾಡುತ್ತಿದ್ದೇವೆ. ಹಾಗಾಗಿ ಅದರ ಬಗ್ಗೆ ಹೆಚ್ಚು ಮಾತನಾಡಲ್ಲ ಎಂದಿದ್ದಾರೆ. ಇದೇ ವೇಳೆ ಅರವಿಂದ ಲಿಂಬಾವಳಿ ಟ್ವೀಟ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಅವರು ಪಕ್ಷದಲ್ಲಿ ಅತ್ಯುನ್ನತ ಜವಾಬ್ದಾರಿ ಹೊಂದಿದ್ದರು.ಹೋರಾಟ ಬಗ್ಗೆ ಸಲಹೆ ಕೊಟ್ಟರೆ ನಾವು ಅನುಸರಿಸುತ್ತೇವೆ ಎಂದಿದ್ದಾರೆ.

ಮುಡಾ ಪಾದಯಾತ್ರೆ ಹಿನ್ನೆಲೆ ;ಬೆಂಗಳೂರಿನ ಅರಮನೆ ಮೈದಾನದಲ್ಲಿ ಪೂರ್ವಭಾವಿ ಸಭೆ

ಬೆಂಗಳೂರಿನಿಂದ ಮೈಸೂರಿಗೆ ಬಿಜೆಪಿ ಮುಡಾ ಸೈಟ್ ಪ್ರಕರಣ ವಿಚಾರವಾಗಿ ಪಾದಯಾತ್ರೆ ಹಿನ್ನೆಲೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಪೂರ್ವಭಾವಿ ಸಭೆ ನಡೆಯಿತು.

ಸಭೆಯಲ್ಲಿ  ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ  ಸಿಎಂ ಡಿ.ವಿ. ಸದಾನಂದ ಗೌಡ ಸೇರಿದಂತೆ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಮಾಜಿ ಸಂಸದರು, ಮಾಜಿ ಶಾಸಕರು, ಮಾಜಿ ವಿಧಾನಪರಿಷತ್ ಸದಸ್ಯರು, ರಾಜ್ಯ ಪದಾಧಿಕಾರಿಗಳು ಮತ್ತು ಜಿಲ್ಲಾಧ್ಯಕ್ಷರು ಭಾಗಿಯಾಗಿದ್ದರು.

ಈ ವೇಳೆ ಮಾತನಾಡಿದ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಪ್ರತಿದಿನ ಭ್ರಷ್ಟಾಚಾರ ಸುದ್ದಿ ಬರುತ್ತಿದೆ.ಎಲ್ಲ ಇಲಾಖೆಯಲ್ಲೂ ಭ್ರಷ್ಟಾಚಾರ ನೋಡುತ್ತಿದ್ದೇವೆ. ಸಿಎಂ ಸಿದ್ದರಾಮಯ್ಯ ಬಡ್ಡಿ ಸಮೇತ 14 ಸೈಟ್ ತೆಗೆದುಕೊಂಡಿದ್ದಾರೆ.

ಬೇರೆಯವರಿಗೆ ಇನ್ನೂ ಸೈಟ್ ಕೊಟ್ಟಿಲ್ಲ, ಅದ್ರೆ ಸಿದ್ದರಾಮಯ್ಯಗೆ ಸೈಟ್ ನೀಡಿದ್ದಾರೆ. ಮೇಲುಕೋಟೆಯಲ್ಲಿ ದೇವಸ್ಥಾನ ಜಮೀನು ತೆಗೆದುಕೊಂಡು ಚಲುವರಾಯಸ್ವಾಮಿ ದೇವರಿಗೂ ನಾಮ ಇಡಲಾಗಿದೆ.ಬೇಲಿಯೇ ಎದ್ದು ಹೊಲ ಮೇಯ್ದ ರೀತಿ ಆಗಿದೆ. ಸದನದಲ್ಲಿ ಚರ್ಚೆ ಮಾಡಲು ಆಗದೆ ಓಡಿ ಹೋದರು.ಹೊರಗಡೆ ಬಂದ್ರು ಪ್ರೆಸ್ ಮೀಟ್ ಮಾಡ್ತಾರೆ, ಜಾಹೀರಾತು ನೀಡ್ತಾರೆ.ಸದನದಲ್ಲಿ ಅವರಿಗೆ ಕಳೆಯೇ ಇರಲಿಲ್ಲ. ನ್ಯಾಯ ಬದ್ಧವಾಗಿ ಜಮೀನು ತೆಗೆದುಕೊಂಡಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.62‌ ಕೋಟಿ ಕೊಡಬೇಕು ಅಂತ ಸಿದ್ದರಾಮಯ್ಯ ಹೇಳುತ್ತಾರೆ.ಆದ್ರೆ ನಿಮ್ಮ ಬಾಮೈದ ಎಷ್ಟಕ್ಕೆ ಜಮೀನು ತೆಗೆದುಕೊಂಡಿದ್ದ?.ಬ್ಯಾಂಕ್‌ನಲ್ಲಿ ಇಟ್ಟಿದ್ದರೂ ಒಂದು ಕೋಟಿ ಬರುತ್ತಿತ್ತು.ನೀವು ಕೇಳುತ್ತಿರುವುದು 62 ಕೋಟಿ, ಇದೇನಾ ಜನಪರ ಸಿದ್ದರಾಮಯ್ಯ ಅವರೇ?ಅರಿಶಿಣ-ಕುಂಕುಮಕ್ಕೆ 3 ಎಕರೆ ಅಂತಾರೆ, ಆಶ್ಚರ್ಯ ಇದು ಎಂದಿದ್ದಾರೆ.

ಇನ್ನು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ ಕಳ್ಳರು ಯಾವತ್ತಿದ್ದರೂ ಕಳ್ಳರೇ.ಕಬ್ಬು ತಿಂದು ಕೈ ತೊಳೆಯುತ್ತಿದ್ದರು.ಈಗ ಕೈ ತೊಳೆಯಲು ಅವಕಾಶ ಸಿಗಲಿಲ್ಲ, ಅದಕ್ಕೆ ಸಿಕ್ಕಿಹಾಕಿಕೊಂಡಿದ್ದಾರೆ.ಅಧಿಕಾರಿ ಆತ್ಮಹತ್ಯೆ ಮಾಡಿಕೊಳ್ಳದೇ ಇದ್ದಿದ್ದರೆ ಈ ಹಗರಣ ಹೊರ ಬರುತ್ತಿರಲಿಲ್ಲ.ಸಿದ್ದರಾಮಯ್ಯ ಅವರಿಗೆ ಮಂಗನ ಕಾಯಿಲೆ ಬಂದಿದೆ.ತಾನು ಭ್ರಷ್ಟ, ಎಲ್ಲರನ್ನೂ ಭ್ರಷ್ಟಾಚಾರಿಗಳಾಗಿ ಮಾಡಲು ಹೊರಟಿದ್ದಾರೆ.ದಲಿತರು ಅಂದ್ರೆ ಪಾಪದವರು ಅಂತೀರಾ ಅಲ್ವಾ?ಪಾಪದ ಹಣ ತಿಂದಿದ್ದೀರಾ ಅಲ್ವಾ, ನೀವು ಪಾಪಿಗಳು ಅಲ್ವಾ? ಎಂದು ಪ್ರಶ್ನೆ ಮಾಡಿದ್ದಾರೆ.

ಸಭೆ ಬಳಿಕ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಬಿಜೆಪಿ-ಜೆಡಿಎಸ್ ಸಮಾಲೋಚಿಸಿ ಶನಿವಾರದಿಂದ ಮೈಸೂರಿಗೆ ಪಾದಯಾತ್ರೆ ಮಾಡುತ್ತಿದ್ದೇವೆ.ಇಂದು ಸಭೆ ನಡೆಸಿ ಎಲ್ಲರ ಸಹಕಾರ ಪಡೆದಿದ್ದೇವೆ.ಶನಿವಾರ ಬೆಳಗ್ಗೆ 8.30ಕ್ಕೆ ಪಾದಯಾತ್ರೆ ಉದ್ಘಾಟನೆ ಆಗುತ್ತದೆ.ಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಹೆಚ್.ಡಿ. ಕುಮಾರಸ್ವಾಮಿ, ವಿಪಕ್ಷ ನಾಯಕರಾದ ಆರ್‌. ಅಶೋಕ್, ಛಲವಾದಿ ನಾರಾಯಣಸ್ವಾಮಿ ಉಪಸ್ಥಿತಿಯಲ್ಲಿ ಚಾಲನೆ ದೊರಕಲಿದೆ.ಕೆಂಗೇರಿಯ ಕೆಂಪಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪಾದಯಾತ್ರೆ ಆರಂಭವಾಗುತ್ತೆ.ಆಗಸ್ಟ್ 10 ರಂದು ಮುಕ್ತಾಯ ಆಗಲಿದ್ದು, ರಾಷ್ಟ್ರೀಯ ನಾಯಕರು ಪಾಲ್ಗೊಳ್ಳುತ್ತಾರೆ.ಪ್ರತಿನಿತ್ಯ 20 ಕಿ.ಮೀ. ಯಷ್ಟು ಪಾದಯಾತ್ರೆ ನಡೆಯಲಿದೆ.224 ವಿಧಾನಸಭೆ ಕ್ಷೇತ್ರಗಳ ಕಾರ್ಯಕರ್ತರು ಪಾಲ್ಗೊಳ್ಳಬೇಕು.ಮೊದಲ ದಿನ 8 ವಿಧಾನಸಭೆ ಕ್ಷೇತ್ರಗಳ ಕಾರ್ಯಕರ್ತರು ಭಾಗವಹಿಸುತ್ತಾರೆ.ಒಂದೊಂದು ದಿನ ಒಂದೊಂದು ಮೋರ್ಛಾ ಕಾರ್ಯಕರ್ತರು ಭಾಗವಹಿಸುತ್ತಾರೆ. ಬೆಳಗ್ಗಿನಿಂದ ಮಧ್ಯಾಹ್ನ ಒಂದು ತಂಡ, ಮಧ್ಯಾಹ್ನದಿಂದ ಸಂಜೆಯವರೆಗೆ ಮತ್ತೊಂದು ತಂಡ ಭಾಗವಹಿಸುತ್ತದೆ.ಪಾದಯಾತ್ರೆ ಯಶಸ್ವಿಗೆ ಬಿಜೆಪಿ ಮತ್ತು ಜೆಡಿಎಸ್ ನಿಂದ ಸಮನ್ವಯ ತಂಡ ಕೂಡಾ ರಚಿಸುತ್ತೇವೆ ಎಂದಿದ್ದಾರೆ.