ಮನೆ Latest News ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ಹೋರಾಟದ ಫಲಾನುಭವಿ : ಬೆಂಗಳೂರಿನಲ್ಲಿ ಮಾಜಿ ಸಿಎಂ ಮತ್ತು ಸಂಸದ ಬಸವರಾಜ...

ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ಹೋರಾಟದ ಫಲಾನುಭವಿ : ಬೆಂಗಳೂರಿನಲ್ಲಿ ಮಾಜಿ ಸಿಎಂ ಮತ್ತು ಸಂಸದ ಬಸವರಾಜ ಬೊಮ್ಮಾಯಿ‌ ಹೇಳಿಕೆ

0

ಬೆಂಗಳೂರು; ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ಹೋರಾಟದ ಫಲಾನುಭವಿ  ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಮತ್ತು ಸಂಸದ ಬಸವರಾಜ ಬೊಮ್ಮಾಯಿ‌ ಹೇಳಿದ್ದಾರೆ.

ರಾಜ್ಯದಲ್ಲಿ ಒಳ ಮೀಸಲಾತಿ ಜಾರಿ ವಿಚಾರದ ಬಗ್ಗೆ ಮಾತನಾಡಿದ ಅವರು  ಸ್ವಾತಂತ್ರ್ಯ ಹೋರಾಟದಲ್ಲಿ ಎಲ್ಲಾ ವರ್ಗಗಳು ಧುಮುಕಬೇಕು ಎಂಬುದು ಮಹಾತ್ಮ ಗಾಂಧೀಜಿ ಆಶಯವಾಗಿತ್ತು. ಆ ಸಂದರ್ಭದಲ್ಲಿ ಗಾಂಧೀಜಿ ತುಳಿತಕ್ಕೊಳಗಾದ ಸಮುದಾಯದ ಬಗ್ಗೆ ಚಿಂತನೆ ನಡೆದಿತ್ತು. ಪುಣೆ ಫ್ಯಾಕ್ಟ್ ಬಳಿಕ ಸ್ವಾತಂತ್ರ್ಯ ಹೋರಾಟಕ್ಕೆ ಗಂಭೀರತೆ ಬಂತು. ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ಹೋರಾಟದ ಫಲಾನುಭವಿ. ಕಾಂಗ್ರೆಸ್ ಪಕ್ಷ ತಮ್ಮ ರಾಜಕೀಯ ಸ್ಥಾನಮಾನಕ್ಕೆ ಹೆಚ್ಚು ಒತ್ತು ಕೊಟ್ಟರೇ ಹೊರತು ಅಂಬೇಡ್ಕರ್ ಆಶಯಗಳನ್ನು ಜಾರಿ ಮಾಡಲು ಹಿಂಜರಿದರು. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಎಸ್ ಸಿ ಪಟ್ಟಿಗೆ ಸಮುದಾಯಗಳನ್ನು ಸೇರಿಸುತ್ತಾ ಹೋದರು. ಆದರೆ ಅವರಿಗೆ ಮೀಸಲಾತಿ ಹೆಚ್ಚು ಮಾಡುವ ನಿಟ್ಟಿನಲ್ಲಿ ಮನಸ್ಸು ಮಾಡಲೇ ಇಲ್ಲ. ಇದರ ಪರಿಣಾಮವಾಗಿ ಆ ಸಮುದಾಯಗಳಲ್ಲಿ ಅಸಮಾಧಾನ ಮಂಜುಗಟ್ಟಿತ್ತು. ಈ ಎಲ್ಲಾ ಹಿನ್ನೆಲೆಯಲ್ಲಿ ಸಮ್ಮಿಶ್ರ ಸರ್ಕಾರ ಇದ್ದಾಗ ನಾಗ ಮೋಹನ್ ದಾಸ್ ಸಮಿತಿ ಮಾಡಿದರು ಎಂದರು. ಯಡಿಯೂರಪ್ಪ ಸರ್ಕಾರ ಬಂದಾಗ ಅವರ ಒತ್ತಾಸೆಯಿಂದ ನಾವು ವರದಿ ಪಡೆಯಲು ಸಾಧ್ಯವಾಯಿತು .ನಾನು ಸಿಎಂ ಆದಾಗ ಹಲವಾರು ಜನರ ವಿರೋಧ ನಡುವೆಯೂ 15 ರಿಂದ 17, 3 ರಿಂದ 7 ಕ್ಕೆ ಹೆಚ್ಚಳ ಮಾಡಿದೆ. ಆಗ ಬಹಳ ಜನ ನನಗೆ ಜೇನುಗೂಡಿಗೆ ಕೈ ಹಾಕಬೇಡ ಎಂದರು. ಆಗ ಇಂದಿನ ಸಿಎಂ ಸಿದ್ದರಾಮಯ್ಯ ಇದು ಕಾನೂನು ಪ್ರಕಾರ ಇಲ್ಲ ಎಂದು ಊರು ಊರಿಗೆ ಹೇಳಿಕೊಂಡು ಓಡಾಡಿದರು ಎಂದರು.

ಸಿದ್ದರಾಮಯ್ಯ ಸಿಎಂ ಆದ ಮೇಲೆ ಒಳ ಮೀಸಲಾತಿ ಜಾರಿಗೆ ಸಂವಿಧಾನ ತಿದ್ದುಪಡಿ ಮಾಡಬೇಕು ಎಂದು ನಿರ್ಣಯ ಮಾಡಿದರು. ನಾವು ನಿರ್ಧಾರ ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿದೆವು. ಕೇಂದ್ರ ಸರ್ಕಾರ ಇವರ ರೀತಿ ಬೊಗಳೆ ಬಿಟ್ಟುಕೊಂಡು ಓಡಾಡುವುದಿಲ್ಲ. ಎಂಪರಿಕಲ್ ಡಾಟಾ, ಅಂತರ್ ಹಿಂದುಳಿದಿರುವಿಕೆ ಸಮಾನರು ಮತ್ತು ಅಸಮಾನರನ್ನು ಒಂದೇ ಪ್ರವರ್ಗದಲ್ಲಿ ಸೇರಿಸಬಾರದು ಎಂದು ಸುಪ್ರೀಂ ಕೋರ್ಟ್ ತೀರ್ಪು ಬಂತು. ಸಿದ್ದರಾಮಯ್ಯ ಸರ್ಕಾರ ನಾಗಮೋಹನ್ ದಾಸ್ ಮತ್ತು ಸದಾಶಿವ ಆಯೋಗ, ಮಾಧುಸ್ವಾಮಿ ವರದಿಯನ್ನು ಗಾಳಿಗೆ ತೂರಿದರು. ರಾಜಕೀಯ ಪಂಚಾಯತಿ ಮಾಡಿ 6-6-5 ಮಾಡಿ ಕೈಬಿಟ್ಟರು. ಇವರೇ ಹೇಳಿಕೊಂಡಂತೆ ಇದು ರಾಜಕೀಯ ನಿರ್ಣಯ ಆಗಿರುವಾಗ ಎಂಪರಿಕಲ್ ಡಾಟಾಕ್ಕೆ ಏನು ಗೌರವ ಉಳಿಯಿತು?. ತಮ್ಮ ಮತಬ್ಯಾಂಕ್ ಸುರಕ್ಷತೆಗೆ ಕೈಗೊಂಡ ನಿರ್ಣಯದಿಂದ ಲಾಭ ಏನಾಯಿತು?. ಸಿದ್ದರಾಮಯ್ಯ ಈಗ ಸಾಮಾಜಿಕ ಅನ್ಯಾಯ ಮಾಡಿ ಗೊಂದಲ ಸೃಷ್ಟಿಸಿದ್ದಾರೆ. ಸಾಮಾಜಿಕ ನ್ಯಾಯದ ಜೊತೆಗೆ ಕಾಮನ್ ಸೆನ್ಸ್ ಕೂಡಾ ಇರಬೇಕಾಗುತ್ತದೆ. ನಿಮಗೆ ನ್ಯಾಯ ಕೊಡಲು ಆಗಲ್ಲ, ನಾವು ರಾಜಕೀಯ ನಿರ್ಣಯ ಮಾಡಿದ್ದೇವೆ, ನೀವು ಕೋರ್ಟ್ ಗೆ ಹೋಗಿ ಎಂಬ ಮಾತು ಸರ್ಕಾರದ ವಲಯದಲ್ಲಿದೆ. ಸಿದ್ದರಾಮಯ್ಯನವರೇ ಎರಡು ಬಾರಿ ಸಿಎಂ ಆಗಿ ಕೊನೆಯ ಹಂತದಲ್ಲಿ ನ್ಯಾಯ ಕೊಡುವ ಸ್ಥಾನದಲ್ಲಿದ್ದೀರಿ. ರಾಜಕೀಯ ಇಚ್ಛಾಶಕ್ತಿ ಪ್ರದರ್ಶನ ಮಾಡಿ. ಇಲ್ಲದಿದ್ದರೆ ಜಗಳ ಹಚ್ಚಿ ಹೋಗುವ ಅಪಖ್ಯಾತಿಗೆ ಒಳಗಾಗುತ್ತೀರಿ. ನಾವು ನಿರ್ಧಾರ ಮಾಡಿದಾಗ ವಿರೋಧ ಮಾಡಿದ ಸಿದ್ದರಾಮಯ್ಯ ಈಗ ಕ್ಷಮೆ ಕೇಳುತ್ತಾರಾ?. 17% ಗೆ ಇನ್ನೂ 1% ಹೆಚ್ಚು ಮಾಡಿ ನ್ಯಾಯ ಕೊಡುತ್ತಾರಾ?.ಇದನ್ನು‌ ಸರಿಪಡಿಸಬೇಕು ಎಂದು ನಾವು ಸಿಎಂ ಮೇಲೆ ಒತ್ತಾಯ ಮಾಡುತ್ತಿದ್ದೇವೆ. ನಾಗಮೋಹನ್ ದಾಸ್ ಸಮಿತಿ ವರದಿ ಒಪ್ಪಿಕೊಳ್ಳಬೇಕು. ಅಲೆಮಾರಿ ಸಮುದಾಯಕ್ಕೆ ಮೀಸಲಾತಿ ಕೊಡಬೇಕು. ಎಕೆ, ಎಡಿ, ಎಎಗೆ ಸ್ಪಷ್ಟ ನ್ಯಾಯ ಕೊಡಬೇಕು.ಎಸ್ ಸಿಇಪಿ-ಟಿಎಸ್ಪಿ ಯಲ್ಲಿ ಅನ್ಯಾಯ ಮಾಡಿದಂತೆ ಇಲ್ಲೂ ಮಾಡಬೇಡಿ ಎಂದರು.

ಸರ್ಕಾರದಲ್ಲಿ ಶಿಕ್ಷಣ, ನೇಮಕಾತಿ, ಮುಂಬಡ್ತಿ ಹಂತ ಹಂತವಾಗಿ ಆಗಬೇಕು. ಸರ್ಕಾರಕ್ಕೆ ತಪ್ಪನ್ನು ತಿದ್ದಿಕೊಳ್ಳಲು ಅವಕಾಶ ನೀಡುತ್ತೇವೆ. ಸಮುದಾಯಗಳಿಗೆ ಅನ್ಯಾಯ ಆಗಲು ಬಿಡುವುದಿಲ್ಲ. ಸರ್ಕಾರ ತಿದ್ದಿಕೊಳ್ಳದಿದ್ದರೆ ಕಾನೂನು ಹೋರಾಟ ಮಾಡಲಿದ್ದೇವೆ‌.