ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ ನೀಡಿದ್ದಾರೆ. ಬಳಿಕ ಮಾತನಾಡಿದ ಅವರು ದೀಪಾವಳಿಯ ಸಂದರ್ಭದಲ್ಲಿ ನಮ್ಮ ಪಕ್ಷದ ಮುಖಂಡರು ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಹಬ್ಬದ ಶುಭಾಶಯ ಸಲ್ಲಿಸಿದ್ದೇವೆ. ಗಣೇಶ ಹಬ್ಬದ ಸಂದರ್ಭದಲ್ಲಿ ಅವರನ್ನು ಭೇಟಿ ಮಾಡಲು ಆಗಿರಲಿಲ್ಲ. ರಾಜ್ಯದ ರಾಜಕೀಯ ಪರಿಸ್ಥಿತಿ ಬಗ್ಗೆಯೂ ಚರ್ಚೆ ಮಾಡಿದ್ದೇವೆ. ಸಮನ್ವಯ ಸಮಿತಿ ಬಗ್ಗೆ ಅವರ ಸಲಹೆ ಕೇಳಿದ್ದೇನೆ. ಜಿಬಿಎ ಚುನಾವಣೆ ದೃಷ್ಟಿಯಿಂದ ಬೆಂಗಳೂರಿಗೆ ಸೀಮಿತವಾಗಿ ಒಂದು, ರಾಜ್ಯಕ್ಕೆ ಒಂದು ಸಮನ್ವಯ ಸಮಿತಿ ಮಾಡುವ ಸಲಹೆ ನೀಡಿದ್ದಾರೆ ಎಂದರು.
ವಾರದಲ್ಲಿ ಅವರ ಹೆಸರುಗಳನ್ನು ಕಳಿಸುವುದಾಗಿ ಹೇಳಿದ್ದಾರೆ. ನಂತರ ನಮ್ಮ ಪಕ್ಷದಲ್ಲಿ ಚರ್ಚೆ ಮಾಡಿ ಸಮಿತಿ ಘೋಷಣೆ ಮಾಡುತ್ತೇವೆ. ದಿನೇ ದಿನ ರಾಜ್ಯದ ಪರಿಸ್ಥಿತಿ ಹದಗೆಡುತ್ತಿದೆ. ಸರ್ಕಾರದ ಸಚಿವರು ಅಹಂಕಾರದಿಂದ ಮೆರೆಯುತ್ತಿದ್ದಾರೆ. ಕಿರಣ್ ಮಜುಂದಾರ್ ಶಾ, ಮೋಹನ್ ದಾಸ್ ಪೈ ಅವರಂತಹ ಹಿರಿಯರು ಸಲಹೆ ಕೊಟ್ಟರೆ ಸಚಿವರು ಅವರನ್ನು ನಿಂದನೆ ಮಾಡುತ್ತಿದ್ದಾರೆ.ಯಡಿಯೂರಪ್ಪ ಸಿಎಂ ಆಗಿದ್ದಾಗ ಟೀಕೆ ಬಂದಾಗ ಮೋಹನ್ ದಾಸ್ ಪೈ ಯವರನ್ನು ಮನೆಗೆ ಕರೆಸಿ ಚಹಾ ಕುಡಿಸಿ ಅವರ ಸಲಹೆಯನ್ನು ಯಡಿಯೂರಪ್ಪ ಪಡೆದಿದ್ದರು ಬಿ.ವೈ. ರಾಘವೇಂದ್ರ ಬಿಹಾರ ಚುನಾವಣೆಗೆ ಹಣ ಕೊಡುತ್ತಿದ್ದಾರೆ ಸಚಿವರು ದಾಖಲೆ ಕೊಡಿ, ದಾಖಲೆ ಕೊಡಿ ಎಂದರು.ಯಾಕೆ ಸ್ವಾಮಿ ವಾಲ್ಮೀಕಿ ನಿಗಮದ ಹಗರಣ ಮರೆತು ಹೋಯ್ತಾ? ಎಂದು ಪ್ರಶ್ನಿಸಿದರು.
ಗುತ್ತಿಗೆದಾರರು ಕಮಿಷನ್ ಆರೋಪ ಮಾಡಿದರೆ ಡಿ.ಕೆ. ಶಿವಕುಮಾರ್ ಗುತ್ತಿಗೆದಾರರು ದೂರು ಕೊಡಲಿ ಎನ್ನುತ್ತಿದ್ದಾರೆ. ಮರಳು ಮಾಫಿಯಾದ ಬಗ್ಗೆ ಸ್ವತಃ ಬಸವರಾಜ ರಾಯರೆಡ್ಡಿಯವರೇ ಕೇಳುತ್ತಿದ್ದಾರೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಹೊರರಾಜ್ಯದ ಚುನಾವಣೆಗೆ ಹೋದಾಗ ಗ್ಯಾರಂಟಿ ಬಗ್ಗೆ ಹೇಳಿ ತಮ್ಮ ಹೆಗಲು ತಟ್ಟಿಕೊಳ್ಳುತ್ತಿದ್ದಾರೆ.ಕರ್ನಾಟಕವನ್ನು ಎಟಿಎಂ ಮಾಡಿಕೊಂಡ ಸಾಕಷ್ಟು ಉದಾಹರಣೆ ಇದೆ ಎಂದು ಹೇಳಿದರು.
ಅನಾವಶ್ಯಕ ಆರ್ ಎಸ್ ಎಸ್ ಟೀಕೆ ಸರಿಯಲ್ಲ. ಪ್ರಿಯಾಂಕ್ ಖರ್ಗೆಯವರಿಗೆ ಯಾಕೆ ದುರ್ಬುದ್ದಿ ಬಂದಿದೆಯೋ ಗೊತ್ತಿಲ್ಲ. ಪ್ರಚಾರ ಗಿಟ್ಟಿಸಿಕೊಳ್ಳುವ ಯತ್ನವೋ, ಸಿಎಂ ಕುರ್ಚಿಗೆ ಟವಲ್ ಹಾಕುವ ಯತ್ನವೋ ಗೊತ್ತಿಲ್ಲ.ಇವತ್ತು ಅವರು ಏಕಾಂಗಿ ಆಗಿದ್ದಾರೆ. ನ. 2 ರಂದು ಚಿತ್ತಾಪುರದಲ್ಲಿ ಪಥಸಂಚಲನ ಆಗುತ್ತದೆ. ಅನೇಕ ಅಗ್ನಿ ಪರೀಕ್ಷೆ ಗಳನ್ನು ಆರ್ ಎಸ್ ಎಸ್ ಎದುರಿಸಿ ಮುಂದೆ ಸಾಗಿದೆ. ಆರ್ ಎಸ್ ಎಸ್ ಸಮಾಜ ಮುಖಿ ಕಾರ್ಯಗಳನ್ನು ಮಾಡುತ್ತಾ ದಾಪುಗಾಲು ಇಡುತ್ತಾ ಹೋಗುತ್ತದೆ.ಪ್ರಿಯಾಂಕ್ ಖರ್ಗೆ ಕೆಲಸಕ್ಕೆ ಬಾರದ ಮಾತು ಬಿಟ್ಟು ಕಲ್ಬುರ್ಗಿ ಜಿಲ್ಲೆ ಅಭಿವೃದ್ಧಿ ಆಗದೇ ಇರಲು ಯಾರು ಹೊಣೆಗಾರರು, ಶೈಕ್ಷಣಿಕವಾಗಿ ಹಿಂದುಳಿಯಲು ಏನು ಕಾರಣ ಎಂಬ ಬಗ್ಗೆ ಸ್ವಲ್ಪ ಬೆಳಕು ಚೆಲ್ಲಲಿ ಎಂದು ತಿಳಿಸಿದರು.
ಸಂಸದ ತೇಜಸ್ವಿ ಸೂರ್ಯ ಅಮಾವಾಸ್ಯೆ ಎಂಬ ಸಿಎಂ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ ತೇಜಸ್ವಿ ಸೂರ್ಯ ಸಂಸದರು.ಚುನಾಯಿತ ಪ್ರತಿನಿಧಿ ಬಗ್ಗೆ ಅವಹೇಳನಕಾರಿ ಮಾತು ಗೌರವ ತರುವುದಿಲ್ಲ. ಕೇಂದ್ರ ಸರ್ಕಾರ ಎಂದಿಗೂ ರಾಜ್ಯಕ್ಕೆ ಅನ್ಯಾಯ ಮಾಡಿಲ್ಲ. 2.5 ವರ್ಷದಲ್ಲಿ ರಾಜ್ಯ ಸರ್ಕಾದ ಹೊಸ ಯೋಜನೆ ಯಾವುದು ಅನುಷ್ಠಾನವಾಗಿದೆ?. ಕರ್ನಾಟಕ ರಾಹುಲ್ ಗಾಂಧಿಗೆ ಎಟಿಎಂ ಆಗಿದೆ. ಅದೇ ಕಾಂಗ್ರೆಸ್ ಸಾಧನೆ ಅಷ್ಟೇ . ದಿನ ಬೆಳಗಾದರೆ ಹೊಸ ನಾಟಕ ಮಾಡುತ್ತಾರೆ. ಕಾಂತರಾಜ್ ವರದಿ, ಜಾತಿ ಜನಗಣತಿ, ಆರ್ ಎಸ್ ಎಸ್ ಟೀಕೆ ಎಲ್ಲವೂ ತಮ್ಮ ಹುಳುಕು ಮುಚ್ಚಿಕೊಳ್ಳಲು. ಸಿಎಂಗೆ 18 ಬಜೆಟ್ ಮಂಡನೆ ಎಂದು ಜಂಭ.ಹೊಸ ಯೋಜನೆ ಏನು ತಂದಿದ್ದೀರಿ?. ಹಣ ಕೊಡಿ ಎಂದು ದೇವಸ್ಥಾನಕ್ಕೆ ಪತ್ರ ಬರೆದಿದ್ದಾರೆ. ಗ್ಯಾರಂಟಿಯಿಂದ ತೆಲಂಗಾಣದಲ್ಲಿ ಹಣಕಾಸು ಪರಿಸ್ಥಿತಿ ಹದಗೆಟ್ಟಿದೆ. ರಾಜ್ಯದಲ್ಲಿ ವೇತನ ಕೊಡದ ಕಾರಣ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. 400 ಕೋಟಿ ಅನ್ಯಾಯ ಆಗುತ್ತಿದೆ ಎಂದು ರಾಯರೆಡ್ಡಿ ಪತ್ರ ಬರೆದಿದ್ದಾರೆ. ಕೇಂದ್ರವನ್ನು ದೂರುವ ಬದಲು ನೀವೇನು ಕಡಿದು ಕಟ್ಟೆ ಹಾಕಿದ್ದೀರಿ ಹೇಳಿ. ಕಲ್ಯಾಣ ಕರ್ನಾಟಕಕ್ಕೆ ಒಂದು ರೂ ಕೂಡಾ ಪರಿಹಾರ ಕೊಟ್ಟಿಲ್ಲ. ಸಿಎಂ ಅವರೇ ನಿಮ್ಮ ಸಾಧನೆ ಬಗ್ಗೆ ಮೊದಲು ಮಾತಾಡಿ ಎಂದರು.
ಯಡಿಯೂರಪ್ಪ ಮತ್ತು ಅನಂತಕುಮಾರ್ ಮಾತುಕತೆ ವೀಡಿಯೋ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಪ್ರಸ್ತಾಪ ವಿಚಾರದ ಬಗ್ಗೆ ಮಾತನಾಡಿ ರಾಜ್ಯ ಸರ್ಕಾರದ್ದೇ ಕೊಳೆತು ನಾರುತ್ತಿದೆ. ಇವರ ಹುಳುಕನ್ನು ಮುಚ್ಚಿಕೊಳ್ಳಲು ಇದೆಲ್ಲಾ ಮಾತಾಡುತ್ತಾರೆ ಅಷ್ಟೇ ಅಂದರು.











