ಬೆಂಗಳೂರು; ಬಿಜೆಪಿ ಪ್ರತ್ಯೇಕ ತಂಡದಿಂದ ಮೊದಲ ಹಂತದ ಪ್ರತ್ಯೇಕ ಹೋರಾಟ ಘೋಷಣೆಯಾಗಿದೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಜನಜಾಗೃತಿ ಅಭಿಯಾನ ಘೋಷಣೆ ಮಾಡಲಾಗಿದೆ. ಅಭಿಯಾನದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಲಿಂಬಾವಳಿ, ಪ್ರತಾಪಸಿಂಹ, ರಮೇಶ್ ಜಾರಕಿಹೊಳಿ, ಜಿ.ಎಂ. ಸಿದ್ದೇಶ್ವರ್, ಅಣ್ಣಾ ಸಾಹೇಬ್ ಜೊಲ್ಲೆ, ಬಿ.ಪಿ. ಹರೀಶ್, ಕುಮಾರ್ ಬಂಗಾರಪ್ಪ ಪಾಲ್ಗೊಳ್ಳಲಿದ್ದಾರೆ. ನವೆಂಬರ್ 25 ರಿಂದ ಡಿಸೆಂಬರ್ 25 ರವರೆಗೆ ಒಂದು ತಿಂಗಳ ಕಾಲ ಅಭಿಯಾನ ನಡೆಯಲಿದೆ. ಬೀದರ್ ನಿಂದ ಅಭಿಯಾನ ಆರಂಭವಾಗಲಿದೆ. ಸದ್ಯ ಬೀದರ್, ಕಲಬುರಗಿ,ಯಾದಗಿರಿ, ಬಾಗಲಕೋಟೆ, ವಿಜಯಪುರ ಮತ್ತು ಬೆಳಗಾವಿ ಜಿಲ್ಲೆಯವರೆಗೆ ಸಿದ್ದವಾಗಿರುವ ರೂಟ್ ಮ್ಯಾಪ್ ಸಿದ್ಧವಾಗಿದೆ.ಬೆಳಗಾವಿ ಜಿಲ್ಲೆಯಲ್ಲಿ ಅಭಿಯಾನದ ಬಳಿಕ ಮುಂದಿನ ರೂಟ್ ಮ್ಯಾಪ್ ಪ್ರಕಟವಾಗಲಿದೆ.
ಜಿಲ್ಲೆಗಳಲ್ಲಿ ಸಭೆ, ಸಮಾವೇಶಗಳ ಮೂಲಕ ಅಭಿಯಾನ ನಡೆಯಲಿದೆ. ಅಭಿಯಾನದ ಹಿನ್ನೆಲೆಯಲ್ಲಿ ಪ್ರತ್ಯೇಕ ವಾರ್ ರೂಂ ಸ್ಥಾಪನೆ ಮಾಡಲಾಗಿದೆ.ಇನ್ನು ಸಭೆಯ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಕ್ಪ್ ನ್ಯಾಯಾಧಿಕರಣ ರದ್ದಾಗಬೇಕು. ನ್ಯಾಯಾಧಿಕರಣ ದೊಡ್ಡ ಶಾಪ ಆಗಿಬಿಟ್ಟಿದೆ. ಅದರಲ್ಲಿ ಒಂದೇ ಕೋಮಿನವರು ಇರುತ್ತಾರೆ. ಕರ್ನಾಟಕದಲ್ಲಿ 6 ಲಕ್ಷದ 70 ಸಾವಿರ ಎಕರೆ ವಕ್ಪ್ ಆಸ್ತಿ ಎಂದು ಸ್ವಾಧೀನ ಮಾಡಲು ಹೊರಟಿದ್ದಾರೆ. ಕರ್ನಾಟಕದಲ್ಲಿ ಜನ ಜಾಗೃತಿ ಮಾಡುವುದು ಅವಶ್ಯಕತೆ ಇದೆ. ಅಭಿಯಾನ ಮಾಡಿ ಜೆಪಿಸಿಗೆ ಪೂರ್ಣ ವರದಿ ಕೊಡುತ್ತೇವೆ. ವಕ್ಫ್ ಕಾಯ್ದೆ ರದ್ದಾಗಿ ಪೂರ್ಣ ರಾಷ್ಟ್ರೀಕರಣ ಆಗಬೇಕು. ಎಷ್ಟೋ ಮಾಹಿತಿಗಳು ಇನ್ನೂ ಕೇಂದ್ರ ಸರ್ಕಾರ, ಜೆಪಿಸಿಗೆ ಇಲ್ಲ. ಜಮೀರ್ ಅಹಮದ್ ಸೈತಾನರಿಗೆ ಹೋಲಿಸಿ ಪ್ರಚೋದನೆ ಮಾಡಿದ್ದಾರೆ. ಜಮೀರ್ ಅಹಮದ್ ಧಮಕಿ ಹಾಕಿದ್ದಕ್ಕೆ ಅಧಿಕಾರಿಗಳೂ ಬೆಚ್ಚಿ ಬಿದ್ದಿದ್ದಾರೆ. ಮುಸ್ಲಿಂ ರೈತರು ಕೂಡಾ ನಮ್ಮ ಅಭಿಯಾನದ ಪರವಾಗಿಯೇ ಇದ್ದಾರೆ. ಬಿಜೆಪಿ ಕಾಲದಲ್ಲಿ ನೋಟಿಸ್ ಕೊಟ್ಟಿದ್ದರೂ ಅದನ್ನು ನಾವು ಸಮರ್ಥನೆ ಮಾಡುವುದಿಲ್ಲ. ನಾವು ನಮ್ಮ ಸಮುದಾಯದ ರಕ್ಷಣೆ ಮಾಡಬೇಕು.ನೋಟೀಸ್ ಕೊಟ್ಟಿದ್ದು ಅಷ್ಟೇ ಅಲ್ಲ, ನೋಟೀಸ್ ಕೊಡದೇ ವಕ್ಫ್ ಎಂದು ಪಹಣಿಯಲ್ಲಿ ಎಂಟ್ರಿ ಮಾಡಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಅರವಿಂದ ಲಿಂಬಾವಳಿ ವಕ್ಪ್ ಸಮಸ್ಯೆಗಳು ಅಗಾಧವಾಗಿ ಎಲ್ಲರ ಗಮನಕ್ಕೆ ಬಂದಿದೆ.ಬಸನಗೌಡ ಪಾಟೀಲ್ ಯತ್ನಾಳ್ ವಿಜಯಪುರದಲ್ಲಿ ಈ ಹೋರಾಟ ಪ್ರಾರಂಭ ಮಾಡಿದರು. ಧರಣಿ ಸತ್ಯಾಗ್ರಹ ಕುಳಿತ ಪರಿಣಾಮ ವಕ್ಫ್ ಕಾಯ್ದೆ ತಿದ್ದುಪಡಿ ಜೆಪಿಸಿ ಭೇಟಿ ಕೊಟ್ಟು ಮಾಹಿತಿ ಪಡೆಯಿತು. ನಂತರ ವಿಜಯಪುರದ ಹೋರಾಟವನ್ನು ಯತ್ನಾಳ್ ತಾತ್ಕಾಲಿಕವಾಗಿ ನಿಲ್ಲಿಸಿದ್ದಾರೆ. ಆನಂತರವೂ ವಕ್ಪ್ ವಿಚಾರವಾಗಿ ದೂರು ಸಲ್ಲಿಸುತ್ತಿದ್ದಾರೆ.ನವೆಂಬರ್ ೨೫ ರಿಂದ ಡಿಸೆಂಬರ್ ೨೫ ರವರೆಗೆ ಬಿಜೆಪಿ ವತಿಯಿಂದ ಜನಜಾಗೃತಿ ಅಭಿಯಾನ ಮಾಡುತ್ತಿದ್ದೇವೆ ಎಂದರು.
ಮಾಜಿ ಸಚಿವ ಕುಮಾರ್ ಬಂಗಾರಪ್ಪ ಮಾತನಾಡಿ ಯಾರ್ಯಾರು ರಾಜಕಾರಣಿಗಳು ಎಷ್ಟು ದಶಕಗಳಿಂದ ಶಾಮೀಲಾಗಿದ್ದಾರೆ ಎಂಬುದು ಹೊರಗೆ ಬರುತ್ತದೆ. ದಾನಿಗಳು ಕೊಟ್ಟಿರುವ ಉದ್ದೇಶ ಬಿಟ್ಟು ಎಲ್ಲಾ ಅವ್ಯವಹಾರಗಳೂ ಅಲ್ಲಿ ಆಗುತ್ತಿವೆ. ಈ ರೀತಿ ಎಲ್ಲೆಲ್ಲಿ ಆಗಿದೆ ಅದನ್ನು ವಾಪಸ್ ಪಡೆದುಕೊಳ್ಳಲು ಮಾಣಿಪ್ಪಾಡಿ ಸಮಿತಿ ವರದಿ ನೀಡಿತ್ತು. ನೋಟಿಸ್ ಯಾವಾಗ ಬೇಕಾದರೂ ಬರಬಹುದು ಎಂದರು.