ಬೆಂಗಳೂರು; ನಿಮ್ಮ ಕಾಲಿಗೆ ಬೀಳುತ್ತೇವೆ, ಕೈ ಮುಗಿಯುತ್ತೇವೆ ಕ್ಷಮಿಸಿ ಬಿಡಿ ಅನ್ನೋದು ಸಿಎಂ ಸಿದ್ದರಾಮಯ್ಯ ಅವರ ಹೊಸ ಸ್ಲೋಗನ್ ಎಂದು ಸಿಎಂ ಸಿದ್ದರಾಮಯ್ಯ ಅವರು ಪ್ರತಿಪಕ್ಷ ನಾಯಕ ಆರ್.ಅಶೋಕ ಅವರು ಲೇವಡಿ ಮಾಡಿದ್ದಾರೆ.
ರಾಜ್ಯ ಸರ್ಕಾರದ ಬಸ್ ದರ ಏರಿಕೆ ಖಂಡಿಸಿ ಬಿಜೆಪಿ ವತಿಯಿಂದ ಮೆಜೆಸ್ಟಿಕ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾರಿಗೆ ಬಸ್ ಟಿಕೆಟ್ ದರವನ್ನು ಶೇಕಡಾ 15 ರಷ್ಟು ಏರಿಕೆ ಮಾಡಿದ್ದನ್ನು ಖಂಡಿಸಿ ಇಂದು ಬಿಜೆಪಿ ಪ್ರತಿಭಟನೆ ನಡೆಸಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ವಿಧಾನಸಭೆ ವಿಪಕ್ಷ ನಾಯಕ ಆರ್ ಅಶೋಕ್ ಸಿದ್ದರಾಮಯ್ಯ ಅವರ ಸರ್ಕಾರ ಇದುವೆರಗೂ ಏರಿಕೆ ಮಾಡದಷ್ಟು ಪ್ರಮಾಣದಲ್ಲಿ ಸಾರಿಗ್ ಬಸ್ ದರವನ್ನು ಏರಿಕೆ ಮಾಡಿದೆ. 15 ಶೇಕಡಾ ಏರಿಕೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಾರೆಲ್ಲಾ ಕೆಎಸ್ ಆರ್ ಟಿಸಿ ಬಸ್ ಗಳಲ್ಲಿ ಪ್ರಯಾಣಿಸ್ತಾರೆ ಅವರಿಗೆಲ್ಲಾ ಟಿಕೆಟ್ ದರ ಇನ್ನೂರು ಮುನ್ನೂರು ರೂಪಾಯಿ ಜಾಸ್ತಿಯಾಗಿದೆ. ಅವರಿಗೆಲ್ಲಾ ಹೂಗುಚ್ಛ ಕೊಟ್ಟು ಕ್ಷಮಿಸಿಬಿಡಿ. ನೀವು ನನ್ನನ್ನು ನಂಬಿ ವೋಟ್ ಮಾಡಿದ್ರಿ. ನಾನು ಯಾವುದೇ ಏರಿಕೆಯನ್ನು ಮಾಡಲ್ಲ ಎಂದು ಚುನಾವಣೆಗೂ ಮುಂಚೆ ಮಾತು ಕೊಟ್ಟಿದ್ದೆ. ಮಾತಿಗೆ ದ್ರೋಹ ಮಾಡಿದ್ದೇನೆ. ಹಾಗಾಗಿ ನನ್ನನ್ನು ಕ್ಷಮಿಸಿ ಬಿಡಿ. ಸಾರಿಗೆ ಬಸ್ ಗಳ ಟಿಕೆಟ್ ದರ ಮಾತ್ರ ಅಲ್ಲ. ಮುಂದೆ ಹಾಲಿನ ದರವನ್ನೂ ಏರಿಕೆ ಮಾಡುತ್ತೇವೆ. ನೀರಿನ ದರವನ್ನು ಏರಿಕೆ ಮಾಡುತ್ತೇವೆ. ಹಾಗಾಗಿ ಹೊಸ ವರ್ಷ 2025 ನಿಮಗೆ ಹರುಷ ತರಲಿ, ಸಂತೋಷ ತರಲಿ. ಎಲ್ಲಾ ವಸ್ತುಗಳ ಬೆಲೆಯನ್ನು ಗಗನಕ್ಕೆ ಮುಟ್ಟಿಸುವಂತಹ ಒಂದು ಶಪಥವನ್ನು ನಾನು ಮಾಡಿದ್ದೇನೆ ಎಂದು ಸಿದ್ದರಾಮಯ್ಯ ಪರವಾಗಿ ನಾನು ಹೇಳುತ್ತಿದ್ದೇನೆ ಎಂದು ಅವರು, ಪ್ರಯಾಣಿಕರು ಹಿಡಿ ಶಾಪ ಹಾಕುತ್ತಿದ್ದಾರೆ. ಪತ್ನಿಗೆ ಉಚಿತ ಟಿಕೆಟ್ ನೀಡಿ ಪತಿಗೆ ಡಬಲ್ ಚಾರ್ಜ್ ಮಾಡಿದರೆ ನಮ್ಮ ಮನೆ ದುಡ್ಡೇ ಅಲ್ವಾ ಖರ್ಚಾಗೋದು ಅಂತಾ ಜನ ಪ್ರಶ್ನೆ ಮಾಡುತ್ತಿದ್ದಾರೆ. ಅಲ್ಲದೇ ಕ್ಷಮಿಸಿ ಬಿಡಿ. 2025ರಲ್ಲಿ ಎಲ್ಲಾ ತೆರಿಗೆಗಳನ್ನು ಜಾಸ್ತಿ ಮಾಡುತ್ತೇವೆ. ನಿಮ್ಮ ಕಾಲಿಗೆ ಬೀಳುತ್ತೇವೆ. ಕೈ ಮುಗಿಯುತ್ತೇವೆ ಕ್ಷಮಿಸಿ ಬಿಡಿ ಅನ್ನೋದು ಸಿಎಂ ಸಿದ್ದರಾಮಯ್ಯ ಅವರ ಹೊಸ ಸ್ಲೋಗನ್ ಎಂದು ಲೇವಡಿ ಮಾಡಿದ ಅವರು, ಮುಖ್ಯಮಂತ್ರಿಗಳ ಪರವಾಗಿ ನಾನು ಕ್ಷಮೆ ಕೇಳುತ್ತೇನೆ ಎಂದರು.
ಸದ್ಯ ಆಡಳಿತದಲ್ಲಿರುವ ಸರ್ಕಾರ ಚುನಾವಣೆಗೂ ಮುನ್ನ ತನ್ನ ಪ್ರಣಾಳಿಕೆಯಲ್ಲಿ ನಾವು ಐದು ಗ್ಯಾರಂಟಿಗಳನ್ನು ಕೊಡುತ್ತೇವೆ. ಬಡವರನ್ನು ಮೇಲೆತ್ತುವ ಕೆಲಸ ಮಾಡ್ತೀವಿ ಎಂದು ಹೇಳಿತ್ತು. ಬಡವರಿಗೆ ಈ ಹಿಂದೆ ಇದ್ದ ಬಿಜೆಪಿ ಸರ್ಕಾರ ಯಾವುದನ್ನೂ ಕೂಡ ಉಚಿತವಾಗಿ ಕೊಟ್ಟಿರಲಿಲ್ಲ. ಆದರೆ ಈ ಸರ್ಕಾರ ಚುನಾವಣೆಗೂ ಮುನ್ನ ಯಾವುದೇ ಬೆಲೆ ಏರಿಕೆ ಇಲ್ಲದೇ ನಿಮಗೆ ಎಲ್ಲವನ್ನು ಉಚಿತವಾಗಿ ಕೊಡುತ್ತೇವೆ ಎಂದು ಹೇಳಿತ್ತು. ಪೆಟ್ರೋಲ್, ಡಿಸೇಲ್ ದರ ಏರಿಕೆಯಾಯಿತು. ಮಕ್ಕಳು ಕುಡಿಯುವ ಹಾಲಿಗೂ ಕಲ್ಲು ಹಾಕಿದರು. ಹಾಲಿನಲ್ಲಿ ಕಲ್ಲು ಹಾಕಿದ ದುರುಳರು. ಮದ್ಯದ ದರ ಕೂಡ 50 ರೂಪಾಯಿ ಏರಿಕೆ ಮಾಡಿದರು. ಸ್ಟ್ಯಾಂಪ್ ಪೇಪರ್ ದರ, ಮನೆ ತೆರಿಗೆ, ವಿದ್ಯುತ್ ದರ ಏರಿಕೆ ಮಾಡಿದರು. ಮತ್ತೆ ಹಾಲಿನ ದರ ಏರಿಕೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಮಾಧ್ಯಮದವರು ಕೂಗಾಡಿದರೂ ನಾನು ನೀರಿನ ತೆರಿಗೆ ಜಾಸ್ತಿ ಮಾಡುತ್ತೇನೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದ್ದಾರೆ. ಯಾವುದೋ ಮಂತ್ರಿ ನದಿ ನೀರಿಗೂ ಟ್ಯಾಕ್ಸ್ ಹಾಕ್ತೀನಿ ಎಂದು ಹೇಳಿಕೆ ಕೊಟ್ಟಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಪ್ರತೀ ದಿನ ತೆರಿಗೆ ತೆರಿಗೆ ಎಂಬಂತಾಗಿದೆ. ಹೊಸ ವರುಷದ ಗಿಫ್ಟ್ ಗಾಗಿ ಕರ್ನಾಟಕದ ಜನ ಕಾಯ್ತಾ ಇರ್ತಾರೆ. ಮೋದಿ ರೈತರಿಗೆ ಹೊಸ ವರ್ಷಕ್ಕೆ ಗಿಫ್ಟ್ ಕೊಟ್ಟಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಕೂಡ ಕರ್ನಾಟಕದ ಜನತೆಗೆ ಗಿಫ್ಟ್ ಕೊಟ್ಟಿದ್ದಾರೆ. ಆ ಗಿಫ್ಟ್ ಅಂದರೆ ಅದು ಬಸ್ ದರ ಏರಿಕೆ ಮಾಡಿರುವುದು. ಇದು ಬಡವರಿಗೆ ಕೊಟ್ಟಿರುವ ಉಡುಗೊರೆ. ಹಾಗಾಗಿ ಸಿಎಂ ಸಿದ್ದರಾಮಯ್ಯ ಅವರ ಪರವಾಗಿ ಪುರುಷ ಪ್ರಯಾಣಿಕರಿಗೆ ಗುಲಾಬಿ ಹೂ ಕೊಟ್ಟು ಕ್ಷಮೆ ಕೋರುತ್ತಿದ್ದೇವೆ ಎಂದು ವ್ಯಂಗ್ಯ ಮಾಡಿದರು.
ಇದೇ ವೇಳೆ ಹಿಂದಿನ ಬಿಜೆಪಿ ಸರ್ಕಾರ ಸಂಬಳವನ್ನು ಏರಿಕೆ ಮಾಡಿದೆ. ಆದರೆ ಮೂವತ್ತೆಂಟು ತಿಂಗಳ ಅರಿಯರ್ಸ್ ಅನ್ನು ಕೊಟ್ಟಿಲ್ಲ. ಅದೇ ಎರಡೂವರೆ ಮೂರು ಸಾವಿರ ಕೋಟಿಯಷ್ಟು ಉಳಿದುಕೊಂಡಿದೆ. ಐದು ಸಾವಿರ ಒಂಬೈನೂರು ಸಾವಿರ ಕೋಟಿಯಷ್ಟು ಸಾಲವನ್ನು ಇಟ್ಟು ಹೋಗಿದ್ದಾರೆ. ಆ ಸಾಲನ್ನು ತೀರಿಸಲು ಬಸ್ ದರ ಏರಿಕೆ ಮಾಡಿದ್ದೇವೆ ಎಂಬ ರಾಮಲಿಂಗಾ ರೆಡ್ಡಿ ಮಾಧ್ಯಮ ಪ್ರಕಟಣೆ ಸಂಬಂಧಪಟ್ಟಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಇಂತಹ ಸಾರಿಗೆ ಸಚಿವರನ್ನು ನಾವು ನೋಡಲು ಸಾಧ್ಯವೇ ಇಲ್ಲ. ಹತ್ತು ವರ್ಷಗಳಿಂದ ಟಿಎ, ಡಿಎಂ ಜಾಸ್ತಿಯಾಗೇ ಇಲ್ವಾ? ಪೆಟ್ರೋಲ್ , ಡೀಸೆಲ್ ದರ ಏರಿಕೆ ಆಗೇ ಇಲ್ವಾ? ಹಾಗಾದರೆ ನಾವು ಯಾಕೆ ದರ ಏರಿಕೆ ಮಾಡಿಲ್ಲಾ? 2013 ರಲ್ಲಿ ನಾನು ಸಾರಿಗೆ ಸಚಿವನಾಗಿದ್ದೆ. ನಾನು ಹೋಗಬೇಕಾದರೆ ಬಿಎಂಟಿಸಿ ಹಾಗೂ ಕೆಎಸ್ ಆರ್ಟಿಸಿಗೆ ಒಂದು ಸಾವಿರ ಕೋಟಿಗೂ ಹೆಚ್ಚು ಲಾಭವನ್ನು ಬಿಟ್ಟು ಹೋಗಿದ್ದೆ. ಆ ಬಳಿಕ ಬಂದ ಕಾಂಗ್ರೆಸ್ ಸರ್ಕಾರ ಸಾಲ ಮಾಡಿತು. ಕೋವಿಡ್ ಬಂತು. ಆಗ ಬಸ್ ಗಳ ಸಂಚಾರ ಇರಲಿಲ್ಲ. ಮತ್ತೆ ನಷ್ಟ ಆಯಿತು. ಕಾರ್ಮಿಕರ ಸಂಬಳ ಏರಿಕೆ ನಿರಂತರ. ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಅದನ್ನು ಮಾಡಲೇ ಬೇಕು. ಅದರಂತೆ ಸಾರಿಗೆಯ ನಾಲ್ಕು ನಿಗಮಗಳ ನೌಕರರಿಗೂ ಮಾಡಲೇ ಬೇಕು. ನಾನು ಇರುವಾಗಲೂ ಮಾಡಿದ್ದೇನೆ. ಸಾಲ ಮಾಡಿ ಈಗ ಅದನ್ನು ನಮ್ಮ ಮೇಲೆ ಹಾಕೋದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದರು.