ಬೆಂಗಳೂರು;ರಾಹುಲ್ ಗಾಂಧಿಯನ್ನು ಮುಗಿಸಲು ಬಿಜೆಪಿ ಸಂಚು ರೂಪಿಸುತ್ತಿದೆ ಎಂದು ಸುದ್ದಿಗೋಷ್ಟಿಯಲ್ಲಿ ಸಿಎಂ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.
ಇಂದಿರಾಗಾಂಧಿ ಹಾಗೂ ರಾಜೀವ್ ಗಾಂಧಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಇಂತಹ ಉನ್ನತ ತ್ಯಾಗ ಬಲಿದಾನದ ಕುಟುಂಬದಿಂದ ಬಂದು ರಾಹುಲ್ ಗಾಂಧಿ ಅವರು ದೇಶ ಒಳಿತಿಗಾಗಿ ನಿರಂತರವಾಗಿ ಹೋರಾಡುತ್ತಿದ್ದಾರೆ. ಅಜ್ಜಿ ಇಂದಿರಾಗಾಂಧಿ ಅವರಿಗೆ ಆದ ಗತಿಯೇ ನಿಮಗೂ ಆಗುತ್ತದೆ ಎಂದು ರಾಹುಲ್ ಗಾಂಧಿ ಅವರಿಗೆ ಬಿಜೆಪಿ ಬೆದರಿಕೆ ಹಾಕಿದೆ.ಕೇಂದ್ರದ ರೈಲ್ವೆ ಖಾತೆ ರಾಜ್ಯ ಸಚಿವರು ರಾಹುಲ್ ಗಾಂಧಿ ಅವರನ್ನು ಭಯೋತ್ಪಾದಕ ಎಂದು ಕರೆದಿದ್ದಾರೆ.ಈ ರೀತಿ ಜೀವ ಬೆದರಿಕೆಗಳ ಮೂಲಕ ಬಿಜೆಪಿಯ ಕಾರ್ಯಕರ್ತರನ್ನು ಎತ್ತಿಕಟ್ಟುವ ಷಡ್ಯಂತ್ರ ನಡೆಯುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಆರೋಪ ಮಾಡಿದ್ದಾರೆ.
ಶಿವಸೇನೆಯ ಶಿಂಧೆ ಬಣದ ಶಾಸಕ ಸಂಜಯ್ ಗಾಯಕ್ ವಾಡ್ ಅವರು ರಾಹುಲ್ ಗಾಂಧಿ ನಾಲಿಗೆ ಕತ್ತರಿಸಿದವರಿಗೆ 11 ಲಕ್ಷ ಬಹುಮಾನ ಕೊಡುವುದಾಗಿ ಘೋಷಿಸಿ ರಾಹುಲ್ ಗಾಂಧಿ ನಾಲಿಗೆ ಕತ್ತರಿಸಲು ಕರೆ ನೀಡಿದ್ದಾರೆ. ಇದೂ ಕೂಡ ಕೊಲೆ ಬೆದರಿಕೆಯೇ ಆಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.ಆದ್ದರಿಂದ ಈ ಕೂಡಲೇ ಸಂಜಯ್ ಗಾಯಕ್ ವಾಡ್ ಮೇಲೆ ಕ್ರಿಮಿನಲ್ ಕೇಸು ದಾಖಲಿಸಿ ಜೈಲಿಗೆ ಕಳುಹಿಸಿಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಇನ್ನು ಉತ್ತರ ಪ್ರದೇಶದ ಸಚಿವರೊಬ್ಬರು ರಾಹುಲ್ ಗಾಂಧಿ ಈ ದೇಶದ ನಂಬರ್ ಒನ್ ಭಯೋತ್ಪಾದಕ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಇವತ್ತಿನವರೆಗೂ ಅವರ ವಿರುದ್ಧ ಬಿಜೆಪಿ ಪಕ್ಷವಾಗಲಿ, ಬಿಜೆಪಿ ಸರ್ಕಾರವಾಗಲಿ, ಕೇಂದ್ರ ಸರ್ಕಾರವಾಗಲಿ ಕಠಿಣ ಕ್ರಮ ತೆಗೆದುಕೊಂಡಿಲ್ಲ. ಕಾಟಾಚಾರಕ್ಕೆ ಕೇಸು ದಾಖಲಿಸಿ ಕೈ ಚೆಲ್ಲಿದ್ದಾರೆ. ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರನ್ನು ಹೂತು ಹಾಕುವುದಾಗಿ ಸಂಜಯ್ ಗಾಯಕ್ ವಾಡ್ ಮತ್ತೆ ಬೆದರಿಕೆ ಹಾಕಿದ್ದಾನೆ.ರಾಹುಲ್ ಗಾಂಧಿಯವರನ್ನು ಮುಗಿಸಲು ಬಿಜೆಪಿ ಸಂಚು ನಡೆಸುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಅಂದ್ಹಾಗೆ ರಾಜಕೀಯವಾಗಿಯೂ ಮುಗಿಸುವ ಜೊತೆಗೆ ಪ್ರಾಣ ಭಯ ಹುಟ್ಟಿಸುವ ಬಿಜೆಪಿ ಷಡ್ಯಂತ್ರ ಆತಂಕಕಾರಿಯಾದದ್ದು. ರಾಹುಲ್ ಗಾಂಧಿ ಅವರಿಗೆ ಜೀವ ಬೆದರಿಕೆ ಹಾಕಿರುವ ಎಲ್ಲರ ವಿರುದ್ಧ ಕ್ರಿಮಿನಲ್ ಕೇಸು ಹಾಕಿ ತಕ್ಷಣ ಬಂಧಿಸಬೇಕು.ತ್ಯಾಗ ಬಲಿದಾನದ ಸಂಸ್ಕೃತಿ ಮತ್ತು ಹುತಾತ್ಮರ ಕುಟುಂಬದಿಂದ ಬಂದ ರಾಹುಲ್ ಗಾಂಧಿ ಅವರು ಇದಕ್ಕೆಲ್ಲಾ ಹೆದರುವವರಲ್ಲ.
ಇದೇ ವೇಳೆ ಮಾತನಾಡಿದ ಅವರು ನರೇಂದ್ರ ಮೋದಿ ಈ ಬಾರಿ ಐದು ವರ್ಷ ಪೂರೈಸಲ್ಲ. ದೇಶದಲ್ಲಿ ಆಗುತ್ತಿರುವ ರಾಜಕಾರಣದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮೋದಿ ಅವರು ಈ ಬಾರಿ ಪೂರ್ಣಾವಧಿ ಮುಗಿಸೋದು ಡೌಟು. ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು ಅವರು ಹೆಚ್ಚು ದಿನ ಕೇಂದ್ರ ಸರ್ಕಾರದ ಜೊತೆ ಇರುವುದಿಲ್ಲ ಎನ್ನಿಸುತ್ತಿದೆ ಎಂದು ಸಿ.ಎಂ.ಸಿದ್ದರಾಮಯ್ಯ ಅವರು ಇದೇ ವೇಳೆ ಭವಿಷ್ಯ ನುಡಿದಿದ್ದಾರೆ.
ಅಸಹ್ಯವಾಗಿ ನಾಲಗೆ ಗರಿಬಿಟ್ಟು ಮಹಿಳಾ ಸಮುದಾಯವನ್ನು, ದಲಿತ ಜನಾಂಗವನ್ನು, ಒಕ್ಕಲಿಗ ಸಮುದಾಯವನ್ನು ಅತ್ಯಂತ ಕೆಟ್ಟದಾಗಿ ಅವಹೇಳನ ಮಾಡಿರುವ BJP ಶಾಸಕ ಮುನಿರತ್ನಂ ವಿರುದ್ಧ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಬೇಕು ಎನ್ನುವ ಬೇಡಿಕೆ ಇದೆ . ಸದ್ಯ ಮುನಿರತ್ನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದರು.ಪೊಲೀಸರು ತನಿಖೆ ನಡೆಸಿದ್ದಾರೆ. ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯ ಮುನಿರತ್ನ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂದಿದ್ದಾರೆ.