ಮನೆ Latest News ಬೆಂಗಳೂರಿನಲ್ಲಿ ಮಳೆ ಹಾನಿ ಹಿನ್ನೆಲೆ; ಹಾನಿ ಪೀಡಿತ ಪ್ರದೇಶಗಳಿಗೆ ಬಿಜೆಪಿ ನಾಯಕರ ಭೇಟಿ

ಬೆಂಗಳೂರಿನಲ್ಲಿ ಮಳೆ ಹಾನಿ ಹಿನ್ನೆಲೆ; ಹಾನಿ ಪೀಡಿತ ಪ್ರದೇಶಗಳಿಗೆ ಬಿಜೆಪಿ ನಾಯಕರ ಭೇಟಿ

0

ಬೆಂಗಳೂರು; ಬೆಂಗಳೂರಿನಲ್ಲಿ ಮಳೆ ಹಾನಿ ಪೀಡಿತ ಪ್ರದೇಶಗಳಿಗೆ ಬಿಜೆಪಿ ನಾಯಕರು ಭೇಟಿ ನೀಡಿದರು.  ಸಿಲ್ಕ್ ಬೋರ್ಡ್ ನಲ್ಲಿ ನೀರು ನುಗ್ಗಿರುವ ಬಿಜೆಪಿ ನಾಯಕರು ಭೇಟಿ ನೀಡಿ ಪರಿಶೀಲಿಸಿದ್ರು. ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ‌ ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್, ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ, ಜಯನಗರ ಶಾಸಕ ಸಿ.ಕೆ. ರಾಮಮೂರ್ತಿ ಭೇಟಿ ನೀಡಿದರು. ಈ ವೇಳೆ ಸ್ಥಳದಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ ರಾವ್ ಉಪಸ್ಥಿತರಿದ್ದರು.

ಇನ್ನು ನೀರು ನುಗ್ಗಿದ ಪ್ರದೇಶದಲ್ಲಿ ಬಿಜೆಪಿ ನಾಯಕರು ಇದೇನಾ ಬ್ರಾಂಡ್ ಬೆಂಗಳೂರು ಎಂಬ ಪೋಸ್ಟರ್ ಅಂಟಿಸಿದರು. ಬ್ರಾಂಡ್ ಬೆಂಗಳೂರು ಬ್ಯಾಡ್ ಬೆಂಗಳೂರು ಎಂಬ ಪೋಸ್ಟರ್ ಹಿಡಿದುಕೊಂಡು ಬಿಜೆಪಿ ನಾಯಕರು ಪರಿಶೀಲನೆ ನಡೆಸಿದರು. ಸಿಲ್ಕ್ ಬೋರ್ಡ್ ಜಂಕ್ಷನ್ ನಲ್ಲಿ ಕುಸಿದ ರಾಜಕಾಲುವೆ ತಡೆಗೋಡೆ ಮೇಲೆ ನಿಂತು ಸರ್ಕಾರದ ವಿರುದ್ಧ ಪೋಸ್ಟರ್ ಪ್ರದರ್ಶನ ಮಾಡಿದ್ರು.

ಈ ವೇಳೆ ಮಾತನಾಡಿದ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಜನರ ಸಮಾಧಿ ಮೇಲೆ ಸಮಾವೇಶ ಮಾಡುತ್ತಿದ್ದೀರಾ?. ನಿಮಗೆ ಮಾನ ಮರ್ಯಾದೆ ಇದ್ದರೆ ಸಮಾವೇಶ ಕೂಡಲೇ ರದ್ದು ಮಾಡಿ. ಹಿಂದೆ ಸಾಯಿ ಲೇಔಟ್ ಗೆ ಭೇಟಿ ಮಾಡಿದಾಗ ಸರಿ ಮಾಡುತ್ತೇವೆ ಅಂದಿದ್ದರು. ನಾನು ಡಿ. ಕೆ.ಶಿವಕುಮಾರ್ ಅವರಿಗೆ ಚಾಲೆಂಜ್ ಮಾಡುತ್ತೇನೆ. ನೀವು ಎಷ್ಟು ಹಣ ಬಿಡುಗಡೆ ಮಾಡಿದ್ದೀರಾ?. ಎಲ್ಲಾ ರಾಜಕಾಲುವೆಯಲ್ಲಿ ಸೆನ್ಸಾರ್ ಹಾಕಿದ್ದೀನೆ ಅಂದ್ರಿ. ಎಲ್ಲಿ ನಿಮ್ಮ ಸೆನ್ಸಾರ್ .ಕಾಂಗ್ರೆಸ್ ಅವರಿಗೆ ಸೆನ್ಸ್ ಇಲ್ಲ .ಶಿವಕುಮಾರ್ ಅವರು ಡೈಲಾಗ್ ಕಿಂಗ್. ಟೀಕೆ ಸಾಯುತ್ತವೆ ಕೆಲಸ ಉಳಿಯುತ್ತದೆ ಅಂದರು. ನಿಮ್ಮ ಕೆಲಸ ಬಾಕಿ ಉಳಿದಿದೆ,  ಪೋಸ್ಟರ್ ಹಾಕಿದ್ದೇವೆ ನೋಡಿ . ಹವಾಮಾನ ಇಲಾಖೆ ಒಂದು ತಿಂಗಳ ಹಿಂದೆ ಹೇಳಿದ್ದರು ಬೆಂಗಳೂರು ಮುಳುಗುತ್ತದೆ ಅಂತ . ಏನು ಮಣ್ಣು ತಿಂತಿದ್ರಾ ಕಾಂಗ್ರೆಸ್ ನವರು ?. ರಾಜಕಾಲುವೆಯಲ್ಲಿ ಹೂಳು ತೆಗೆದಿಲ್ಲ ಅಂದರೆ ಕಟ್ಟಡ ಕಟ್ಟುವವರಿಗೆ ಅವರಿಗೆ ಗೊತ್ತಿರಬೇಕು ಅಂತಾರೆ ಶಿವಕುಮಾರ್ . ಸಿಎಂ ಪಂಚೆ ಎತ್ತಿಕೊಂಡು ಸಮಾವೇಶಕ್ಕೆ ಹೋಗುತ್ತಾರೆ. 5 ಜನ ಸತ್ತಿದಾರೆ, ಸಾವಿನ ಮೇಲೆ ಸಮಾವೇಶ ಮಾಡ್ತಿದೀರಾ? ಎಂದು ಪ್ರಶ್ನಿಸಿದ್ದಾರೆ.

ಬಾಂಬ್ ಹಾಕಿರೋದಕ್ಕೆ ಸಾಕ್ಷಿ ಕೊಡಿ ಅಂತೀರಾ. ನಿಮ್ಮಗೆ ಬೆಂಗಳೂರು ನಲ್ಲಿ ಎಷ್ಟು ಪಾಟ್ ಹೋಲ್ ಇದೆ ಅಂತ ಸಾಕ್ಷಿ ಕೊಡಿ. ಬೊಮ್ಮಾಯಿ ಮತ್ತು ಯಡಿಯೂರಪ್ಪ ಇದ್ದಾಗ ಪ್ರತಿ ವರ್ಷ 8 ಸಾವಿರ ಕೋಟಿ ಬೆಂಗಳೂರಿಗೆ ಕೊಟ್ಟಿದ್ದಾರೆ . ಈಗ 8 ಸಾವಿರ ಕೋಟಿ ಸುರಂಗಕ್ಕೆ ಹಾಕಲು ಹೋಗಿದ್ದಾರೆ. ಮನೆ ಬಾಗಿಲಿಗೆ ಸರ್ಕಾರ ಅಂತ ಹೇಳಿದ್ರಿ.ಈಗ ಮನೆ ಬಾಗಿಲಿಗೆ ಹಾವು, ಚೇಳು ಬರುತ್ತಿದೆ.ಇವತ್ತು ರೋಡನ್ನು ಸ್ವಿಮ್ಮಿಂಗ್ ಪೂಲ್ ಮಾಡಿದ್ದೀರಾ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ ರಾಜ್ಯ ಸರ್ಕಾರ ಅಯೋಗ್ಯ ಸರ್ಕಾರ. ಬೆಂಗಳೂರು ಇವತ್ತು ಜಲಾವೃತ ಆಗಿದೆ. 4-5 ಜನ ಸತ್ತಿದ್ದಾರೆ. ಗ್ರೇಟರ್ ಬೆಂಗಳೂರು ಅಂತ ಹೆಸರು ಬಂದರೆ ಆಗಲ್ಲ ಸ್ವಾಮಿ .ಕಾಂಟ್ರಾಕ್ಟರ್ ಗಳಿಗೆ ಹಣ ಬಿಡುಗಡೆ ಮಾಡದೇ ಕಾಮಗಾರಿ ನಿಂತಿದೆ .ಶಿವಕುಮಾರ್ ಅವರು ಟನಲ್ ಬಗ್ಗೆ ಮಾತಾಡ್ತಾರೆ. ಮೊದಲು ಬೆಂಗಳೂರು ಸಮಸ್ಯೆ ಸರಿ ಮಾಡಿ. ಇವತ್ತು ಹೊಸಪೇಟೆ ನಲ್ಲಿ ಕುಳಿತು ಸರ್ಕಾರ ಮೋಜು ಮಾಡುತ್ತಿದೆ.ಇದು ಅಪರಾಧ . ನಿನ್ನೆ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಹೂಳು ಎತ್ತಬೇಕು ಅಂದರು. ಈ ಹಿಂದೆ ಹವಾಮಾನ ಇಲಾಖೆ ಅವರು ಹೇಳಿದಾಗ ಗೊತ್ತಿರಲಿಲ್ವಾ ಕಾಂಗ್ರೆಸ್ ಅವರಿಗೆ?. ಸಿಎಂ, ಡಿಸಿಎಂ ಅವರು ಕಾಮಗಾರಿ ಕಡೆ ಗಮನ ಕೊಡಬೇಕು .ಬೆಂಗಳೂರು ಸಮಸ್ಯೆ ಬಗೆಹರಿಸಬೇಕು ಎಂದರು..

ಇದೇ ವೇಳೆ ಬಿಟಿಎಂ ಲೇಔಟ್ ‌ನಲ್ಲಿ ನಿನ್ನೆ ವಿದ್ಯುತ್ ಶಾಕ್ ಹೊಡೆದು ಇಬ್ಬರು ಮೃತ ಪಟ್ಟ ಸ್ಥಳಕ್ಕೆ ಬಿಜೆಪಿ ನಾಯಕರ ಭೇಟಿ ನೀಡಿದರು. ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಮತ್ತು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಭೇಟಿ ನೀಡಿದರು. ಬಿಟಿಎಂ ಲೇಔಟ್ ನ ಡಾಲರ್ಸ್ ಕಾಲೋನಿಯಲ್ಲಿರುವ ಮಧುವನ ಅಪಾರ್ಟ್ ಮೆಂಟ್ ಗೆ ಭೇಟಿದರು. ಈ ವೇಳೆ ಶಾಸಕರಾದ ಸಿ.ಕೆ. ರಾಮಮೂರ್ತಿ ಮತ್ತು ಸತೀಶ್ ರೆಡ್ಡಿ ಉಪಸ್ಥಿತಿದ್ದರು. ಘಟನೆ ಬಗ್ಗೆ ಬೆಸ್ಕಾಂ ಅಧಿಕಾರಿಗಳಿಂದ ಬಿಜೆಪಿ ನಾಯಕರು ವಿವರಣೆ ಪಡೆದರು. ಬಿಟಿಎಂ ಎರಡನೇ ಹಂತದ ಡಾಲರ್ಸ್ ಕಾಲೋನಿಯಲ್ಲಿ ಅಪಾರ್ಟ್ ಮೆಂಟ್ ಗಳಿಗೆ ನೀರು ನುಗ್ಗಿದ ಪ್ರದೇಶಗಳಲ್ಲಿ ಬಿಜೆಪಿ ನಾಯಕರು‌‌ ಪರಿಶೀಲನೆ ನಡೆಸಿದರು.

ಬನ್ನೇರುಘಟ್ಟ ರಸ್ತೆಯಲ್ಲಿರುವ ಬಿಸ್ಮಿಲ್ಲಾ ನಗರಕ್ಕೆ ಬಿಜೆಪಿ ನಾಯಕರು ಭೇಟಿ ನೀಡಿದರು. ಮನೆಗಳಿಗೆ ನೀರು ನುಗ್ಗಿರುವ ಪ್ರದೇಶಗಳಲ್ಲಿ ಪರಿಶೀಲನೆ ಮಾಡಿದ್ರು. ಜಯನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬಿಸ್ಮಿಲ್ಲಾ ನಗರಕ್ಕೂ ವಿಸಿಟ್ ಮಾಡಿದ್ರು. ಹೆಣ್ಣೂರು ಲೇಔಟ್ ನಲ್ಲಿ ಬಿಜೆಪಿ ನಾಯಕರು ಪರಿಶೀಲನೆ ನಡೆಸಿದ್ರು. ರಾಜಕಾಲುವೆಯಿಂದಾಗಿ ನೀರು ನುಗ್ಗಿದ ಪ್ರದೇಶದಲ್ಲಿ ಪರಿಶೀಲನೆ ಮಾಡಿದ್ರು. ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮತ್ತು ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್‌. ರವಿಕುಮಾರ್ ಅವರಿಂದ ಪರಿಶೀಲನೆ ನಡೆಯಿತು.