ಬೆಂಗಳೂರು; ಯಾರು ಸಿಎಂ ಆಗುತ್ತಾರೆ ಎಂಬುದು ಬಿಜೆಪಿಗೆ ಸಂಬಂಧ ಇಲ್ಲ ಎಂದು ಬೆಂಗಳೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದ್ದಾರೆ.
ದೆಹಲಿಯಲ್ಲಿ ಸಂಪುಟ ಪುನಾರಚನೆ ಕುರಿತ ಚಟುವಟಿಕೆ ಬಗ್ಗೆ ಮಾತನಾಡಿದ ಅವರು ಯಾರು ಸಿಎಂ ಆಗುತ್ತಾರೆ ಎಂಬುದು ಬಿಜೆಪಿಗೆ ಸಂಬಂಧ ಇಲ್ಲ. ಇತರ ಸರ್ಕಾರಗಳನ್ನು ಅಸ್ಥಿರಗೊಳಿಸುವ ರಾಜಕೀಯದಲ್ಲಿ ಬಿಜೆಪಿ ನಂಬಿಕೆ ಇಟ್ಟಿಲ್ಲ. ಕಾಂಗ್ರೆಸ್ಸೇತರ ಸರ್ಕಾರಗಳನ್ನು ಅಸ್ಥಿರಗೊಳಿಸುವ ಇತಿಹಾಸ ಕಾಂಗ್ರೆಸ್ ಗೆ ಇದೆ. ಆ ರೀತಿ ಬಿಜೆಪಿ ನಂಬಿಕೆ ಇಟ್ಟಿದ್ದರೆ ಬಹುತೇಕ ರಾಜ್ಯಗಳಲ್ಲಿ ವಿಪಕ್ಷಗಳೇ ಇರುತ್ತಿರಲಿಲ್ಲ. ಸರ್ಕಾರ ಬೀಳಿಸುವುದರಲ್ಲಿ ಬಿಜೆಪಿಗೆ ಆಸಕ್ತಿ ಇಲ್ಲ.ಅವರಾಗಿಯೇ ಬಿದ್ದರೆ ನಾವು ಜವಾಬ್ದಾರಿಯಲ್ಲ ಎಂದು ಹೇಳಿದ್ದಾರೆ.
ಇಂದು ಸಿಎಂ ಸಿದ್ದರಾಮಯ್ಯ ಪ್ರಧಾನಿ ಮೋದಿ ಭೇಟಿ ವಿಚಾರದ ಬಗ್ಗೆ ಮಾತನಾಡಿದ ಅವರು ಎರಡೂ ಸಾಂವಿಧಾನಿಕ ಹುದ್ದೆ. ಯಾರು ಪ್ರಧಾನಿ, ಯಾರು ಸಿಎಂ ಎನ್ನುವುದು ಪ್ರಶ್ನೆ ಅಲ್ಲ. ಸಾಂವಿಧಾನಿಕ ಹುದ್ದೆಯ ನಡುವೆ ಸಂಘರ್ಷ ಇರಬಾರದು. ರಾಜಕೀಯ ಭಿನ್ನಾಭಿಪ್ರಾಯ ಇರಬಹುದು, ಆದರೆ ಅದು ಸಾಂವಿಧಾನಿಕ ಹುದ್ದೆಯ ನಡುವೆ ಅಂತರ ಸೃಷ್ಟಿಸಬಾರದು. ಇದು ಎರಡು ಸಾಂವಿಧಾನಿಕ ಹುದ್ದೆಯ ನಡುವಿನ ಚರ್ಚೆ, ಅದನ್ನು ರಾಜಕೀಯ ದೃಷ್ಟಿಯಿಂದ ನೋಡುವುದು ಸರಿಯಲ್ಲ. ಜಿಎಸ್ಟಿ ಸಭೆಗಳಿಗೆ ಸಿಎಂ ಹೋಗಿದ್ದರೆ ಅಲ್ಲಿ ಇವರ ಅನುಭವ ಧಾರೆಯೆರೆಯಬಹುದಿತ್ತು.
ಯಾವುದೇ ಸಭೆಗಳಿಗೆ ಹೋಗದೇ ಇದ್ದರೆ ನಾನು ಯಾಕೆ ಹೋಗಬೇಕು ಎಂಬ ಅಹಂಭಾವ ಅಂತಾಗುತ್ತದೆ. ನರೆ ಪರಿಹಾರಕ್ಕೆ ಹಣ ಕೇಳುವುದು ತಪ್ಪಲ್ಲ. ಅದಕ್ಕೂ ಮುನ್ನ ರಾಜ್ಯದ ಬೊಕ್ಕಸದಿಂದ ಪರಿಹಾರ ಕೊಟ್ಟು ನಂತರ ಕೇಂದ್ರದ ಬಳಿ ಕೇಳುವುದು ತಪ್ಪಲ್ಲ. ಮೊದಲು ರಾಜ್ಯದ ಬೊಕ್ಕಸದಿಂದ ಸಿಎಂ ಹಣ ಬಿಡುಗಡೆ ಮಾಡಬೇಕಿತ್ತು. ಕಬ್ಬಿನ ಟ್ರ್ಯಾಕ್ಟರ್ ಗಳಿಗೆ ಬೆಂಕಿ ಹಾಕಿರುವುದರ ಹಿಂದೆ ಯಾರ ಹಿತಾಸಕ್ತಿ ಇದೆ?. ಹಾಗಾದರೆ ದರ ನಿಗದಿ ಬಗ್ಗೆ ನೀವು ಯಾರ ಜೊತೆ ಮಾತುಕತೆ ನಡೆಸಿದ್ರಿ?. ರೈತರು, ಕಾರ್ಖಾನೆ ಮಾಲೀಕರು ಒಪ್ಪಿಲ್ಲ ಅಂತಾದರೆ ನಿಮ್ಮ ಏಕಪಕ್ಷೀಯ ನಿರ್ಧಾರಕ್ಕೆ ಏನು ಬೆಲೆ ಸಿಕ್ಕಿತು?. ರೈತರ ಬದುಕಿನ ಜೊತೆ ಆಟವಾಡಿ ಎಷ್ಟು ದಿನ ಅಧಿಕಾರದಲ್ಲಿರುತ್ತೀರಿ? ಎಂದು ಪ್ರಶ್ನಿಸಿದ್ದಾರೆ.
ಮುಧೋಳದಲ್ಲಿ ಕಬ್ಬು ಟ್ರ್ಯಾಕ್ಟರ್ ಗಳಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಭಿನ್ನ ಹೇಳಿಕೆಗಳು ಬರುತ್ತಿವೆ. ರೈತರ ಚಳುವಳಿ ಹತ್ತಿಕ್ಕಲು ಕಾರ್ಖಾನೆ ಮಾಲೀಕರೇ ಈ ಕೆಲಸ ಮಾಡಿದ್ದಾರೆ ಎಂಬ ಮಾತುಗಳೂ ಇವೆ. ಹಾಗೆ ಆಗಿದ್ದರೆ ಆ ರೀತಿಯ ಕೆಲಸಗಳಿಗೆ ಕ್ಷಮೆಯೇ ಇಲ್ಲ . ರೈತ ಯಾವತ್ತೂ ಬೆವರು ಸುರಿಸಿ ಬೆಳೆದ ಬೆಳೆಗೆ ಬೆಂಕಿ ಹಚ್ಚುವ ಕೆಲಸ ಮಾಡುವುದಿಲ್ಲ ಎಂದಿದ್ದಾರೆ.











