ಮನೆ Latest News ವಕ್ಫ್ ಕುರಿತಾದ ಹೋರಾಟಕ್ಕೆ ಬಿಜೆಪಿಗೆ ತಕ್ಕ ಮಟ್ಟಿನ ಜಯ ದೊರೆತಿದೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ್

ವಕ್ಫ್ ಕುರಿತಾದ ಹೋರಾಟಕ್ಕೆ ಬಿಜೆಪಿಗೆ ತಕ್ಕ ಮಟ್ಟಿನ ಜಯ ದೊರೆತಿದೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ್

0

ಬೆಂಗಳೂರು: ವಕ್ಫ್ ಬೋರ್ಡ್ ಆಸ್ತಿ ಕಬಳಿಕೆ ಬಗ್ಗೆ ಸದನದಲ್ಲಿ ದಾಖಲೆ ಸಮೇತ  ವಿಪಕ್ಷ ಬಿಜೆಪಿ ಮಾತನಾಡಿದೆ. ಅದಕ್ಕೆ ತಕ್ಕ ಮಟ್ಟಿನ ಜಯ ಸಿಕ್ಕಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿಯ ಅಧಿವೇಶನ ಹತ್ತು ದಿನ ನಿಗದಿಯಾಗಿತ್ತು. ಆದರೆ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕ್ರಮ ಇದೆ ಎಂದು ಅದನ್ನು 9 ದಿನಕ್ಕೆ ಇಳಿಕೆ ಮಾಡಲಾಯಿತು. ಬಸವಣ್ಣ ಅವರ ಫೋಟೋ ಅನಾವರಣ ಕಾರ್ಯಕ್ರಮವಿದ್ದರಿಂದ ಅದರಲ್ಲಿ  ಒಂದು ದಿನ ಕಳೆಯಿತು. ಉಳಿದಿದ್ದು ಏಳು ದಿನ ಮಾತ್ರ. ಮಾಜಿ ಸಿಎಂ ಎಸ್ ಎಂ ಕೃಷ್ಣ ನಿಧನವಾದ್ದರಿಂದ ಎರಡು ದಿನ ಸದನ ನಡೆಯಲಿಲ್ಲ.  ನಮಗೆ ಚರ್ಚೆಗೆ ಉಳಿದದ್ದು ಕೇವಲ ಐದು ದಿನ ಮಾತ್ರ. ಈ  ಐದು ದಿನದಲ್ಲಿ ಭಾರತೀಯ ಜನತಾ ಪಾರ್ಟಿ ವಿಧಾನ ಪರಿಷತ್ ಮತ್ತು ವಿಧಾನ ಸಭೆಯಲ್ಲಿ ಅಜೆಂಡಾದಂತೆ ವಕ್ಫ್ ಬೋರ್ಡ್, ಬಾಣಂತಿಯರ ಸಾವು, ಅನುದಾನದ ತಾರತಮ್ಯ, ಉತ್ತರ ಕರ್ನಾಟಕದ ವಿಚಾರಕ್ಕೆ ಸಂಬಂಧಿಸಿದಂತೆ ವಿಪಕ್ಷವಾಗಿ ಬಿಜೆಪಿ ಸರ್ಕಾರವನ್ನು ಕಟ್ಟಿ ಹಾಕುವ ಕೆಲಸವನ್ನು ಮಾಡಿದೆ. ಇದಕ್ಕೆ ಸಹಕರಿಸಿದ ಎಲ್ಲಾ ಶಾಸಕರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.

ಸದನದಲ್ಲಿ ಒಟ್ಟು ಎರಡು ಗಂಟೆಗಳ ಕಾಲ ನಾನು ವಕ್ಫ್ ಬೋರ್ಡ್ ವಿಚಾರವಾಗಿ ದಾಖಲೆ ಸಮೇತ ಮಾತನಾಡಿದ್ದೇನೆ. ಸರ್ಕಾರದ ಆದೇಶ, ಕೋರ್ಟ್ ಆದೇಶ, ವಕ್ಫ್ ಬೋರ್ಡ್ ಬ್ರಿಟಿಷರ ಕಾಲದಲ್ಲಿ ಆರಂಭವಾದಾಗಿನಿಂದ ಮನಮೋಹನ್ ಸಿಂಗ್ ಕಾಲದವರೆಗೂ ಯಾವ ರೀತಿ ಮುಸ್ಲಿಂರನ್ನು ವೋಟ್ ಬ್ಯಾಂಕ್ ಆಗಿ ಹಂತ ಹಂತವಾಗಿ ಬಳಕೆ ಮಾಡಿದ್ದನ್ನು ವಿವರಿಸಿದ್ದೇನೆ ಎಂದರು.

ಅಲ್ಲಿನ ಆಸ್ತಿ ಕಬಳಿಕೆ ಆಗುತ್ತದೆ ಎಂದ ಕಾರಣಕ್ಕೆ ಬ್ರಿಟಿಷರು ವಕ್ಫ್ ಬೋರ್ಡ್ ಆರಂಭಿಸಿದರು. ಅದಕ್ಕಾಗಿ ಅವರು ಕಾನೂನು ತಂದರು. ಆದರೆ ಕಾಂಗ್ರೆಸ್ ನವರು ಎಲ್ಲಾ ಕಾಯಿದೆಗಳನ್ನು ಹಿಂದೂಗಳಿಗಿಂತ ಮುಸ್ಲಿಂರಿಗೆ ಅನುಕೂಲವಾಗುವ ಹಾಗೇ ಮಾಡಿದರು. ಮುಸ್ಲಿಂರಿಗೆ ಹಿಂದೂಗಳಿಗಿಂತ ಎತ್ತರದ ಸ್ಥಾನ ನೀಡಿದರು. ಪಿ ವಿ ನರಸಿಂಹ ರಾವ್ ಅವರು ಆರಂಭ ಮಾಡಿದರು. ವಕ್ಫ್ ಬೋರ್ಡ್ ಗೆ ವಿಶೇಷ ಅಧಿಕಾರಗಳನ್ನು ಕೊಟ್ಟರು. ಮನ್ ಮೋಹನ್ ಸಿಂಗ್ ಅವರಂತೂ “ಒನ್ಸ್ ವಕ್ಫ್ ಬೋರ್ಡ್ ಅಲ್ ವೇಸ್ ವಕ್ಫ್ ಬೋಡ್” ಎಂಬಂತೆ ವಕ್ಫ್ ಬೋರ್ಡ್ ಯಾವುದಾದರು ಆಸ್ತಿಯನ್ನು ಇದು ನನ್ನದು ಎಂದು ಹೇಳಿದರೆ ಅಲ್ಲಿನ ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿ ಅದನ್ನು ಪಹಣಿ ಒಂಭತ್ತು ಹಾಗೂ ಹನ್ನೊಂದನೇ ಕಾಲಂನಲ್ಲಿ ನಮೂದಿಸಬೇಕು ಎಂದು ಆದೇಶ ಮಾಡಿದರು. ಅವರು ಪ್ರಧಾನಿಯಾಗಿದ್ದ ಕಾಲದಲ್ಲಿ ಯಾವೆಲ್ಲಾ ದೇವಸ್ಥಾನಗಳನ್ನು ಒಡೆದು ಹಾಕಿ ದೇವಸ್ಥಾನ ಮಾಡಿದ್ದಾರೋ ಅದೆಲ್ಲವನ್ನು ಹಾಗೇ ಕಾಯ್ದಿರಿಸಬೇಕು ಎಂಬ ಕಾನೂನು ಬಂತು. ಇವರು ಈ ಕಾಯಿದೆ ಮಾಡಿದ ಬಳಿಕ ಲಕ್ಷಾಂತರ ರೂಪಾಯಿ ಬೆಲೆಬಾಳುವ, ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಆಸ್ತಿ ವಕ್ಫ್ ಬೋರ್ಡ್ ಪಾಲಿಗೆ ಸೇರಿತು ಎಂದು ವಿವರಿಸಿದರು,

ಕರ್ನಾಟಕದಲ್ಲಿ ವಕ್ಫ್ ವೆಬ್ ಸೈಟ್ ನಲ್ಲಿ ಒಂದು ಲಕ್ಷ ಹನ್ನೊಂದು ಸಾವಿರಕ್ಕೂ ಹೆಚ್ಚು ಎಕರೆ ಜಮೀನು ಸ್ವಾಧೀನದಲ್ಲಿದೆ ಎಂದು ಇದೆ. ಅದರಲ್ಲಿ ಎಂಬತ್ತಾರು ಸಾವಿರ ಎಕರೆ ವಿವಾದದಲ್ಲಿ ಇದೆ ಎಂದು ಹೇಳುತ್ತಾರೆ. ನಾನು ಎಳೆ ಎಳೆಯಾಗಿ ಬಿಡಿಸಿ ಹೇಳಿದ್ದೇನೆ. ಚಿಕ್ಕಬಳ್ಳಾಪುರದಲ್ಲಿ ಸರ್ ಎಂ ವಿಶ್ವೇಶ್ವರಯ್ಯ ಓದಿದ ಶಾಲೆಯನ್ನು ವಕ್ಫ್ ಬೋರ್ಡ್ ಆಸ್ತಿ ಎಂದು ಘೋಷಿಸಿ  ಅಲ್ಲಿ ಮಸೀದಿ ಕಟ್ಟಿದ್ದಾರೆ. ರಾಷ್ಟ್ರಧ್ವಜ ಹಾರಿಸಬೇಕಾದ ಜಾಗದಲ್ಲಿ ವಕ್ಫ್ ಬೋರ್ಡ್ ನ ಹಸಿರು ಧ್ವಜ ಹಾರಿಸುತ್ತಿದ್ದಾರೆ. ಇವತ್ತಿಗೂ ಇದು ಅಲ್ಲಿ ಇದೆ. ಅಲ್ಲಿ ಒಂದು ಹುತ್ತವಿದೆ ಅದಕ್ಕೆ ಇಂದಿಗೂ ಹಿಂದೂಗಳು ಪೂಜೆ ಸಲ್ಲಿಸುತ್ತಿದ್ದಾರೆ. ಬೀದರ್ ನಲ್ಲಿ 560 ಎಕರೆ ಇರುವ ಹಳ್ಳಿಯನ್ನು ವಕ್ಫ್ ಬೋರ್ಡ್ ಆಸ್ತಿ ಮಾಡಿ ಬಿಟ್ಟಿದ್ದಾರೆ. ನಾವು ಇಷ್ಟೆಲ್ಲಾ ವಿಚಾರಗಳನ್ನು ಅಧಿವೇಶನದಲ್ಲಿ ಮಂಡಿಸಿದ ಬಳಿಕ ನಮ್ಮ ಹೋರಾಟಕ್ಕೆ ಮಣಿದು ಸರ್ಕಾರ ಇದರ ಬಗ್ಗೆ ತನಿಖೆಗೆ  ನಿವೃತ್ತ ಜಡ್ಜ್ ನೇತೃತ್ವದಲ್ಲಿ ಸಮಿತಿ ಮಾಡುತ್ತೇವೆ ಎಂದು ಭರವಸೆ ನೀಡಿದೆ. ಇದು ಬಿಜೆಪಿಗೆ ನಮ್ಮ ಹೋರಾಟಕ್ಕೆ ಸಂದ ಜಯ. ಈಗ ಸರ್ಕಾರ ನ್ಯಾಯಾಂಗ ತನಿಖೆಗೆ ನಿರ್ಧರಿಸಿದೆ. ಯಾವೆಲ್ಲಾ ರೈತರಿಗೆ ಅನ್ಯಾಯ ಆಗಿದೆ ಅವರು ಈಗ ಮನವಿ ಸಲ್ಲಿಸಬಹುದು ಎಂದರು. ಈ ಮೂಲಕ ವಕ್ಫ್ ಬೋರ್ಡ್ ವಿಚಾರವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಿದ್ದೇವೆ ಎಂದು ತಿಳಿಸಿದರು.

ಮುಂದುವರಿದು ಮಾತನಾಡಿದ ಅವರು ಬಾಣಂತಿಯರ ಸಾವು ಹಾಗೂ ನವಜಾತ ಶಿಶುಗಳ ಸಾವಿಗೆ ಸಂಬಂಧಿಸಿದಂತೆ ಅಧಿವೇಶನದಲ್ಲಿ ಬಹಳಷ್ಟು ಚರ್ಚೆ ಮಾಡಿದ್ದೇವೆ. ಅವಧಿ ಮುಗಿದ ಔಷಧಿ ಬಗ್ಗೆಯೂ ದಾಖಲೆ ಕೊಟ್ಟಿದ್ದೇನೆ. ಆರೋಗ್ಯ ಸಚಿವರ ರಾಜೀನಾಮೆಗೂ ಕೂಡ ನಾವು ಸದನದಲ್ಲಿ ಆಗ್ರಹಿಸಿದ್ದೇವೆ. ಸರ್ಕಾರ ಈ ಬಗ್ಗೆ ಇದೀಗ ನ್ಯಾಯಾಂಗ ತನಿಖೆಗೆ ಒಪ್ಪಿಗೆ ನೀಡಿದೆ ಎಂದರು. ಇದು ಕೂಡ ವಿಧಾನಸಭೆಯ ಒಳಗೆ ಬಿಜೆಪಿಯ ಹೋರಾಟಕ್ಕೆ ಸಿಕ್ಕ ಜಯ ಎಂದು ತಿಳಿಸಿದರು.

ಇದರ ಜೊತೆಗೆ ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ನಮ್ಮ ಎಲ್ಲಾ ಶಾಸಕರಿಗೆ ಮಾತನಾಡಲು ಅವಕಾಶ ನೀಡಲಾಯಿತು. ನಮ್ಮ ಮೂವತ್ತಕ್ಕೂ‌ ಹೆಚ್ಚು ಸದಸ್ಯರಿಗೆ ಸದನದಲ್ಲಿ ಮಾತನಾಡಲು ಅವಕಾಶ ಕೊಟ್ಟಿದ್ದೇವೆ ಎಂದರು. ಎಲ್ಲರಿಗೂ ಎಲ್ಲಾ ವಿಚಾರಗಳ ಬಗ್ಗೆ ಮಾತನಾಡಲು ಅವಕಾಶ ಕೊಟ್ಟಿದ್ದೇನೆ. ಸಿಎಂ ಸಿದ್ದರಾಮಯ್ಯ ಸಂತೆ ಭಾಷಣ ಮಾಡುವುದನ್ನು ಬಿಡಬೇಕು. ಕಳೆದ ಅಧಿವೇಶನದಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲ ಮಾತನಾಡಿ ಉತ್ತರ ಕರ್ನಾಟಕಕ್ಕೆ ನಾನು ಏನೇನು ಕೊಡುತ್ತೇನೆ ಎಂದು ಘೋಷಿಸಿದ್ದರು. ಬೀದರ್, ಧಾರವಾಡ, ವಿಜಯಪುರ, ಕಲ್ಬುರ್ಗಿ ಹೀಗೆ ಎಲ್ಲಾ ಜಿಲ್ಲೆಗೆ ಒಂದೊಂದು ಕೈಗಾರಿಕೆಯನ್ನು ತರುತ್ತೇನೆ ಎಂದಿದ್ದರು. ನಂಜುಡಪ್ಪ ವರದಿ ಏನಿದೆ ಅದಕ್ಕೆ ಸಮಿತಿ ನೇಮಕ ಮಾಡುತ್ತೇನೆ. ಆರು ತಿಂಗಳಲ್ಲಿ ವರದಿ ನೀಡುತ್ತೇನೆ ಎಂದಿದ್ದರು. ಆದರೆ ವರ್ಷ ಕಳೆದರೂ ಇನ್ನೂ ರಿಪೋರ್ಟ್ ಬರಲಿಲ್ಲ ಎಂದರು. ಪ್ರವಾಸೋದ್ಯಮಕ್ಕೆ ಹಣ ಕೊಡುತ್ತೇನೆ ಎಂದು ಹೇಳಿ ಅದನ್ನು ಹೇಳಿಯೂ ಮಾಡಲಿಲ್ಲ.  ಕಳೆದ ಬಾರಿ ಹೇಳಿದನ್ನು ಅವರನ್ನು ಇನ್ನೂ ಮಾಡಲಿಲ್ಲ. ಈಗ ಮತ್ತೆ ಘೋಷಣೆ ಮಾಡಿದ್ದಾರೆ ಎಂದು ತಿಳಿಸಿದರು.

ಸ್ಪೀಕರ್ ಅವರು ಇನ್ನಷ್ಟು ಚೆನ್ನಾಗಿ ಅಧಿವೇಶನವನ್ನು ನಡೆಸಬಹುದಿತ್ತು. ಬಹಳಷ್ಟು ಅವಕಾಶಗಳು ವಿರೋಧ ಪಕ್ಷಕ್ಕೆ ವಂಚಿತವಾಗಿದೆ. ಅವರೂ ಇನ್ನೂ ಕಾಂಗ್ರೆಸ್ ಮನಸ್ಥಿತಿಯಲ್ಲೇ ಇದ್ದಾರೆ ಎಂದು ನನಗೆ ಅನಿಸುತ್ತದೆ. ಅವರು ಆ ಮನಸ್ಥಿತಿಯಿಂದ ಹೊರಗೆ ಬರಬೇಕು. ಅವರು ಯಾವುದೇ ಪಕ್ಷಕ್ಕೆ ಸೀಮಿತವಾದವರು ಅಲ್ಲ ಎಂದರು. ಅವರು ಆಡಳಿತ ಪಕ್ಷದ ಕಡೆ ನೋಡುವ ಬದಲಾಗಿ, ವಿಪಕ್ಷ ಹೆಚ್ಚಿನ ಅವಕಾಶ ಕೊಟ್ಟರೆ ಜನರಿಗೆ ನ್ಯಾಯ ಕೊಡಿಸಬಹುದು. ಇನ್ನು ಮುಂದೆಯಾದರೂ ಸ್ಪೀಕರ್ ಆಡಳಿತ ಪಕ್ಷದ ಕಡೆಗೆ ನೋಡೋದನ್ನು ಬಿಟ್ಟು ವಿರೋಧಪಕ್ಷದ ಕಡೆಗೆ ನೋಡಬೇಕು ಎಂದರು.

ಉತ್ತರ ಕರ್ನಾಟಕದ ಸಮಸ್ಯೆಗಳನ್ನು ಉತ್ತರ ಕರ್ನಾಟಕ ಭಾಗದ ಶಾಸಕರು ಹಳೆ ಮೈಸೂರು ಭಾಗದ ಸಮಸ್ಯೆಗಳ ಜೊತೆ ಹೋಲಿಕೆ ಮಾಡುತ್ತಾರೆ. ಬೆಂಗಳೂರಿನಲ್ಲಿ ಅಭಿವೃದ್ಧಿ ಆದಂತೆ ಉತ್ತರ ಕರ್ನಾಟಕದಲ್ಲೂ ಅಭಿವೃದ್ಧಿ ಆಗಬೇಕು ಎನ್ನುವುದು ಅವರ ಇಚ್ಛೆ. ಆದರೆ ಈ ರೀತಿ ಹೋಲಿಕೆ ಮಾಡಲು ಆಗುವುದಿಲ್ಲ ಎಂದರು. ಕೈಗಾರಿಕೆಗಳು ಬರಬೇಕು ಅಂದರೆ ಅಲ್ಲಿ ಅಲ್ಲಿ ಬೇರೆ ಸೌಕರ್ಯಗಳು ಇರಬೇಕು ಎಂದು ತಿಳಿಸಿದರು.

ವಕ್ಫ್ ಹೋರಾಟಕ್ಕೆ ತಕ್ಕ ಮಟ್ಟಿಗೆ ಜಯ ಆಗಿದೆ. ನಮ್ಮ ಹೋರಾಟ ಇನ್ನೂ ಕೂಡ ಮುಂದುವರಿಯುತ್ತದೆ. ಕೇಂದ್ರ ಸರ್ಕಾರ ವಕ್ಫ್ ಕುರಿತಾದ ಕಾನೂನನ್ನು ಬದಲಾಯಿಸಲು ಹೊರಟಿದೆ ಅಲ್ಲಿಯವರೆಗೂ ನಮ್ಮ ಹೋರಾಟವನ್ನು ಮುಂದುವರೆಸುತ್ತೇವೆ. ರೈತರಿಗೆ ನೋಟಿಸ್ ಬಾರದ ಹಾಗೇ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.