ಬೆಂಗಳೂರು; ಕಾಲ್ತುಳಿತದಲ್ಲಿ 11 ಜನ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಹಾಗೂ ಜೆಡಿಎಸ್ ನಿಂದ ಜಂಟಿ ಸುದ್ದಿಗೋಷ್ಟಿ ನಡೆಯಿತು.ಸುದ್ದಿಗೋಷ್ಟಿಯಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ವಿಧಾನಸಭೆ ವಿಪಕ್ಷ ನಾಯಕಆರ್. ಅಶೋಕ್, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ರಾಜ್ಯ ಸರ್ಕಾರ ನಿನ್ನೆ ಬಹಳ ದೊಡ್ಡ ಮನಸ್ಸು ಮಾಡಿ ಕಾಲ್ತುಳಿತ ಘಟನೆಗೆ ಎಫ್ಐಆರ್ ದಾಖಲು ಮಾಡಿದೆ. ಹೈಕೋರ್ಟ್ ಸುಮೋಟೋ ಕೇಸ್ ತೆಗೆದುಕೊಂಡು ಛೀಮಾರಿ ಹಾಕಿದ ಬಳಿಕವೇ ಸರ್ಕಾರ ಎಚ್ಚೆತ್ತುಕೊಂಡಿದೆ. ಎಫ್ ಐಆರ್ ದಾಖಲಾದ ಬಳಿಕ ಸಿಎಂ ಜಾಗೃತರಾಗಿದ್ದಾರೆ. ಸಿಎಂ ನಿನ್ನೆ ರಾತ್ರಿ ಏಕಾಏಕಿ ಸುದ್ದಿಗೋಷ್ಠಿ ಮಾಡಿ ಬೆಂಗಳೂರು ಪೊಲೀಸ್ ಕಮಿಷನರ್ ಸೇರಿ ಅಧಿಕಾರಿಗಳನ್ನು ಅಮಾನತು ಮಾಡಿದೆ.ರಾಜ್ಯ ಸರ್ಕಾರದ ತಪ್ಪಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ತಮ್ಮ ತಪ್ಪು ಮುಚ್ಚಲು ಪೊಲೀಸ್ ಇಲಾಖೆಯನ್ನು ಸರ್ಕಾರ ಹರಕೆಯ ಕುರಿ ಮಾಡಿಕೊಂಡಿದೆ.ಗುಪ್ತಚರ ವೈಫಲ್ಯ ಇತ್ತು ಎಂಬುದನ್ನು ಸ್ವತಃ ಸಿಎಂ ಒಪ್ಪಿಕೊಂಡಿದ್ದಾರೆ.ಯಾಕೆ ಗುಪ್ತಚರ ಅಧಿಕಾರಿಗಳನ್ನು ಅಮಾನತು ಮಾಡಿಲ್ಲ?. ಗುಪ್ತಚರ ಅಧಿಕಾರಿಗಳನ್ನು ಅಮಾನತು ಮಾಡಿದರೆ ಅದು ಅವರ ಬುಡಕ್ಕೆ ಬರುತ್ತದೆ.ಯಾಕೆಂದರೆ ಗುಪ್ತಚರ ಇಲಾಖೆ ಸಿಎಂ ಅಡಿಯಲ್ಲಿ ಬರುತ್ತದೆ. ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ರಾಜ್ಯ ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ ಎಂದರು.
ನಿಜವಾದ ಆರೋಪಿಗಳು ಸಿಎಂ ಸಿದ್ದರಾಮಯ್ಯ ಎ1, ಡಿಸಿಎಂ ಡಿ.ಕೆ. ಶಿವಕುಮಾರ್ ಎ2, ಗೃಹ ಸಚಿವ ಡಾ. ಪರಮೇಶ್ವರ್ ಎ3. ಪೊಲೀಸರು ಪ್ರಾಮಾಣಿಕ ತನಿಖೆ ಮಾಡಬೇಕಾದರೆ ಸಿಎಂ, ಡಿಸಿಎಂ, ಗೃಹ ಸಚಿವರನ್ನು ಮಾಡಬೇಕು. ಕೇವಲ ಆರ್ ಸಿಬಿ, ಡಿಎನ್ಎ ಮತ್ತು ಕೆಎಸ್ ಸಿಎ ಯನ್ನು ಆರೋಪಿ ಮಾಡಿದರೆ ಸಾಕಾಗಲ್ಲ. ಐಪಿಎಲ್ ಮ್ಯಾಚ್ ನಡೆಯುವ ಮೊದಲೇ ಕಬ್ಬನ್ ಪಾರ್ಕ್ ಠಾಣೆಗೆ ಸಂಭ್ರಮಾಚರಣೆಗೆ ಆರ್ ಸಿಬಿ, ಕೆಎಸ್ ಸಿಎ ಕಡೆಯಿಂದ ಮನವಿ ಕೊಟ್ಟಿದ್ದಾರೆ. ಆದರೆ ಪೊಲೀಸರು ಅನುಮತಿ ಸಾಧ್ಯವಿಲ್ಲ ಎಂದು ನಿರಾಕರಿಸಿದ್ದಾರೆ. ಲಕ್ಷಾಂತರ ಅಭಿಮಾನಿಗಳು ಬರುತ್ತಾರೆ ಅಂದಾಗ ರಾಜ್ಯ ಸರ್ಕಾರಕ್ಕೆ ಅನುಮತಿ ಯಾರು ಕೊಟ್ಟರು?. ಡಿಸಿಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಪ್ ಹಿಡಿದುಕೊಂಡು ಮುತ್ತಿಡುವ ಕೆಲಸ ಯಾಕೆ ಮಾಡಿದರು.11 ಅಮಾಯಕರ ಸಾವಿಗೆ ನ್ಯಾಯ ಕೊಡಬೇಕಾದರೆ ಸಿಎಂ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು. ಎಂದಿದ್ದಾರೆ.
ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ ಅಂಧ ಮುಖ್ಯಮಂತ್ರಿ, ಅಂಧ ರಾಜ್ಯ ದಿ ಗ್ರೇಟ್ ಸಮಾಜವಾದಿ ಸಿಎಂ ಸಿದ್ದರಾಮಯ್ಯ .ಐಪಿಎಲ್ ಗೆದ್ದಿದ್ದು ಆರ್ ಸಿಬಿ, ಫೋಟೋ ಪೋಸ್ ಕೊಟ್ಟಿದ್ದು ಕೆಪಿಸಿಸಿ ತಂಡ. ಸಿಎಂ ಬ್ಯಾಟ್ಸ್‌ಮನ್, ಡಿಸಿಎಂ ಬೌಲರ್ . ಡಿ.ಕೆ. ಶಿವಕುಮಾರ್ ಹೇಗಾದರೂ ಮಾಡಿ ಸಿದ್ದರಾಮಯ್ಯ ಅವರನ್ನು ರನೌಟ್ ಮಾಡಿಸಬೇಕು ಅಂತಾ.ಹಿಟ್ ವಿಕೆಟ್ ಆಗಿದ್ದು ರಾಜ್ಯದ ಜನರು. ಕ್ರಿಕೆಟ್ ಬಗ್ಗೆ ಇವರಿಗೆ ಎಡಿಸಿಡಿಯೂ ಗೊತ್ತಿಲ್ಲ, ಎಸಿಬಿ ಕ್ಯಾನ್ಸಲ್ ಮಾಡಿದ್ದಷ್ಟೇ ಗೊತ್ತಿಲ್ಲ.ವೇದಿಕೆ ಮೇಲೆ ಟ್ರೋಫಿ ಆಟಗಾರರ ಕೈಯಲ್ಲೇ ಇರಲಿಲ್ಲ, ಬರೀ ಇವರ ಕೈಯಲ್ಲೇ ಓಡಾಡ್ತಿತ್ತು. ವರ್ಷಾನುಗಟ್ಟಲೇ ತಯಾರಿ ಮಾಡಿ ಕಾಲು ಮುರಿದುಕೊಂಡು ಆಟ ಆಡಿದ್ದು ಆಟಗಾರರು. ಇವರ ಕುಟುಂಬದವರು ಕೂಲಿಂಗ್ ಗ್ಲಾಸ್ ಹಾಕಿಕೊಂಡು ಫೋಟೋ ತೆಗೆದುಕೊಂಡರು. ಕೊನೆಗೆ ಆಟಗಾರರು ಬೇಜಾರಾಗಿ ಹೊರಟೇ ಹೋದರು. ವಿರಾಟ್ ಕೊಹ್ಲಿ ಮತ್ತು ತಂಡದ್ದು ಇದರಲ್ಲಿ ತಪ್ಪಿಲ್ಲ.ಎಂದಿದ್ದಾರೆ.
ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿಗೆ ಪೊಲೀಸ್ ಕಮಿಷನರ್ ಸಸ್ಪೆಂಡ್ ಮಾಡಿದ್ದೀರಿ.ಯಾವಾಗಲೂ ಪೊಲೀಸರ ವಿರುದ್ಧ ಇದ್ದ ಜನ ಇಂದು ವಿ ಆರ್ ವಿತ್ ಪೊಲೀಸ್ ಎಂದು ಹೇಳುತ್ತಿದ್ದಾರೆ. ಗಾಯಾಳುಗಳನ್ನು ಎತ್ತಿಕೊಂಡು ಹೋಗಿದ್ದು ಪೊಲೀಸರು. ಕಾಂಗ್ರೆಸ್ ಕಾರ್ಯಕರ್ತರಲ್ಲ, ಡಿ.ಕೆ. ಶಿವಕುಮಾರ್ ಅಲ್ಲ, ಸಿದ್ದರಾಮಯ್ಯ ಅಲ್ಲ. ಕಾಂಗ್ರೆಸ್ ನವರು ತರಹೇವಾರಿ ಕನ್ನಡಕ ಹಾಕಿಕೊಂಡು ಫೋಟೋ ಅಷ್ಟೇ ತೆಗೆದುಕೊಂಡರು. ನೀವು ಮೊಸರು ತಿಂದು ಪೊಲೀಸರ ಮೂತಿಗೆ ಒರೆಸಿದರು.ನಾವು ನ್ಯಾಯ ಸಿಗುವವರೆಗೆ ರಾಜಕಾರಣ ಮಾಡುತ್ತೇವೆ. ಹರಕೆಯ ಕುರಿ ವಿರುದ್ದ ನಮ್ಮ ರಾಜಕೀಯ.ನಾವೇನಾದರೂ ಸರ್ಕಾರ ಅನುಮತಿ ಕೊಡದೇ ಕಾರ್ಯಕ್ರಮ ಮಾಡಿದರೆ ಕತ್ತು ಹಿಡಿದು ಒಳಗೆ ಹಾಕ್ತೀರಲ್ಲ? . ಮಾನ, ಮರ್ಯಾದೆ ಇಲ್ವಾ ಕಾಂಗ್ರೆಸ್ ನವರೇ ನಿಮಗೆ?. ಅನಧಿಕೃತ ಕಾರ್ಯಕ್ರಮ ಅಂತಾ ನೀವೇ ಎಫ್ ಐಆರ್ ನಲ್ಲಿ ಹೇಳಿದ್ದೀರಾ, 144 ಸೆಕ್ಷನ್ ಯಾಕೆ ಹಾಕಲಿಲ್ಲ?.ನಾವು ಹೇಳಿರುವುದು ಸರ್ಕಾರ ಅಪರಾಧಿ ಅಂತಾ. ಸಿಎಂ ಮನೆಗೆ ಫ್ರಾಂಚೈಸಿಯವರನ್ನು ಕರೆದುಕೊಂಡು ಹೋದವರಾರು?ಎಂದು ಪ್ರಶ್ನಿಸಿದ್ದಾರೆ.