ಬೆಂಗಳೂರು; ಬಿಹಾರ ಫಲಿತಾಂಶ ನಮಗೆ ಆನೆಬಲ ಕೊಟ್ಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ.ಬಿಹಾರ ಫಲಿತಾಂಶ ನಮಗೆ ಆನೆಬಲ ಕೊಟ್ಟಿದೆ. ಒಂದು ಸಂದೇಶವನ್ನೂ ಈ ಫಲಿತಾಂಶ ಕೊಟ್ಟಿದೆ. ನಾವೆಲ್ಲ ಒಟ್ಟಾಗಿ, ಒಂದಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಡಬೇಕಿದೆ. ಮೋದಿಯವರ ಜನಪರ ಯೋಜನೆಗಳನ್ನು ಜನತೆಗೆ ತಲುಪಿಸುವ ಕೆಲಸವನ್ನೂ ಮಾಡಬೇಕಿದೆ. ಕಾಂಗ್ರೆಸ್ ನವ್ರ ಗ್ಯಾರಂಟಿಗಳಿಂದ ಅವರೇ ಬೇಸತ್ತು ಹೋಗಿದ್ದಾರೆ.
ಅನಾವಶ್ಯಕವಾಗಿ ಕೇಂದ್ರದ ವಿರುದ್ಧ ಸಿದ್ದರಾಮಯ್ಯ ಆರೋಪ ಮಾಡ್ತಿದ್ದಾರೆ. ಕಾಂಗ್ರೆಸ್ ವಿರುದ್ಧ ಇನ್ನಷ್ಟು ಪರಿಣಾಮಕಾರಿಯಾಗಿ ನಾವು ಹೋರಾಟ ಮಾಡಬೇಕಾಗಿದೆ ಎಂದು ತಿಳಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಗೊಂದಲಕ್ಕೆ ಈಗಲಾದರೂ ತೆರೆ ಬೀಳುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ನನಗೂ ವಿಶ್ವಾಸ ಇದೆ, ಹೈಕಮಾಂಡ್ ನಿಂದ ಸ್ಪಷ್ಟತೆ ಸಿಗುತೆ ಎಂಬ ವಿಶ್ವಾಸ ಇದೆ. ನನಗಂತೂ ಸ್ಪಷ್ಟತೆ ಸಿಕ್ಕಿದೆ. ರಾಜ್ಯಾಧ್ಯಕ್ಷ ಆಗಿ ನಾನು ಕೆಲಸ ಮಾಡ್ತಿದ್ದೇನೆ ಎನ್ನುವ ಮೂಲಕ ಪರೋಕ್ಷವಾಗಿ ತಾವೇ ಮುಂದುವರೆಯುವ ಬಗ್ಗೆ ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತುಂಗಭದ್ರಾ ಕ್ರಸ್ಟ್ ಗೇಟ್ ಕಿತ್ತು ಬಂದಾಗ ರಾಜ್ಯ ಸರ್ಕಾರವೇ ನಿರ್ವಹಣೆ ಮಾಡ್ತೇವೆ. ರಾಜ್ಯವೇ ಎಲ್ಲ 32 ಹೊಸ ಕ್ರಸ್ಟ್ ಗೇಟ್ ಹಾಕೋದಾಗಿ ಹೇಳಿದ್ರು. ಆದ್ರೆ ಕ್ರಸ್ಟ್ ಗೇಟ್ ಅಳವಡಿಕೆ ಕಾರ್ಯ ಸರಿಯಾಗಿ ನಡೀತಿಲ್ಲ. ಅನುದಾನ ಕೊಡದೇ ಹೊಸ ಗೇಟ್ ಅಳವಡಿಕೆ ಕೆಲಸ ಕುಂಟುತ್ತಾ ಸಾಗ್ತಿದೆ. ಸರ್ಕಾರ ತಕ್ಷಣ ರೈತರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಆಗಬೇಕು. ಎರಡನೇ ಬೆಳೆಗೂ ತುಂಗಭದ್ರ ಅಚ್ಚುಕಟ್ಟಿನಲ್ಲಿ ನೀರು ಹರಿಸುವ ಕೆಲಸ ಆಗಬೇಕಿತ್ತು. ಆದರೆ ಮೊದಲ ಬೆಳೆಗೇ ಸರಿಯಾಗಿ ನೀರು ಹರಿಸುವ ಕೆಲಸ ಆಗ್ತಿಲ್ಲ. ಈ ವಿಚಾರದಲ್ಲಿ ಬಿಜೆಪಿಯಿಂದ ಹೋರಾಟ ರೂಪಿಸ್ತೇವೆ.
ಮೆಕ್ಕೆಜೋಳ ಬೆಳೆದ ರೈತರು ಸಂಕಷ್ಟದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲ ತಾಲ್ಲೂಕುಗಳಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ತೆರೆಯಲು ಆಗ್ರಹಿಸಿ ಹೋರಾಟ ಮಾಡ್ತೇವೆ. ಇನ್ನು ಕೊಪ್ಪಳ, ಬಳ್ಳಾರಿ, ವಿಜಯನಗರ ರಾಯಚೂರು ಜಿಲ್ಲೆಯ ಕೃಷಿ ಚಟುವಟಿಕೆಗಳಿಗೆ ತುಂಗಭದ್ರ ಜಲಾಶಯದಿಂದ ಎರಡನೇ ಬೆಳೆಗೂ ನೀರು ಬಿಡಬೇಕು. ಈ ಆಗ್ರಹ ಇಟ್ಕೊಂಡು ಸ್ಥಳೀಯವಾಗಿ ರೈತರೊಂದಿಗೆ ಬಿಜೆಪಿ ಹೋರಾಟಕ್ಕೆ ಧುಮುಕಲಿದೆ. ತುಂಗಭದ್ರ ಜಲಾಶಯದ ಅಚ್ಚುಕಟ್ಟು ಪ್ರದೇಶಕ್ಕೆ ಎರಡನೇ ಬೆಳೆಗೂ ನೀರು ಬಿಡಬೇಕು. ಅಥವಾ ನೀರು ಬಿಡದಿದ್ದಲ್ಲಿ ರೈತರಿಗೆ ಎಕರೆಗೆ 25 ಸಾವಿರ ರೂ ಸರ್ಕಾರ ಪರಿಹಾರ ಕೊಡಬೇಕು .ಇದೇ 25 ರೊಳಗೆ ಬಿಜೆಪಿ ಹೋರಾಟ ರೂಪಿಸಲಿದೆ ಎಂದಿದ್ದಾರೆ.
ಸಂಪುಟ ಪುನಾರಚನೆಗೆ ರಾಹುಲ್ ಗಾಂಧಿ ಗ್ರೀನ್ ಸಿಗ್ನಲ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಸಂಪುಟ ವಿಸ್ತರಣೆ ಬಗ್ಗೆ ನಮಗೆ ಯಾವುದೇ ಅಭಿಪ್ರಾಯ ಇಲ್ಲ. ಅದು ಅವರ ಆಂತರಿಕ ನಿರ್ಧಾರ . ಸಂಪುಟದಿಂದ ಯಾರನ್ನು ಬಿಡಬೇಕು, ಯಾರನ್ನು ಬಿಡಬಾರದು ಅನ್ನೋದು ಅವರಿಗೆ ಬಿಟ್ಟ ವಿಚಾರ. ಆದ್ರೆ ಕಳೆದ ಎರಡೂವರೆ ವರ್ಷದಲ್ಲಿ ಅನ್ಯಾಯ, ಭ್ರಷ್ಟಾಚಾರ, ಅಭಿವೃದ್ಧಿ ಶೂನ್ಯ ಇದೆ, ಅದನ್ನು ಸರಿಪಡಿಸಲಿ. ರೈತರು ಸಂಕಷ್ಟದಲ್ಲಿದ್ದಾರೆ ಸರ್ಕಾರ ಅದರತ್ತ ಗಮನ ಕೊಡಲಿ.ಸಂಪುಟ ಏನಾಗುತ್ತೆ ಏನಾಗಲ್ಲ ಅನ್ನೋದ್ರಲ್ಲಿ ನಮಗೆ ಆಸಕ್ತಿ ಇಲ್ಲ. ಅವರು ಸಂಪುಟ ಪುನಾರಚನೆ ಆದರೂ ಮಾಡಲಿ, ಡ್ರಾಮಾ ಆದರೂ ಮಾಡಲಿ. ಆದ್ರೆ ಈ ಸರ್ಕಾರಕ್ಕೆ ಯಾವ ರೀತಿ ಕಿವಿ ಹಿಂಡಬೇಕೋ ಆ ಕೆಲಸ ನಾವು ಮಾಡ್ತೇವೆ ಎಂದಿದ್ದಾರೆ.











