ಬೆಂಗಳೂರು: ಪೋಕ್ಸೋ ಪ್ರಕರಣದಲ್ಲಿ ಬಂಧನದ ಭೀತಿ ಎದುರಿಸುತ್ತಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ತಾತ್ಕಾಲಿಕವಾಗಿ ದೊಡ್ಡ ರಿಲೀಫ್ ಸಿಕ್ಕಿದೆ.
ಪ್ರಕರಣದಲ್ಲಿ ಕೋರ್ಟ್ ಜಾಮೀನು ನೀಡಿದ್ದು, ಯಡಿಯೂರಪ್ಪ ಅವರನ್ನು ಬಂಧನ ಮಾಡದಂತೆ ನ್ಯಾಯಾಲಯ ಸೂಚಿಸಿದೆ. ಅಲ್ಲದೇ ವಿಚಾರಣೆಗೆ ಹಾಜರಾಗುವಂತೆಯೂ ನ್ಯಾಯಾಲಯ ಯಡಿಯೂರಪ್ಪ ಅವರಿಗೆ ನಿರ್ದೇಶನ ನೀಡಿದೆ.
ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರಿದ್ದ ನ್ಯಾಯಪೀಠ ಜಾಮೀನು ನೀಡಿದ್ದು, ಪ್ರಕರಣವನ್ನು ರದ್ದು ಮಾಡುವಂತೆ ಯಡಿಯೂರಪ್ಪ ಕೋರಿದ್ದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ನೋಟೀಸ್ ನೀಡಲ್ಪಟ್ಟಿದ್ದು, ವಿಚಾರಣೆಗೆ ಹಾಜರಾಗುವಂತೆ ಮಾಜಿ ಮುಖ್ಯಮಂತ್ರಿಗೆ ಸೂಚಿಸಿದೆ.
ಜೂನ್ 17 ರಂದು ವಿಚಾರಣೆಗೆ ಹಾಜರಾಗುವುದಾಗಿ ಯಡಿಯೂರಪ್ಪ ಸಿಐಡಿ ನೋಟೀಸ್ ಗೆ ಉತ್ತರಿಸಿರುವ ಕಾರಣ ಬಂಧಿಸಿ ತನಿಖೆಗೊಳಪಡಿಸುವ ಅಗತ್ಯವಿಲ್ಲ ಎಂದು ಕೋರ್ಟ್ ಹೇಳಿದ್ದು, ಬಂಧನ ಮಾಡದಂತೆ ನಿರ್ದೇಶನ ನೀಡಿದೆ.
ಜೂನ್ 17 ರಂದು ವಿಚಾರಣೆಗೆ ಹಾಜರಾಗುವುದಾಗಿ ನ್ಯಾಯಾಲಯದಲ್ಲಿ ಯಡಿಯೂರಪ್ಪ ಪರ ವಕೀಲರು ತಿಳಿಸಿದ್ದು, ಅದರಂತೆ ಯಡಿಯೂರಪ್ಪ ಸಿಐಡಿ ವಿಚಾರಣೆಗೆ ಹಾಜರಾಗಲಿದ್ದಾರೆ. ಸಿಐಡಿ ನೋಟೀಸ್ ನೀಡಿದ ಬಳಿಕ ಯಡಿಯೂರಪ್ಪ ಬೆಂಗಳೂರಿನಿಂದ ದೆಹಲಿಗೆ ತೆರಳಿದ್ದಾರೆ ಎಂದು ಹೇಳಲಾಗಿದ್ದು, ಬಂಧನ ಭೀತಿ ದೂರವಾಗಿರುವ ಕಾರಣ ನಾಳೆ ಬೆಂಗಳೂರಿಗೆ ವಾಪಸಾಗುವ ನಿರೀಕ್ಷೆಯಿದೆ.
ಬಿ.ಎಸ್. ಯಡಿಯೂರಪ್ಪ ಪರ ಇಂದು ನ್ಯಾಯಾಲಯದಲ್ಲಿ ಹಿರಿಯ ವಕೀಲ ಸಿ.ವಿ. ನಾಗೇಶ್ ವಾದಿಸಿದ್ದು, ಪ್ರಕರಣದ ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಲಾಗಿದೆ.
ನಿನ್ನೆ ಯಡಿಯೂರಪ್ಪ ವಿರುದ್ದ ಜಾಮೀನು ರಹಿತ ವಾರಂಟ್ ಹೊರಡಿಸುತ್ತಿದ್ದಂತೆಯೇ ವಿಪಕ್ಷ ಬಿಜೆಪಿ ರಾಜ್ಯ ಸರ್ಕಾರದ ನಡೆಯ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿತ್ತು. ಸರಣಿ ಪತ್ರಿಕಾಗೋಷ್ಠಿಗಳನ್ನು ನಡೆಸಿದ್ದ ಬಿಜೆಪಿ ನಾಯಕರು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು.
ಇನ್ನು ಯಡಿಯೂರಪ್ಪ ಪುತ್ರ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಆಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಯಡಿಯೂರಪ್ಪ ಅವರ ಮೇಲಿನ ಕರುನಾಡ ಜನರ ಆಶೀರ್ವಾದ, ಕೋಟಿ ಹೃದಯಗಳ ಪ್ರಾರ್ಥನೆ ನ್ಯಾಯ ದೇಗುಲದಲ್ಲಿ ಅನಾವರಣಗೊಂಡಿದೆ ಎಂದಿದ್ದಾರೆ. ಅಲ್ಲದೇ ಷಡ್ಯಂತ್ರ, ಪಿತೂರಿ ರಾಜಕಾರಣ ಯಡಿಯೂರಪ್ಪ
ಅವರ ಹಿಂಬಾಲಿಸಿಕೊಂಡು ಬರುತ್ತಲೇ ಇದೆ. ಎದೆಗುಂದದ ಅವರು ನ್ಯಾಯದ ಹಾದಿಯಲ್ಲಿ ಷಡ್ಯಂತ್ರಗಳನ್ನು ಜಯಿಸಿದ್ದಾರೆ.
ಇಂದು ಉಚ್ಚ ನ್ಯಾಯಾಲಯದಲ್ಲಿ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರಿಗೆ ಘನ ನ್ಯಾಯಾಲಯ ಮಧ್ಯಂತರ ಜಾಮೀನು ನೀಡಿ “ಯಡಿಯೂರಪ್ಪನವರು ವಿಚಾರಣೆಗಳಿಗೆ ಬೆನ್ನು ತೋರಿಸುವ ಜಾಯಮಾನದವರಲ್ಲ” ಎನ್ನುವ ಮಾತನ್ನು ಉಲ್ಲೇಖಿಸಿರುವುದು ಬಿ.ಎಸ್ ಯಡಿಯೂರಪ್ಪನವರು ಈ ನೆಲದ ಕಾನೂನಿಗೆ ಗೌರವ ಕೊಡುವ ಪರಿಯನ್ನು ಸಾಕ್ಷೀಕರಿಸಿದೆ. ಮುಂದಿನ ದಿನಗಳಲ್ಲಿ ನ್ಯಾಯ ದೇಗುಲದಲ್ಲಿ ಸತ್ಯವೇ ಗೆಲ್ಲುತ್ತದೆಂಬ ಅಚಲ ವಿಶ್ವಾಸ ನಮ್ಮದಾಗಿದೆ ಎಂದೂ ವಿಜಯೇಂದ್ರ ಬರೆದುಕೊಂಡಿದ್ದಾರೆ.
ಇನ್ನು ಜಾಮೀನು ರಹಿತ ವಾರಂಟ್ ಹೊರಡಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಇಲಾಖೆ ಸಚಿವ ಹೆಚ್.ಡಿ. ಕುಮಾರಸ್ವಾಮಿ, ನನಗೆ ನಿನ್ನೆಯ ದಿನ ಬಹಳ ನೋವಾಗಿದ್ದು, 82 ವರ್ಷದ ಯಡಿಯೂರಪ್ಪನವರನ್ನು ಅರೆಸ್ಟ್ ಮಾಡಲು ಪ್ರಯತ್ನ ಮಾಡುತ್ತಿದ್ದೀರಿ, ಈ ಕುತಂತ್ರ ಮಾಡುತ್ತಿರುವುದಕ್ಕೆ ನಿಮ್ಮ ಕಾಂಗ್ರೆಸ್ ಮುಂದಿನ ದಿನಗಳಲ್ಲಿ ಸರ್ವ ನಾಶ ಆಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಕರಣ ದಾಖಲಾಗಿ ನಾಲ್ಕು ತಿಂಗಳು ಯಾಕೆ ಟಚ್ ಮಾಡಿಲ್ಲ ಎಂದು ಪ್ರಶ್ನಿಸಿರುವ ಕುಮಾರಸ್ವಾಮಿ ಈಗ ಏಕಾಏಕಿ ಜಾಮೀನು ರಹಿತ ವಾರಂಟ್ ತಂದು ಏನು ಮಾಡುತ್ತಿದ್ದೀರಿ ಎಂದು ರಾಜ್ಯ ಸರ್ಕಾರದ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.