ಬೆಂಗಳೂರು; ಸೋಮವಾರದಿಂದ ವಿಧಾನ ಮಂಡಲ ಜಂಟಿ ಅಧಿವೇಶನ ಹಿನ್ನೆಲೆ ವಿಧಾನಸೌಧದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸುದ್ದಿಗೋಷ್ಟಿ ನಡೆಸಿದ್ರು.
ಈ ವೇಳೆ ಮಾತನಾಡಿದ ಅವರು ಹದಿ ಹರೆಯದ ಮಕ್ಕಳ ಸಮಸ್ಯೆಗಳ ಕುರಿತು ಮತ್ತು ಮಾದಕ ವಸ್ತುಗಳಿಗೆ ಮಕ್ಕಳು ಬಲಿಯಾಗುತ್ತಿರುವ ಕುರಿತಾಗಿ ಈ ಬಾರಿ ವಿಧಾನ ಪರಿಷತ್ ನಲ್ಲಿ ಚರ್ಚೆ ನಡೆಸಲಾಗುವುದು. ವಿಧಾನ ಮಂಡಲ ಜಂಟಿ ಸಲಹಾ ಸಮಿತಿ ಸಭೆಯನ್ನು ಕರೆಯಲು ಸ್ಪೀಕರ್ ಮತ್ತು ಸಿಎಂಗೆ ಮನವಿ ಮಾಡಿದ್ದೇನೆ. ಸೋಮವಾರ ಮಧ್ಯಾಹ್ನ 3 ಗಂಟೆಗೆ ಸಭೆ ನಡೆಯಲಿದೆ. ಬೆಂಗಳೂರು ಬಗ್ಗೆ, ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಲು ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಒಂದು ಪ್ರಸ್ತಾವ ಕೊಟ್ಟಿದ್ದಾರೆ.ಅದರ ಬಗ್ಗೆ ಒಂದು ವಿಚಾರ ಸಂಕಿರಣ ಏರ್ಪಡಿಸುವ ಬಗ್ಗೆಯೂ ಯೋಚನೆ ಬಂದಿದೆ. ನಮ್ಮಲ್ಲಿ ನಡೆಯುವ ಚರ್ಚೆಗಳು ಇನ್ನೂ ಉತ್ತಮ ಮಟ್ಟದಲ್ಲಿ ತಲುಪುತ್ತಿಲ್ಲ ಎಂಬ ಬೇಸರವೂ ಇದೆ. ವಿಧಾನ ಪರಿಷತ್ ಅನ್ನು ಸರಿಯಾದ ರೀತಿಯಲ್ಲಿ ನಡೆಸುವ ಬಗ್ಗೆ ವಿಪಕ್ಷ ನಾಯಕರ ಜೊತೆಗೂ ಚರ್ಚೆ ಮಾಡಿದ್ದೇನೆ ಎಂದರು.
ಬೆಳಗಾವಿ ಅಧಿವೇಶನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಎಂಎಲ್ಸಿ ಸಿ.ಟಿ. ರವಿ ನಡುವೆ ನಡೆದ ಘಟನೆ ಈಗಾಗಲೇ ಅಂತ್ಯಗೊಂಡಿದೆ. ಡಿಸೆಂಬರ್ 19 ರಂದೇ ಅದನ್ನು ನಾನು ಅಂತ್ಯಗೊಳಿಸಿದ್ದೇನೆ. ಅದು ಈಗ ಪರಿಷತ್ ನ ಎಥಿಕ್ಸ್ ಸಮಿತಿ ಮುಂದೆ ಇದೆ. ಎಥಿಕ್ಸ್ ಸಮಿತಿ ತೀರ್ಮಾನದಂತೆ ನಡೆದುಕೊಳ್ಳುತ್ತೇವೆ.ಎಂದರು. ಇನ್ನು ವಿಧಾನಸಭೆಯಿಂದ ಶಾಸಕರಿಗೆ ವಿಶ್ರಾಂತಿಗೆ ಆರಾಮ ಕುರ್ಚಿ ವ್ಯವಸ್ಥೆ ವಿಚಾರದ ಬಗ್ಗೆ ಮಾತನಾಡಿದ ಅವರು ನಮ್ಮಲ್ಲಿ ಆಸಕ್ತಿಯಿಂದ ಶಾಸಕರು ಕೂರುತ್ತಾರೆ. ಮಧ್ಯಾಹ್ನ ಊಟ ಆದ ಮೇಲೂ ಸದಸ್ಯರು ಇರುತ್ತಾರೆ. ನಮ್ಮಲ್ಲಿ ಅಂತಹ ಪರಿಸ್ಥಿತಿ ಬಂದಿಲ್ಲ. ಇನ್ನೊಂದು ಸದನದ ಬಗ್ಗೆ ನಾನು ಮಾತಾಡುವುದು ಸೂಕ್ತ ಅಲ್ಲ ಎಂದರು.
ಉಪಸಭಾಪತಿ ಪ್ರಾಣೇಶ್ ಎಂಎಲ್ಸಿ ಸ್ಥಾನಕ್ಕೆ ಆಯ್ಕೆ ಕುರಿತು ನಿನ್ನೆ ಮರು ಮತ ಎಣಿಕೆ ವಿಚಾರದ ಬಗ್ಗೆ ಮಾತನಾಡಿ ನಿನ್ನೆ ಮತ ಎಣಿಕೆ ನಡೆದಿದೆ. ವಿಚಾರ ಈಗ ಕೋರ್ಟ್ ಮುಂದೆ ಇದೆ. ಕೋರ್ಟ್ ತೀರ್ಮಾನ ಮಾಡುತ್ತದೆ. ಕೋರ್ಟ್ ಆದೇಶವನ್ನು ಪಾಲನೆ ಮಾಡಬೇಕಾಗುತ್ತದೆ ಎಂದ ಅವರು ಸಭಾಪತಿ ಸ್ಥಾನ ಪಡೆಯಲು ಕಾಂಗ್ರೆಸ್ ಪ್ರಯತ್ನ ವಿಚಾರದ ಬಗ್ಗೆ ಮಾತನಾಡಿ ಬಹುಮತ ಅವರದ್ದು ಆದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗುತ್ತೇನೆ. ಅವರಿಗೆ ಸ್ವತಂತ್ರ ಇದೆ, ಅವರಿಗೆ ಅಧಿಕಾರ ಇದೆ. ನಾನು ಸಾಮಾನ್ಯ ಶಿಕ್ಷಕ ಆಗಿ ಈ ಹುದ್ದೆಗೆ ಬಂದವನು. ಅವರು ಏನಾದರೂ ನೋಟೀಸ್ ಕೊಟ್ಟರೂ ರಾಜೀನಾಮೆ ಕೊಟ್ಟು ಮನೆಗೆ ಹೋಗುತ್ತೇನೆ ಎಂದರು.











