ಉಡುಪಿಯ ಅಂಬಲಪಾಡಿ ಬೈಪಾಸ್ ಸಮೀಪದ ಗಾಂಧಿನಗರದಲ್ಲಿ ನಿನ್ನೆ ಅಂದರೆ ಜುಲೈ 15 ರಂದು ನಸುಕಿನ ಜಾವ ಅಗ್ನಿ ಆನಾಹುತ ಸಂಭವಿಸಿ ಅಂಬಲಪಾಡಿ ಅವರ ನಿವಾಸದಲ್ಲಿ ಅಗ್ನಿ ಅನಾಹುತ ಸಂಭವಿಸಿತ್ತು. ಈ ಅಗ್ನಿ ಅನಾಹುತದಲ್ಲಿ ಬೆಳಗ್ಗಿನ ಶೆಟ್ಟಿ ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕ ರಮಾನಂದ್ ಶೆಟ್ಟಿ ಸಾವನ್ನಪ್ಪಿದ್ದರು. ಘಟನೆಯಲ್ಲಿ ರಮಾನಂದ ಶೆಟ್ಟಿ ಅವರ ಪತ್ನಿ ಬಲ್ಲಾಳ್ ಕ್ಯಾಬೂಸ್ ಯೂಟ್ಯೂಬ್ ಚಾನೆಲ್ ಖ್ಯಾತಿಯ ಅಶ್ವಿನಿ ಶೆಟ್ಟಿ(50) ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಅವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ಇನ್ನು ಘಟನೆಯ ಬಳಿಕ ಅಶ್ವಿನಿ ಶೆಟ್ಟಿ ಅವರು ಉಸಿರಾಟ ಹಾಗೂ ಶಾಸ್ವಕೋಶ ಸಮಸ್ಯೆಯಿಂದ ಬಳಲುತ್ತಿದ್ದರು. ಘಟನೆಯಲ್ಲಿ ಅವರಿಬ್ಬರ ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದು ಅವರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಅನಾಹುತದಲ್ಲಿ ತಂದೆ ಹಾಗೂ ತಾಯಿ ಇಬ್ಬರನ್ನು ಕಳೆದುಕೊಂಡ ರಮಾನಂದ ಶೆಟ್ಟಿ ದಂಪತಿಯ ಮಕ್ಕಳು ಇದೀಗ ಅನಾಥರಾಗಿದ್ದಾರೆ.
ಜುಲೈ 14 ರಂದು ರಾತ್ರಿ ದಂಪತಿ ಹಾಗೂ ಮಕ್ಕಳು ಊಟ ಮಾಡಿ ಮಲಗಿದ್ದರು. ಅಶ್ವಿನಿ ಶೆಟ್ಟಿ ಹಾಗೂ ರಮಾನಂದ ಶೆಟ್ಟಿ ಕೆಳಗಡೆ ಮಲಗಿದ್ದರೆ ಮಕ್ಕಳು ಮೇಲೆ ಮಹಡಿಯಲ್ಲಿ ಮಲಗಿದ್ದರು. ಈ ವೇಳೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಇಡೀ ಮನೆಗೆ ಬೆಂಕಿ ಆವರಿಸಿದೆ. ಬೆಂಕಿಯ ಜ್ವಾಲೆ ಇಡೀ ಮನೆಗೆ ಆವರಿಸಿದ್ದರಿಂದ ನಿದ್ರೆಗೆ ಜಾರಿದ್ದ ಇಡೀ ಕುಟುಂಬ ಸಂಕಷ್ಟಕ್ಕೆ ಸಿಲುಕಿತ್ತು. ಮನೆಯಲ್ಲಿ ಸೆಂಟ್ರಲ್ ಎಸಿ ಅಳವಡಿಸಿದ್ದರಿಂದ ಮತ್ತು ಕಡಿಮೆ ಗಾಳಿಯಿಂದ ಹೊಗೆ ಸೇವನೆಯಿಂದ ರಮಾನಂದ ಶೆಟ್ಟಿ ಸಾವನ್ನಪ್ಪಿದ್ದಾರೆ. ಇನ್ನು, ಅಶ್ವಿನಿ ಶೆಟ್ಟಿ ಅವರಿಗೂ ಗಂಭೀರ ಸ್ವರೂಪದ ಗಾಯಗಳಾಗಿತ್ತು. ಮಕ್ಕಳು ಮೇಲೆ ಮಹಡಿಯಲ್ಲಿ ಮಲಗಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಂದು ಗಂಭೀರ ಸ್ಥಿತಿಯಲ್ಲಿದ್ದ ಅಶ್ವಿನಿ ಶೆಟ್ಟಿ ಸಾವನ್ನಪ್ಪಿದ್ದಾರೆ.
ಘಟನೆ ಬಗ್ಗೆ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸ್ ಇಲಾಖೆ ಮತ್ತು ಸ್ಥಳೀಯರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ರು. ಆದರೆ ಮನೆಯೊಳಗೆ ದಟ್ಟ ಹೊಗೆ ಆವರಿಸಿದ್ದರಿಂದ ಅಗ್ನಿಶಾಮಕ ಸಿಬ್ಬಂದಿ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಕಾರ್ಯಾಚರಣೆ ನಡೆಸಬೇಕಾಯಿತು. ಈ ವೇಳೆ ಜೀವಭಯದಿಂದ ಬಾತ್ ರೂಂನಲ್ಲಿ ಅಡಗಿಕೊಂಡಿದ್ದ ಇಬ್ಬರು ಮಕ್ಕಳನ್ನು ರಕ್ಷಿಸಿದ್ದಾರೆ.
ಅಶ್ವಿನಿ ಶೆಟ್ಟಿ ಅವರು ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಬಿಜೆಪಿ ಉಡುಪಿ ನಗರ ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿದ್ದರು. ಇವರು Ballal’s Caboose ಕ್ಯಾಬೂಸ್ ಅನ್ನೋ ಯೂಟ್ಯೂಬ್ ಚಾನೆಲ್ ಮೂಲಕ ತುಳುನಾಡಿನ ಆಚಾರ-ವಿಚಾರಗಳನ್ನು ಬಿಂಬಿಸುವ ವೀಡಿಯೋಗಳನ್ನು ಮಾಡಿ ತಮ್ಮದೇ ಆದ ವೀಕ್ಷಕ್ಷ ಬಳಗವನ್ನು ಹೊಂದಿದ್ದರು.