ಮನೆ Latest News ಪಹಲ್ಗಾಂ ನಲ್ಲಿ ಭಯೋತ್ಪಾದಕರ ದಾಳಿ ಹಿನ್ನೆಲೆ; ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಜೊತೆ ವಿಧಾನಸಭೆ ವಿಪಕ್ಷ...

ಪಹಲ್ಗಾಂ ನಲ್ಲಿ ಭಯೋತ್ಪಾದಕರ ದಾಳಿ ಹಿನ್ನೆಲೆ; ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಜೊತೆ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ದೂರವಾಣಿ ಮಾತುಕತೆ

0

ಬೆಂಗಳೂರು; ಪಹಲ್ಗಾಂ ನಲ್ಲಿ ಭಯೋತ್ಪಾದಕರ ದಾಳಿ ಹಿನ್ನೆಲೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಜೊತೆ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರ ಯೋಗಕ್ಷೇಮ ಮತ್ತು ಸುರಕ್ಷಿತ ವಾಪಸಾತಿ ಕುರಿತು ಕ್ರಮ ವಹಿಸಲು ಸೂಚನೆ ನೀಡಿದ್ದಾರೆ. ಪ್ರಸ್ತುತ ಸಂಸದ ತೇಜಸ್ವಿ ಸೂರ್ಯ ಜಮ್ಮು ಮತ್ತು ಕಾಶ್ಮೀರ ಪ್ರವಾಸದಲ್ಲಿದ್ದಾರೆ. ಲೋಕಸಭೆಯ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸದಸ್ಯನಾಗಿ ತೇಜಸ್ವಿ ಸೂರ್ಯ ಕಾಶ್ಮೀರ ಪ್ರವಾಸದಲ್ಲಿದ್ದಾರೆ. ತೇಜಸ್ವಿ ಸೂರ್ಯ  ದಕ್ಷಿಣ ಕಾಶ್ಮೀರದ ಡಿಐಜಿ,  ಅನಂತ ನಾಗ್ ಜಿಲ್ಲಾಧಿಕಾರಿ ಮತ್ತು ರಾಜ್ಯಪಾಲರ ಕಛೇರಿ ಜೊತೆ ಮಾತುಕತೆ ನಡೆಸಿದ್ದಾರೆ.ಎಲ್ಲಾ ಕನ್ನಡಿಗರ ಸುರಕ್ಷಿತ ವಾಪಸಾತಿ ಮತ್ತು ಸೂಕ್ತ ರಕ್ಷಣೆಗೆ ಕ್ರಮ ಕೈಗೊಳ್ಳುವುದಾಗಿ ಜಮ್ಮು-ಕಾಶ್ಮೀರದ  ಅಧಿಕಾರಿಗಳಿಂದ ಭರವಸೆ ದೊರೆತಿದೆ ಎನ್ನಲಾಗಿದೆ.

ಇನ್ನು ಉಗ್ರರ ಗುಂಡಿಗೆ ಬಲಿಯಾದ ಶಿವಮೊಗ್ಗದ ಮಂಜುನಾಥ್ ಪತ್ನಿ ಪಲ್ಲವಿ ಮತ್ತು ಘಟನೆಯಲ್ಲಿನ ಗಾಯಾಳುಗಳ ಜೊತೆ ಕೂಡಾ ದೂರವಾಣಿ ಮಾತುಕತೆ ನಡೆಸಿ ತೇಜಸ್ವಿ ಸೂರ್ಯ ಎಲ್ಲಾ ಸಹಕಾರ ನೀಡುವ ಭರವಸೆ ನೀಡಿದ್ದಾರೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಜೊತೆ ಕೂಡಾ ಕನ್ನಡಿಗರ ವಾಪಸಾತಿ ಬಗ್ಗೆ ತೇಜಸ್ವಿ ಸೂರ್ಯ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಟ್ವೀಟ್ ಮಾಡಿದ್ದು ಅಮಾಯಕ ಪ್ರವಾಸಿಗರ ಧರ್ಮದ ಹೆಸರು ಹೇಳಿ ಅವರನ್ನ ಗುಂಡಿಕ್ಕಿ ಕೊಲ್ಲುವ ಹೇಯ ಕೃತ್ಯ ಭಯೋತ್ಪಾದನೆ ಅಲ್ಲ, ಹೇಡಿತನ. ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದಿರುವ ಉಗ್ರರ ದಾಳಿ ಅತ್ಯಂತ ಖಂಡನೀಯವಾಗಿದ್ದು, ಭಾರತ ನಿಶ್ಚಿತವಾಗಿ ಇದಕ್ಕೆ ತಕ್ಕ ಉತ್ತರ ನೀಡಲಿದೆ.

ಉಗ್ರರ ಈ ಅಮಾನುಷ ದಾಳಿಯಲ್ಲಿ ಮೃತರಾದ ಅಮಾಯಕ ಪ್ರವಾಸಿಗರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಮೃತರ ಕುಟುಂಬಗಳ ಈ ಸಂಕಷ್ಟದ ಸಮಯದಲ್ಲಿ ಇಡೀ ದೇಶವೇ ನಿಮ್ಮ ಜೊತೆ ಇರಲಿದೆ. ಉಗ್ರರ ದಾಳಿಗೆ ಬಲಿಯಾದ ಶಿವಮೊಗ್ಗದ ಮಂಜುನಾಥ್ ಅವರ ಪಾರ್ಥಿವ ಶರೀರವನ್ನು ರಾಜ್ಯಕ್ಕೆ ತರುವ ವ್ಯವಸ್ಥೆ ಮಾಡಬೇಕು, ರಾಜ್ಯದಿಂದ ತೆರಳಿರುವ ಇನ್ನಿತರ ಪ್ರವಾಸಿಗರನ್ನ ಸುರಕ್ಷಿತವಾಗಿ ಕರೆತರಲು ರಾಜ್ಯ ಸರ್ಕಾರ ಎಲ್ಲ ರೀತಿಯ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡುತ್ತೇನೆ ಎಂದಿದ್ದಾರೆ.

ಬಿಜೆಪಿ‌ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ‌ ಅವರು ಕೂಡ ಟ್ವೀಟ್ ಮಾಡಿದ್ದು ಕೇಂದ್ರ ಸರ್ಕಾರ ಭಾರತದ ಕಿರೀಟವೆನಿಸಿದ ಜಮ್ಮು-ಕಾಶ್ಮೀರವನ್ನು ಸಂರಕ್ಷಿಸಿ ಭಾರತಾಂಬೆಯ ಮಡಿಲಿಗೆ ಸಮರ್ಪಿಸಿ ಆರ್ಟಿಕಲ್ 370 ರದ್ದುಗೊಳಿಸುವ ಮೂಲಕ ಬೇರು ಸಮೇತ ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತೊಗೆದ ದಿಟ್ಟ ಕ್ರಮದ ಪರಿಣಾಮ ಉಗ್ರರು ಅತೀವ ಹತಾಶೆಗೊಂಡಿದ್ದು ಇದರ ಪ್ರತೀಕವೆಂಬಂತೆ ಮುಗ್ಧ ಪ್ರವಾಸಿಗರನ್ನು ಹತ್ಯೆಗೈಯ್ಯುವ ಹೇಡಿತನವನ್ನು ಪ್ರದರ್ಶಿಸಿದ್ದಾರೆ.

ಈ ಹೇಡಿತನದ ಉಗ್ರರ ದಾಳಿಗೆ ಬಲಿಯಾಗಿರುವ ಶಿವಮೊಗ್ಗದ ಮಂಜುನಾಥ್ ರಾವ್ ಅವರ ಸಾವು ಅತ್ಯಂತ ನೋವು ತಂದಿದೆ. ಮೃತರ ಕುಟುಂಬಕ್ಕೆ ಈ ದಾರುಣ ಘಟನೆಯ ಆಘಾತ ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತನು ಕರುಣಿಸಲಿ ಎಂದು ಪ್ರಾರ್ಥಿಸುವೆ,ಮಂಜುನಾಥ್ ರಾವ್ ಅವರ ಕುಟುಂಬದ ನೋವಿನೊಂದಿಗೆ ನಾವೆಲ್ಲರೂ ಇದ್ದೇವೆ ಎಂದಿದ್ದಾರೆ.

ಮುಂದಿನ ದಿನಗಳಲ್ಲಿ ಇಂತಹ ಹತಾಶ ಉಗ್ರರ ರಣಹೇಡಿ ಕೃತ್ಯಗಳು ಮರುಕಳಿಸದಂತೆ ಅವರ ಹುಟ್ಟಡಗಿಸುವ ನಿಟ್ಟಿನಲ್ಲಿ ಮುಗ್ಧರು, ಅಮಾಯಕರನ್ನು ಬೆದರಿಸುವ, ಚಟುವಟಿಕೆಗಳನ್ನು ಬಗ್ಗು ಬಡಿದು ಜಮ್ಮು-ಕಾಶ್ಮೀರದ ಸ್ಥಿರತೆ ಹಾಗೂ ಸುರಕ್ಷತೆಗೆ ಎಳ್ಳಷ್ಟೂ ಭಂಗ ತರಲು ಸಾಧ್ಯವಿಲ್ಲ ಎಂಬ ಸಂದೇಶ ಕೇಂದ್ರ ಸರ್ಕಾರದಿಂದ ಉಗ್ರರಿಗೆ ರವಾನೆಯಾಗಲಿದೆ ಎಂದಿದ್ದಾರೆ.