ಬೆಂಗಳೂರು: ಅತ್ತ ಯತ್ನಾಳ್ ಟೀಂ ಹೈಕಮಾಂಡ್ ಭೇಟಿಯಾಗುತ್ತಿದ್ದಂತೆ ಇತ್ತ ಬೆಂಗಳೂರಿನಲ್ಲಿ ವಿಜಯೇಂದ್ರ ಆಪ್ತ ಮಾಜಿ ಶಾಸಕರು ಸಭೆ ನಡೆಸಿದ್ದಾರೆ. ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ನಿವಾಸದಲ್ಲಿ ಸಭೆ ನಡೆದಿದೆ.ಸದಾಶಿವನಗರದಲ್ಲಿರುವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ನಿವಾಸದಲ್ಲಿ ನಡೆದ ಸಭೆಯಲ್ಲಿ ಮಾಜಿ ಸಚಿವರಾದ ಎಂ.ಪಿ. ರೇಣುಕಾಚಾರ್ಯ , ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಮಾಜಿ ಶಾಸಕರಾದ ವೈ. ಸಂಪಂಗಿ, ಬಾಲರಾಜು, ಪಿಳ್ಳ ಮುನಿಶಾಮಪ್ಪ, ಮಾಜಿ ಎಂಎಲ್ಸಿಗಳಾದ ಎಂ.ಡಿ. ಲಕ್ಷ್ಮೀನಾರಾಯಣ, ರಮೇಶ್ ಭಾಗಿಯಾಗಿದ್ದಾರೆ.
ಸಭೆ ಬಳಿಕ ಮಾತನಾಡಿದ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಇತ್ತೀಚಿನ ರಾಜಕೀಯ ವಿದ್ಯಮಾನಗಳ ಬಗ್ಗೆ ಇಂದು ನಾವು ಸಭೆ ಸೇರಿದ್ದೇವೆ.ದೆಹಲಿಯಲ್ಲಿ ಇರುವವರು ಕುಟುಂಬ ರಾಜಕೀಯದ ಬಗ್ಗೆ ಮಾತಾಡುತ್ತಾರೆ.ಅಲ್ಲಿ ಕುಟುಂಬ ರಾಜಕಾರಣದಲ್ಲಿ ಇರುವವರು ಕೂಡಾ ಇದ್ದಾರೆ.ಪದೇ ಪದೇ ರಾಜ್ಯಾಧ್ಯಕ್ಷರ ಬಗ್ಗೆ ಮಾತಾಡುವುದು ಯೋಚಿಸಬೇಕಾದ ವಿಚಾರ.ಸಂಘಟನೆ ಕಟ್ಟದವರು, ಹೊಸದಾಗಿ ಪಕ್ಷಕ್ಕೆ ಸೇರ್ಪಡೆಯಾದವರು, ದಾರಿ ತಪ್ಪಿಸುವ ಮಾತಾಡುವವರು ಯಾರೂ ಪಕ್ಷ ಕಟ್ಟಿದವರಲ್ಲ.ದಕ್ಷಿಣ ಭಾರತದಲ್ಲಿ ಪಕ್ಷ ಕಟ್ಟಿದವರು ಯಡಿಯೂರಪ್ಪ, ಅನಂತಕುಮಾರ್, ರಾಜ್ಯಾಧ್ಯಕ್ಷರು ಇಡೀ ರಾಜ್ಯದಲ್ಲಿ ಪ್ರವಾಸ ಮಾಡಿ ಹೋರಾಟ ಮಾಡಿದ್ದಾರೆ.ಪಕ್ಷ ಬಿಟ್ಟು ಹೋಗಿ ಬಂದವರಲ್ಲಿ ಎಷ್ಟು ನಿಷ್ಠೆ ಇದೆ? ಎಂದು ಪ್ರಶ್ನೆ ಮಾಡಿದ್ದಾರೆ.
ಒಂದು ವಾರದಿಂದ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ.ಕೈ ಕಾಲು ಹಿಡಿದು ಅಲ್ಲಿ ಭೇಟಿ ಮಾಡುತ್ತಿದ್ದಾರೆ.ಶಾಸಕರು, ಸಂಸದರು ಸಂಘಟನೆಗೆ ಒತ್ತು ಕೊಡಬೇಕೇ ವಿನ: ಸಂಘಟನೆಯಲ್ಲಿ ಮೂಗು ತೂರಿಸುವುದು ಸರಿಯಲ್ಲ.ಸ್ಥಾನಮಾನ ಸಿಕ್ಕಿದ ಕೂಡಲೇ ಪಕ್ಷದ ವಿರುದ್ಧವೇ ಬಂಡಾಯ ಏಳುವುದು ಸರಿಯಲ್ಲ.ಪಕ್ಷವನ್ನು ಉಳಿಸಿ ಇಂದು ನಾವು ಸಭೆ ಸೇರಿದ್ದೇವೆ ಎಂದಿದ್ದಾರೆ.
ನವದೆಹಲಿಯಲ್ಲಿ ಸಂಸದ ಬಸವರಾಜ್ ಬೊಮ್ಮಾಯಿ ಭೇಟಿಯಾದ ಯತ್ನಾಳ್ ಟೀಂ
ನವದೆಹಲಿ: ನವದೆಹಲಿಯಲ್ಲಿ ಸಂಸದ ಬಸವರಾಜ್ ಬೊಮ್ಮಾಯಿ ಅವರನ್ನು ಶಾಸಕ ಬಸವನ ಗೌಡ ಪಾಟೀಲ್ ಯತ್ನಾಳ್ ಟೀಂ ಭೇಟಿಯಾಗಿದೆ.
ನವದೆಹಲಿಯ ಕರ್ನಾಟಕ ಭವನದಲ್ಲಿ ಯತ್ನಾಳ್ ತಂಡ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿಯಾಗಿದೆ. ಈ ವೇಳೆ ಬಸವನಗೌಡ ಪಾಟೀಲ್ ಯತ್ನಾಳ್ , ಸಿದ್ದೇಶ್ವರ, ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ ಉಪಸ್ಥಿತರಿದ್ದರು.
ಈ ವೇಳೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇಂದು ಲಿಂಗಾಯತ ನಾಯಕರು ಹೈಕಮಾಂಡ್ ಭೇಟಿ ಮಾಡುತ್ತೇವೆ.ನಿನ್ನೆ ನಮ್ಮ ಕೆಲವು ನಾಯಕರು ಕೆಲವರನ್ನು ಭೇಟಿಯಾಗಿದ್ದಾರೆ.ಇಂದು ನಾವು ಲಿಂಗಾಯತ ನಾಯಕರು ಭೇಟಿ ಮಾಡುತ್ತೇವೆ.ರಾಜ್ಯದಲ್ಲಿ ಎಲ್ಲ ಲಿಂಗಾಯತರು ಬಿಎಸ್‌ವೈ ಪರವಾಗಿಲ್ಲ.ಯಡಿಯೂರಪ್ಪ ಅವರು ಆ ಗೌರವ ಉಳಿಸಿಕೊಂಡಿಲ್ಲ. ವಿಜಯೇಂದ್ರ ಅವರ ಅಧ್ಯಕ್ಷ ಮಾಡುವುದಕ್ಕೆ ನಮ್ಮ ವಿರೋಧ ಇದೆ.ಇಬ್ಬರು ಮೂವರು ಪೇಮೆಂಟ್ ಸ್ವಾಮಿಗಳು ಅವರ ಜೊತೆಗಿದ್ದಾರೆ ಅಷ್ಟೇ.ವಿಜಯೇಂದ್ರ ಬಿಎಸ್‌ವೈ ಅವರು ನಕಲಿ ಸಹಿ ಮಾಡಿದ್ದಾರೆ.ಸಿದ್ದರಾಮಯ್ಯ ಅವರಿಗೆ ತನಿಖೆ ಮಾಡಲು ಏನು ದಾಡಿ.ಎಲ್ಲ ಹೊಂದಾಣಿಕೆ ರಾಜಕೀಯ ಮಾಡುತ್ತಿದ್ದಾರೆ. ವಿಜಯೇಂದ್ರ ಕರ್ಮಕಾಂಡ ಬಹಳ ಇದೆ, ಹಲ್ಕಾ ಕೆಲಸ ಬಹಳ ಇದೆ. ಬಹಳಷ್ಟು ಲಿಂಗಾಯತ ನಾಯಕರನ್ನು ಮುಗಿಸಿದ್ರು.ಬಸವರಾಜ್ ಪಾಟೀಲ್ ಸೇಡಂ, ಬಿ.ವಿ ಶಿವಪ್ಪ, ಸಿದ್ದೇಶ್ವರ್, ಮಲ್ಲಿಕಾರ್ಜುನಯ್ಯ ಅವರನ್ನು ಮುಗಿಸಿದರು. ನನ್ನ ಸತತವಾಗಿ ಮುಗಿಸುವ ಪ್ರಯತ್ನ ಮಾಡಿದರು. ರಮೇಶ್ ಜಾರಕಿಹೋಳಿ ರಸ್ತೆಗೆ ಬರಲು ಬಿಡಲ್ಲ ಅಂತಾರೆ. ಏನು ಗೂಂಡಾಗಿರಿ ಮಾಡ್ತಿದ್ದಾರಾ? ಎಂದು ಪ್ರಶ್ನಿಸಿದ್ದಾರೆ
ಮೂರ ಅಂಶಗಳನ್ನು ಹೈಕಮಾಂಡ್ ಗಮನಕ್ಕೆ ತರುತ್ತೇವೆ. ಭ್ರಷ್ಟಾಚಾರ ಹಾಗೂ ಕುಟುಂಬ ರಾಜಕಾರಣ ಅಂತ್ಯ ಮಾಡಬೇಕು. ಹಿಂದೂಗಳ ಹತ್ಯೆ ಆಯಿತು ಬಿಎಸ್‌ವೈ ಏನ್ ಮಾಡಿದರು.ಶಿವಮೊಗ್ಗ ದಲ್ಲಿ ಔರಂಗಜೇಬನ ಫೋಟೊ ಹಾಕಿದರು ಏನು ಮಾಡಿದ್ದೀರಿ.ಜಮೀರ್ ಅಹಮದ್ ಖಾನ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ.ನಮ್ಮ ತಂಡದಲ್ಲಿ ಕುಟುಂಬ ರಾಜಕೀಯ ಇಲ್ಲ.ಸಿದ್ದೇಶ್ವರ್, ಲಿಂಬಾವಳಿ ತಮ್ಮ ಸ್ಥಾನ ಬಿಟ್ಟುಕೊಟ್ಟಿದ್ದಾರೆ.ಹೀಗಾಗಿ ಅವರ ಮನೆಯವರು ಸ್ಪರ್ಧೆ ಮಾಡಿದ್ದಾರೆ.ಒಂದೇ ಮನೆಯಲ್ಲಿ ಎಲ್ಲ ಅಧಿಕಾರ ಅನುಭವಿಸ್ತಿಲ್ಲ.ಕಾಂಗ್ರೆಸ್ ಕೊಟ್ಟ ಭಿಕ್ಷೆಯಿಂದ ಬಿ.ವೈ ವಿಜಯೇಂದ್ರ ಶಾಸಕರಾಗಿದ್ದಾರೆ. ಡಿ.ಕೆ ಶಿವಕುಮಾರ್ ಆರ್ಶಿವಾದದಿಂದ ಶಾಸಕರಾಗಿದ್ದಾರೆ.ಮೊದಲ ಬಾರಿ ಶಾಸಕರಾಗಿ ರಾಜ್ಯಾಧ್ಯಕ್ಷರಾಗಿದ್ದಾರೆ.ರಮೇಶ್ ಜಾರಕಿಹೋಳಿ, ಸಿ.ಪಿ ಯೋಗೇಶ್ವರರಿಂದ ಸರ್ಕಾರ ಬಂತು.ರಮೇಶ್ ಜಾರಕಿಹೋಳಿ ಪಕ್ಷ ಗಟ್ಟಿ ಮಾಡಲು ಬಂದವರು.ವಿಜಯೇಂದ್ರ ಏನ್ ಮಾಡಿದ ನಕಲಿ ಸಹಿ ಮಾಡಿ ಭ್ರಷ್ಟಾಚಾರ ಮಾಡಿದರು.ಶ್ರೀರಾಮುಲು ನಿಮ್ಮ ಜೊತೆಗಿದ್ದೇನೆ ಎಂದು ಹೇಳಿದ್ದಾರೆ.ಹೈಕಮಾಂಡ್ ನಿರ್ಧಾರ ಬದಲಾವಣೆ ಮಾಡಿದ್ದರೆ ಏನ್ ಮಾಡ್ತೀವಿ ಮುಂದೆ ಹೇಳ್ತೀನಿ.ದುಡ್ಡಿನ ಅಹಂಕಾರದಿಂದ ಎಲ್ಲರನ್ನು ಖರೀದಿ ಮಾಡಬಹುದು ಅಂದುಕೊಂಡಿದ್ದಾರೆ ಎಂದರು. ಇನ್ನು ಬೊಮ್ಮಾಯಿ ಭೇಟಿ ಬಳಿಕ ಮಾತನಾಡಿದ ಸಿದ್ದೇಶ್ವರ್ ಒಳ್ಳೆ ಸುದ್ದಿ ಸದ್ಯದಲ್ಲೇ ಸಿಗಲಿದೆ.ಒಳ್ಳೆ ಸುದ್ದಿಯನ್ನು ರಾಷ್ಟ್ರನಾಯಕರು ಕೊಡ್ತಾರೆ. ನಮ್ಮ ಹೋರಾಟಕ್ಕೆ ಜಯಸಿಗಲಿದೆ ಎಂದಿದ್ದಾರೆ. ಅಲ್ಲದೇ 10 ತಾರೀಕು ಒಳ್ಳೆ ಸುದ್ದಿ ಸಿಗಲಿದೆ ಎಂದು ರಮೇಶ್ ಜಾರಕಿಹೊಳಿ ಇದೇ ವೇಳೆ ಹೇಳಿದ್ದಾರೆ.